AIಗೆ ಒಂದು ಜಗತ್ತು ಕೊಟ್ಟರೆ ಏನಾಗುತ್ತೆ? GPT-6 Astra ಮಾಡಿದ ಕೆಲಸ ನೋಡಿ ಬೆಚ್ಚಿಬಿದ್ದ ಟೆಕ್ ಜಗತ್ತು
ಎಐ ಇಂದು ಏನೂ ಮಾಡಬಲ್ಲುದು ಎಂಬುದಕ್ಕೆ ಇನ್ನೊಂದು ರುಜುವಾತು ಸಿಕ್ಕಿದೆ. ನಿನ್ನದೇ ಆದ ಒಂದು ಜಗತ್ತು ಸೃಷ್ಟಿಸು, ಅಲ್ಲಿ ನೂರಾರು ಪಾತ್ರಗಳನ್ನು ಸೃಷ್ಟಿಸು, ಪರಸ್ಪರ ಸಹಕಾರದಿಂದ ಅವು ಬದುಕುಳಿಯುವಂತೆ ಮಾಡು ಎಂದು ಹೇಳಿದರೆ, ಎಐ ಮಾಡಬಲ್ಲುದೇ? ಮಾಡಬಲ್ಲುದು ಎಂದು GPT-6 Astra ತೋರಿಸಿದೆ.
ಇತ್ತೀಚೆಗೆ GPT-6 Astra ಕುರಿತಂತೆ ಹರಿದಾಡುತ್ತಿರುವ ಒಂದು ಪ್ರಯೋಗ ಇದನ್ನು ಕುತೂಹಲಕಾರಿ ಹಂತಕ್ಕೆ ಕೊಂಡೊಯ್ದಿದೆ. ಒಬ್ಬ ಡೆವಲಪರ್ Unreal Engineನಲ್ಲಿ ಒಂದು ಸಂಪೂರ್ಣ ವರ್ಚುವಲ್ ಜಗತ್ತನ್ನು ನಿರ್ಮಿಸುವಂತೆ Astraಗೆ ಸೂಚಿಸಿದ್ದಾನೆ. ಆ ಜಗತ್ತಿನಲ್ಲಿರುವ ಪ್ರತಿಯೊಂದು ಪಾತ್ರವೂ ಪ್ರತ್ಯೇಕ AI ಏಜೆಂಟ್ ಆಗಿರಬೇಕು ಮತ್ತು ಅವು ಪರಸ್ಪರ ಮಾತನಾಡಿಕೊಂಡು ಬದುಕುಳಿಯುವ ಮಾರ್ಗ ಕಂಡುಕೊಳ್ಳಬೇಕು ಎಂಬುದು ಸೂಚನೆ.

ಮರುದಿನ ದಿನ ಆತ ತನ್ನ ಮನೆಯ ಬೆಡ್ರೂಮ್ನಲ್ಲಿದ್ದಾಗ ಲಿವಿಂಗ್ ರೂಮ್ನಿಂದ ಧ್ವನಿಗಳು ಕೇಳಿಬಂದವು. ವರ್ಚುವಲ್ ಜಗತ್ತಿನಲ್ಲಿದ್ದ AI ಪಾತ್ರಗಳು ಪರಸ್ಪರ ಮಾತನಾಡುತ್ತಿದ್ದವು. ಆ ಸಂಭಾಷಣೆಯನ್ನು ಯಾರೂ ಮೊದಲೇ ಬರೆದು ಇಟ್ಟಿರಲಿಲ್ಲ. ಪಾತ್ರಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಮ್ಮೊಳಗೆ ಚರ್ಚಿಸುತ್ತಿದ್ದವು ಎಂಬುದು ಈ ಪ್ರಯೋಗದ ವಿಶೇಷತೆ.
ಇದೇ ಕಾರಣಕ್ಕೆ Astra ಕುರಿತ ಚರ್ಚೆ ಮತ್ತಷು ಗರಿಗೆದರಿದೆ. ಇದೀಗ ಕೇವಲ ಮತ್ತೊಂದು AI ಮಾದರಿಯ ಬಗ್ಗೆ ನಡೆಯುತ್ತಿರುವ ಚರ್ಚೆಯಾಗಿ ಉಳಿದಿಲ್ಲ. ಇಲ್ಲಿಯವರೆಗೆ AIಗೆ "ಒಂದು ಗೇಮ್ ಮಾಡು" ಅಥವಾ "ಒಂದು ಮನೆ ವಿನ್ಯಾಸ ಮಾಡು" ಎಂದು ಕೇಳಿದರೆ, ಅದು ಸಾಮಾನ್ಯವಾಗಿ ಬೇಕಾದ ಹಂತಗಳನ್ನು ವಿವರಿಸುತ್ತಿತ್ತು. ಕೋಡ್ ಬರೆದುಕೊಡುತ್ತಿತ್ತು. ಆದರೆ ನಂತರ ನಿಜವಾದ ಕೆಲಸವನ್ನು ಮನುಷ್ಯನೇ ಮಾಡಬೇಕಾಗಿತ್ತು. ಸಾಫ್ಟ್ವೇರ್ ತೆರೆಯಬೇಕು, ಆಯ್ಕೆಗಳನ್ನು ಮಾಡಬೇಕು, ಫೈಲ್ಗಳನ್ನು ಸಿದ್ಧಪಡಿಸಬೇಕು, ತಪ್ಪುಗಳನ್ನು ಸರಿಪಡಿಸಬೇಕು.
Astraಯಲ್ಲಿ ಗಮನ ಸೆಳೆಯುತ್ತಿರುವ ಬದಲಾವಣೆ ಎಂದರೆ ಅದು ತಾನೇ ಕಂಪ್ಯೂಟರ್ನಲ್ಲಿ ಕೆಲಸ ಮಾಡುವ ಸಾಮರ್ಥ್ಯ. ಅದು ಅಗತ್ಯವಿದ್ದರೆ ಅಪ್ಲಿಕೇಶನ್ ತೆರೆಯಬಹುದು, ಮೌಸ್ ಬಳಸಿ ಆಯ್ಕೆ ಮಾಡಬಹುದು, ಮೆನುಗಳಲ್ಲಿ ಸಂಚರಿಸಬಹುದು ಮತ್ತು ನಿರ್ಮಿಸಬೇಕಾದ ವಸ್ತುವನ್ನು ಹಂತ ಹಂತವಾಗಿ ಸಿದ್ಧಪಡಿಸಬಹುದು.
ಅಂದರೆ AI ಈಗ ನಿಮ್ಮ ಪ್ರಶ್ನೆಗೆ ಉತ್ತರಿಸುವ ಸಹಾಯಕ ಮಾತ್ರ ಅಲ್ಲ. ಅದು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಸಹಾಯಕನಾಗಿಯೂ ಆಗಿದೆ.
ಛಾಯಾಚಿತ್ರ ಕೊಟ್ಟರೆ 3D ಜಗತ್ತು
ಈ ಸಾಮರ್ಥ್ಯವನ್ನು ಪರೀಕ್ಷಿಸಲು ಹಲವು ರೀತಿಯ ಪ್ರಯೋಗಗಳನ್ನು ಮಾಡಲಾಗಿದೆ. ಒಂದು ಪ್ರಯೋಗದಲ್ಲಿ Manhattan ನಗರವನ್ನು Unreal Engineನಲ್ಲಿ ಮರುಸೃಷ್ಟಿಸುವ ಕೆಲಸವನ್ನು Astraಗೆ ನೀಡಲಾಗಿದೆ. ಒಂದೊಂದೇ ಬೀದಿಯನ್ನು ಮೊದಲು ಮಾಡಿ, ಸುಮಾರು ಒಂದು ವಾರದ ಅವಧಿಯಲ್ಲಿ ನಗರದ ಮಾದರಿಯನ್ನು ನಿರ್ಮಿಸುವ ಪ್ರಯತ್ನ ನಡೆದಿದೆ.
ಇನ್ನೊಂದು ಪ್ರಯೋಗದಲ್ಲಿ ಕೇವಲ ಛಾಯಾಚಿತ್ರಗಳನ್ನು ಆಧಾರವಾಗಿ ನೀಡಿ Apple Park ಮತ್ತು San Franciscoದಲ್ಲಿರುವ Palace of Fine Artsನಂತಹ ಕಟ್ಟಡಗಳನ್ನು Blenderನಲ್ಲಿ 3D ರೂಪದಲ್ಲಿ ಮರುಸೃಷ್ಟಿಸಲಾಗಿದೆ. ಅಂದರೆ ಚಿತ್ರವನ್ನು ನೋಡಿ, ಅದರ ಆಧಾರದ ಮೇಲೆ 3D ವಸ್ತುಗಳನ್ನು ನಿರ್ಮಿಸುವ ಮತ್ತು ವಿನ್ಯಾಸ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುವ AI ಇದು.
ಭಯಾನಕ Backrooms ಕೂಡ ನಿರ್ಮಿಸಿತು
ಇಂಟರ್ನೆಟ್ನಲ್ಲಿ ಜನಪ್ರಿಯವಾಗಿರುವ Backrooms ಎಂಬ ಕಲ್ಪಿತ ಭಯಾನಕ ಜಗತ್ತನ್ನು ಕೂಡ Astra ಮೂಲಕ Blenderನಲ್ಲಿ ನಿರ್ಮಿಸಲಾಗಿದೆ. ಅಂತ್ಯವಿಲ್ಲದಂತೆ ಕಾಣುವ ಖಾಲಿ ಕಾರಿಡಾರ್ಗಳು, ಹಳೆಯ VHS ವಿಡಿಯೋ ರೀತಿಯ ದೃಶ್ಯ ಪರಿಣಾಮಗಳು ಮತ್ತು ಹಿನ್ನೆಲೆ ಧ್ವನಿಗಳೊಂದಿಗೆ ಆ ವಾತಾವರಣವನ್ನು ಸೃಷ್ಟಿಸಲಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ, ಈ ರೀತಿಯ ಸಂಪೂರ್ಣ ದೃಶ್ಯವನ್ನು ನಿರ್ಮಿಸಲು ಹೆಚ್ಚಿನ ಪ್ರಮಾಣದ ಸೂಚನೆಗಳ ಅಗತ್ಯವಿರಲಿಲ್ಲ. ಕೆಲವು ಪ್ರಮುಖ ಪ್ರಾಂಪ್ಟ್ಗಳ ಮೂಲಕವೇ ಕೆಲಸ ಮುಂದುವರಿದಿದೆ ಎಂದು ಪ್ರಯೋಗದ ವಿವರಗಳು ಹೇಳುತ್ತವೆ.
ಒಂದು ಗಂಟೆಯೊಳಗೆ ಆಡಬಹುದಾದ ಗೇಮ್
Astraಯ ಸಾಮರ್ಥ್ಯವನ್ನು ಹೆಚ್ಚು ಸ್ಪಷ್ಟವಾಗಿ ತೋರಿಸುವ ಮತ್ತೊಂದು ಕ್ಷೇತ್ರ ಗೇಮ್ ಡೆವಲಪಿಗ್. ಕೆಲವರು ಗೇಮ್ನ ಕಲ್ಪನೆಯನ್ನು ನೀಡಿದರೆ, ಒಂದು ಗಂಟೆಯೊಳಗೆ ಆಡಬಹುದಾದ ಮಾದರಿ ಸಿದ್ಧವಾಗಿದೆ. Sonic ಮಾದರಿಯ ವೇದಿಕೆ ಆಧಾರಿತ ಗೇಮ್, ಅಡೆತಡೆಗಳನ್ನು ದಾಟುವ Fall Guys ಮಾದರಿಯ ಗೇಮ್ ಸೇರಿದಂತೆ ವಿವಿಧ ಮಾದರಿಗಳನ್ನು ನಿರ್ಮಿಸಲಾಗಿದೆ.
ಅಡೆತಡೆಗಳಾಗಿ ತಿರುಗುವ ಕಂಬಗಳು, ತೂಗಾಡುವ ಸುತ್ತಿಗೆಗಳು, ಅಂತಿಮ ಹಂತದಲ್ಲಿ ಆಟಗಾರರನ್ನು ಹೊರಹಾಕುವ ವ್ಯವಸ್ಥೆಯಂತಹ ಅಂಶಗಳನ್ನೂ ಸೇರಿಸಲಾಗಿದೆ. Playco ಎಂಬ ಗೇಮ್ ಸ್ಟುಡಿಯೊದ ಪ್ರಕಾರ, ಈ ರೀತಿಯಲ್ಲಿ ಸಿದ್ಧಪಡಿಸಿದ ಕೆಲವು ಪ್ರೋಟೋಟೈಪ್ಗಳಿಗೆ ಹಿಂದಿನ ಮಾದರಿಗಳಿಗಿಂತ ಸುಮಾರು ಅರ್ಧದಷ್ಟು ಮಾತ್ರ ಮನುಷ್ಯನದ ಕೈಯಿಂದ ತಿದ್ದುಪಡಿ ಮಾಡುವ ಅಗತ್ಯ ಬಿತ್ತು.
ಗೇಮ್ ಮಾತ್ರವಲ್ಲ, ಶಿಕ್ಷಣಕ್ಕೂ ಬಳಕೆ
ಗೇಮ್ ಅಭಿವೃದ್ಧಿ ಅಥವಾ 3D ವಿನ್ಯಾಸ ಎಲ್ಲರಿಗೂ ಸಂಬಂಧಿಸಿದ ವಿಷಯವಲ್ಲ. ಆದರೆ Astraಯ ಇನ್ನೊಂದು ಪ್ರಯೋಗ ಸಾಮಾನ್ಯ ಬಳಕೆದಾರರಿಗೂ ಇದರ ಸಾಧ್ಯತೆಯನ್ನು ತೋರಿಸುತ್ತದೆ.
T-ಕೋಶಗಳ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆ ನಡೆಸಿರುವ ಒಬ್ಬ ವಿಜ್ಞಾನಿ, T-cells ಎಂದರೇನು ಎಂಬುದನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಐದು ನಿಮಿಷಗಳ ಶೈಕ್ಷಣಿಕ ವಿಡಿಯೋ ಸಿದ್ಧಪಡಿಸುವಂತೆ Astraಗೆ ಕೇಳಿದ್ದಾರೆ. ಫಲಿತಾಂಶವಾಗಿ ಅನಿಮೇಷನ್ ಸೇರಿದಂತೆ ವೀಕ್ಷಿಸಲು ಸಿದ್ಧವಾಗಿರುವ ವಿಡಿಯೋ ದೊರೆತಿದೆ. ಅಂದರೆ ಒಂದು ಕಲ್ಪನೆ ನೀಡಿ ವಿಡಿಯೋ ಸಿದ್ಧಪಡಿಸುವವರೆಗಿನ ಮಧ್ಯಂತರವೂ ಕಡಿಮೆಯಾಗುತ್ತಿದೆ.
ಇನ್ನೊಂದು ಪ್ರಯೋಗದಲ್ಲಿ Tesla Model X ಕಾರನ್ನು 334 ಪ್ರತ್ಯೇಕ 3D ಭಾಗಗಳಾಗಿ ವಿಭಜಿಸಿ, ಪ್ರತಿಯೊಂದು ಭಾಗವನ್ನೂ ತಿರುಗಿಸಿ ನೋಡಬಹುದಾದ ವೆಬ್ಸೈಟ್ ನಿರ್ಮಿಸಲಾಗಿದೆ. ಮತ್ತೊಬ್ಬರು ತಮ್ಮ ವೈಯಕ್ತಿಕ ಪೋರ್ಟ್ಫೋಲಿಯೊ ವೆಬ್ಸೈಟ್ನ್ನು ಹಳೆಯ Game Boyನ ವಿನ್ಯಾಸ ಮತ್ತು ಅನುಭವವನ್ನು ನೆನಪಿಸುವ ರೀತಿಯಲ್ಲಿ ನಿರ್ಮಿಸಿದ್ದಾರೆ.
ಇಂತಹ ಪ್ರಯೋಗಗಳಿಂದ ಗೊತ್ತಾಗಿರುವುದೇನೆಂದರೆ, ಎಐ ಇನ್ನಷ್ಟು ಮತ್ತಷ್ಟು ಬೆಳೆದು ಮಾನವನನ್ನು ರಿಪ್ಲೇಸ್ ಮಾಡಬಹುದು ಎನ್ನುವಲ್ಲಿಯವರೆಗೆ ಬೆಳೆದಿದೆ. ಆದರೆ AI ಇನ್ನೂ ಮನುಷ್ಯನನ್ನು ಸಂಪೂರ್ಣವಾಗಿ ಬದಲಿಸಿಲ್ಲ
Astra ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಬಹುತೇಕ ಉದಾಹರಣೆಗಳು ಯಶಸ್ವಿಯಾದ ಪ್ರಯೋಗಗಳಾಗಿವೆ. ತಮ್ಮ ಕೆಲಸ ಚೆನ್ನಾಗಿ ಬಂದಾಗ ನಿರ್ಮಾತೃಗಳು ಅದನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳುತ್ತಾರೆ. ವಿಫಲ ಪ್ರಯತ್ನಗಳು ಇರುತ್ತವೆ, ನಮಗೆ ಕಾಣಿಸುವುದಿಲ್ಲ. ಅಷ್ಟೇ ಅಲ್ಲ, AIಗೆ ನೀಡುವ ಸೂಚನೆಯ ಗುಣಮಟ್ಟವೂ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಅನೇಕ ಪ್ರಯೋಗಗಳಲ್ಲಿ ಮನುಷ್ಯರು ಮಧ್ಯೆ ಮಧ್ಯೆ ದಿಕ್ಕು ತೋರಿಸಿದ್ದಾರೆ, ತಪ್ಪುಗಳನ್ನು ಸರಿಪಡಿಸಿದ್ದಾರೆ ಮತ್ತು ಅಂತಿಮ ಕೆಲಸವನ್ನು ಅಚ್ಚುಕಟ್ಟುಗೊಳಿಸಿದ್ದಾರೆ. ಕೆಲವು ಪ್ರಯೋಗಗಳಲ್ಲಿ Astra ಜೊತೆಗೆ Codex ಅಥವಾ ಇತರ ಪ್ಲಗಿನ್ಗಳು ಮತ್ತು ಹೆಚ್ಚುವರಿ ಸಾಧನಗಳನ್ನೂ ಬಳಸಲಾಗಿದೆ. ಹಾಗಾಗಿ ಒಂದೇ ಒಂದು ಮಾಯಾ ಪ್ರಾಂಪ್ಟ್ ಕೊಟ್ಟರೆ ಸಂಪೂರ್ಣ ಉತ್ಪನ್ನ ಸಿದ್ಧವಾಗುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಸರಿಯಲ್ಲ.
OSWorld ಪರೀಕ್ಷೆಯಲ್ಲಿ 72.6 ಶೇಕಡಾ
Astraಯ ಕಂಪ್ಯೂಟರ್ (computer) ಬಳಸುವ ಸಾಮರ್ಥ್ಯವನ್ನು ಅಳೆಯಲು ಉಲ್ಲೇಖಿಸಲಾಗುತ್ತಿರುವ ಪ್ರಮುಖ ಮಾನದಂಡಗಳಲ್ಲಿ OSWorld 2.0 ಕೂಡ ಒಂದು. ಇದು AI ಮಾದರಿ ನಿಜವಾದ ಡೆಸ್ಕ್ಟಾಪ್ ಸಾಫ್ಟ್ವೇರ್ಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂಬುದನ್ನು ಪರೀಕ್ಷಿಸುವ ವ್ಯವಸ್ಥೆ. OpenAI ನೀಡಿರುವ ಅಂಕಿಅಂಶದ ಪ್ರಕಾರ Astra ಈ ಪರೀಕ್ಷೆಯಲ್ಲಿ 72.6 ಶೇಕಡಾ ಅಂಕ ಗಳಿಸಿದೆ. ಹಿಂದಿನ ಮಾದರಿಯ ಅಂಕ 65.7 ಶೇಕಡಾ ಎಂದು ಕಂಪನಿ ಹೇಳಿದೆ.
ಈ ಎಲ್ಲ ಡೆಮೊಗಳನ್ನು ಬದಿಗಿಟ್ಟರೂ Astra ರೀತಿಯ AIಗಳು ತರುತ್ತಿರುವ ಬದಲಾವಣೆ ಗಮನಾರ್ಹ. ಇದುವರೆಗೆ ಒಂದು ವ್ಯಕ್ತಿಗೆ ಒಂದು ಆಲೋಚನೆ ಇದ್ದರೂ ಅದನ್ನು ರೂಪಿಸಲು ಹಲವು ಕೌಶಲ್ಯಗಳು ಬೇಕಾಗುತ್ತಿದ್ದವು. ಗೇಮ್ ಮಾಡಬೇಕಾದರೆ ಪ್ರೋಗ್ರಾಮಿಂಗ್ ಗೊತ್ತಿರಬೇಕು. 3D ಮಾದರಿ ಮಾಡಲು ಪ್ರತ್ಯೇಕ ಕೌಶಲ್ಯ ಬೇಕು. ವಿಡಿಯೋ ಮಾಡಲು ಎಡಿಟಿಂಗ್ ಗೊತ್ತಿರಬೇಕು. ವೆಬ್ಸೈಟ್ ನಿರ್ಮಿಸಲು ಕೋಡಿಂಗ್ ಅಥವಾ ವೆಬ್ ಡಿಸೈನ್ ತಿಳಿದಿರಬೇಕು.
ಮೊದಲ ಹಂತದ ಕೆಲಸ ಪೂರ್ತಿ AI ಹೊಣೆ
ಮುಂದಿನ ದಿನಗಳಲ್ಲಿ AI ಈ ಕೆಲಸಗಳ ಮೊದಲ ಹಂತದ ಬಹುಪಾಲನ್ನು ಮಾಡಿಕೊಡಬಲ್ಲುದು. ಆಗ ವ್ಯಕ್ತಿ ಮಾಡಬಹುದಾದ ಕೆಲಸದ ಪ್ರಮಾಣವೇ ಬದಲಾಗಬಹುದು. ಭಾರತದಂತಹ ದೇಶದಲ್ಲಿ ಒಬ್ಬ ಸ್ವತಂತ್ರ ಸೃಷ್ಟಿಕರ್ತ, ಸಣ್ಣ ಯೂಟ್ಯೂಬ್ ತಂಡ ಅಥವಾ ಇಬ್ಬರು-ಮೂರು ಜನರ ಗೇಮ್ ಸ್ಟುಡಿಯೊಗೆ ದುಬಾರಿ 3D ಕಲಾವಿದ, ವಿಡಿಯೋ ಎಡಿಟರ್ ಅಥವಾ ಪ್ರೋಗ್ರಾಮರ್ಗಳನ್ನು ನೇಮಿಸಿಕೊಳ್ಳುವ ಅಗತ್ಯ ಕೆಲವು ಹಂತಗಳಲ್ಲಿ ಕಡಿಮೆಯಾಗಬಹುದು.


Click it and Unblock the Notifications
