ತಮ್ಮ ಬುಡಕ್ಕೆ ತಾವೇ ಬಾಂಬ್ ಇಟ್ಟುಕೊಂಡ ಹಮಾಸ್ ಉಗ್ರರು!
ಜಗತ್ತಿನ ನೆಮ್ಮದಿ ಕೆಡಿಸಿರುವ ಇಸ್ರೇಲ್ & ಹಮಾಸ್ ಉಗ್ರರ ನಡುವಿನ ಯುದ್ಧವು ಸೈಲೆಂಟ್ ಆಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ಮಧ್ಯೆ ಇಸ್ರೇಲ್ ಸೇನೆ ಕೂಡ ತನ್ನ ಶತ್ರುಗಳಿಗೆ ಬುದ್ಧಿ ಕಲಿಸಲು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುತ್ತಿದೆ. ಆದರೆ ಇಸ್ರೇಲ್ ಹೀಗೆ ಹಮಾಸ್ ಉಗ್ರರ ಮೇಲೆ ದಾಳಿ ಮಾಡುವಾಗ ಅಮಾಯಕರ ಜೀವ ತೆಗೆಯುತ್ತಿದೆ ಎಂಬ ಆರೋಪಗಳ ನಡುವೆ, ಹಮಾಸ್ ನಾಯಕರು ತಮ್ಮ ಬುಡಕ್ಕೆ ತಾವೇ ಬಾಂಬ್ ಇಟ್ಟುಕೊಂಡಿದ್ದಾರೆ.
ಹೌದು, ಇಸ್ರೇಲ್ ವಿರುದ್ಧ ತಾವೇ ಮೊದಲು ದಾಳಿ ಮಾಡಿ ಈಗ ಇಸ್ರೇಲ್ ಸೇನೆ ಕೈಯಲ್ಲಿ ನರಳುತ್ತಿರುವ ಹಮಾಸ್ ಉಗ್ರರು ಆಘಾತಕಾರಿ ಮಾಹಿತಿ ನೀಡಿದ್ದಾರೆ. ಗಾಜಾಪಟ್ಟಿ ಪೂರ್ತಿ, ಸುರಂಗ ಮಾರ್ಗಗಳನ್ನು ಕಟ್ಟಿಕೊಂಡು ಹೋರಾಡುತ್ತಿರುವ ಸತ್ಯ ಒಪ್ಪಿಕೊಂಡಿದ್ದಾರೆ. ಆದ್ರೆ ಹೀಗೆ ತಾವು ಕಟ್ಟಿರುವ ಸುರಂಗ ಮಾರ್ಗಗಳು ಯಾಕೆ? ಯಾರಿಗೆ? ಅನ್ನೋದನ್ನು ಕೂಡ ಈ ಸಮಯದಲ್ಲಿ ಹಮಾಸ್ ನಾಯಕರು ಬಾಯಿಬಿಟ್ಟಿದ್ದು, ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಮತ್ತೆ ಕಿಚ್ಚು ಹೊತ್ತಿಸಿದೆ.

ಸುರಂಗ ಇರುವುದು ಉಗ್ರರಿಗೆ ಮಾತ್ರ!
ಅಷ್ಟಕ್ಕೂ ಇಸ್ರೇಲ್ ವಿರುದ್ಧ ಹೋರಾಡಲು ಹಮಾಸ್ ಉಗ್ರರು ಹಲವು ವರ್ಷದಿಂದ ಭಾರಿ ತಯಾರಿ ನಡೆಸಿದ್ದಂತೆ ಕಾಣುತ್ತಿದೆ. ಹೀಗಾಗಿಯೇ ಬಲಶಾಲಿ ಸುರಂಗ ಮಾರ್ಗಗಳ ಮೂಲಕ ದಾಳಿ ಮಾಡ್ತಿದ್ದಾರೆ ಹಮಾಸ್ ಉಗ್ರರು. ಗಾಜಾಪಟ್ಟಿ ನಗರದ ಉತ್ತರ ಭಾಗದಲ್ಲಿ ಹಮಾಸ್ ಉಗ್ರರು ನೂರಾರು ಕಿಲೋ ಮೀಟರ್ ಸುರಂಗ ಮಾರ್ಗ ನಿರ್ಮಿಸಿದ್ದು, ಇಸ್ರೇಲ್ ವಿರುದ್ಧದ ದಾಳಿಗೆ ಈ ಸುರಂಗಗಳನ್ನ ಬಳಸುತ್ತಿರುವ ಆರೋಪ ಕೇಳಿಬಂದಿತ್ತು. ಇದೀಗ ಖುದ್ದು ಉಗ್ರ ಪಡೆಯ ನಾಯಕರು ಈ ಮಾತನ್ನ ಒಪ್ಪಿಕೊಂಡಿದ್ದಾರೆ. ಆದ್ರೆ ಸುರಂಗ ಮಾರ್ಗ ಇರುವುದು ಉಗ್ರರಿಗೆ ಮಾತ್ರ, ಸಾಮಾನ್ಯ ಜನರಿಗೆ ಅಲ್ಲ ಅಂತಾ ಹೇಳಿರುವುದು ವಿವಾದದ ಕಿಡಿಯನ್ನು ಹೊತ್ತಿಸಿದೆ.
ಸಾಮಾನ್ಯ ಜನರ ಜೀವಕ್ಕೆ ಬೆಲೆ ಇಲ್ವಾ?
ಹಮಾಸ್ ಉಗ್ರರ ಮುಖಂಡ, ಮೂಸಾ ಅಬು ಮರ್ಝೌಕ್ ರಷ್ಯಾ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಗಾಜಾಪಟ್ಟಿ ಒಳಗೆ ಇರುವ ಸುರಂಗ, ಕೇವಲ ಹೋರಾಟಗಾರರಿಗೆ ಮಾತ್ರ ಅಂತಾ ಹೇಳಿದ್ದಾನೆ. ಹೋರಾಟಗಾರರು ಅಂದ್ರೆ ಅದು ಹಮಾಸ್ ಉಗ್ರರು. ಆದರೆ ಹಮಾಸ್ ಉಗ್ರರನ್ನ ಬಿಟ್ಟು ಸಾಮಾನ್ಯ ಜನರ ರಕ್ಷಣೆಗೆ ಸುರಂಗ ಮಾರ್ಗ ಬಳಸಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದಾನೆ ಮರ್ಝೌಕ್. ಇದು ಸಾಲದು ಎಂಬಂತೆ ಗಾಜಾಪಟ್ಟಿ ಜನರ ರಕ್ಷಣೆ ವಿಶ್ವಸಂಸ್ಥೆ ಮತ್ತು ಇಸ್ರೇಲ್‌ನ ಹೊಣೆಯಾಗಿದೆ ಅಂತಾ ಮೂಸಾ ಅಬು ಮರ್ಝೌಕ್ ಹೇಳಿರುವುದು ಸಂಚಲನ ಸೃಷ್ಟಿಮಾಡಿದೆ.
ಕ್ಷಣಕ್ಷಣಕ್ಕೂ ಏರುತ್ತಿದೆ ಸಾವಿನ ಸಂಖ್ಯೆ
ಹಮಾಸ್ ಉಗ್ರರ ವಿರುದ್ಧದ ಕೋಪಕ್ಕೆ ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದೆ. ಅದ್ರಲ್ಲೂ ಉತ್ತರ ಗಾಜಾದಲ್ಲಿ ರಕ್ತದ ಕೋಡಿಯೇ ಹರಿಯುತ್ತಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿದ್ದಾಗಲೇ, ಪ್ಯಾಲೆಸ್ತೀನ್ ಪರ 8,306 ಜನ ಈವರೆಗೂ ಮೃತಪಟ್ಟಿದ್ದಾರೆ. ಇಸ್ರೇಲ್ ಕಡೆ ಸಾವಿನ ಸಂಖ್ಯೆ 1400 ದಾಟಿದೆ. ಕೇವಲ 3 ವಾರದ ಹಿಂದೆ ಶುರುವಾದ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವಿನ ಯುದ್ಧ ಹತ್ತಿರ ಹತ್ತಿರ 10 ಸಾವಿರ ಜನರ ಜೀವ ಬಲಿ ಪಡೆದಿದೆ. ಇಷ್ಟಾದರೂ ಇಸ್ರೇಲ್ ತನ್ನ ದಾಳಿ ತೀವ್ರಗೊಳಿಸಿದ್ದು ಹಮಾಸ್ ಉಗ್ರರ ಸುರಂಗ ಮಾರ್ಗಗಳನ್ನು ಇಂಚಿಂಚಾಗಿ ನಾಶ ಮಾಡಲು ಮುಂದಾಗಿದೆ.

ಹೀಗೆ ತಮ್ಮ ಸುರಂಗ ಲೀಲೆಗಳ ಬಗ್ಗೆ ಹಮಾಸ್ ಮುಖಂಡರು ಬಾಯಿಬಿಟ್ಟಿದ್ದು, ಮುಂದೆ ಇದು ದೊಡ್ಡ ತಿಕ್ಕಾಟಕ್ಕೂ ವೇದಿಕೆ ಒದಗಿಸುವ ಸಾಧ್ಯತೆ ಇದೆ. ಅಲ್ಲದೆ ಇಸ್ರೇಲ್ ಸೇನೆಯು ಹಮಾಸ್ ಮುಖಂಡನ ಮಾತನ್ನ ಮುಂದೆ ಇಟ್ಟುಕೊಂಡು, ಉಗ್ರರ ವಿರುದ್ಧದ ಈ ಯುದ್ಧ ಮತ್ತಷ್ಟು ಭೀಕರಗೊಳಿಸುವ ವಾತಾವರಣ ಸೃಷ್ಟಿಯಾಗಿದೆ. ಹೀಗೆ ಹಮಾಸ್ ಉಗ್ರರು ತಾವೇ ತೋಡಿದ ಬಲೆಗೆ ತಾವೇ ಬಿದ್ದಿದ್ದು, ಯುದ್ಧದ ಭವಿಷ್ಯ ಏನಾಗುತ್ತೆ? ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications