ತಾಲಿಬಾನ್ ನನ್ನನ್ನು ಕೊಂದರೆ, ನನ್ನ 'ಸೇವೆ': ಅಫ್ಘಾನ್ ತೊರೆಯಲು ನಿರಾಕರಿಸಿದ ಹಿಂದೂ ಅರ್ಚಕ
ಕಾಬೂಲ್, ಆ. 18: ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ನಂತರ ಹಲವಾರು ಮಂದಿ ತಾವು ಹುಟ್ಟಿ ಬೆಳೆದ ದೇಶವಾದರೂ ಅಫ್ಘಾನಿಸ್ತಾನವನ್ನು ತೊರೆದು ಬೇರೆ ಕಡೆಗೆ ತೆರಳುತ್ತಿದ್ದಾರೆ. ತಾಲಿಬಾನ್‌ನ ಈ ಹಿಂದಿನ ಆಡಳಿತದ ಬಗ್ಗೆ ತಿಳಿದ ಜನರು ತಾವು ಯಾವುದೇ ಹಕ್ಕುಗಳು ಇಲ್ಲದೇ ಬದುಕುವುದಾದರೂ ಹೇಗೆ ಎಂದು ಅಫ್ಘಾನಿಸ್ತಾನದಿಂದ ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ.
Recommended Video
ಇದನ್ನು ನಾವು ಅಫ್ಘಾನಿಸ್ತಾನದ ವಿಮಾನ ನಿಲ್ದಾಣದಲ್ಲಿ ನೋಡಿದ್ದೇವೆ. ಕಾಬೂಲ್ ಅನ್ನು ತಾಲಿಬಾನ್ ವಶಕ್ಕೆ ಪಡೆಯುತ್ತಿದ್ದಂತೆ ಅಫ್ಘಾನಿಸ್ತಾನದ ಹಲವಾರು ಜನರು ಕಾಬೂಲ್‌ನ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದರು. ಇದಕ್ಕೆ ಸಾಕ್ಷಿಯಾಗಿ ವಿಮಾನದ ರೆಕ್ಕೆಯಲ್ಲಿ ನೇತಾಡಿದ ಇಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿದ್ದರು.
ಈ ನಡುವೆ ಕಾಬೂಲ್‌ನಲ್ಲಿರುವ ರಥನ್ ನಾಥ್ ದೇವಾಲಯದ ಕೊನೆಯ ಹಿಂದೂ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಮಾತ್ರ ದೇಶವನ್ನು ತೊರೆಯಲು ಒಪ್ಪಿಲ್ಲ. ಹಲವಾರು ಹಿಂದೂಗಳು ಪಂಡಿತ್ ರಾಜೇಶ್ ಕುಮಾರ್‌ಗೆ ದೇಶವನ್ನು ತೊರೆಯಲು ಸಹಾಯ ಮಾಡಲು ಮುಂದಾದರೂ ಕೂಡಾ ಈ ಕಾಬೂಲ್‌ನ ಕೊನೆಯ ಹಿಂದೂ ಅರ್ಚಕ ರಾಜೇಶ್ ಕುಮಾರ್ ಮಾತ್ರ ತನ್ನ ಈ ದೇವಾಲಯವನ್ನು ತೊರೆದು ಬೇರೆಲ್ಲೂ ಹೋಗಲಾರೆ ಎಂದು ಹೇಳಿದ್ದಾರೆ. ಹಾಗೆಯೇ ಈ ಸಹಾಯವನ್ನು ನಿರಾಕರಿಸಿದ್ದಾರೆ.

''ನನ್ನ ಪೂರ್ವಜರು ಈ ದೇವಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ನೂರಾರು ವರ್ಷಗಳಿಂದ ಈ ದೇವಾಲಯದಲ್ಲಿ ನನ್ನ ಪೂರ್ವಜರು ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ನಾನು ಈ ದೇವಾಲಯವನ್ನು ತೊರೆದು ಬರುವುದಿಲ್ಲ. ಇಲ್ಲಿಯೇ ನನ್ನ ಸೇವೆಯನ್ನು ಮುಂದುವರಿಸುತ್ತೇನೆ,'' ಎಂದು ಕಾಬೂಲ್‌ನಲ್ಲಿರುವ ರಥನ್ ನಾಥ್ ದೇವಾಲಯದ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಹೇಳುತ್ತಾರೆ.
ಕಾಬೂಲ್‌ನಲ್ಲಿರುವ ರಥನ್ ನಾಥ್ ದೇವಾಲಯದ ಅರ್ಚಕ ಪಂಡಿತ್ ರಾಜೇಶ್ ಕುಮಾರ್, ''ನಾನು ಕಾಬೂಲ್ ಅನ್ನು ತೊರೆಯುವಂತೆ ಕೆಲವು ಹಿಂದೂಗಳು ನನ್ನನ್ನು ಒತ್ತಾಯಿಸಿದರು. ಹಾಗೆಯೇ ನನ್ನ ಪ್ರಯಾಣಕ್ಕೆ ಹಾಗೂ ನಾನು ಉಳಿಯಲು ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡುವುದಾಗಿ ಕೆಲವು ಹಿಂದೂಗಳು ನನಗೆ ಭರವಸೆ ನೀಡಿದರು. ಆದರೆ ನನ್ನ ಪೂರ್ವಜರು ಈ ದೇವಾಲಯದಲ್ಲಿ ನೂರಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ನಾನು ಈ ದೇವಾಲಯವನ್ನು ಅನಾಥವಾಗಿ ಬಿಟ್ಟು ಎಲ್ಲಿಗೂ ಹೋಗಲಾರೆ. ತಾಲಿಬಾನ್ ನನ್ನನ್ನು ಕೊಂದರೆ, ನಾನು ಅದನ್ನು ನನ್ನ ಸೇವೆ ಎಂದು ಪರಿಗಣಿಸುತ್ತೇನೆ'' ಎಂದು ಹೇಳಿರುವುದಾಗಿ ಭಾರದ್ವಾಜ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಯುಎಸ್ ಸೇನೆ ಕಾಬೂಲ್‌ನಿಂದ ತೆರಳಿದ ಹಾಗೂ ಅಫ್ಘಾನಿಸ್ತಾನ ಅಧ್ಯಕ್ಷ ಕಾಬೂಲ್‌ನಿಂದ ಪಲಾಯನವಾದ ಬಳಿಕ ತಾಲಿಬಾನ್ ಭಾನುವಾರ ಕಾಬೂಲ್ ಅನ್ನು ಕೂಡಾ ವಶಕ್ಕೆ ಪಡೆದು ಇಡೀ ಅಫ್ಘಾನಿಸ್ತಾನವನ್ನೇ ತನ್ನ ತೆಕ್ಕೆಗೆ ಪಡೆದುಕೊಂಡಿದೆ.
ಇನ್ನು ಈಗಾಗಲೇ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಫ್ಘಾನಿಸ್ತಾನದಿಂದ ಬರಲು ಇಚ್ಛಿಸುವ ಹಿಂದೂಗಳು ಹಾಗೂ ಸಿಖ್ಖರಿಗೆ ಆಶ್ರಯ ನೀಡಲು ಭಾರತ ದೇಶ ಬದ್ಧವಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ ಈ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೆಯೇ ಅಲ್ಲಿರುವ ಭಾರತೀಯರನ್ನು ಭಾರತಕ್ಕೆ ವಾಪಾಸ್ ಕರೆತರುವ ಪ್ರಕ್ರಿಯೆಗಳನ್ನು ಕೂಡಾ ನಡೆಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ''ಭಾರತದತ್ತ ನೋಡುತ್ತಿರುವ ನಿರಾಶ್ರಿತರಿಗೆ ಎಲ್ಲಾ ರೀತಿಯ ನೆರವು ನೀಡುವ ಜವಾಬ್ದಾರಿ ನಮ್ಮ ಮೇಲಿದೆ,'' ಎಂದು ಹೇಳಿದ್ದಾರೆ. ಹಾಗೆಯೇ "ಕಾಬೂಲ್‌ನ ನಮ್ಮ ಕಚೇರಿ ಮುಚ್ಚಿರಬಹುದು, ಆದರೆ ತಾವು ಅಫ್ಘಾನಿಸ್ತಾನದ ಜನರನ್ನು ಕೈಬಿಟ್ಟಿದ್ದೇವೆ ಎಂದರ್ಥವಲ್ಲ. ಅವರೊಂದಿಗೆ ನಮ್ಮ ಸಂವಹನವನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ," ಎಂದು ಆಫ್ಘಾನಿಸ್ತಾನದ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ತಿಳಿಸಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications