37 ಸೆಕೆಂಡುಗಳ ಭೀತಿ: ಎಫ್‌ಜೆಡ್1073 ವಿಮಾನ ರಕ್ಷಣೆಯ ದಿಟ್ಟ ಕಥನ: ಗಿರೀಶ ಲಿಂಗಣ್ಣ

ಸೌದಿ ಅರೇಬಿಯಾದ ರನ್‌ವೇ ಒಂದರಲ್ಲಿ ಫ್ಲೈ ದುಬೈ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಕಡೆಗೂ ಭೂಸ್ಪರ್ಶ ನಡೆಸಿದಾಗ, ಅದರ ಬಾಲದ ಭಾಗದಲ್ಲಿ ರಡ್ಡರ್ ಇರಬೇಕಾದ ಜಾಗದಲ್ಲಿ ಒಂದು ಖಾಲಿ ಸ್ಥಳವಿತ್ತು. ವಿಮಾನದಲ್ಲಿದ್ದ ಎಲ್ಲ 174 ಪ್ರಯಾಣಿಕರೂ ಸುರಕ್ಷಿತವಾಗಿ ಇಳಿದಿದ್ದರು. ವೈಮಾನಿಕ ತಜ್ಞರು ಏಕೆ ಈ ಘಟನೆಯನ್ನು ಅದ್ಭುತ ಎಂದು ಬಣ್ಣಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕಾದರೆ, ವಿಮಾನದ ಲ್ಯಾಂಡಿಂಗ್ ಪ್ರಕ್ರಿಯೆಯಿಂದ ಆರಂಭಿಸಿ, ಹಿಂದೆ ನಡೆದದ್ದೇನು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈ ಕುರಿತು ಲೇಖಕರು, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ.

ರಡ್ಡರ್ ಎನ್ನುವುದು ವಿಮಾನದ ಬಾಲದ ಭಾಗದಲ್ಲಿರುವ ಉದ್ದನೆಯ ಫಲಕವಾಗಿದ್ದು, ಪೈಲಟ್ ಕಾಲ ಬಳಿ ಇರುವ ಪೆಡಲ್‌ಗಳ ಮೂಲಕ ಕಾರ್ಯಾಚರಿಸುತ್ತದೆ. ಇದು ವಿಮಾನದ ಮೂಗನ್ನು ಎಡ ಅಥವಾ ಬಲಕ್ಕೆ ತಿರುಗಿಸುತ್ತದೆ. ಈ ಚಲನೆಯನ್ನು 'ಯಾವ್' (yaw) ಎಂದು ಕರೆಯಲಾಗುತ್ತದೆ. ಇದು ಬೋಟ್‌ಗಳ ಹಿಂಭಾಗದಲ್ಲಿರುವ, ಬೋಟ್‌ಗಳನ್ನು ತಿರುಗಿಸಲು ನೆರವಾಗುವ ಫಿನ್ ರೀತಿಯಲ್ಲಿ ಬಹುತೇಕ ಕಾರ್ಯಾಚರಿಸುತ್ತದೆ. ಕೊನೆಯ ಇಳಿಕೆಯ ಹಂತದಲ್ಲಿ, ಈ ರಡ್ಡರ್ ವಿಮಾನದ ಮೂಗು ರನ್‌ವೇಗೆ ಸಮಾನಾಂತರವಾಗಿರುವಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ಅಡ್ಡಲಾಗಿ ಗಾಳಿ ಬೀಸುವ ಸಮಯದಲ್ಲಿ ಇದು ಹೆಚ್ಚು ನೆರವಾಗುತ್ತದೆ. ರಡ್ಡರ್ ಇಲ್ಲದಿದ್ದರೆ, ಸಣ್ಣದಾಗಿ ಬೀಸುವ ಅಡ್ಡ ಗಾಳಿಯೂ ಸಹ ವಿಮಾನವನ್ನು ಬದಿಗೆ ಚಲಿಸುವಂತೆ ಮಾಡಿ, ಸಿಬ್ಬಂದಿಗಳಿಗೆ ಅದನ್ನು ಸರಿಪಡಿಸಲು ಹೆಚ್ಚೇನೂ ಅವಕಾಶ ಇಲ್ಲದಂತೆ ಮಾಡುತ್ತದೆ. ಅತ್ಯಂತ ಅನುಭವ ಹೊಂದಿರುವ 737 ಪೈಲಟ್ ಸಹ ಇಂತಹ ಲ್ಯಾಂಡಿಂಗ್ ನಡೆಸಿರುವ ಸಾಧ್ಯತೆಗಳಿಲ್ಲ.

Flydubai FZ1073

ಆದರೂ ಇಂತಹ ಪರಿಸ್ಥಿತಿಯಲ್ಲಿ ವಿಮಾನದ ಲ್ಯಾಂಡಿಂಗ್ ನಡೆಸಿದ ಇಬ್ಬರು ವ್ಯಕ್ತಿಗಳು ವಿಮಾನದ ದೈನಂದಿನ ಸಿಬ್ಬಂದಿಯಾಗಿರಲಿಲ್ಲ. ಅವರು ವಿಮಾನದಲ್ಲಿ ಪ್ರಯಾಣಿಕರಾಗಿ ಸಾಗುತ್ತಿದ್ದ ಪೈಲಟ್‌ಗಳಾಗಿದ್ದು, ರಕ್ತಸಿಕ್ತವಾದ ಕಾಕ್‌ಪಿಟ್ ಒಳಗೆ ಪ್ರವೇಶಿಸಿ, ಅವರಿಗೆ ಕಾಣಲಾಗಲಿ, ಅಳೆಯಲಾಗಲಿ ಸಾಧ್ಯವಿಲ್ಲದ ಮಟ್ಟಿನ ತೊಂದರೆಗೊಳಗಾಗಿದ್ದ ಯಂತ್ರವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಅವರಿಗೆ ಸಿದ್ಧತೆ ನಡೆಸಲು ಸಮಯ ಇರಲಿಲ್ಲ. ಅದರೊಡನೆ, ವಿಮಾನ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ತಿಳಿಯುವ ಮಾರ್ಗವೂ ಇರಲಿಲ್ಲ.

ವಾಸ್ತವ ತಿಳಿಯದೇ 7700 ಸಂದೇಶ ನೋಡಿ ಇಸ್ರೇಲ್ ಸಜ್ಜು

ಫ್ಲೈಟ್ ಎಫ್‌ಜೆಡ್1073 ದುಬೈನಿಂದ ಇಸ್ರೇಲಿನ ಬೆನ್ ಗುರಿಯನ್ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿತ್ತು. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ, ವಿಮಾನದ ಟ್ರಾನ್ಸ್‌ಪಾಂಡರ್ ಸಾಮಾನ್ಯ ತುರ್ತು ಪರಿಸ್ಥಿತಿಯ ಅಂತಾರಾಷ್ಟ್ರೀಯ ಸಂಕೇತವಾದ ಕೋಡ್ 7700 ಅನ್ನು ರವಾನಿಸಿತ್ತು. ಬಳಿಕ ಟ್ರಾನ್ಸ್‌ಪಾಂಡರ್ 7500 ಎಂಬ ಕೋಡ್ ರವಾನಿಸಿತು. ಇದು ವಿಮಾನ ಅಪಹರಣದಂತಹ ಕಾನೂನು ಬಾಹಿರ ಚಟುವಟಿಕೆಗಳ ಸಂಕೇತವಾಗಿದೆ. ಈ ನಾಲ್ಕು ಅಂಕಿಗಳ ಕೋಡ್‌ಗಳು ವಾಯು ಸಂಚಾರ ನಿಯಂತ್ರಕರಿಗೆ ನೀಡುವ ಮೌನ ಅಲಾರಂನಂತಿದೆ. ಆದರೆ, ನಿಯಂತ್ರಕರಿಗೂ ವಿಮಾನದಲ್ಲಿ ವಾಸ್ತವವಾಗಿ ನಡೆದದ್ದೇನು ಎನ್ನುವುದು ತಿಳಿಯುವುದಿಲ್ಲ. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ತಕ್ಷಣವೇ ತನ್ನ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿತ್ತು.

ಲಾಕ್ ಆಗಿದ್ದ ಕಾಕ್‌ಪಿಟ್ ಒಳಗೆ, ಒಮಾನ್ ದೇಶದ ಪ್ರಜೆಯಾದ ಓರ್ವ ಸಹ ಪೈಲಟ್ ವಿಮಾನದ ಕ್ಯಾಪ್ಟನ್ ಮೇಲೆ ಚಾಕುವಿನಿಂದ ದಾಳಿ ನಡೆಸಿ, ವಿಮಾನವನ್ನು ಪತನಗೊಳಿಸಲು ಪ್ರಯತ್ನ ನಡೆಸಿದ್ದ. ಇಸ್ರೇಲ್ ನಾಯಕತ್ವ ಈ ಘಟನೆಯನ್ನು ಭಯೋತ್ಪಾದಕ ಕೃತ್ಯ ಎಂಬುದಾಗಿ ಕರೆದಿದ್ದರೂ, ಆರೋಪಿತನ ರಾಷ್ಟ್ರೀಯತೆ ಮತ್ತು ಉದ್ದೇಶವನ್ನು ಇನ್ನೂ ಅಧಿಕೃತವಾಗಿ ಖಚಿತಪಡಿಸಲಾಗಿಲ್ಲ. ವಿಮಾನದ ಕ್ಯಾಪ್ಟನ್ ಆಗಿದ್ದ ಭಾರತೀಯ ವ್ಯಕ್ತಿಯಾದ ಸ್ಮಿತ್ ಮಚ್ಚಾರ್ ಅವರು 9,500 ಗಂಟೆಗೂ ಹೆಚ್ಚಿನ ಹಾರಾಟ ಅನುಭವ ಹೊಂದಿದ್ದು, ಮೊದಲು ಮುಂಬೈನಲ್ಲಿ ಸ್ಪೈಸ್ ಜೆಟ್ ವಿಮಾನದ ಪೈಲಟ್ ಆಗಿದ್ದರು. ಈ ಘಟನೆಯಲ್ಲಿ ಅವರ ತಲೆ ಮತ್ತು ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಭಾರತೀಯ ಕಾಲಮಾನದಲ್ಲಿ, ಅಂದಾಜು ಬೆಳಗ್ಗೆ 10:51ರ ಸುಮಾರಿಗೆ, ಸೌದಿ ಅರೇಬಿಯಾದ ವಾಯುವ್ಯ ದಿಕ್ಕಿನ ಆಕಾಶದ ಮೇಲೆ ವಿಮಾನ ಅಂದಾಜು 34,000 ಅಡಿಗಳ ಎತ್ತರದಲ್ಲಿ ಸಾಗುತ್ತಿತ್ತು. ಆಗ ಅದು ಇದ್ದಕ್ಕಿದ್ದಂತೆ ಕೆಳಗೆ ಇಳಿಯಲಾರಂಭಿಸಿತು. ಕೇವಲ 37 ಸೆಕೆಂಡುಗಳ ಅವಧಿಯಲ್ಲಿ ವಿಮಾನ ಬಹುತೇಕ 14,300 ಅಡಿಗಳಷ್ಟು ಕೆಳಗಿಳಿದಿತ್ತು. ಅದು ನೆಲದಿಂದ ಕೇವಲ 16,600 ಅಡಿಗಳಷ್ಟು ಮಾತ್ರವೇ ಎತ್ತರದಲ್ಲಿತ್ತು.

ಎನ್‌ಡಿಟಿವಿಯ ವಿಮಾನ ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, ವಿಮಾನದ ಇಳಿಯುವಿಕೆಯ ದರ ಪ್ರತಿ ನಿಮಿಷಕ್ಕೆ 23,000 ಅಡಿಗಳಷ್ಟಿತ್ತು. ಅಂದರೆ, ವಿಮಾನ ಪ್ರತಿ ಸೆಕೆಂಡಿಗೆ 386 ಅಡಿಗಳಷ್ಟು ಬೀಳುತ್ತಿತ್ತು. ಒಂದು ವಿಮಾನದ ಸಾಮಾನ್ಯ ಇಳಿಯುವಿಕೆಯ ದರ ಪ್ರತಿ ನಿಮಿಷಕ್ಕೆ 1,500ರಿಂದ 3,000 ಅಡಿಗಳಷ್ಟಿದ್ದು, ಪ್ರತಿ ಸೆಕೆಂಡಿಗೆ ಕೇವಲ 25ರಿಂದ 50 ಅಡಿಗಳಷ್ಟಿರುತ್ತದೆ. ಈ ವಿಮಾನದ ಪತನದ ವೇಗ ಸಾಮಾನ್ಯ ಇಳಿಯುವಿಕೆಗೆ ಹೋಲಿಸಿದರೆ ಬಹುತೇಕ ಎಂಟು ಪಟ್ಟು ಹೆಚ್ಚಾಗಿತ್ತು. ವಿಮಾನದ ಕ್ಯಾಬಿನ್ ಒಳಗಿದ್ದವರಿಗೆ ಕೇಬಲ್ ಕತ್ತರಿಸಿ ಕೆಳಗೆ ಕುಸಿಯುತ್ತಿರುವ ಲಿಫ್ಟ್ ಒಳಗೆ ಕುಳಿತಂತಹ ಭಾವನೆ ಮೂಡಿರಬಹುದು.

ಸೂಪರ್‌ಸಾನಿಕ್ ವೇಗ ತಲುಪಿದ್ದ ವಿಮಾನ

ವಿಮಾನ ಕೆಳಗೆ ಇಳಿಯುತ್ತಿದ್ದಂತೆ ಅದರ ವೇಗ ಹೆಚ್ಚಾಗತೊಡಗಿತ್ತು. ಇಳಿಜಾರಿನ ರಸ್ತೆಯಲ್ಲಿ ಸೈಕಲ್ ಚಲಾಯಿಸುವಾಗ, ಪೆಡಲ್ ತುಳಿಯದಿದ್ದರೂ ಸೈಕಲ್ ಹೆಚ್ಚು ವೇಗವಾಗಿ ಸಾಗುತ್ತದೆ. ಇಲ್ಲಿ ಎತ್ತರ ವೇಗವಾಗಿ ಬದಲಾಗುವುದು ಇದಕ್ಕೆ ಕಾರಣವಾಗಿರುತ್ತದೆ. ಪ್ರಸ್ತುತ ಘಟನೆಯಲ್ಲೂ ಆತಂಕಕಾರಿ ಮಟ್ಟದಲ್ಲಿ ಇದೇ ಬೆಳವಣಿಗೆ ನಡೆದಿತ್ತು. ವಿಮಾನ ಬಹುತೇಕ ಮ್ಯಾಕ್ 0.96 ವೇಗ, ಅಂದರೆ ಪ್ರತಿ ಗಂಟೆಗೆ ಅಂದಾಜು 1,108 ಕಿಲೋಮೀಟರ್ ವೇಗವನ್ನು ತಲುಪಿತ್ತು. ಮ್ಯಾಕ್ ಎನ್ನುವುದು ಶಬ್ದದ ವೇಗದ ಅಳತೆಯಾಗಿದ್ದು, ಗಾಳಿಯ ತಾಪಮಾನದೊಡನೆ ಮತ್ತು ಎತ್ತರದೊಡನೆ ಬದಲಾಗುತ್ತದೆ. ಆದ್ದರಿಂದ ಇಲ್ಲಿನ ಪ್ರತಿ ಗಂಟೆಗೆ ಇಷ್ಟು ಕಿಲೋಮೀಟರ್ ಎನ್ನುವ ವೇಗ ಕೇವಲ ಅಂದಾಜಷ್ಟೇ. ಕೆಲವು ವರದಿಗಳಂತೂ ವಿಮಾನ ಕೆಲಕಾಲ ಸೂಪರ್‌ಸಾನಿಕ್ ವೇಗವನ್ನು ತಲುಪಿತ್ತು ಎಂದಿವೆ.

ಯಾವುದೇ ಪ್ರಯಾಣಿಕ ವಿಮಾನ ಇಷ್ಟರ ಮಟ್ಟಿನ ವೇಗಕ್ಕಾಗಿ ನಿರ್ಮಾಣಗೊಂಡಿರುವುದಿಲ್ಲ. ಇಂತಹ ವೇಗದಲ್ಲಿ, ಗಾಳಿ ವಿಮಾನದ ಚೌಕಟ್ಟನ್ನು ಅತ್ಯಂತ ಬಲದಿಂದ ಒತ್ತಿ, ಅದು ವಿಮಾನವನ್ನು ಚೂರಾಗಿಸಲೂ ಸಾಕಾಗುವಂತಿತ್ತು. ಇದರ ಪರಿಣಾಮವಾಗಿ, ವಿಮಾನದ ರಡ್ಡರ್ ಅಸೆಂಬ್ಲಿ ಮುರಿದುಹೋಯಿತು. ನಿಯಂತ್ರಕಗಳ ಮೇಲಿನ ಸಾವು ಬದುಕಿನ ಹೋರಾಟದ ಸಂದರ್ಭದಲ್ಲಿ ಪೆಡಲ್ ಇನ್‌ಪುಟ್‌ಗಳ ಕಾರಣದಿಂದ ಪರಿಸ್ಥಿತಿ ಇನ್ನೂ ಕೆಟ್ಟದಾಗಿರಬಹುದು.

737 ವಿಮಾನದ ಕಾಕ್‌ಪಿಟ್ ಅತ್ಯಂತ ಬಲಯುತವಾಗಿದ್ದು, ಒಳಗಿನಿಂದ ಅಥವಾ ಹೊರಗಿನಿಂದ ಕೇವಲ ಭದ್ರತಾ ಕೋಡ್ ಮೂಲಕ ಮಾತ್ರವೇ ತೆರೆಯಬಹುದು. ವಿಪರೀತ ರಕ್ತಸ್ರಾವ ಹೊಂದುತ್ತಿದ್ದ, ಪ್ರಜ್ಞೆ ಕಳೆದುಕೊಳ್ಳುತ್ತಿದ್ದ ಕ್ಯಾಪ್ಟನ್ ಮಚ್ಚಾರ್ ಕಷ್ಟಪಟ್ಟು ಹಿಂದಕ್ಕೆ ಚಲಿಸಿ, ಕಾಕ್‌ಪಿಟ್ ತೆರೆದಿದ್ದರು ಎನ್ನಲಾಗಿದೆ. ಇನ್ನು ಶೌಚಾಲಯಕ್ಕೆ ತೆರಳಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಏನೋ ಅಪಾಯವಾಗಿದೆ ಎನ್ನುವುದು ಅರಿವಿಗೆ ಬಂದು, ಅವರು ವಿಮಾನದ ಸಿಬ್ಬಂದಿಯನ್ನು ಎಚ್ಚರಿಸಿದ್ದರು. ನಾಲ್ವರು ಪ್ರಯಾಣಿಕರು ಕಾಕ್‌ಪಿಟ್ ಒಳಗೆ ಚಲಿಸಿ, ದಾಳಿಕೋರನನ್ನು ತಡೆಯಲು ನೆರವಾದರು. ವಿಮಾನದಲ್ಲಿದ್ದ ಏಕೈಕ ವೈದ್ಯಕೀಯ ವೃತ್ತಿಪರನಾಗಿದ್ದ ಓರ್ವ ದಂತವೈದ್ಯ ಕ್ಯಾಪ್ಟನ್ ರಕ್ತಸ್ರಾವವನ್ನು ತಡೆಗಟ್ಟಿ, ಲ್ಯಾಂಡಿಂಗ್ ನಡೆಸುವ ತನಕ ಅವರನ್ನು ಸ್ಥಿರವಾಗಿಸಿಟ್ಟರು.

ಕೆಳಗೆ ಧುಮುಕುತ್ತಿರುವ ವಿಮಾನ ಮೇಲೆತ್ತುವುದು ಕಷ್ಟಸಾಧ್ಯ

ಅತ್ಯಂತ ವೇಗವಾಗಿ ಕೆಳಗೆ ಧುಮುಕುತ್ತಿರುವ ವಿಮಾನವನ್ನು ಮತ್ತೆ ಮೇಲಕ್ಕೆತ್ತುವುದು ಅತ್ಯಂತ ಸೂಕ್ಷ್ಮ ಕೆಲಸ. ಒಂದು ವೇಳೆ ಪೈಲಟ್ ಇದ್ದಕ್ಕಿದ್ದಂತೆ ವಿಮಾನವನ್ನು ಮೇಲಕ್ಕೆ ಒಯ್ದರೆ, ಈಗಾಗಲೇ ಒತ್ತಡಕ್ಕೆ ಸಿಲುಕಿರುವ ರೆಕ್ಕೆಗಳು ಮತ್ತು ಬಾಲ ವಿಫಲವಾಗಬಹುದು. ಒಂದೊಮ್ಮೆ ಆತ ಅತ್ಯಂತ ಸೂಕ್ಷ್ಮವಾಗಿ ಮೇಲೆತ್ತಲು ಹೊರಟರೆ, ವಿಮಾನ ನೆಲಕ್ಕೆ ತಲುಪಬಹುದು. ವಿಮಾನದ ಪತನದಿಂದ ಮರಳಿ ಮೇಲಕ್ಕೆ ಏರುವ ತನಕದ ಒಟ್ಟು ಪ್ರಕ್ರಿಯೆ ಕೇವಲ ಐದು ನಿಮಿಷಗಳ ಒಳಗೆ ನಡೆದು ಹೋಗಿತ್ತು. ವಿಮಾನ ಮೇಲಕ್ಕೆ ಏರಿ, ಸ್ಥಿರವಾಗಿ, ಮತ್ತೆ ತುರ್ತು ಲ್ಯಾಂಡಿಂಗ್ ನಡೆಸಲು ತೆರಳಿತು.

ಘಟನೆಯ ಕುರಿತ ಸಂಪೂರ್ಣ ಉತ್ತರ ಹಾರಾಟ ಮಾಹಿತಿಯಲ್ಲಿ ಮತ್ತು ಕಾಕ್‌ಪಿಟ್ ಧ್ವನಿಮುದ್ರಣದಲ್ಲಿದೆ. ಅದೀಗ ಸೌದಿ ಅರೇಬಿಯಾದ ಅಧಿಕಾರಿಗಳ ಬಳಿ ಇದೆ. ಈಗ ಖಚಿತವಾಗಿರುವ ವಿಚಾರವೆಂದರೆ, ತೀವ್ರವಾಗಿ ಗಾಯಗೊಂಡರೂ ಭಾರತೀಯ ಪೈಲಟ್ ತನ್ನ ವಿಮಾನದ ಕೈಬಿಡಲು ನಿರಾಕರಿಸಿದ್ದರು. ಸಾಮಾನ್ಯ ಪ್ರಯಾಣಿಕರು ಅಸಾಮಾನ್ಯ ಧೈರ್ಯ ಪ್ರದರ್ಶಿಸಿದರು. ಇಬ್ಬರು ಕರ್ತವ್ಯದಲ್ಲಿರದ ಪೈಲಟ್‌ಗಳು ಹಾನಿಗೊಳಗಾದ ವಿಮಾನವನ್ನು ಸುರಕ್ಷಿತವಾಗಿ ಭೂಮಿಗೆ ಇಳಿಸಿದರು.

ಗಿರೀಶ್ ಲಿಂಗಣ್ಣ ಅವರ ಕುರಿತು

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+