ಸುಡಾನ್ ನೆಲದಲ್ಲಿ ತುತ್ತು ಅನ್ನಕ್ಕೆ ಊರು ಬಿಟ್ಟವರ ನರಳಾಟ
ಖರ್ಟೋಮ್, ಸುಡಾನ್: ಅವರದ್ದು ಊರು ಊರು ಅಲೆಯುವ ಕಾಯಕ. ತುತ್ತು ಅನ್ನಕ್ಕೆ ನರಳಾಡುವ ಸ್ಥಿತಿ. ತಮ್ಮ ಕಷ್ಟ ಬಗೆಹರಿಸಿಕೊಳ್ಳಬೇಕು ಎಂಬ ಕಾರಣಕ್ಕೇ ದೇಶ ಬಿಟ್ಟು ಮತ್ತೊಂದು ದೇಶಕ್ಕೆ ಹಾರಿದ್ದರು. ಆದರೆ ತುತ್ತು ಅನ್ನಕ್ಕಾಗಿ ಪರದೇಶಕ್ಕೆ ಹಾರಿದ್ದ ಕನ್ನಡಿಗರು ಈಗ ಸಂಕಷ್ಟದ ಬಲೆಯಲ್ಲಿ ಸಿಲುಕಿದ್ದಾರೆ. ಅಂದಹಾಗೆ ಇದು ಹಕ್ಕಿಪಿಕ್ಕಿ ಜನಾಂಗದ ನೋವಿನ ಕಥೆ, ಸುಡಾನ್ ನರಳಾಟದ ವ್ಯಥೆ.
ಹೌದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಹರಡಿಕೊಂಡಿರುವ ಹಕ್ಕಿಪಿಕ್ಕಿ ಜನಾಂಗ ಕರ್ನಾಟಕದಲ್ಲಿ ಬಹುಭಾಗ ನೆಲೆಯೂರಿದೆ. ಅದ್ರಲ್ಲೂ ಮಧ್ಯ ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಕೋಲಾರದ ಸುತ್ತಮುತ್ತ ಸೇರಿದಂತೆ ಮೈಸೂರಿನಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಹೆಚ್ಚಾಗಿ ನೆಲೆಸಿದ್ದಾರೆ. ಕರ್ನಾಟಕದಲ್ಲೇ ಹಕ್ಕಿಪಿಕ್ಕಿ ಜನಾಂಗದ ಸುಮಾರು 12 ಸಾವಿರ ಜನರು ವಾಸವಿದ್ದಾರೆ. ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಯಾದ ನಂತರ ಇವರ ಕುಲಕಸುಬು ಬೇಟೆ ನಿಂತುಹೋಗಿ, ಹೊಟ್ಟೆಪಾಡಿಗೆ ಬೇರೆ ದಾರಿ ಹುಡಕಬೇಕಾಯ್ತು. ಅದೇ ದಾರಿ ಈಗ ಹಕ್ಕಿಪಿಕ್ಕಿ ಜನಾಂಗ ಮುಳುವಾಗಿದೆ.

ಹೊಟ್ಟೆಪಾಡಿಗೆ ಹೋದವರು ಸಂಕಷ್ಟದಲ್ಲಿ
ಹೌದು, ಬೇಟೆ ನಿಲ್ಲಿಸಿದ ಬಳಿಕ ಕಳೆದ ಹತ್ತಾರು ವರ್ಷಗಳಿಂದ ಈ ಜನಾಂಗ ಬೇರೆ ಬೇರೆ ಕೆಲಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಅದರಲ್ಲೂ ಆಯುರ್ವೇದಿಕ್ ಔಷಧಗಳ ಮಾರಾಟದಿಂದ ಇವರ ಜೀವನ ಸುಖಮಯವಾಗಿ ನಡೆಯುತ್ತಿತ್ತು. ಆದರೆ ಆಯುರ್ವೇದ ಔಷಧಗಳಿಗೆ ಭಾರತದಲ್ಲಿ ಅಷ್ಟಾಗಿ ಬೇಡಿಕೆ ಇಲ್ಲ. ಅದೇ ಆಫ್ರಿಕಾ ಸೇರಿದಂತೆ ಹೊರ ದೇಶಗಳಲ್ಲಿ ನಮ್ಮ ನೆಲದ ಆಯುರ್ವೇದ ಔಷಧಕ್ಕೆ ಭಾರಿ ಬೇಡಿಕೆ ಇದೆ. ಹೀಗಾಗಿ ಹಕ್ಕಿಪಿಕ್ಕಿ ಜನಾಂಗದ ಸಾಕಷ್ಟು ಜನರು ಆಯುರ್ವೇದ ಔಷಧ ಮಾರಾಟವನ್ನೇ ತಮ್ಮ ಉದ್ಯೋಗ ಮಾಡಿಕೊಂಡಿದ್ದರು. ಹೀಗೆ ಔಷಧ ಮಾರಲು ಸುಡಾನ್‌ಗೆ ಹೋದವರು ನರಳುತ್ತಿದ್ದಾರೆ.
300ಕ್ಕೂ ಹೆಚ್ಚು ಜನರಿಗೆ ಜೀವಭಯ
ಸುಡಾನ್ ದೇಶದಲ್ಲಿ ಭಾರತ ಮೂಲದ ಸಾವಿರಾರು ಜನ ಸಿಲುಕಿದ್ದಾರೆ. ಈ ಪೈಕಿ ಹಕ್ಕಿಪಿಕ್ಕಿ ಜನಾಂಗದವೇ ಸುಮಾರು 300 ಜನರಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಭಾರತ ಸರ್ಕಾರದಿಂದ ತಮಗೆ ಸಹಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ ಸುಡಾನ್ ದೇಶಕ್ಕೆ ತೆರಳಿದ್ದ ಹಕ್ಕಿಪಿಕ್ಕಿ ಸಮುದಾಯದ ಜನ ಜೀವಭಯದಲ್ಲಿದ್ದಾರೆ. ಸುಡಾನ್ ಸೇನಾ ಘರ್ಷಣೆಯಲ್ಲಿ ಸಿಲುಕಿ ಅನ್ನ-ನೀರು ಸಿಗದೆ ಅಲ್ಲೂ ಪರದಾಡುತ್ತಿದ್ದಾರೆ. ಸುಡಾನ್ ರಾಜಧಾನಿ ಖರ್ಟೋಮ್ ಭಾಗದಲ್ಲೇ ಸಾಕಷ್ಟು ಹಕ್ಕಿಪಿಕ್ಕಿ ಜನಾಂಗದ ಜನ ಸಿಲುಕಿದ್ದಾರೆ.

ಸುಡಾನ್ ನೆಲದಲ್ಲಿ ಮಾತೆತ್ತಿದರೆ ಹಿಂಸೆ!
ಈಗ ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸೆ ಮೊದಲೇನಲ್ಲ. ಇಲ್ಲಿ ಪದೇಪದೆ ಹಿಂಸೆ ನಡೆಯುತ್ತಿದೆ. ಇದಕ್ಕೆ ಕಾರಣ ಹಲವು. ಆದರೆ 1956ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲವನ್ನು ಆಳಿದ್ದ.
ಹೀಗೆ ಒಮರ್ ಅಲ್-ಬಶೀರ್ ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯಲು 2019ರಲ್ಲಿ ಹಿಂಸೆ ಭುಗಿಲೆದ್ದಿತ್ತು. ಈ ದಂಗೆಯಲ್ಲಿ ಒಮರ್ ಅಲ್-ಬಶೀರ್ ಅಧಿಕಾರ ಬಿಟ್ಟುಕೊಟ್ಟಿದ್ದ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಸುಡಾನ್ ಮತ್ತೆ ಶಾಂತಿಯ ಜೀವನ ನಡೆಸಲಿದೆ ಎಂದೇ ಜಗತ್ತು ಭಾವಿಸಿತ್ತು. ಆದರೆ ಈಗ ಸೇನಾ ಸಂಘರ್ಷ ಶುರುವಾಗಿ, ಮಿಲಿಟರಿ, ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ಸೈನಿಕರು ಬಡಿದಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನರು ಕೂಡ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.
ಒಟ್ಟಾರೆ ಯಾರದ್ದೋ ತಪ್ಪಿಗೆ ಅಮಾಯಕರು ಹಿಂಸೆಯ ಕುಲುಮೆಯಲ್ಲಿ ನರಳುವಂತಾಗಿದೆ. ಸರ್ಕಾರ ಕೂಡ ಭಾರತೀಯರ ರಕ್ಷಣೆಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಇಷ್ಟೆಲ್ಲದರ ಮಧ್ಯೆ ಮತ್ತೊಮ್ಮೆ ಸುಡಾನ್ ವಿನಾಶದ ಅಂಚಿಗೆ ತಲುಪುತ್ತಿರುವ ಭಯ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಲೆನೋವು ತರಿಸುತ್ತಿದೆ. ಇಡೀ ಆಫ್ರಿಕಾದಲ್ಲೇ ಸುಡಾನ್ ಕಂಡಷ್ಟು ದಂಗೆಯನ್ನ ಬೇರೆ ಯಾವುದೇ ಆಫ್ರಿಕಾ ದೇಶ ಕಂಡಿಲ್ಲ ಎಂಬುದು ಗಮನಾರ್ಹ.












Click it and Unblock the Notifications