Iran Conflict: ಹೇಗಿದ್ದರೆ ಹಾಗೆ, ಯಾವ ವಾಹನ ಸಿಕ್ಕರೆ ಅದರಲ್ಲಿ ತಕ್ಷಣ ಇರಾನ್ ಬಿಟ್ಟು ಹೊರಡಿ: ಭಾರತ ಸರ್ಕಾರ ಸೂಚನೆ
ಇರಾನ್: ಇರಾನ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಭಾರತೀಯ ರಾಯಭಾರಿ ಕಚೇರಿಯು ಅಲ್ಲಿನ ಭಾರತೀಯ ಪ್ರಜೆಗಳಿಗೆ ತುರ್ತು ಸಂದೇಶವನ್ನು ನೀಡಿದೆ. ಇರಾನ್‌ನಲ್ಲಿ ಪ್ರತಿಭಟನೆಗಳು ತೀವ್ರ ಹಿಂಸಾಸ್ವರೂಪ ಪಡೆದುಕೊಂಡಿದೆ. ಅಲ್ಲದೇ ಇರಾನ್‌ನ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಮಾಡುವ ಭೀತಿಯೂ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ತುರ್ತು ಸಂದೇಶವನ್ನು ಹಂಚಿಕೊಂಡಿದೆ.
ಪ್ರಸ್ತುತ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳು - ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಿಗಳು ಹಾಗೂ ಪ್ರವಾಸಿಗರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ಸಾಧ್ಯವಾದಷ್ಟು ಬೇಗ ದೇಶ ಬಿಡುವಂತೆ ಸೂಚನೆ ನೀಡಲಾಗಿದೆ. ಇರಾನ್‌ನಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಯು ಈ ಮುನ್ಸೂಚನೆಯನ್ನು ನೀಡಿದೆ.

ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಹೇಗಿದ್ದರೆ ಹಾಗೆ, ಯಾವ ವಾಹನ ಸಿಕ್ಕರೆ ಅದರಲ್ಲಿ ತಕ್ಷಣ ಇರಾನ್ ಬಿಟ್ಟು ಹೊರಡಿ ಎಂದು ಭಾರತ ಸರ್ಕಾರವು ಸೂಚನೆ ನೀಡಿದೆ. ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ಎಚ್ಚರಿಕೆ ವಹಿಸಬೇಕೆಂದು ರಾಯಭಾರ ಕಚೇರಿಯು ಪುನರುಚ್ಚರಿಸಿದೆ. ಪ್ರತಿಭಟನೆಗಳು ನಡೆಯುತ್ತಿರುವ ಪ್ರದೇಶಗಳಿಂದ ಎಚ್ಚರಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಇರಾನ್‌ನಲ್ಲಿರುವ ಭಾರತೀಯರು, ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಮತ್ತು ಯಾವುದೇ ಬೆಳವಣಿಗೆಗಳಿಗಾಗಿ ಸ್ಥಳೀಯ ಮಾಧ್ಯಮ ವರದಿಗಳನ್ನು ವೀಕ್ಷಿಸುತ್ತಿರುವಂತೆ ಸೂಚನೆ ನೀಡಲಾಗಿದೆ.
ಭಾರತೀಯ ರಾಯಭಾರ ಕಚೇರಿಯು ನಾಗರಿಕರು ತಮ್ಮ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳುವಂತೆ ತಿಳಿಸಿದೆ. ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಪಾಸ್‌ಪೋರ್ಟ್‌ಗಳು ಮತ್ತು ಐಡಿಗಳು ಸೇರಿದಂತೆ ತಮ್ಮ ಪ್ರಯಾಣ ಮತ್ತು ವಲಸೆ ದಾಖಲೆಗಳನ್ನು ತಮ್ಮ ಬಳಿ ಹೊಂದಿರಬೇಕು ಎಂದು ವಿನಂತಿಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಸಹಾಯಕ್ಕಾಗಿ ಅವರು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಮುಂದುವರಿದು ಭಾರತೀಯ ರಾಯಭಾರ ಕಚೇರಿಯ ತುರ್ತು ಸಂಪರ್ಕ ಸಹಾಯವಾಣಿಗಳನ್ನು ಬಿಡುಗಡೆ ಮಾಡಲಾಗಿದೆ. ಮೊಬೈಲ್ ಸಂಖ್ಯೆ +989128109115; +989128109109; +989128109102; +989932179359. ಇಮೇಲ್: [email protected] ಸಂಪರ್ಕಿಸಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ. ಭಾರತೀಯ ರಾಯಭಾರ ಕಚೇರಿಯಲ್ಲಿ ಇನ್ನೂ ನೋಂದಾಯಿಸದ ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು https://www.meaers.com/request/home ಈ ಲಿಂಕ್ ಅನ್ನು ಬಳಸಲು ರಾಯಭಾರ ಕಚೇರಿ ತಿಳಿಸಿದೆ.
ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿಯೂ ಲಿಂಕ್ ಲಭ್ಯವಿದೆ. ಇರಾನ್‌ನಲ್ಲಿ ಇಂಟರ್ನೆಟ್ ಅಡಚಣೆಗಳಿಂದಾಗಿ ಯಾವುದೇ ಭಾರತೀಯ ಪ್ರಜೆ ನೋಂದಾಯಿಸಲು ಸಾಧ್ಯವಾಗದಿದ್ದರೆ, ಭಾರತದಲ್ಲಿರುವ ಅವರ ಕುಟುಂಬಗಳು ಈ ಲಿಂಕ್‌ನ ಮೂಲಕ ನೋಂದಾಯಿಸುವುದಕ್ಕೂ ತಿಳಿಸಲಾಗಿದೆ. ಕಳೆದ ಎರಡು ವಾರಗಳಿಂದ ಪ್ರತಿಭಟನೆಗಳಿಂದ ಇರಾನ್ ತತ್ತರಿಸಿದೆ.
ಪ್ರತಿಭಟನಾಕಾರರ ಮೇಲೆ ಇರಾನ್ ಕಠಿಣ ಕ್ರಮ ಕೈಗೊಳ್ಳಲು ಅಂತರರಾಷ್ಟ್ರೀಯ ಒತ್ತಡವನ್ನು ಎದುರಿಸುತ್ತಿದೆ. ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಕನಿಷ್ಠ 2,571 ಜನರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲಿನ ಸ್ಥಳೀಯ ಆಡಳಿತವನ್ನು ವಿರೋಧಿಸಿ ಜನ ಬೀದಿಗೆ ಇಳಿದಿದ್ದಾರೆ. ಈ ರೀತಿ ಇರುವಾಗ ಇರಾನ್‌ನ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಸಹ ದಾಳಿ ಮಾಡುವ ಆತಂಕವೂ ಶುರುವಾಗಿದೆ.












Click it and Unblock the Notifications