ಈಕ್ವೆಡಾರ್‌ನ ಜೈಲಿನಲ್ಲಿ ಗ್ಯಾಂಗ್ ವಾರ್ - 52 ಸಾವು
ಈಕ್ವೆಡಾರ್ ನವೆಂಬರ್ 14: ದಕ್ಷಿಣ ಅಮೆರಿಕದ ಈಕ್ವೆಡಾರ್‌ನ ಗುವಾಕ್ವಿಲ್‍ನಲ್ಲಿರುವ ಅತಿದೊಡ್ಡ ಜೈಲು ಲಿಟೋರಲ್ ಪೆನಿಟೆನ್‌ಟಿರಿಯಲ್ಲಿ ಎರಡು ಗ್ಯಾಂಗ್‍ಗಳ ನಡುವೆ ಶನಿವಾರದಂದು ಘರ್ಷಣೆಯಲ್ಲಿ 52 ಕೈದಿಗಳು ಸಾವನ್ನಪ್ಪಿದ್ದಾರೆ. ಇದು ಇತ್ತೀಚೆಗೆ ದೇಶದಲ್ಲಿ ನಡೆದ ಅತ್ಯಂತ ಕೆಟ್ಟ ಜೈಲು ರಕ್ತಪಾತ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಪೊಲೀಸ್ ವರದಿಯ ಪ್ರಕಾರ ಘಟನೆಯಲ್ಲಿ 10 ಕೈದಿಗಳು ಗಾಯಗೊಂಡಿದ್ದಾರೆ. ಜೊತೆಗೆ ಘಟನೆಯಲ್ಲಿ ಬಳಸಿದ ಸ್ಫೋಟಕಗಳು ಮತ್ತು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ ನಗರವಾದ ಗುವಾಕ್ವಿಲ್‌ನಲ್ಲಿರುವ ಜೈಲಿನ ಬಳಿ ವಾಸಿಸುವ ನಿವಾಸಿಗಳು ಲಾಕಪ್‌ನ ಒಳಗಿನಿಂದ ನಿರಂತರ ಗುಂಡಿನ ಸದ್ದು ಮತ್ತು ಸ್ಫೋಟಗಳನ್ನು ಕೇಳಿ ಬಂದಿದೆ ಎಂದು ಸುತ್ತಲು ಪ್ರದೇಶದ ನಿವಾಸಿಗಳು ತಿಳಿಸಿದ್ದಾರೆ. ಜೊತೆಗೆ ಕಾರಾಗೃಹದ ಒಳಗಿನವೆಂದು ಹೇಳಿಕೊಳ್ಳುವ ವಿಡಿಯೋಗಳು, ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಫೋಟೋ ಮತ್ತು ವೀಡಿಯೊಗಳಲ್ಲಿ ಕೆಲ ದೇಹಗಳನ್ನು ತೋರಿಸಲಾಗಿದೆ. ಇದರಲ್ಲಿ ಕೆಲವು ಸುಟ್ಟುಹೋದ ಮೃತದೇಹಗಳು ನೆಲದ ಮೇಲೆ ಬಿದ್ದಿವೆ.ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೋ ಲಾಸ್ಸೋ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಡ್ರಗ್ ಟ್ರಾಫಿಕಿಂಗ್ ಮತ್ತು ಇತರೆ ಅಪರಾಧಗಳನ್ನು ತಡೆಯಲು ಭದ್ರತಾ ಪಡೆಗಳಿಗೆ ವಿಶೇಷ ಅಧಿಕಾರ ನೀಡಿದ್ದ ಸಮಯದಲ್ಲಿಯೇ ಈ ಘಟನೆ ನಡೆದಿದೆ.
ಘಟನೆ ಬಳಿಕ ಶನಿವಾರ ಲಿಟೋರಲ್ ಜೈಲಿನ ಮುಂಭಾಗ ಕೈದಿಗಳ ಸಂಬಂಧಿಕರು ತಮ್ಮವರಿಗಾಗಿ ನೆರೆದಿದ್ದರು. ಇದನ್ನು ಇಲ್ಲಿಗೆ ಮುಗಿಸಿ. ಯಾವಾಗ ಕೊಲ್ಲುವುದನ್ನು ನಿಲ್ಲಿಸುತ್ತೀರಿ. ಇದು ಜೈಲು, ವಧಾಕೇಂದ್ರವಲ್ಲ. ಅವರು ಮನುಷ್ಯರು ಎಂದು ಕೈದಿಯೊಬ್ಬರ ಸಂಬಂಧಿ ಫ್ರಾನ್ಸಿಯಾ ಚಾನ್ಸೇ ಹೇಳಿದ್ದಾರೆ. ಜೈಲನ್ನು ಈಕ್ವೇಡಾರ್ ಭದ್ರತಾ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಹೇಳಲಾಗುತ್ತಿದೆ.
ಈಕ್ವೆಡಾರ್ ತನ್ನ ಸೆರೆಮನೆ ವ್ಯವಸ್ಥೆಯಲ್ಲಿ 40 ಸಾವಿರ ಕೈದಿಗಳನ್ನು ಹೊಂದಿದ್ದು, ಲಿಟೋರಲ್ ಜೈಲಿನಲ್ಲಿ 8,500 ಕೈದಿಗಳಿಗೆ ಶಿಕ್ಷೆ ನೀಡಲಾಗುತ್ತಿದೆ. ಆದರೆ, ಜೈಲಿನ ಸೇವೆಯ ಮಾಹಿತಿ ಪ್ರಕಾರ ಶೇ.55ರಷ್ಟು ಹೆಚ್ಚಿನ ಕೈದಿಗಳನ್ನು ಲಿಟೋರಲ್ ಜೈಲಿನಲ್ಲಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಲಿಟೋರಲ್ ಜೈಲಿನಲ್ಲಿ ಸಾವು-ನೋವಿನ ಪ್ರಮಾಣ ಹೆಚ್ಚು ಎನ್ನಲಾಗುತ್ತಿದೆ. ಒಟ್ಟಾರೆಯಾಗಿ, ಈಕ್ವೆಡಾರ್‌ನ ಕಾರಾಗೃಹಗಳಲ್ಲಿ ಶನಿವಾರದ ಹತ್ಯಾಕಾಂಡಕ್ಕೂ ಮುನ್ನ ಈ ವರ್ಷ ಇದುವರೆಗೆ 230 ಸಾವುಗಳು ದಾಖಲಾಗಿವೆ.
ಈ ಹಿಂದೆ ಸೆಪ್ಟೆಂಬರ್ ಅಂತ್ಯದಲ್ಲಿ ಲಿಟೊರಲ್ ಜೈಲಿನಲ್ಲಿ ಗ್ಯಾಂಗ್ ಸದಸ್ಯರ ನಡುವಿನ ಕದನವು ಕನಿಷ್ಠ 118 ಜನರನ್ನು ಕೊಂದಿತು ಮತ್ತು 79 ಜನರು ಗಾಯಗೊಂಡಿದ್ದರು. ಇದನ್ನು ಅಧಿಕಾರಿಗಳು ದಕ್ಷಿಣ ಅಮೆರಿಕಾದ ದೇಶದ ಅತ್ಯಂತ ಕೆಟ್ಟ ಜೈಲು ಹತ್ಯಾಕಾಂಡ ಎಂದು ವಿವರಿಸಿದರು. ಸತ್ತವರಲ್ಲಿ ಕನಿಷ್ಠ ಐವರು ಶಿರಚ್ಛೇದ ಮಾಡಲ್ಪಟ್ಟಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೋ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದರು.
ದಕ್ಷಿಣ ಅಮೆರಿಕದ ಈಕ್ವೆಡಾರ್ ದೇಶದ ಜೈಲನಲ್ಲಿ ನಡೆದ ಗ್ಯಾಂಗ್ವಾರ್ಗೆ ಕನಿಷ್ಟ 116 ಜನ ಮೃತಪಟ್ಟಿದ್ದು, 5 ಜನರ ಶಿರಚ್ಛೇದ ಮಾಡಲಾಗಿದೆ, ಉಳಿದವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಅಲ್ಲದೆ, ಇದು ಈಕ್ವೆಡಾರ್ ಇತಿಹಾಸದಲ್ಲೇ ಅತ್ಯಂತ ಕರಾಳ ಹತ್ಯಾಕಾಂಡ ಎಂದು ಹೇಳಲಾಗುತ್ತದೆ. ಈಕ್ವೆಡಾರ್ ಜೈಲಿನಲ್ಲಿ ಪ್ರಮುಖ ಡ್ರಗ್ ಮಾಫಿಯಾದ ಕೈದಿಗಳನ್ನು ಬಂಧಿಸಿ ಇಡಲಾಗಿತ್ತು. ಆದರೆ, ಈ ಡ್ರಗ್ ಮಾಫಿಯಾದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದಾಗಿ ಈ ಹತ್ಯಾಕಾಂಡ ನಡೆದಿದೆ. ಈ ಹತ್ಯಾಕಾಂಡದಲ್ಲಿ ಕೈದಿಗಳು ಗ್ರೆನೇಡ್‌ಗಳನ್ನು ಎಸೆದಿದ್ದರು. ಹೀಗಾಗಿ ಇದನ್ನು ಈಕ್ವೆಡಾರ್ ದೇಶದಲ್ಲೇ ಅತ್ಯಂತ ಕೆಟ್ಟ ಜೈಲು ಹಿಂಸಾಚಾರ ಎನ್ನಲಾಗುತ್ತಿದೆ. ಹೀಗಾಗಿ ಜೈಲಿನ ನಿಯಂತ್ರಣವನ್ನು ಮರಳಿ ಪಡೆಯುವ ಸಲುವಾಗಿ ಅಲ್ಲಿನ ಸರ್ಕಾರ 400 ಜನ ಹೆಚ್ಚವರಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿದ್ದರು.

ಜೈಲಿನಲ್ಲಿ ಡ್ರಗ್ಸ್ ಮಾಫಿಯಾದ ನಡುವೆ ಇದ್ದಕ್ಕಿದ್ದಂತೆ ಗ್ಯಾಂಗ್ ವಾರ್ ಆರಂಭವಾಗಿತ್ತು. ಈ ಗಲಭೆಯಲ್ಲಿ ಸ್ಪೋಟಕ ಮತ್ತು ಬಂದೂಕನ್ನು ಬಳಕೆ ಮಾಡಲಾಗಿದೆ. ಹಲವು ಕೈದಿಗಳು ಗ್ರನೇಡ್‌ಗಳನ್ನೂ ಸಹ ಎಸೆದಿದ್ದಾರೆ. ಕೊನೆಗೆ ಜೈಲಿಗೆ ಅಧಿಕ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಜೈಲನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು. ಇಂದು ಮತ್ತೊಂದು ಇಂತಹದ್ದೇ ಘಟನೆ ನಡೆದಿದೆ.