ಬಾಂಗ್ಲಾದಲ್ಲಿ ಪ್ರವಾಹ; ರೊಹಿಂಗ್ಯಾ ನಿರಾಶ್ರಿತರ ಶಿಬಿರಗಳು ನೀರುಪಾಲು
ಢಾಕಾ, ಜುಲೈ 29: ದಕ್ಷಿಣ ಬಾಂಗ್ಲಾದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಸೃಷ್ಟಿಯಾಗಿದೆ. ಪ್ರವಾಹದಿಂದಾಗಿ ಇಲ್ಲಿ ನೆಲೆಯೂರಿದ್ದ ರೊಹಿಂಗ್ಯಾ ನಿರಾಶ್ರಿತರ ಸಾವಿರಾರು ಶಿಬಿರಗಳು ನಾಶವಾಗಿವೆ. ಸದ್ಯಕ್ಕೆ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ ವಸತಿ ಸೌಕರ್ಯ ಕಲ್ಪಿಸಲಾಗಿದೆ.
ಸುಮಾರು ಎಂಟು ಲಕ್ಷ ರೊಹಿಂಗ್ಯಾ ನಿರಾಶ್ರಿತರು ನೆಲೆಯೂರಿರುವ ಕಾಕ್ಸ್‌ಬಜಾರ್ ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 30 ಸೆ.ಮೀ. ಮಳೆಯಾಗಿರುವುದಾಗಿ ಅಮೆರಿಕ ರೆಫ್ಯುಜಿ ಏಜೆನ್ಸಿ ವರದಿ ಮಾಡಿದೆ. ಜುಲೈ ತಿಂಗಳಿಡೀ ಬೀಳಬೇಕಿದ್ದ ಮಳೆ ಬುಧವಾರ ಒಂದೇ ದಿನ ದಾಖಲಾಗಿದೆ.
ಇನ್ನೂ ಕೆಲ ದಿನಗಳು ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ರವಾನಿಸಲಾಗಿದೆ. ವಾರದಿಂದ ಅತಿ ಹೆಚ್ಚಿನ ಮಳೆಯಾಗುತ್ತಿದ್ದು, ಈ ವಾರ ಮಳೆ, ಪ್ರವಾಹದಿಂದಾಗಿ ಆರು ಮಂದಿ ಸಾವನ್ನಪ್ಪಿದ್ದಾರೆ.

"ಕೊರೊನಾ ಪ್ರಕರಣಗಳು ಹೆಚ್ಚಿರುವ ಕಾರಣ ಮಳೆ ಈ ಪರಿಸ್ಥಿತಿಯನ್ನು ಇನ್ನಷ್ಟು ಕಠಿಣಗೊಳಿಸಬಹುದು" ಎಂದು ಏಜೆನ್ಸಿ ತಿಳಿಸಿದೆ.
ಹನ್ನೆರಡು ಸಾವಿರಕ್ಕೂ ಹೆಚ್ಚು ನಿರಾಶ್ರಿತರಿಗೆ ಮಳೆ, ಪ್ರವಾಹದಿಂದ ಸಮಸ್ಯೆ ಆಗಿದೆ. 2500ಕ್ಕೂ ಹೆಚ್ಚು ಶಿಬಿರಗಳು ಹಾನಿಯಾಗಿವೆ. ಐದು ಸಾವಿರಕ್ಕೂ ಹೆಚ್ಚಿನ ನಿರಾಶ್ರಿತರನ್ನು ಬೇರೆ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications