1 ಕೆಜಿ ಗೋಧಿ ಹಿಟ್ಟಿಗೆ 320 ರೂಪಾಯಿ: 1 ಕೆಜಿ ಟೊಮೆಟೊ 200 ರೂಪಾಯಿ!
ಕರಾಚಿ: ದೇಶ ಆಳುವವರೇ ಭಕ್ಷಕರಾದರೆ ಆ ರಾಷ್ಟ್ರದ ಪರಿಸ್ಥಿತಿ ಬೀದಿಗೆ ಬೀಳುತ್ತೆ ಅನ್ನೋ ಮಾತಿಗೆ ಪಾಕಿಸ್ತಾನವೇ ಪರಮ ಸಾಕ್ಷಿ. ಪಾತಾಳಕ್ಕೆ ಕುಸಿಯುತ್ತಿರುವ ಜಿಡಿಪಿ, ಮುಗಿಲೆತ್ತರ ಚಾಚಿದ ಸಾಲ, ಇಷ್ಟು ಸಾಲದು ಎಂಬಂತೆ ಕೈಗೆ ಸಿಗದ ಹಣದುಬ್ಬರ. ಅಷ್ಟಕ್ಕೂ ಇದು ನರಕದ ಪರಿಸ್ಥಿತಿ ಅಲ್ಲ, ಭಾರತದ ಶತ್ರು ಪಾಕಿಸ್ತಾನ ದುಃಸ್ಥಿತಿ. ಇಂತಿಪ್ಪ ಪಾಕಿಸ್ತಾನದಲ್ಲಿ 1 ಕೆಜಿ ಗೋಧಿ ಹಿಟ್ಟಿಗೆ ಎಷ್ಟು ದುಡ್ಡು ಕೊಡಬೇಕು ಗೊತ್ತಾ? ಬನ್ನಿ ತಿಳಿಯೋಣ.
ಪಾಕಿಸ್ತಾನದಲ್ಲಿ (Pakistan) ಹಣದುಬ್ಬರ ಹೇಗಿದೆ ಎಂದರೆ, ಅಲ್ಲಿನ ಜನ ಒಂದು ತುತ್ತು ತಿನ್ನೋದಕ್ಕೂ ಯೋಚಿಸುವಂತಾಗಿದೆ. ಈ ಮೂಲಕ ಅಲ್ಲಿನ ಆರ್ಥಿಕತೆ ಬುಡಮೇಲಾಗಿದೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದ್ದು, ಹಸಿವಿನಿಂದ ಸಾಯುವ ಪರಿಸ್ಥಿತಿ ಎದುರಾಗಿದೆ. ಪಾಕಿಸ್ತಾನದ ಗ್ರಾಹಕ ಬೆಲೆ ಸೂಚ್ಯಂಕ ಕೂಡ ಮಿತಿ ಮೀರಿದ್ದು ಜನ ಅಸಹಾಯಕರಾಗಿದ್ದಾರೆ. ಗೋಧಿ ದಾಸ್ತಾನು ಇನ್ನೇನು ಮುಗಿಯುವ ಹಂತದಲ್ಲಿದ್ದು, ಖೈಬರ್, ಸಿಂಧ್, ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟಿಗಾಗಿ ರಣರಂಗ ಏರ್ಪಟ್ಟು ಹತ್ತಾರು ಜನ ಜೀವ ಬಿಟ್ಟಾಗಲೇ ಮತ್ತೊಂದು ಶಾಕ್ ಸಿಕ್ಕಿದೆ. ಇಡೀ ಜಗತ್ತಿನಲ್ಲೇ ಅತ್ಯಂತ ದುಬಾರಿ ಬೆಲೆಯ ಗೋಧಿ ಹಿಟ್ಟು ಪಾಕಿಸ್ತಾನದಲ್ಲಿ ಸಿಗುತ್ತಿದೆ!

ಏನ್ ಗುರೂ ಇದು ಪಾಕಿಸ್ತಾನದ ದುಃಸ್ಥಿತಿ!
ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಬೇಕು, ಅಷ್ಟಕ್ಕೂ ಈ ಮಾತು ಪಾಕ್‌ಗೆ ಮತ್ತು ಅಲ್ಲಿನ ಭ್ರಷ್ಟ ರಾಜಕಾರಣಿಗಳಿಗೆ ಸರಿಯಾಗಿ ಅನ್ವಯಿಸುತ್ತೆ. ಯಾಕಂದ್ರೆ ಪಾಕಿಸ್ತಾನದಲ್ಲಿ ಜನ ತಿನ್ನಲು ಆಹಾರ ಸಿಗುತ್ತಿಲ್ಲ. ಗೋಧಿ ಹಿಟ್ಟಿಗೂ ಕೊಲೆಗಳು ನಡೆಯುವ ದೇಶ ಅದು. ಪರಿಸ್ಥಿತಿ ಹೀಗಿದ್ರೂ ಪಾಕಿಗಳ ಸೇನೆಗೆ ಮಾತ್ರ ಅತ್ಯಾಧುನಿಕವಾದ ಅಸ್ತ್ರವೇ ಬೇಕು. ಅದ್ರಲ್ಲೂ ಸಾವಿರಾರು ಕೋಟಿ ರೂಪಾಯಿ ಬೆಲೆಯ ವೆಪನ್ಸ್ ಬೇಕು. ಹೀಗಾಗಿದ್ದಾಗಲೇ ಪಾಕಿಸ್ತಾನದ ಪ್ರಮುಖ ನಗರ ಕರಾಚಿಯಲ್ಲಿ 1 ಕೆಜಿ ಗೋಧಿ ಹಿಟ್ಟಿಗೆ 320 ರೂಪಾಯಿ ಹಾಗೂ 1 ಕೆಜಿ ಟೊಮೆಟೊಗೆ 200 ರೂಪಾಯಿ ಕೊಡಬೇಕಾದ ಪರಿಸ್ಥಿತಿ ಬಂದಿದೆ.
ದೇಶವನ್ನೇ ಮಾರುತ್ತಿರುವ ರಾಜಕಾರಣಿಗಳು
ಕೈಗೆ ಸಿಗದ ಹಣದುಬ್ಬರ, ಜೊತೆಗೆ ಹಣಕಾಸಿನ ಅಸಮತೋಲನ. ಇಷ್ಟು ಸಾಲದು ಎಂಬಂತೆ ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನ ನರಳುತ್ತಿದೆ. ಈಗಾಗಲೇ ಹಲವು ಸರ್ಕಾರಿ ಆಸ್ತಿಗಳನ್ನು ಪಾಕಿಸ್ತಾನ ಮಾರಾಟ ಮಾಡಿದೆ. ಇತ್ತೀಚೆಗಷ್ಟೆ ಕರಾಚಿ ಪೋರ್ಟ್ ಟರ್ಮಿನಲ್ಸ್ ಅನ್ನ ಯುಎಇಗೆ ಹಸ್ತಾಂತರಿಸಲು ಪಾಕ್ ಸರ್ಕಾರ ನಿರ್ಧರಿಸಿತ್ತು. ತುರ್ತು ನಿಧಿ ಸಂಗ್ರಹಿಸಲು ಕಳೆದ ವರ್ಷ ಹೊಸ ಕಾನೂನು ಜಾರಿಗೆ ತಂದಿದ್ದ ಪಾಕಿಸ್ತಾನ ನೆಲದ ರಾಜಕಾರಣಿಗಳು, ತಮ್ಮ ದೇಶವನ್ನೇ ಮಾರುತ್ತಿದ್ದಾರೆ. ಹೀಗಾಗಿ ಅಲ್ಲಿ ಪ್ರತಿಭಟನೆ ಸೇರಿದಂತೆ ಹಿಂಸಾಚಾರವು ಕೂಡ ಮಾಮೂಲಾಗಿದೆ. ಅದರಲ್ಲೂ ಇಮ್ರಾನ್ ಖಾನ್ ಪಾಕಿಸ್ತಾನ ಸರ್ಕಾರದ ವಿರುದ್ಧ ಪದೇ ಪದೆ ಪ್ರತಿಭಟನೆ ಮಾಡುತ್ತಾ ಟಾರ್ಗೆಟ್ ಆಗಿದ್ದಾರೆ.

ಪಾಕಿಸ್ತಾನ ಬೆನ್ನಿಗೆ ನಿಂತ ಚೀನಾ
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಚೀನಾ ಇತ್ತೀಚೆಗೆ ನೆರವಿನ ಹಸ್ತ ಚಾಚಿತ್ತು. ನಗದು ಕೊರತೆ ನಿವಾರಿಸಲು ಚೀನಾ 1 ಬಿಲಿಯನ್ ಡಾಲರ್ ಹಣ ಸಾಲ ಕೊಟ್ಟಿತ್ತು. ಈ ವಿಚಾರ ಸ್ವತಃ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಮೂಲಕ ಕನ್ಫರ್ಮ್ ಆಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ನಿರೀಕ್ಷಿಸುತ್ತಲೇ ಇರುವ ಪಾಕಿಸ್ತಾನಕ್ಕೆ ಚೀನಾ ಸಹಾಯವು ಭರವಸೆ ನೀಡಿದೆ. ಇತ್ತೀಚೆಗಷ್ಟೆ ಚೀನಾಗೆ ಮರುಪಾವತಿಸಿದ್ದ 1.30 ಬಿಲಿಯನ್ ಡಾಲರ್ ಹಣವನ್ನೇ ಚೀನಾದಿಂದ ಮರಳಿ ಪಡೆಯಲಾಗಿತ್ತು. ಆದರೂ ಪರಿಸ್ಥಿತಿ ಸರಿ ಹೋಗುತ್ತಿಲ್ಲ, ಇಷ್ಟೆಲ್ಲಾ ಸಮಸ್ಯೆ ಇದ್ದರೂ ಪಾಕಿಸ್ತಾನ ಮಾತ್ರ ತನ್ನ ಯುದ್ಧದಾಹ ಬಿಡುತ್ತಿಲ್ಲ. ತನ್ನ ಜನರಿಗೆ ಸರಿಯಾಗಿ 3 ಹೊತ್ತು ಊಟ ಹಾಕಲು ಆಗದೇ ಇದ್ದರೂ ಶೋಕಿ ಮಾತ್ರ ಬಿಡುತ್ತಿಲ್ಲ.












Click it and Unblock the Notifications