ರಷ್ಯಾ ಮತ್ತು ಪುಟಿನ್ ಸರ್ವನಾಶಕ್ಕೆ ಅಮೆರಿಕ & ನ್ಯಾಟೋ ಪಣ?
ಬ್ರಸೆಲ್ಸ್: ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು ಅನ್ನೋ ಮಾತನ್ನ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ಸುಲಭವಾಗಿ ಅರ್ಥೈಸಿಕೊಂಡಂತೆ ಕಾಣುತ್ತಿದೆ. ಒಂದು ಕಡೆ ಉಕ್ರೇನ್ ವಿರುದ್ಧ ತಮ್ಮ ಪರಮ ಶತ್ರು ರಷ್ಯಾ ಮುಗಿಬಿದ್ದಿರುವ ಸಂದರ್ಭದಲ್ಲೇ, ಫಿನ್‌ಲ್ಯಾಂಡ್ ನಾಯಕರನ್ನ ಬುಟ್ಟಿಗೆ ಹಾಕಿಕೊಂಡು ಹೊಸ ಆಟ ಶುರುಮಾಡಿದೆ ಅಮೆರಿಕ. ಅದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ.
ರಷ್ಯಾ ಅಧ್ಯಕ್ಷ ಪುಟಿನ್ ನ್ಯಾಟೋ ಪಡೆಗಳ ವಿರುದ್ಧ ಕೆರಳಿ ಕೆಂಡವಾಗಿ ಉಕ್ರೇನ್ ಮೇಲೆ ಮಹಾಯುದ್ಧ ಸಾರಿದ್ದರು. ಆದರೆ ಇದೇ ನಿರ್ಧಾರ ಪುಟಿನ್ ನೆಮ್ಮದಿ ಕೆಡಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲೂ ರಷ್ಯಾ ಅಕ್ಕಪಕ್ಕದ ಬಹುತೇಕ ರಾಷ್ಟ್ರಗಳು ಅಮೆರಿಕ ಹಾಗೂ ನ್ಯಾಟೋ ಜೊತೆ ಸೇರಲು ತವಕಿಸುತ್ತಿರುವುದು ಫಿನ್‌ಲ್ಯಾಂಡ್ ಬೆಳವಣಿಗೆಯಿಂದ ಸ್ಪಷ್ಟವಾಗಿದೆ. ರಷ್ಯಾ ಮತ್ತು ಪುಟಿನ್ ಸರ್ವನಾಶಕ್ಕೆ ಅಮೆರಿಕ & ನ್ಯಾಟೋ ಒಕ್ಕೂಟದ ರಾಷ್ಟ್ರಗಳು ಪಣತೊಟ್ಟಂತೆ ಈ ಬೆಳವಣಿಗೆ ಬಿಂಬಿಸುತ್ತಿದೆ.

ಗಡಿಯಲ್ಲಿ ರಷ್ಯಾ ಲಾಕ್: ಯಾವುದೇ ಒಂದು ರಾಷ್ಟ್ರವನ್ನು ಮಣಿಸಲು ಅದರ ಗಡಿಯನ್ನ ಆಕ್ರಮಿಸಿಕೊಂಡರೆ ಸಾಕು. ಬಹುತೇಕ ಗೆಲುವು ಶತ್ರು ಪಾಳಯದ್ದೇ. ಈಗ ಅಮೆರಿಕ ಮತ್ತು ನ್ಯಾಟೋ ಪಡೆಗಳು ಮಾಡುತ್ತಿರುವುದು ಕೂಡ ಅದನ್ನೇ. ಹಿಂದೆ ರಷ್ಯಾ ಅಕ್ಕಪಕ್ಕದ ಬಹುತೇಕ ರಾಷ್ಟ್ರಗಳ ಜೊತೆ ಸ್ನೇಹ ಬೆಸೆದು ನ್ಯಾಟೋ ಬುಟ್ಟಿಗೆ ಹಾಕಿಕೊಂಡಿತ್ತು ಅಮೆರಿಕ. ಈ ಮೂಲಕ ನ್ಯಾಟೋ ಸದಸ್ಯ ರಾಷ್ಟ್ರಗಳ ಸೋಗಿನಲ್ಲಿ ಸುಮಾರು 1584 ಮೈಲಿಗಳಷ್ಟು ದೂರದ ರಷ್ಯಾ ಗಡಿಯನ್ನ ಲಾಕ್ ಮಾಡಿದೆ ಅಮೆರಿಕ.
ರಾತ್ರೋ ರಾತ್ರಿ ಡಬಲ್!: ಫಿನ್‌ಲ್ಯಾಂಡ್ ಅಮೆರಿಕದ ಬುಟ್ಟಿಗೆ ಬೀಳುವ ಮೊದಲು, ಅಂದ್ರೆ ನ್ಯಾಟೋ ಸೇರುವ ಮೊದಲು ಸುಮಾರು 750 ಮೈಲಿಗಳಷ್ಟು ದೂರಕ್ಕೆ ರಷ್ಯಾ ಗಡಿಯಲ್ಲಿ ನ್ಯಾಟೋ ಪಡೆಗಳು ಬಂದು ಕೂತಿದ್ದವು. ಆದರೆ ಯಾವಾಗ ಫಿನ್‌ಲ್ಯಾಂಡ್ ಕೂಡ ನ್ಯಾಟೋ ಪಡೆಯ ಸದಸ್ಯ ರಾಷ್ಟ್ರವಾಯಿತೋ ಆಗ ಇದರ ವ್ಯತ್ಯಾಸ ಡಬಲ್ ಆಗಿದೆ. ಹೌದು, ಫಿನ್‌ಲ್ಯಾಂಡ್ ದೇಶ ರಷ್ಯಾ ಜೊತೆಗೆ ಬರೋಬ್ಬರಿ 800 ಮೈಲಿಗೂ ಹೆಚ್ಚು ವ್ಯಾಸದಲ್ಲಿ ಗಡಿ ಪ್ರದೇಶ ಹಂಚಿಕೊಂಡಿದೆ. ಈಗ ಫಿನ್‌ಲ್ಯಾಂಡ್ ನ್ಯಾಟೋ ಒಕ್ಕೂಟ ಸೇರಿದ ಪರಿಣಾಮ ಫಿನ್‌ಲ್ಯಾಂಡ್ ನೆಲದಲ್ಲೂ ಅಮೆರಿಕ ಮತ್ತು ನ್ಯಾಟೋ ಪಡೆಗಳು ಬಂದು ಕೂರಲಿವೆ. ಹೀಗೆ ರಷ್ಯಾ ಭವಿಷ್ಯಕ್ಕೆ ದೊಡ್ಡ ಗಂಡಾಂತರ ಎದುರಾಗಿದೆ.

ವಾರ್ಷಿಕೋತ್ಸವ ಸಂಭ್ರಮ: ನ್ಯಾಟೋ ಒಕ್ಕೂಟ ಸ್ಥಾಪನೆಯಾಗಿ ಏಪ್ರಿಲ್ 4ಕ್ಕೆ 74 ವರ್ಷ ತುಂಬಿದೆ. ನ್ಯಾಟೋ ಒಕ್ಕೂಟದ ವಾರ್ಷಿಕೋತ್ಸವದ ದಿನವೇ ಫಿನ್‌ಲ್ಯಾಂಡ್ 31ನೇ ಸದಸ್ಯ ರಾಷ್ಟ್ರವಾಗಿ ಎಂಟ್ರಿಕೊಟ್ಟಿದೆ. ಒಂದೆಡೆ ಉಕ್ರೇನ್ ಮತ್ತು ರಷ್ಯಾ ನಡುವೆ ಘೋರ ಯುದ್ಧ ನಡೆಯುವಾಗಲೇ ತನ್ನ ನಿಲುವು ಬದಲಿಸಿಕೊಂಡು ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳ ಜೊತೆ ಫಿನ್‌ಲ್ಯಾಂಡ್ ಕೈಜೋಡಿಸಿರುವುದು ದ್ವೇಷದ ಜ್ವಾಲೆಗೆ ಪೆಟ್ರೋಲ್ ಸುರಿದಂತಾಗಿದೆ.
ರಷ್ಯಾ ಎಚ್ಚರಿಕೆ: ತನ್ನ ಪಕ್ಕದ ದೇಶವೊಂದು ಶತ್ರು ಪಡೆಯ ಜೊತೆ ಕೈಜೋಡಿಸಿರುವುದು ರಷ್ಯಾಗೆ ಸಹಜವಾಗಿ ಕೋಪ ತರಿಸಿದೆ. ಫಿನ್‌ಲ್ಯಾಂಡ್ ನ್ಯಾಟೋ ಪಡೆ ಸೇರಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಸ್ಕೋ, ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದಿದೆ. ಈ ಮೂಲಕ ಫಿನ್‌ಲ್ಯಾಂಡ್ ನ್ಯಾಟೋ ಒಕ್ಕೂಟ ಸೇರಿರುವ ಬಗ್ಗೆ ಪರೋಕ್ಷವಾಗಿ ಖಡಕ್ ಎಚ್ಚರಿಕೆ ನೀಡಿದೆ ಪುಟಿನ್ ಆಡಳಿತ.
ಈ ಎಲ್ಲಾ ಬೆಳವಣಿಗೆಗಳನ್ನು ಅಳೆದು ತೂಗಿ ಹೇಳುವುದಾದರೆ ಅಕಸ್ಮಾತ್ ಮತ್ತೊಂದು ಮಹಾಯುದ್ಧ ಜಗತ್ತಿನಲ್ಲಿ ನಡೆದರೆ ಅದು ಕೂಡ ಯುರೋಪ್ ನೆಲದಿಂದಲೇ ಆರಂಭವಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಅತ್ತ ರಷ್ಯಾ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಏಷ್ಯಾ ದೇಶಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಮತ್ತೊಂದು ಕಡೆ ಅಮೆರಿಕ ಕೂಡ ರಷ್ಯಾ ಅಕ್ಕಪಕ್ಕದ ರಾಷ್ಟ್ರಗಳಿಗೆ ಗಾಳ ಹಾಕಿ ಸವಾಲು ಎಸೆಯುತ್ತಿದೆ. ಇದೆಲ್ಲಾ 3ನೇ ಮಹಾಯುದ್ಧದ ವಿಷ ಬೀಜಕ್ಕೆ ನೀರು ಎರೆಯುತ್ತಿರುವುದು ಸುಳ್ಳಲ್ಲ.












Click it and Unblock the Notifications