India VS China: ಹಿಂದೂ ಮಹಾಸಾಗರದಲ್ಲಿ ಚೀನಾಗೆ ಶಾಕ್, ಭಾರತ ರಾಕ್!
ಭಾರತ ಮತ್ತು ಚೀನಾ ನಡುವೆ ಭೂಗಡಿ ವಿವಾದ ಮಾತ್ರ ಇಲ್ಲ, ಜಲಗಡಿ ವಿವಾದ ಕೂಡ ಎರಡೂ ದೇಶಗಳ ನಡುವೆ ಹೊತ್ತಿ ಉರಿಯುತ್ತಿದೆ. ಭಾರತದ ಜೊತೆ ಪದೇ ಪದೆ ಗಡಿಯಲ್ಲಿ ಕಿರಿಕ್ ಮಾಡಿ ಚೀನಾ ಸೇನೆ ಸದ್ದು ಮಾಡುತ್ತೆ. ಅದರಲ್ಲೂ ಇತ್ತೀಚೆಗೆ ಭಾರತವೇ ನೇತೃತ್ವ ವಹಿಸಿ ನಡೆಸಿದ್ದ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷರು ಬರಲಿಲ್ಲ. ಇಷ್ಟೆಲ್ಲಾ ಕಿರಿಕಿರಿ ಮಧ್ಯೆ ಈಗ ಹಿಂದೂ ಮಹಾಸಾಗರದ ವಿಚಾರ ಕೂಡ ದೊಡ್ಡ ಸಂಚಲನ ಸೃಷ್ಟಿಸಿದೆ.
ಅಷ್ಟಕ್ಕೂ ಹಿಂದೂ ಮಹಾಸಾಗರದ ವಿಚಾರಕ್ಕೆ ಭಾರತ ಹಾಗೂ ಚೀನಾ ನಡುವೆ ಸಾಕಷ್ಟು ಕಿರಿಕ್ ಇದೆ. ಆದರೆ ಈಗ ಚೀನಾಗೆ ಶಾಕ್ ಕೊಡಲು ಭಾರತ ಸಿದ್ಧತೆ ನಡೆಸಿದೆ. ಅದು ಹೇಗೆ ಅಂದ್ರಾ? ಭಾರತ ಈಗ ಕೈಗೊಂಡಿರುವ ಕ್ರಮ ಅಕ್ಷರಶಃ ಚೀನಾಗೆ ಆಘಾತ ನೀಡಿದೆ. ಹೇಗೆ ಅಂದ್ರೆ, ಭಾರತದ ಬೃಹತ್ ಆಯಕಟ್ಟಿನ ಭೌಗೋಳಿಕ ಹಿತಾಸಕ್ತಿ ಕಾಪಾಡಲು ಮತ್ತು ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಾಬಲ್ಯ ತಡೆಯಲು ಭಾರತದ ಸಾಗರ ಸುರಕ್ಷಾ ಪಡೆಯನ್ನು ಮತ್ತಷ್ಟು ಬಲಪಡಿಸಲು ಮಹತ್ವದ ಯೋಜನೆ ಸಿದ್ಧವಾಗಿದೆ. ಹಾಗಾದರೆ ಯಾವುದು ಅಂಥ ಯೋಜನೆ? ಇದರಿಂದ ಚೀನಾಗೆ ಭಾರತ ಹೇಗೆ ಆಘಾತ ನೀಡುತ್ತದೆ? ಮುಂದೆ ಓದಿ.

ಹಿಂದೂ ಮಹಾಸಾಗರ ಭಾರತಕ್ಕೆ ಸ್ವಂತ!
ಭಾರತ ಹಿಂದೂ ಮಹಾಸಾಗರ ಮೇಲಿನ ತನ್ನ ಹಕ್ಕನ್ನು ಪದೇ ಪದೆ ಪ್ರಸ್ತಾಪ ಮಾಡುತ್ತಲೆ ಬಂದಿದೆ. ಅದರಲ್ಲೂ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಈ ವಿಚಾರ ಪ್ರಸ್ತಾಪಿಸಿದೆ. ಹೀಗಿದ್ದಾಗ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಹಿಡಿತ ಬಿಗಿ ಮಾಡುತ್ತಿರುವ ಭಾರತ ನೌಕಾಪಡೆಗೆ ಬಲ ತುಂಬಲು ಮುಂದಾಗಿದೆ. ಸುಮಾರು 2 ಲಕ್ಷ ಕೋಟಿ ರೂಪಾಯಿ ಮೌಲ್ಯದ 68 ಯುದ್ಧನೌಕೆ ಹೊಂದಿರುವ ಭಾರತ ನೌಕಾಪಡೆಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 132 ಯುದ್ಧನೌಕೆ, 143 ವಿಮಾನ & 130 ಹೆಲಿಕಾಪ್ಟರ್ ನಿಯೋಜಿಸಲು ಭಾರತ ಮಹತ್ವದ ಯೋಜನೆ ರೂಪಿಸಿದೆ.
ಭಾರತದ ಸೇನೆಗೆ ಸಬ್‍ಮೆರಿನ್ ಬಲ
ನೌಕೆ ಮಾತ್ರವಲ್ಲದೆ ಅತ್ಯಾಧುನಿಕ ತಂತ್ರಜ್ಞಾನದ ಸಬ್‍ಮೆರಿನ್ ನಿರ್ಮಿಸುವುದಕ್ಕೂ ಭಾರತ ಮುಂದಾಗಿದೆ. ಮುಂದಿನ ಪೀಳಿಗೆ ತಂತ್ರಜ್ಞಾನ ಇರುವ 8 ಬೆಂಗಾವಲು ನೌಕೆ, 9 ಸಬ್‍ಮೆರಿನ್‍ಗಳು, 5 ಕಣ್ಗಾವಲು ನೌಕೆ ಮತ್ತು 2 ಬಹು ಉದ್ದೇಶದ ಹಡಗುಗಳನ್ನು ಭಾರತದಲ್ಲಿ ನಿರ್ಮಾಣ ಮಾಡಲು ಅನುಮೋದನೆ ಸಿಕ್ಕಾಗಿದೆ. ಈ ಮೂಲಕ ಭಾರತೀಯ ನೌಕಾಪಡೆ 2030ರ ವೇಳೆಗೆ 155 ರಿಂದ 160 ಯುದ್ಧನೌಕೆ ಹೊಂದುವ ಸಾಧ್ಯತೆ ಇದೆ. ಇಷ್ಟು ಯುದ್ಧನೌಕೆ ಭಾರತೀಯ ನೌಕಾಪಡೆ ಕೈಗೆ ಸಿಕ್ಕರೆ ಸಾಕು ನೋಡಿ, ಮುಂದೆ ಇದೆ ರಿಯಲ್ ಗೇಮ್.

ನೌಕಾಪಡೆಯ ಹಿಡಿತ ಮತ್ತಷ್ಟು ಬಿಗಿ
ಈಗಿನ ನಿರ್ಧಾರವು ಭಾರತೀಯ ನೌಕಾಪಡೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ದೊಡ್ಡ ಬಲ ತುಂಬಲಿದೆ. ಈ ಮೂಲಕ ಚೀನಾ ಸೇನೆ ಮತ್ತು ಇತರ ದೇಶಗಳ ಪ್ರಾಬಲ್ಯ ಹಿಡಿತಕ್ಕೆ ತಂದು ಹಿಂದೂ ಮಹಾಸಾಗರದ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿ ಮಾಡಲು ಭಾರತ ಮುಂದಾಗಿದೆ ಎನ್ನಲಾಗಿದೆ. ಪ್ರಮುಖವಾಗಿ ಭವಿಷ್ಯದಲ್ಲಿ ಹಿಂದೂ ಮಹಾಸಾಗರ ಜಗತ್ತಿನ ಮುಖ್ಯ ಜಲಮಾರ್ಗ ಕೂಡ ಆಗುವ ಸಂಭವವಿದೆ. ಭಾರತದ ಆರ್ಥಿಕತೆಗೂ ಇದರಿಂದಾಗಿ ಸಾಕಷ್ಟು ಆದಾಯ ಬರುವ ನಿರೀಕ್ಷೆ ಇದೆ. ಈ ಎಲ್ಲಾ ಲೆಕ್ಕಾಚಾರ ಮಾಡಿಯೇ ಹಿಂದೂ ಮಹಾಸಾಗರದ ರಕ್ಷಣೆಗೆ ಭಾರತ ಮುಂದಾಗಿದೆ.
ಒಟ್ನಲ್ಲಿ ಚೀನಾ ಮತ್ತು ಭಾರತದ ನಡುವೆ ಮತ್ತೊಂದು ಗಡಿ ವಿಚಾರಕ್ಕೆ ತಿಕ್ಕಾಟ ಹೆಚ್ಚಾಗಿ ಕಿಡಿ ಹೊತ್ತಿಕೊಳ್ಳುವ ಸೂಚನೆ ಸಿಕ್ಕಿದೆ. ಭಾರತ ಈಗ ಕೈಗೊಂಡಿರುವ ಕ್ರಮದಿಂದ ಭಾರತ ನೌಕಾಪಡೆಯ ಭವಿಷ್ಯ ಹಾಗೂ ಭಾರತದ ಭವಿಷ್ಯ ಕೂಡ ಭದ್ರವಾಗಲಿದೆ. ಈ ಕಾರಣಕ್ಕೆ, ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡಿ ನೌಕಾಪಡೆ ಬಲ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಆದ್ರೆ ಈ ಕುರಿತು ಮುಂದೆ ಚೀನಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಈ ಮೂಲಕ ದಕ್ಷಿಣ ಚೀನಾ ಸಮುದ್ರದ ರೀತಿಯೇ ಹಿಂದೂ ಮಹಾಸಾಗರ ವಿಚಾರ ಕೂಡ ಮುಂದಿನ ದಿನದಲ್ಲಿ ಜಗತ್ತಿನ ಗಮನ ಸೆಳೆಯಲಿದೆ.












Click it and Unblock the Notifications