ಶ್ರೀಲಂಕಾ ವಿಚಾರದಲ್ಲಿ ಚೀನಾಗೆ ಶಾಕ್ ಕೊಟ್ಟ ಭಾರತ?
ಕೊಲಂಬೋ: ಭಾರತದ ವಿರುದ್ಧ ಬಲೆ ಹಣೆಯಲು ಚೀನಾ ಪ್ಲ್ಯಾನ್ ರೂಪಿಸುತ್ತಿರುವಾಗಲೇ ಡ್ರ್ಯಾಗನ್‌ಗೆ ಭಾರತ ಶಾಕ್ ಕೊಟ್ಟಿದೆ. ಶ್ರೀಲಂಕಾಗೆ 4 ದಿನದ ಭೇಟಿಗೆ ತೆರಳಿರುವ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್. ಚೌಧರಿ, ಮಹತ್ವದ ಮಾತುಕತೆ ನಡೆಸಿದ್ದಾರೆ. ಶ್ರೀಲಂಕಾದಲ್ಲಿ ಚೀನಾ ರಾಡಾರ್ ಸ್ಥಾಪಿಸುವ ಉದ್ದೇಶ ಹೊಂದಿದೆ ಎಂಬ ಸುದ್ದಿ ನಡುವೆ ಈ ಭೇಟಿ ಮಹತ್ವ ಪಡೆದಿದೆ.
ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮತ್ತು ಪ್ರಧಾನಿ ದಿನೇಶ್ ಗುಣವರ್ಧನೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಹಲವು ವಿಚಾರ ಪ್ರಸ್ತಾಪಿಸಲಾಗಿದೆ. ಶ್ರೀಲಂಕಾ ಏರ್ ಮಾರ್ಷಲ್ ಎಸ್.ಕೆ. ಪತಿರಾಣ ಆಹ್ವಾನದ ಹಿನ್ನೆಲೆ ಚೌಧರಿ ಅವರು ಪ್ರವಾಸ ಕೈಗೊಂಡಿದ್ದಾರೆ.
ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ಸಹಕಾರದ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಜೊತೆಗೆ 2 ದೇಶಗಳ ನಡುವೆ ರಕ್ಷಣಾ ವಿಷಯದಲ್ಲಿ ಪರಸ್ಪರ ಬದ್ಧತೆ ಕಾಯ್ದುಕೊಳ್ಳುವ ಬಗ್ಗೆ ಗಂಭೀರ ಮಾತುಕತೆ ನಡೆದಿದೆ. ಈ ಮೂಲಕ ಚೀನಾ ವಿರುದ್ಧ ಭಾರತ ಹೊಸ ಅಸ್ತ್ರ ಪ್ರಯೋಗಿಸಿದಂತೆ ಕಾಣುತ್ತಿದೆ.

ಭಾರತದ ವಿರುದ್ಧ ಚೀನಾ ಕುತಂತ್ರ?
ಅತ್ತ ಭಾರತದ ಜೊತೆ ಸ್ನೇಹ ಗಟ್ಟಿಗೊಳಿಸಲು ಚೀನಾಗೆ ರಷ್ಯಾ ಕಿವಿಮಾತು ಹೇಳುತ್ತಿದ್ದರೆ, ಮತ್ತೊಂದು ಕಡೆ ಚೀನಾ ಭಾರತದ ವಿರುದ್ಧ ಸಮರ ಸಿದ್ಧತೆ ನಡೆಸುತ್ತಿರುವ ಆರೋಪ ಕೇಳಿಬಂದಿತ್ತು. ಇದರ ಮೊದಲ ಹೆಜ್ಜೆಯಾಗಿ ಶ್ರೀಲಂಕಾ ನಾಯಕರನ್ನು ಬುಟ್ಟಿಗೆ ಹಾಕಿಕೊಂಡು ಭಾರತದ ಸುತ್ತಲೂ ಚೀನಾ ಬಲೆ ಎಣೆಯುತ್ತಿದೆಯಾ? ಎಂಬ ಅನುಮಾನ ಶುರುವಾಗಿತ್ತು. ಶ್ರೀಲಂಕಾ ನೆಲದಲ್ಲಿ ರಾಡಾರ್ ಕೇಂದ್ರ ಸ್ಥಾಪಿಸಿ, ಭಾರತದ ಮೇಲೆ ಚೀನಾ ಕಣ್ಣಿಡಲು ಯೋಜಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಇದೆಲ್ಲಾ ನಡೆಯುವ ಹೊತ್ತಲ್ಲೇ ವಿ.ಆರ್. ಚೌಧರಿ ಅವರ ಲಂಕಾ ಭೇಟಿ ಜಗತ್ತಿನ ಗಮನ ಸೆಳೆದಿದೆ.
ಭಾರತಕ್ಕೆ ಸಮಸ್ಯೆ ಕಟ್ಟಿಟ್ಟ ಬುತ್ತಿ!
ಶ್ರೀಲಂಕಾದಲ್ಲಿ ಚೀನಾ ರಾಡಾರ್ ಕೇಂದ್ರ ಸ್ಥಾಪಿಸಲು ಯಶಸ್ವಿಯಾದರೆ, ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ಮೇಲೆ ಕೂಡ ಕಣ್ಣು ಇಡುವುದು ಸುಲಭ. ಭಾರತದ ಜಲಾಂತರ್ಗಾಮಿ ನೌಕೆಗಳು ಹಾಗೂ ಯುದ್ಧ ನೌಕೆಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕಡೆ ಚಲಿಸಿದ್ರೂ ಚೀನಾಗೆ ಗೊತ್ತಾಗತ್ತೆ.
ಚೀನಾ ಸುಲಭವಾಗಿ ದಕ್ಷಿಣ ಭಾರತದ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನ ಗುರುತಿಸಲಿದೆ ಚೀನಾ ಎಂಬ ಆತಂಕ & ಆರೋಪ ತಜ್ಞರಿಂದ ಕೇಳಿಬಂದಿತ್ತು. ಇದೀಗ ಭಾರತ ಲಂಕಾ ಜೊತೆಗಿನ ಸ್ನೇಹ ವೃದ್ಧಿಗೆ ಮುಂದಾಗಿರುವುದು ಕುತೂಹಲ ಕೆರಳಿಸಿದೆ.

ಬಂದರು ಬಾಡಿಗೆಗೆ ಪಡೆದಿದ್ದ ಚೀನಾ
ಅಂದಹಾಗೆ 2017ರಲ್ಲಿ ಹಂಬಂಟೋಟ ಬಂದರನ್ನು 99 ವರ್ಷಕ್ಕೆ ಬಾಡಿಗೆಗೆ ಪಡೆದ ಚೀನಾ, ಸುಮಾರು 1.12 ಬಿಲಿಯನ್ ಡಾಲರ್ ಪಾವತಿ ಮಾಡಿತ್ತು. ಆರ್ಥಿಕವಾಗಿ ದಿವಾಳಿಯಾದ ಶ್ರೀಲಂಕಾಗೆ ಇದು ಅನಿವಾರ್ಯ ಆಗಿತ್ತು. ಆದರೆ ಈಗ ಚೀನಾ ಬಗ್ಗೆ ಲಂಕಾ ರಾಜಕೀಯ ತಜ್ಞರೂ ಭಿನ್ನ ನಿಲುವು ತೆಗೆದುಕೊಂಡಿದ್ದಾರೆ. 'ಭಾರತ ಮೊದಲು' ಎಂಬ ನಿಲುವಿಗೆ ಶ್ರೀಲಂಕಾ ಬದ್ಧವಾಗಿರಲಿ ಎಂಬ ಒತ್ತಾಯ ರಾಜಕೀಯ ತಜ್ಞರಿಂದಲೂ ಕೇಳಿಬರುತ್ತಿದೆ. ಇದೀಗ ಅದರ ಮೊದಲ ಭಾಗವಾಗಿ ವಿ.ಆರ್. ಚೌಧರಿ ಅವರು ಶ್ರೀಲಂಕಾಗೆ ಭೇಟಿ ನೀಡಿದಂತೆ ಕಾಣುತ್ತಿದೆ.
ಒಟ್ನಲ್ಲಿ ಏಷ್ಯಾ ದೇಶಗಳ ನಡುವೆ ಬಿಗುವಿನ ವಾತಾವರಣ ಉಂಟಾಗಿ ಚೀನಾ ಜೊತೆ ಒಂದು ಬಣ, ಭಾರತದ ಪರವಾಗಿ ಇನ್ನೊಂದು ಬಣ ರೂಪುಗೊಳ್ಳುವ ಹೊತ್ತಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಭಾರತ ಸುತ್ತಲ ದೇಶಗಳ ಜತೆ ಚೀನಾ ಉತ್ತಮ ಸಂಬಂಧ ಹೊಂದಿದೆ.
ಈ ಮಧ್ಯೆ ಭಾರತ ಕೂಡ ಶ್ರೀಲಂಕಾ ಸೇರಿದಂತೆ ನೆರೆ ರಾಷ್ಟ್ರಗಳ ಜೊತೆಗಿನ ಸಂಬಂಧ ವೃದ್ಧಿಗೆ ಮಹತ್ವ ನೀಡುತ್ತಿದೆ. ಈ ಮೂಲಕ ಚೀನಾ ತಂತ್ರಕ್ಕೆ ಭಾರತ ಕೂಡ ರಣತಂತ್ರ ಹೆಣೆದಂತೆ ಕಾಣುತ್ತಿದೆ. ಇನ್ನು ಭಾರತೀಯ ವಾಯುಪಡೆ ಮುಖ್ಯಸ್ಥರ ಶ್ರೀಲಂಕಾ ಭೇಟಿ ಬಗ್ಗೆ ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications