ಕುಲಭೂಷಣ್ ಜಾಧವ್‌ಗೆ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆ: ಜುಲೈ 17ಕ್ಕೆ ಐಸಿಜೆ ತೀರ್ಪು
ಹೇಗ್, ಮೇ 10: ಗೂಢಚಾರಿಕೆ ನಡೆಸಿದ ಆರೋಪದಲ್ಲಿ ಪಾಕಿಸ್ತಾನದ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೆ ಒಳಗಾಗಿರುವ ಭಾರತೀಯ ಕುಲಭೂಷನ್ ಜಾಧವ್ ಭವಿಷ್ಯ ಜುಲೈನಲ್ಲಿ ನಿರ್ಧಾರವಾಗಲಿದೆ.
ಪಾಕಿಸ್ತಾನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಫೆಬ್ರವರಿಯಲ್ಲಿ ಎರಡೂ ದೇಶಗಳ ವಾದವನ್ನು ಆಲಿಸಿರುವ ನ್ಯಾಯಾಲಯ ಜುಲೈ 17ರಂದು ಅಂತಿಮ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.
ಪಾಕಿಸ್ತಾನದ ಮಿಲಿಟರಿ ಕೋರ್ಟ್ ನೀಡಿದ್ದ ಗಲ್ಲುಶಿಕ್ಷೆಯ ತೀರ್ಪಿಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.
ಕುಲಭೂಷಣ್ ಜಾಧವ್ ಅವರು ಪಾಕಿಸ್ತಾನದಲ್ಲಿ ಭಾರತದ ಪರ ಗೂಢಚಾರಿಕೆ ಮಾಡುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದರು. ಅವರು ಗುಪ್ತಚರ ಸಂಸ್ಥೆ 'ರಾ' ಅಧಿಕಾರಿಯಾಗಿದ್ದು, ಈ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ. ಆದರೆ, ಭಾರತ ಈ ಆರೋಪವನ್ನು ನಿರಾಕರಿಸಿದೆ. ಜಾಧವ್ ಅವರನ್ನು ಅಪಹರಿಸಿ ಪಾಕಿಸ್ತಾನ ಸುಳ್ಳು ಕಥೆ ಕಟ್ಟಿದೆ ಎಂದು ಆರೋಪಿಸಿದೆ.

ಕುಲಭೂಷಣ್ ಭೇಟಿಗೆ ರಾಜತಾಂತ್ರಿಕರಿಗೆ ಪಾಕಿಸ್ತಾನ ಅವಕಾಶ ನೀಡಿಲ್ಲ. ಹದಿಮೂರು ಬಾರಿ ಮನವಿ ಸಲ್ಲಿಸಿದರೂ ಅದನ್ನು ತಿರಸ್ಕರಿಸಲಾಗಿದೆ. ರಾಜತಾಂತ್ರಿಕ ಅನುಮತಿಗೆ ಸಂಬಂಧಿಸಿದಂತೆ ಮಾಡಿಕೊಳ್ಳಲಾಗಿದ್ದ ವಿಯೆನ್ನಾ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ.
ಪಾಕಿಸ್ತಾನ ಸೇನೆ ಅಪಹರಣ ಮಾಡಿರುವುದಕ್ಕೆ ಭಾರತದ ಬಳಿ ಸಾಕ್ಷ್ಯ ಇದೆ. ಪಾಕಿಸ್ತಾನ ಜಾಧವ್ ಅವರನ್ನು ವಶಕ್ಕೆ ಪಡೆದುಕೊಂಡ ದಿನಾಂಕವನ್ನು ತಿಳಿಸಿಲ್ಲ.
ಜಾಧವ್ ವಿರುದ್ಧ ತಡವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ನಕಲಿ ದಾಖಲೆಗಳ ಮೂಲಕ ಪಾಕಿಸ್ತಾನ ಸುಳ್ಳು ಪ್ರಚಾರ ಮಾಡಿದೆ. ಪಾಕಿಸ್ತಾನವು ಜಾಧವ್ ಅವರ ಪತ್ನಿಯ ಕುರಿತಾದ ವಿವರಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿತ್ತು. ಜಾಧವ್ ಅವರ ಗುರುತಿಗಾಗಿ ಭಾರತ ದಾಖಲೆಗಳನ್ನು ಒದಗಿಸಿತ್ತು.
ಜಾಧವ್ ಬಂಧನ ಕಾನೂನು ವಿರೋಧಿ. ಪಾಕಿಸ್ತಾನದ ಆರೋಪದಲ್ಲಿ ಹುರುಳಿಲ್ಲ ಎನ್ನುವುದನ್ನು ಭಾರತ ಸಾಬೀತುಪಡಿಸಿದೆ. ಭಾರತ ಆರೋಪಪಟ್ಟಿಯ ಪ್ರತಿಗಳನ್ನು ಕೇಳಿತ್ತು. ಆದರೆ ಇದುವರೆಗೂ ಜಾಧವ್ ವಿಚಾರಣೆಯ ಯಾವ ದಾಖಲೆಗಳನ್ನೂ ಪಾಕಿಸ್ತಾನ ಒದಗಿಸಿಲ್ಲ. ಸಾಕ್ಷಿಗಳ ವಿಚಾರಣೆಗೆ ಸಹ ಅವಕಾಶ ನೀಡಿಲ್ಲ.
ಕುಲಭೂಷಣ್ ಜಾಧವ್‌ಗೆ ತನ್ನ ಹಕ್ಕುಗಳನ್ನು ನೀಡಿಲ್ಲ. ತಪ್ಪೊಪ್ಪಿಗೆ ಹೇಳಿಕೆ ನೀಡುವಂತೆ ಒತ್ತಡ ಹೇರಲಾಗಿದೆ ಎಂದು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು.












Click it and Unblock the Notifications