Imran Khan: ಜೈಲಿನಿಂದ ದಯವಿಟ್ಟು ಹೊರಗೆ ಕರೆದೊಯ್ಯಿರಿ!
ಇದಕ್ಕೆ ಅಲ್ವಾ ಹೇಳೋದು ಪರಿಸ್ಥಿತಿ ಅಂತಾ? ಆ ವ್ಯಕ್ತಿ ಕೆಲವೇ ದಿನಗಳ ಹಿಂದೆ ಅದ್ಧೂರಿ ಜೀವನ ನಡೆಸುತ್ತಿದ್ದ. ಕೈಗೆ, ಕಾಲಿಗೆ ಸಿಗುವಂತೆ ಕೆಲಸದವರು ಕೂಡ ಇದ್ದರು. ಆದ್ರೆ ಈಗ ಸೊಳ್ಳೆ, ನೊಣ & ತಿಗಣೆ ಇರುವ ಜೈಲಿನ ಕೋಣೆಯಲ್ಲಿ ನರಳಾಡುವ ಪರಿಸ್ಥಿತಿ ಬಂದಿದೆ! ಅರೆ ಇದು ಯಾರ ವ್ಯಥೆ ಅಂದ್ರಾ? ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕಥೆ.
ಹೌದು, ತೋಶಾಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಇಮ್ರಾನ್ ಖಾನ್‌ಗೆ ಜೈಲಿನಲ್ಲಿ ನರಕ ತೋರಿಸಲಾಗುತ್ತಿದೆ. ಹಗಲಲ್ಲಿ ನೊಣ, ರಾತ್ರಿ ಸೊಳ್ಳೆ, ಹುಳಗಳ ಕಾಟವಿರುವ ಜೈಲಿನ ಕೋಣೆಯಲ್ಲಿ ಇಮ್ರಾನ್ ಖಾನ್‌ಗೆ ಟಾರ್ಚರ್ ಕೊಡುತ್ತಿರುವ ಆರೋಪ ಕೇಳಿಬಂದಿದೆ. ಕೋರ್ಟ್‌ನ ಆದೇಶದಂತೆ ಇಮ್ರಾನ್ ರಾವಲ್ಪಿಂಡಿಯ ಆದಿಯಾಲಾ ಜೈಲಿನಲ್ಲಿ ಇರಬೇಕಿತ್ತು. ಆದರೆ ಅಟಕ್ ನಗರದ ಜೈಲಿಗೆ ಅವರನ್ನ ಸ್ಥಳಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈಗ ನೋಡಿದ್ರೆ ಪಾಕ್‌ನ ಅಟಕ್ ಜೈಲಿನಲ್ಲಿ ಇಮ್ರಾನ್‌ಗೆ ನರಕ ತೋರಿಸುತ್ತಿದ್ದಾರಂತೆ.

ದಯವಿಟ್ಟು ಹೊರಗೆ ಕರೆದುಕೊಂಡು ಹೋಗಿ!
ಇಮ್ರಾನ್ ಖಾನ್ ಪರಿಸ್ಥಿತಿ ಈಗ ಹೇಗಾಗಿದೆ ಎಂದರೆ, ಪಾಕಿಸ್ತಾನದ ಸೇನೆ ಮತ್ತು ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ವಿಲವಿಲ ಒದ್ದಾಡುತ್ತಿದ್ದಾರೆ. ಈಗ ಜೈಲಿನಲ್ಲಿ ನರಳುವ ಪರಿಸ್ಥಿತಿ ಬಂದ ಹಿನ್ನೆಲೆಯಲ್ಲಿ, ಜೈಲಿನಿಂದ ನನ್ನ ಹೇಗಾದರೂ ಹೊರಗಡೆ ಕರೆದುಕೊಂಡು ಹೋಗಿ ಎಂದು ಇಮ್ರಾನ್ ಖಾನ್ ತಮ್ಮ ವಕೀಲರ ಬಳಿ ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಮ್ರಾನ್ ಸ್ಥಿತಿ ಬಗ್ಗೆ ಅವರ ಕುಟುಂಬಕ್ಕೆ & ಬೆಂಬಲಿಗರಿಗೆ ಭಯ ಶುರುವಾಗಿದೆ. ಅಲ್ಲದೆ ಪಾಕಿಸ್ತಾನ ಮಾಜಿ ಪ್ರಧಾನಿ ಆರೋಗ್ಯ ಏನಾಗಲಿದೆ? ಎಂಬ ಆತಂಕದ ಪ್ರಶ್ನೆ ಕಾಡುತ್ತಿದೆ.
ಬೇರೆ ಜೈಲಿಗೆ ಕಳಿಸಿ ಪ್ಲೀಸ್!
ಇನ್ನು ಇಮ್ರಾನ್ ತಮ್ಮನ್ನು ಅಟಕ್ ಜೈಲಿಂದ ರಾವಲ್ಪಿಂಡಿ ಅಡಿಯಾಲ ಜೈಲಿಗೆ ಸ್ಥಳಾಂತರ ಮಾಡಲು ಕೋರಿದ್ದರು. ಈ ಬಗ್ಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ಇಸ್ಲಾಮಾಬಾದ್ ಹೈಕೋರ್ಟ್ ಪಾಕಿಸ್ತಾನ ಕೇಂದ್ರ ಸರ್ಕಾರ ಹಾಗೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆಮರ್ ಫಾರೂಕ್ ಕಾನೂನು ತಂಡ ಇಮ್ರಾನ್‌ರನ್ನ ಭೇಟಿಯಾಗಲು ಅವಕಾಶ ನೀಡಿ ಎಂದು ಆದೇಶ ನೀಡಿದ್ದಾರೆ. ಹಾಗೇ ಅರ್ಜಿ ವಿಚಾರಣೆಯನ್ನ ಆಗಸ್ಟ್ 11ಕ್ಕೆ ಮುಂದೂಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಏನಿದು ಇಮ್ರಾನ್ ವಿರುದ್ಧದ ಕೇಸ್?
ಇಮ್ರಾನ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಪಾಕ್ ಚುನಾವಣೆ ಆಯೋಗವು ಕಳೆದ ವರ್ಷ ಕೇಸ್ ದಾಖಲಿಸಿತ್ತು. ಗಿಫ್ಟ್ ಮಾರಾಟದಿಂದ ₹14 ಕೋಟಿಗೂ ಹೆಚ್ಚು ಹಣವನ್ನ ಇಮ್ರಾನ್ ಗಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇಸ್ಲಾಮಾಬಾದ್ ಜಿಲ್ಲಾ & ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಹುಮಾಯುನ್ ದಿಲವಾರ್ ತೀರ್ಪು ನೀಡಿ, ಇಮ್ರಾನ್‌ಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಒಂದು ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿದ್ದು, ದಂಡದ ಪಾವತಿ ಮಾಡದಿದ್ದರೆ ಹೆಚ್ಚುವರಿಯಾಗಿ 6 ತಿಂಗಳು ಜೈಲು ಕಂಬಿ ಎಣಿಸಬೇಕು ಎಂದು ಇಮ್ರಾನ್ ಖಾನ್ ಅವರಿಗೆ ಆದೇಶ ನೀಡಲಾಗಿದೆ. ಹೀಗಾಗಿ ಜೈಲಿನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಪರದಾಡುವ ಪರಿಸ್ಥಿತಿ ಬಂದಿದೆ.

ಇಮ್ರಾನ್ ವಿರುದ್ಧ ಕೇಸ್ ಒಂದಾ.. ಎರಡಾ..!
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್‌ನ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಖಾನ್ ಬಿಡುಗಡೆ ಆಗಿದ್ದರು. ಈ ಪ್ರಕರಣ ಸೇರಿ ಇಮ್ರಾನ್ ಖಾನ್ ವಿರುದ್ಧ ನೂರಕ್ಕೂ ಹೆಚ್ಚು ಕೇಸ್ ಇವೆ. ಇಮ್ರಾನ್ ಖಾನ್ ಎಲ್ಲ ಪ್ರಕರಣಗಳಲ್ಲಿ ಸಿಲುಕಿ ನರಳುವಾಗಲೇ ಜೈಲು ಶಿಕ್ಷೆ ಬೇರೆ ಪ್ರಕಟವಾಗಿದೆ. ಶಿಕ್ಷೆ ಮಾತ್ರವಲ್ಲ ಜೈಲಿನಲ್ಲಿ ಪರದಾಡುವ ಪರಿಸ್ಥಿತಿ ಕೂಡ ಎದುರಾಗಿದೆ.












Click it and Unblock the Notifications