
ಹಿಂದೂ ಮಹಾಸಾಗರದಲ್ಲೂ ಚೀನಾಗೆ ಸೋಲು..?
ಮಾಲ್ಡೀವ್ಸ್, ಆಗಸ್ಟ್ 14: ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಚೀನಾಗೆ ಪಾಶ್ಚಿಮಾತ್ಯ ದೇಶಗಳು ಗುನ್ನಾ ಇಡುವಾಗಲೇ, ಭಾರತ ಹಿಂದೂ ಮಹಾಸಾಗರದಲ್ಲೂ ಡ್ರ್ಯಾಗನ್‌ಗೆ ಶಾಕ್ ಕೊಟ್ಟಿದೆ. ಮೂಲಸೌಕರ್ಯ ಕ್ಷೇತ್ರ ಅಭಿವೃದ್ಧಿಪಡಿಸಲು ಮಾಲ್ಡೀವ್ಸ್‌ಗೆ ಸುಮಾರು ₹3,750 ಕೋಟಿ ನೀಡಲು ಭಾರತ ಮುಂದಾಗಿದೆ.
ಈಗಾಗಲೇ ಶ್ರೀಲಂಕಾ ಹಾಗೂ ಮಾಲ್ಡೀವ್ಸ್ ಜೊತೆಗೆ ಸಂಬಂಧ ಬೆಸೆಯುವ ನೆಪದಲ್ಲಿ ಚೀನಾ ಈ ಎರಡೂ ರಾಷ್ಟ್ರಗಳನ್ನು ಬುಟ್ಟಿಗೆ ಬೀಳಿಸಿರುವುದು ಓಪನ್ ಸೀಕ್ರೇಟ್. ಇದು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಆತಂಕ ಹುಟ್ಟಿಸಿದೆ. ಏಕೆಂದರೆ ದಕ್ಷಿಣ ಚೀನಾ ಸಮುದ್ರದಲ್ಲಿ ಸಾಮ್ರಾಜ್ಯಶಾಹಿ ಚೀನಾ ಈಗಾಗಲೇ ಪ್ರಾಬಲ್ಯ ಮೆರೆಯಲು ಯತ್ನಿಸುತ್ತಿದೆ. ಈ ಹೊತ್ತಲ್ಲೇ ಹಿಂದೂ ಮಹಾಸಾಗರದಲ್ಲೂ ಚೀನಾ ಆಸರೆ ಕಂಡುಕೊಳ್ಳುತ್ತಿರುವುದು ಸಹಜವಾಗಿ ಜಗತ್ತಿನ ಆತಂಕಕ್ಕೆ ಕಾರಣವಾಗಿದೆ.
ಸಂಪದ್ಭರಿತ ಟ್ರಿಲಿಯನ್ ಡಾಲರ್ ಜಾಗಕ್ಕಾಗಿ ವರ್ಲ್ಡ್ ವಾರ್..?
ಮೆಲ್ಲ ಮೆಲ್ಲಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಹರಡಿರುವ ದ್ವೀಪ ರಾಷ್ಟ್ರಗಳನ್ನು ನರಿಬುದ್ಧಿ ಚೀನಾ ಕಬಳಿಸುತ್ತಿದೆ. ಸಾಲ ಕೊಟ್ಟಂತೆ ನಟನೆ ಮಾಡುತ್ತಾ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಹೀಗಾಗಿ ದಿಟ್ಟ ನಿರ್ಧಾರ ಕೈಗೊಂಡಿರುವ ಭಾರತ, ಮಾಲ್ಡೀವ್ಸ್ ಅಭಿವೃದ್ಧಿಗೆ ನೆರವಾಗಲು ಮುಂದಾಗಿದೆ. ಈ ಮೂಲಕ ತನ್ನ ನೆರೆಯ ರಾಷ್ಟ್ರಕ್ಕೆ ಬೆನ್ನೆಲುಬಾಗಿ ನಿಲ್ಲುವುದರ ಜೊತೆಗೆ ಚೀನಾ ಕನಸಿಗೂ ಭಾರತ ಕೊಳ್ಳಿ ಇಟ್ಟಿದೆ.

2 ವರ್ಷದಲ್ಲಿ ₹15 ಸಾವಿರ ಕೋಟಿ ಸಹಾಯ..!
ಡ್ರ್ಯಾಗನ್ ಚೀನಾ ಸಹಾಯದ ನೆಪದಲ್ಲಿ ಭಾರತದ ನೆರೆ ರಾಷ್ಟ್ರಗಳ ಜೊತೆ ಸ್ನೇಹ ಬೆಳೆಸಿ, ಸುತ್ತುವರಿಯುತ್ತಿರುವ ಸಂಗತಿ ಭಾರತಕ್ಕೆ ಮನದಟ್ಟಾಗಿದೆ. ಹೀಗಾಗಿಯೇ ಭಾರತ ಸರ್ಕಾರ ಮಾಲ್ಡೀವ್ಸ್ ಜೊತೆ ಸಂಬಂಧ ವೃದ್ಧಿಗೆ ಹಲವು ಯೋಜನೆ ಕೈಗೊಂಡಿದೆ. ಅದರಲ್ಲೂಇಬ್ರಾಹಿಂ ಮೊಹಮ್ಮದ್ ಸಾಲಿಹ್ ಅಧಿಕಾರಕ್ಕೆ ಬಂದ ಬಳಿಕ, ಈಗಿನ ಹೂಡಿಕೆ ಸೇರಿ ಮಾಲ್ಡೀವ್ಸ್‌ಗೆ ಒಟ್ಟು ₹15 ಸಾವಿರ ಕೋಟಿಗೂ ಹೆಚ್ಚು ಹಣ ಕೊಟ್ಟಂತಾಗಿದೆ. ಆದರೆ ಈ ಹಿಂದಿನ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಚೀನಾ ಪರ ನಿಂತಿದ್ದ ಪರಿಣಾಮ ಭಾರತದ ಜತೆಗಿನ ಮಾಲ್ಡೀವ್ಸ್ ಸಂಬಂಧ ಹಳಸಿತ್ತು. ಆದರೆ 2018ರ ನವೆಂಬರ್‌ನಲ್ಲಿ ಅಧಿಕಾರ ಹಿಡಿದ ಸಾಲಿಹ್ ಭಾರತದ ಜೊತೆಗಿನ ಸಂಬಂಧ ಮರುಸ್ಥಾಪನೆಗೆ ಸಾಥ್ ನೀಡಿದ್ದರು. ಹೀಗಾಗಿಯೇ ಭಾರತ ಕಳೆದ 2 ವರ್ಷಗಳಿಂದ ಮಾಲ್ಡೀವ್ಸ್‌ಗೆ ಸಾಕಷ್ಟು ಸಹಾಯ ಮಾಡುತ್ತಿದೆ.

ಶ್ರೀಲಂಕಾಗೂ ಭಾರತದಿಂದ ನೆರವು..!
ಲಡಾಖ್‌ನಲ್ಲಿ ಭಾರತ-ಚೀನಾ ಮಧ್ಯೆ ಸಂಘರ್ಷ ಪರಿಹಾರವಾಗದ ಹಿನ್ನೆಲೆ ಭಾರತ ಸರ್ಕಾರ ನೆರೆ ದೇಶಗಳ ಜೊತೆಗೆ ಸಂಬಂಧ ವೃದ್ಧಿಗೆ ಮುಂದಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ ಶ್ರೀಲಂಕಾಗೆ ₹3,000 ಕೋಟಿ ನೆರವು ನೀಡಲು ಭಾರತ ಕಳೆದ ತಿಂಗಳು ನಿರ್ಧರಿಸಿತ್ತು. ಇದರ ಜೊತೆಗೆ ಲಂಕಾ ಭಾರತಕ್ಕೆ ನೀಡಬೇಕಿರುವ ಹಣ ಮರಳಿಸುವ ಅವಧಿ ವಿಸ್ತರಣೆಗೂ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಇದು ಚೀನಾಗೆ ಒಳಗೊಳಗೆ ಉರಿ ತರುತ್ತಿದ್ದರೆ, ಭಾರತ ತನ್ನ ಸುತ್ತಲೂ ಮತ್ತೆ ಸೇಫ್ ಜೋನ್ ಸೃಷ್ಟಿಸುತ್ತಿದೆ.

ಆಫ್ರಿಕಾ ಮೂಲಕ ಆಸ್ಟ್ರೇಲಿಯಾ ಸಂಪರ್ಕ..!
ಹಿಂದೂ ಮಹಾಸಾಗರಕ್ಕೂ ಭಾರತಕ್ಕೂ ಅವಿನಾಭಾವ ಸಂಬಂಧ. ಇದೇ ಹಿಂದೂ ಮಹಾಸಾಗರದ ಮೂಲಕ ಟ್ರಿಲಿಯನ್ ಡಾಲರ್ ಮೊತ್ತದ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಅದರಲ್ಲೂ ಭಾರತಕ್ಕೆ ಈ ಸಾಗರ ಪ್ರದೇಶ ಅತಿಮುಖ್ಯ. ಜೊತೆಗೆ ಇಡೀ ಜಗತ್ತನ್ನು ಆಫ್ರಿಕಾ ಮೂಲಕವಾಗಿ ಆಸ್ಟ್ರೇಲಿಯಾಗೆ ಸಂಪರ್ಕಿಸುವ ಬಹುಮುಖ್ಯ ಜಲಮಾರ್ಗವೂ ಇದಾಗಿದೆ. ಆದರೆ ಹೂಡಿಕೆ ನೆಪದಲ್ಲಿ ಶ್ರೀಲಂಕಾ, ಮಾಲ್ಡೀವ್ಸ್‌ಗೆ ಬಂದು ವಕ್ಕರಿಸಿರುವ ಚೀನಾ, ಹಿಂದೂ ಮಹಾಸಾಗರ ತನ್ನ ಆಸ್ತಿಯೇನೋ ಎಂಬಂತೆ ವರ್ತಿಸುತ್ತಿದೆ.

ಚೀನಾದ ಈ ಕನಸಿಗೆ ಅಡ್ಡಿಯಾಗಿರುವುದೇ ಭಾರತ
ಹಾಗೇ ಹಿಂದೂ ಮಹಾಸಾಗರವನ್ನು ದಕ್ಷಿಣ ಚೀನಾ ಸಮುದ್ರವಾಗಿ ಬದಲಿಸುವ ಹಗಲುಗನಸು ಕಾಣುತ್ತಿದೆ. ಆದರೆ ಚೀನಾದ ಈ ಕನಸಿಗೆ ಅಡ್ಡಿಯಾಗಿರುವುದೇ ಭಾರತ. ಮೊದಲೇ ಬುಡಕ್ಕೆ ಬೆಂಕಿ ಬಿದ್ದಂತೆ ಕುದಿಯುತ್ತಿರುವ ಚೀನಾಗೆ ಭಾರತ ಮತ್ತೆ ಶಾಕ್ ನೀಡಿದೆ. ಮಾಲ್ಡೀವ್ಸ್‌ಗೆ ಸಹಾಯ ಮಾಡುವ ಮೂಲಕ ಕಿರಿಕ್ ಪಾರ್ಟಿ ಚೀನಾಗೆ ಸರಿಯಾಗೇ ಬುದ್ಧಿ ಕಲಿಸಿದೆ.