ಜ್ಯೋತಿಷಿ ವೆಂಕಟೇಶ ಮೇಲೆ ಅತ್ಯಾಚಾರ ಆರೋಪ

ಮಾಟ ಮಂತ್ರ, ವಾಮಾಚಾರ ಮೂಲಕ ಮಂಕು ಬೂದಿ ಎರಚಿ ಜನರನ್ನು ಮರಳು ಮಾಡುವ ವಿದ್ಯೆ ನನಗೆ ಕರಗತವಾಗಿದೆ ಎಂದು ಹೇಳಿಕೊಂಡು ತಿರುಗುತ್ತಿದ್ದ ವೆಂಕಟೇಶ ಅವರು ಆಸ್ಟ್ರೇಲಿಯಾ ಮಹಿಳೆ ಮೇಲೆ ಕೂಡಾ ಅದೇ ಪ್ರಯೋಗ ಮಾಡಿದ್ದರು. ನಿನಗೆ ಕೆಟ್ಟ ಗ್ರಹಗಳ ಗಾಳಿ ಸೋಂಕಿದೆ ಎಂದು ಹೇಳಿ ಆಕೆಗೆ ಮಂಕು ಬೂದಿ ಎರಚಿ ತನ್ನ ಕಾರ್ಯ ಸಾಧಿಸಿದ್ದಾರೆ ಎನ್ನಲಾಗಿದೆ.
ವೆಂಕಟೇಶ ಕೊದಂಡಪ್ಪ ಮೇಲೆ ಅತ್ಯಾಚಾರ, ದೌರ್ಜನ್ಯ, ಹಲ್ಲೆ ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದೆ. ಕಳೆದ ಜನವರಿಯಲ್ಲಿ ಮೆಲ್ಬೋರ್ನ್ ನ ದಾಂಡೆನಾಂಗ್ ಪ್ರದೇಶದಲ್ಲಿರುವ ತನ್ನ ಕಚೇರಿಯಲ್ಲಿ ಆಸ್ಟ್ರೇಲಿಯನ್ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವುದಕ್ಕೆ ಬಲವಾದ ಸಾಕ್ಷಿ ಸಿಕ್ಕಿದೆ ಎನ್ನಲಾಗಿದೆ.
ಮೆಲ್ಬೋರ್ನ್ ಮ್ಯಾಜಿಸ್ಟ್ರೇಟ್ಸ್ ಕೋರ್ಟೀನಲ್ಲಿ ಹಾಜರಾದ ವೆಂಕಟೇಶ ಎಂಟು ಪ್ರಕರಣಗಳಲ್ಲಿ ನಾಲ್ಕರಲ್ಲಿ ಮಾತ್ರ ನನ್ನನ್ನು ಆರೋಪಿಯಾಗಿ ಪರಿಗಣಿಸಬೇಕು ಎಂದು ವಾದಿಸಿದ್ದಾರೆ ಎಂದು ಎಎಪಿ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಆಸ್ಟ್ರೇಲಿಯಾ ಮಹಿಳೆಯನ್ನು ಕಚೇರಿಗೆ ಕರೆಸಿಕೊಂಡ ವೆಂಕಟೇಶ್ ನಿನಗೆ ಹಿಡಿದಿರುವ ಶಾಪ ಪರಿಹಾರವಾಗಬೇಕಾದರೆ ಅನಾಮಿಕ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಬೇಕು ಎಂದು ನಂಬಿಸಿದ್ದಾನೆ. ಆದರೆ,ಆಕೆ ತಕ್ಷಣಕ್ಕೆ ಆಫರ್ ಒಪ್ಪಿಕೊಂಡಿಲ್ಲ. ಎರಡು ಮೂರು ಬಾರಿ ಪ್ರಯತ್ನಿಸಿ ವಿಫಲನಾದ ವೆಂಕಟೇಶ ಕೊನೆಗೆ ಆಕೆಯನ್ನು ಬಲಾತ್ಕರಿಸಿ ಸಂಭೋಗಿಸಿದ್ದಾನೆ ಎಂದು ಪೊಲೀಸರು ಎಬಿಸಿ ನ್ಯೂಸ್ ಗೆ ಹೇಳಿದ್ದಾರೆ.
ಕೋರ್ಟಿನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ವೆಂಕಟೇಶ ಕೊದಂಡಪ್ಪ, ಇದು ಪ್ರಾರ್ಥನೆ ಹಾಗೂ ಆಚರಣೆಯ ಒಂದು ಭಾಗವಾಗಿದ್ದು, ಆಕೆಯ ಶಾಪ ವಿಮೋಚನೆಗೆ ನಾನು ಸಹಕರಿಸಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾನೆ. ಸದ್ಯಕ್ಕೆ ವಿಚಾರಣೆ ಜಾರಿಯಲ್ಲಿದೆ. (ಪಿಟಿಐ)












Click it and Unblock the Notifications