ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ ಕೇವಲ ಶೇ. 1.18
ಇಸ್ಲಾಮಾಬಾದ್ ಜೂನ್ 9: ಪಾಕಿಸ್ತಾನದಲ್ಲಿಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಹಿಂದೂಗಳ ಜನಸಂಖ್ಯೆ ಕೇವಲ ಶೇ. 1.18 ಪ್ರತಿಶತ ಇದೆ. ಪಾಕಿಸ್ತಾನದಲ್ಲಿ ಒಟ್ಟು 18,68,90,601 ನಾಗರಿಕರು ಅಧಿಕೃತವಾಗಿ ವಾಸವಿದ್ದಾರೆ. ಈ ಪೈಕಿ ಹಿಂದೂಗಳ ಜನಸಂಖ್ಯೆ ಕೇವಲ 22,10,566. ಇದು ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇ. 1.18 ಪ್ರತಿಶತ ಮಾತ್ರ. ಸೆಂಟರ್ ಫಾರ್ ಪೀಸ್ ಅಂಡ್ ಜಸ್ಟಿಸ್ ಪಾಕಿಸ್ತಾನ ವರದಿಯಿಂದ ಈ ಮಾಹಿತಿ ಬಹಿರಂಗವಾಗಿದೆ.
ರಾಷ್ಟ್ರೀಯ ದತ್ತಾಂಶ ಮತ್ತು ನೋಂದಣಿ ಪ್ರಾಧಿಕಾರದಿಂದ (ಎನ್ ಡಿಆರ್ ಎ) ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಶೇಕಡಾ 5 ಕ್ಕಿಂತ ಕಡಿಮೆ. ಮಾರ್ಚ್‌ವರೆಗಿನ ಅಂಕಿ ಅಂಶಗಳ ಪ್ರಕಾರ ಪಾಕಿಸ್ತಾನದ ಒಟ್ಟು ಜನಸಂಖ್ಯೆ 18,68,90,601 ಇದ್ದು, ಈ ಪೈಕಿ 18,25,92,000 ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಪಾಕಿಸ್ತಾನದಲ್ಲಿ ಒಟ್ಟು 22,10,566 ಹಿಂದೂಗಳು, 18,73,348 ಕ್ರಿಶ್ಚಿಯನ್ನರು, 1,88,340 ಅಹ್ಮದಿಗಳು, , 74,130 ಸಿಖ್ಖರು, 14,537 ಭಾಯಿಸ್ಗಳು ಮತ್ತು 3,917 ಪಾರ್ಸಿಗಳು ಇದ್ದಾರೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನದಲ್ಲಿ 2,000 ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಇತರ 11 ಅಲ್ಪಸಂಖ್ಯಾತ ಸಮುದಾಯವಿದೆ. 1,787 ಬೌದ್ಧರು, 1,151 ಚೀನಿಗಳು, 628 ಶಿಂಟೋಯಿಸಂ ಅನುಯಾಯಿಗಳು, 628 ಯಹೂದಿಗಳು, 1,418 ಆಫ್ರಿಕನ್ ಧರ್ಮಗಳ ಅನುಯಾಯಿಗಳು, 1,522 ಕೆಲಾಶಾ ಧರ್ಮದ ಅನುಯಾಯಿಗಳು ಮತ್ತು ಆರು ಮಂದಿ ಜೈನ ಧರ್ಮದ ಅನುಯಾಯಿಗಳು ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ.
ಒಂದು ಮಾಹಿತಿಯ ಪ್ರಕಾರ ಪಾಕಿಸ್ತಾನದಲ್ಲಿರುವ 365 ಹಿಂದೂ ದೇವಾಲಯಗಳಲ್ಲಿ 287 ದೇಗುಲಗಳ ಜಾಗವನ್ನು ಅತಿಕ್ರಮಣ ಮಾಡಲಾಗಿದೆ. 13 ದೇವಾಲಯಗಳನ್ನು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ನಿರ್ವಹಿಸುತ್ತಿದೆ. ಇನ್ನುಳಿದ 65 ರ ಜವಾಬ್ದಾರಿಯನ್ನು ಹಿಂದೂ ಸಮುದಾಯಗಳು ನೋಡಿಕೊಳ್ಳುತ್ತಿವೆ. ಕರಾಚಿಯಲ್ಲಿರುವ ಶ್ರೀ ಸ್ವಾಮಿ ನಾರಾಯಣ ಮಂದಿರ ಪಾಕಿಸ್ತಾನದಲ್ಲಿರುವ ಏಕೈಕ ಸ್ವಾಮಿ ನಾರಾಯಣ ದೇವಾಲಯವಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ಕೊಟ್ರಿಯ ಸಿಂಧೂ ನದಿಯ ದಡದಲ್ಲಿರುವ ಐತಿಹಾಸಿಕ ಹಿಂದೂ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.

ಅಲ್ಲದೇ ಬುಧವಾರವಷ್ಟೇ ಕರಾಚಿಯ ಕೋರಂಗಿ ಪ್ರದೇಶದಲ್ಲಿರುವ ಶ್ರೀ ಮಾರಿ ಮಾತಾ ಮಂದಿರದ ದೇವರ ವಿಗ್ರಹಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಆರರಿಂದ ಎಂಟು ಮಂದಿ ದುಷ್ಕರ್ಮಿಗಳು ಬೈಕ್ಗಳಲ್ಲಿ ಬಂದು ದೇವಸ್ಥಾನದ ಮೇಲೆ ದಾಳಿ ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ದೇವಾಲಯ ಇರುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ದೇವಾಲಯ ಸುತ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

"ಆರರಿಂದ ಎಂಟು ಮಂದಿ ಅಪರಿಚಿತರು ದೇವಾಲಯಕ್ಕೆ ನುಗ್ಗಿ ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ಅಪರಿಚಿತ ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ," ಎಂದು ಕೊರಂಗಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಫಾರೂಕ್ ಸಂಜರಾಣಿ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications