ಹಾಂಕಾಂಗ್‌ನಲ್ಲಿ ಪ್ರತಿಭಟನೆ: ಮಂಗಳವಾರವೂ ವಿಮಾನ ಹಾರಾಟ ಸ್ಥಗಿತ
ಹಾಂಕಾಂಗ್, ಆಗಸ್ಟ್ 13: ಗಡಿಪಾರು ಮಸೂದೆ ವಿರೋಧಿಸಿ ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಸಾವಿರಾರು ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರಿಂದ ಹಾಂಕಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಚಾರ ಮಾಡುವ ಎಲ್ಲ ವಿಮಾನಗಳನ್ನು ಸೋಮವಾರ ರದ್ದುಗೊಳಿಸಲಾಗಿತ್ತು. ಮಂಗಳವಾರ ವಿಮಾನ ನಿಲ್ದಾಣದ ಹೊರಹೋಗುವ ವಿಭಾಗವನ್ನು ತೆರೆಯಲಾಗಿತ್ತು. ಆದರೆ, ಪ್ರತಿಭಟನಾಕಾರರು ಪುನಃ ಅದನ್ನು ಸ್ಥಗಿತಗೊಳಿಸಿದ್ದಾರೆ.
ಜಗತ್ತಿನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಹಾಂಕಾಂಗ್‌ನಲ್ಲಿ ಪ್ರತಿಭಟನೆಯ ಪರಿಣಾಮವಾಗಿ ವಿಮಾನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಸತತ ಐದನೇ ದಿನ ವಿಮಾನ ನಿಲ್ದಾಣದ ಮುಖ್ಯ ಟರ್ಮಿನಲ್‌ನಲ್ಲಿ ಪ್ರತಿಭಟನಾಕಾರರು ಬೀಡುಬಿಟ್ಟಿದ್ದಾರೆ. ಹೀಗಾಗಿ ಮಂಗಳವಾರವೂ ಸುಮಾರು ನೂರು ವಿಮಾನಗಳ ಹಾರಾಟ ರದ್ದುಗೊಂಡಿದೆ.
ಮಂಗಳವಾರ ವಿಮಾನ ನಿಲ್ದಾಣದ ಒಂದು ಗೇಟನ್ನು ತೆರೆಯಲಾಗಿತ್ತು. ಅದಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ ಬಳಿಕ ಅದನ್ನೂ ಅನಿವಾರ್ಯವಾಗಿ ಮುಚ್ಚಬೇಕಾಯಿತು. ಹೀಗಾಗಿ ಅಲ್ಲಿಂದ ಹೊರಡಲು ಅಣಿಯಾಗಿದ್ದ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಪ್ರತಿಭಟನಾಕಾರರನ್ನು ದಾಟಿ ಯಾವ ಪ್ರಯಾಣಿಕರೂ ಒಳಗೆ ಹೋಗಲು ಅವಕಾಶವಿಲ್ಲದ ಕಾರಣ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಪ್ರತಿಭಟನಾಕಾರರ ನಡೆಯು ಭಯೋತ್ಪಾದನೆಯ ರೀತಿಯಲ್ಲಿ ಸಾಗುತ್ತಿದೆ. ಇದು ಸ್ಥಳೀಯ ನಾಗರಿಕರಿಗೆ ತೀವ್ರ ಬೆದರಿಕೆ ಒಡ್ಡುವಂತಿದೆ ಎಂದು ಬೀಜಿಂಗ್ ಸರ್ಕಾರ ಹೇಳಿದೆ. ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಶೆನ್‌ಝೆನ್ ನಗರದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆಗಾಗಿ ಚೀನಾಕ್ಕೆ ಗಡಿಪಾರು ಮಾಡಲು ಅವಕಾಶ ನೀಡುವ ಮಸೂದೆಯನ್ನು ಅಂಗೀಕಾರ ಮಾಡಿರುವುದರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.












Click it and Unblock the Notifications