ಭಾರತದಿಂದ ಶ್ರೀಲಂಕಾಕ್ಕೆ 65,000 ಮೆಟ್ರಿಕ್ ಟನ್ ಯೂರಿಯಾ ಪೂರೈಕೆ
ಕೊಲಂಬೊ, ಮೇ 14 : ಸ್ವಾತಂತ್ರ್ಯದ ನಂತರ ವಿನಾಶಕಾರಿ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಶ್ರೀಲಂಕಾಗೆ ಭಾರತ ಬೆಂಬಲವನ್ನು ವಿಸ್ತರಿಸಿದ್ದು, ಇದರ ಉಪಕ್ರಮವಾಗಿ ದ್ವೀಪ ರಾಷ್ಟ್ರಕ್ಕೆ 65,000 ಮೆಟ್ರಿಕ್ ಟನ್ ಯೂರಿಯಾವನ್ನು ಪೂರೈಸಲಿದೆ.
ಭಾರತದಲ್ಲಿನ ಶ್ರೀಲಂಕಾದ ಹೈಕಮಿಷನರ್ ಮಿಲಿಂದ ಮೊರಗೋಡ ಅವರು ಗುರುವಾರ ಭಾರತದ ರಸಗೊಬ್ಬರ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕುಮಾರ್ ಚತುರ್ವೇದಿ ಅವರೊಂದಿಗೆ ಸಭೆ ನಡೆಸಿದ್ದು, ಅಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಲಾಗಿದೆ ಎಂದು ಡೈಲಿ ಮಿರರ್ ವರದಿ ಮಾಡಿದೆ.
"ಹೈಕಮಿಷನರ್ ಮಿಲಿಂದ ಮೊರಗೋಡ ಅವರು ಭಾರತದ ರಸಗೊಬ್ಬರ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕುಮಾರ್ ಚತುರ್ವೇದಿ ಅವರನ್ನು ಭೇಟಿ ಮಾಡಿದ್ದಾರೆ. ಶ್ರೀಲಂಕಾದಲ್ಲಿ ಪ್ರಸ್ತುತ ಯಾಲಾ(ಮಳೆಗಾಲದ) ಋತುವಿಗೆ ಅಗತ್ಯವಿರುವ 65,000 ಮೆಟ್ರಿಕ್ ಟನ್ ಯೂರಿಯಾವನ್ನು ಪೂರೈಸುವ ಭಾರತದ ನಿರ್ಧಾರಕ್ಕೆ ಧನ್ಯವಾದಗಳು " ಎಂದು ಶ್ರೀಲಂಕಾದ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಭೆಯಲ್ಲಿ, ಮೊರಗೋಡ ಮತ್ತು ಕುಮಾರ್ ಚತುರ್ವೇದಿ ಇಬ್ಬರೂ ಭಾರತದಿಂದ ಶ್ರೀಲಂಕಾಕ್ಕೆ ರಾಸಾಯನಿಕ ಗೊಬ್ಬರಗಳನ್ನು ಜಾರಿಯಲ್ಲಿರುವ ಕ್ರೆಡಿಟ್ ಲೈನ್ ನಲ್ಲಿ ನಿರಂತರವಾಗಿ ಸರಬರಾಜು ಮಾಡುವುದನ್ನು ಖಚಿತಪಡಿಸಿಕೊಳ್ಳುವ ಸಂಭವನೀಯ ಮಾರ್ಗಗಳು ಮತ್ತು ಕ್ರಮಗಳ ಬಗ್ಗೆ ಚರ್ಚಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಯೂರಿಯಾ ರಪ್ತು ನಿಷೇಧವಿದ್ಧರೂ ನೆರವು
ಯೂರಿಯಾ ರಸಗೊಬ್ಬರದ ರಫ್ತು ನಿಷೇಧದ ಹೊರತಾಗಿಯೂ, ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ ಸರ್ಕಾರದ ಕೋರಿಕೆಯ ಮೇರೆಗೆ ಭಾರತ ಸರ್ಕಾರ 65,000 ಮೆಟ್ರಿಕ್ ಟನ್ ಯೂರಿಯಾವನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ಭಾರತದ ಒಂದು ಬಿಲಿಯನ್ ಲೈನ್ ಆಫ್ ಕ್ರೆಡಿಟ್ ಆಡಿಯಲ್ಲಿ ನೆರವು ನೀಡಲು ಒಪ್ಪಿಕೊಂಡಿದೆ.

ರಾಸಾಯನಿಕ ಗೊಬ್ಬರ ನಿಷೇಧಿಸಿದ್ದ ಶ್ರೀಲಂಕಾ
ಸಂಪೂರ್ಣ ಸಾವಯವ ಕೃಷಿ ಸಾಧಿಸುವ ನಿಟ್ಟಿನಲ್ಲಿ ಶ್ರೀಲಂಕಾ ಸರ್ಕಾರ ಕಳೆದ ವರ್ಷ ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ಆಮದನ್ನು ನಿಷೇಧಿಸಿತ್ತು. ಆದರೆ ಸಾವಯವ ಗೊಬ್ಬರಗಳ ಅಸಮರ್ಪಕ ಪೂರೈಕೆಯಿಂದ ದೇಶದಲ್ಲಿ ಹಿಂದೆಂದೂ ಕೇಳರಿಯದ ಆರ್ಥಿಕ ಬಿಕ್ಕಟ್ಟು ಉಂಟಾಗಿ, ಸರ್ಕಾರದ ವಿರುದ್ಧ ಅಲ್ಲಿನ ಜನರು ದಂಗೆ ಎದ್ದಿದ್ದಾರೆ. ಸರ್ಕಾರದ ಆ ಒಂದು ನಿರ್ಧಾರದ ಮೇಲೆ ಕೃಷಿ ಉತ್ಪಾದನೆಯ ಮೇಲೆ ಹೆಚ್ಚು ಪರಿಣಾಮ ಬೀರಿತ್ತು.

ದ್ವೀಪ ರಾಷ್ಟ್ರಕ್ಕೆ ಸಾಲ
ರಾಸಾಯನಿಕ ಗೊಬ್ಬರ ಪೂರೈಕೆಯ ಜೊತೆಗೆ ಸಾಲದ ಹೊರೆಯಲ್ಲಿರುವ ದ್ವೀಪ ರಾಷ್ಟ್ರಕ್ಕೆ ಸಾಲ , ಕ್ರೆಡಿಟ್ ಸ್ವಾಪ್ ಮತ್ತು ಕ್ರೆಡಿಟ್ ಲೈನ್‌ಗಳಲ್ಲಿ 3 ಶತಕೋಟಿ ಅಮೆರಿಕನ್ ಡಾಲರ್‌ಗಳ ನೆರವು ಒದಗಿಸುವುದಾಗಿ ಭಾರತ ಭರವಸೆ ನೀಡಿದೆ. ಜೊತೆಗೆ ಶ್ರೀಲಂಕಾದ ಹೊಸ ಸರಕಾರದೊಂದಿಗೆ ಕೆಲಸ ಮಾಡುವ ಇಚ್ಛೆಯನ್ನು ಭಾರತವೂ ವ್ಯಕ್ತಪಡಿಸಿದೆ.

ವಿಕ್ರಮಸಿಂಘೆ ನೂತನ ಪ್ರಧಾನಿ
ಆರ್ಥಿಕ ಬಿಕ್ಕೆ ಸಿಲುಕಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ನಂತರ ವಿರೋಧ ಪಕ್ಷದ ನಾಯಕರಾಗಿದ್ದ ರನಿಲ್ ವಿಕ್ರಮಸಿಂಘೆ ಅವರು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ತೀವ್ರ ಪ್ರತಿಭಟನೆಯ ನಂತರ ಮಹಿಂದ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ 73 ವರ್ಷದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ನೂತನ ಪ್ರಧಾನಿಯಾಗಿ ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ನೇಮಕ ಮಾಡಿದ್ದರು. ವಿಕ್ರಮಸಿಂಘೆ ಈ ಹಿಂದೆ 4 ಬಾರಿ ದೇಶದ ಪ್ರಧಾನಿಯಾಗಿದ್ದರು.












Click it and Unblock the Notifications