ಫುಟ್ಬಾಲ್ ವಿಶ್ವಕಪ್ : ಬಲಿಷ್ಠ ಬ್ರೆಜಿಲ್ ಶುಭಾರಂಭ
ಸಾವೊ ಪಾಲೋ, ಜೂ.13: ಫೀಫಾ ವಿಶ್ವಕಪ್ ಫುಟ್ಬಾಲ್‌ನ ಉದ್ಘಾಟನಾ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಅತಿಥೇಯ ಬ್ರೆಜಿಲ್ ತಂಡ ಗುರುವಾರ ಮಧ್ಯರಾತ್ರಿ ಕ್ರೊವೇಷಿಯಾ ತಂಡವನ್ನು 3-1 ಅಂತರದ ಗೋಲುಗಳಿಂದ ಬಗ್ಗು ಬಡಿದು ಶುಭಾರಂಭ ಮಾಡಿದೆ. ಸ್ಟಾರ್ ಆಟಗಾರ ನೇಮಾರ್ ಎರಡು ಗೋಲು ಹಾಗೂ ಆಸ್ಕರ್ ಒಂದು ಗೋಲು ಬಾರಿಸಿದರೆ, ಮಾರ್ಸೆಲೊ ಹೊಡೆದ ಓನ್ ಗೋಲು ಕ್ರೊವೇಷಿಯಾಗೆ ಲಾಭ ತರಲಿಲ್ಲ.
ಅರೆನಾ ಸಾವೊ ಪಾಲೋ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಪಂದ್ಯ 11ನೇ ನಿಮಿಷಕ್ಕೆ ಬ್ರೆಜಿಲ್ಲಿನ ಮಾರ್ಸೆಲೊ ಚೆಂಡು ತಡೆಯುವ ಯತ್ನದಲ್ಲಿ ಸೆಲ್ಫ್ ಗೋಲು ಹೊಡೆದು ಖಳ ನಾಯಕನ ಪಟ್ಟ ಹೊತ್ತುಕೊಂಡರು. ವಿಶ್ವಕಪ್ ಇತಿಹಾಸದಲ್ಲೇ ಬ್ರೆಜಿಲ್ ಆಟಗಾರ ಹೊಡೆದ ಪ್ರಪ್ರಥಮ ಓನ್ ಗೋಲ್ ಇದಾಗಿತ್ತು. ಇದಾದ ಬಳಿಕ ನೇಮಾರ್ ಟೂರ್ನಿಯ ಮೊದಲ ಹಳದಿ ಕಾರ್ಡ್ ಪಡೆದ ಆಟಗಾರ ಎನಿಸಿದರು.

ಮಧ್ಯಂತರ ವೇಳೆಗೆ ಎರಡು ಕಡೆ ಆಟಗಾರರು ಚಾಕಚಕ್ಯತೆ ಮೆರೆದು ಪರಸ್ಪರ 1-1 ಅಂತರ ಕಾಯ್ದುಕೊಂಡಿದ್ದವು. ಬ್ರೆಜಿಲ್ ಶೇ 64 ರಷ್ಟು ಹೊತ್ತು ಚೆಂಡನ್ನು ತನ್ನ ಬಳಿ ಇರಿಸಿಕೊಂಡು ಕ್ರೊವೇಷಿಯಾಗೆ ಅವಕಾಶ ತಪ್ಪಿಸಿತ್ತು. 70ನೇ ನಿಮಿಷದಲ್ಲಿ ಸಿಕ್ಕ ವಿವಾದಿತ ಪೆನಾಲ್ಟಿಯನ್ನು ನೇಮಾರ್ ಗೋಲಾಗಿಸುವಲ್ಲಿ ಯಶಸ್ವಿಯಾದರು.
ನಂತರ ಬ್ರೆಜಿಲ್ಲಿನ ಆಸ್ಕರ್ ಕೊನೆ ಗಳಿಗೆಯಲ್ಲಿ ಮತ್ತೊಂದು ಗೋಲು ಬಾರಿಸಿ 3-1 ಅಂತರದ ಗೆಲುವು ತಂದುಕೊಟ್ಟರು. 1975ರಿಂದ ಬ್ರೆಜಿಲ್ ತನ್ನ ನೆಲದಲ್ಲಿ ಸೋಲು ಕಂಡಿಲ್ಲ. ಕಳೆದ ವಿಶ್ವಕಪ್ ಪಂದ್ಯಗಳಲ್ಲೂ ಆರಂಭಿಕ ಪಂದ್ಯವನ್ನು ಅತಿಥೇಯರು ಸೋತ ಉದಾಹರಣೆ ಇಲ್ಲ.
ಪಂದ್ಯದ ಮುಖ್ಯಾಂಶಗಳು:
ಗೋಲುಗಳು: ಮಾರ್ಸೆಲೋ(OG) 11ನೇ ನಿಮಿಷ, ನೇಮಾರ್ 29ನೇ ನಿಮಿಷ, ನೇಮಾರ್(P) 71ನೇ ನಿಮಿಷ, ಆಸ್ಕರ್ 90+1 ನಿಮಿಷ
ಗೋಲಿನ ಮೇಲೆ ಶಾಟ್ಸ್ ಬ್ರೆಜಿಲ್ 14, ಕ್ರೊವೇಷಿಯಾ 10
ಫೌಲ್: ಬ್ರೆಜಿಲ್ 5, ಕ್ರೊವೇಷಿಯಾ 21
ಚೆಂಡು ಹೊಂದಿದ್ದು : ಬ್ರೆಜಿಲ್ 59%, ಕ್ರೊವೇಷಿಯಾ 41%
ಕಾರ್ನರ್ಸ್ : ಬ್ರೆಜಿಲ್ 7, ಕ್ರೊವೇಷಿಯಾ 3
ಹಳದಿ ಕಾರ್ಡ್ : ಬ್ರೆಜಿಲ್ ಹಾಗೂ ಕ್ರೊವೇಷಿಯಾ ತಲಾ 2
ಪಂದ್ಯದ ಸ್ಟಾರ್ಸ್ : ಬ್ರೆಜಿಲ್ ಪರ ನೇಮಾರ್, ಆಸ್ಕರ್, ಅಲ್ವೇಸ್, ಕ್ರೊವೇಷಿಯಾ ಪರ ಓಲಿಕ್,ಕೊವಸಿಕ್
ಡಲ್ ಸ್ಟಾರ್ಸ್: ಬ್ರೆಜಿಲ್ಲಿನ ಹಲ್ಕ್, ಫ್ರೆಡ್, ಕ್ರೊವೇಷಿಯಾದ ವುಕೊಜೆವಿಕ್, ಮೊಡ್ರಿಕ್












Click it and Unblock the Notifications