ಮಗಳ ಮೇಲೆ ಸಾಮೂಹಿಕ ಅತ್ಯಾಚಾರ, ಆತ್ಮಹತ್ಯೆ ಯತ್ನಿಸಿದ ಅಪ್ಪ!
ಬಿಲ್ವಾರ: ಮಕ್ಕಳ ಸಾವನ್ನು ಕಣ್ಣ ಮುಂದೆ ನೋಡುವ ನೋವು ಹೆತ್ತವರಿಗೆ ಮಾತ್ರ ಅರ್ಥ ಆಗುತ್ತೆ. ಅಪ್ರಾಪ್ತರು ಅಂತಾನು ನೋಡದೆ ರೇಪ್ ಮಾಡಿದ ಕಟುಕರಿಗೆ ಹೆತ್ತವರ ಈ ಕಷ್ಟ ಎಲ್ಲಿ ಅರ್ಥವಾದೀತು? ಹೌದು ಸಾಮೂಹಿಕ ಅತ್ಯಾಚಾರದಿಂದ ಹತ್ಯೆಯಾಗಿದ್ದ 14 ವರ್ಷದ ಬಾಲಕಿ ತಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಗಳ ಸಾವಿನ ನೋವು ತಾಳದೇ ಪುತ್ರಿಯ ಶವಸಂಸ್ಕಾರದ ವೇಳೆ ತಂದೆ ಚಿತೆಗೆ ಹಾರಲು ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ಬಿಲ್ವಾರದಲ್ಲಿ ನಡೆದಿರುವ ಈ ಘಟನೆ ಇದೀಗ ದೇಶಾದ್ಯಂತ ಸದ್ದು ಮಾಡ್ತಿದೆ. ಆಗಸ್ಟ್ 2ರಂದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಕಲ್ಲಿದ್ದಲು ಕುಲುಮೆಗೆ ಹಾಕಿ ಜೀವಂತವಾಗಿ ಸುಡಲಾಗಿತ್ತು. ಸುಟ್ಟು ಕರಕಲಾದ ದೇಹ ಕಲ್ಲಿದ್ದಲು ಕುಲುಮೆ ಸಮೀಪ ಪತ್ತೆಯಾಗಿತ್ತು. ಇಂದು ಮೃತ ಬಾಲಕಿಯ ಅಂತ್ಯಕ್ರಿಯೆ ನಡೆಯುತ್ತಿತ್ತು. ಆದರೆ 14 ವರ್ಷ ವಯಸ್ಸಿನ ಮಗಳ ದೇಹ ಚಿತೆಯಲ್ಲಿರುವುದನ್ನ ನೋಡಿದ ಬಾಲಕಿ ತಂದೆ ದಿಢೀರ್ ಅದೇ ಚಿತೆಗೆ ಹಾರಲು ಯತ್ನಿಸಿದ್ದಾರೆ. ಕೂಡಲೇ ಸ್ಥಳದಲ್ಲಿ ಇದ್ದವರು ತಂದೆಯನ್ನ ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಸುಗಳ ಮೇಯಿಸಲು ಹೋಗಿದ್ದ ಬಾಲಕಿ..
ಬಾಲಕಿ ಮೇಲೆ ನಡೆದಿದ್ದ ಈ ಕೃತ್ಯ ದೇಶಾದ್ಯಂತ ಆಕ್ರೋಶದ ಅಲೆ ಎಬ್ಬಿಸಿದೆ. ಅದರಲ್ಲೂ ಬಾಲಕಿಯನ್ನು ಕೊಲೆ ಮಾಡಿ ನಂತರ ಕಲ್ಲಿದ್ದಲು ಕುಲುಮೆಗೆ ಹಾಕಿ ಸುಟ್ಟ ವಿಚಾರದ ಕುರಿತು ಜನರು ಗರಂ ಆಗಿದ್ದಾರೆ. ಗ್ರಾಮದ ಜನ ಆಕೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ದೂರಿದ್ದರು. ಇತ್ತ ಬಾಲಕಿ ನಾಪತ್ತೆಯಾದ ಕಾರಣ ಮನೆಯವರು ಹುಡುಕಾಟ ನಡೆಸಿ, ಮಗಳನ್ನು ಪತ್ತೆ ಮಾಡಿದಾಗ ಅರ್ಧ ಸುಟ್ಟ ಬಾಲಕಿಯ ಶವ ಪತ್ತೆಯಾಗಿತ್ತು. ಹೀಗೆ ಹಸುಗಳ ಮೇಯಿಸಲು ಹೋಗಿದ್ದ ವೇಳೆ ಬಾಲಕಿ ನಾಪತ್ತೆಯಾಗಿ ಶವವಾಗಿ ಪತ್ತೆಯಾಗಿದ್ದಳು. ದೇಶದ ಮೂಲೆ ಮೂಲೆಯಲ್ಲೂ ಈ ಘಟನೆ ಸಾಕಷ್ಟು ಸದ್ದು ಮಾಡಿತ್ತು.

ಆರೋಪಿಗಳಿಗೆ ಗಲ್ಲು ಶಿಕ್ಷೆ ಪಕ್ಕಾ?
ಅತ್ಯಾಚಾರ ಆರೋಪಿಗಳು ಸಾಕ್ಷ್ಯ ನಾಶ ಮಾಡಲು ಬಾಲಕಿಯ ದೇಹದ ಕೆಲ ಭಾಗಗಳನ್ನ ಕೆರೆಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನರ್ಧ ಭಾಗವನ್ನು ಕುಲುಮೆಯಲ್ಲಿ ಸುಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕ್ರೂರತೆಯಲ್ಲೇ ಕ್ರೂರ ಪ್ರಕರಣ, ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಕೊಡಿಸಲು, ಸೂಕ್ತ ತನಿಖೆ ನಡೆಸುವ ಭರವಸೆಯನ್ನು ಬಿಲ್ವಾರಾದ ಎಸ್‌ಪಿ ನೀಡಿದ್ದಾರೆ. ಇದೊಂದು ಅತ್ಯಂತ ಕ್ರೌರ್ಯದ ಪ್ರಕರಣ ಎಂದೂ ಅವರು ಹೇಳಿದ್ದಾರೆ. ಪ್ರಕರಣದಲ್ಲಿ ಒಟ್ಟು 10 ಜನ ಭಾಗಿಯಾಗಿದ್ದು, ಅದರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ ಎಂಬ ಸ್ಫೋಟಕ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಖಡಕ್ ಅಧಿಕಾರಿಗಳನ್ನು ಈ ಪ್ರಕರದ ತನಿಖೆಗೆ ನೇಮಿಸಲಾಗಿದೆ.

ಈಗ ಹೇಗಿದ್ದಾರೆ ಬಾಲಕಿಯ ತಂದೆ?
ಇನ್ನು ತನ್ನ ಮಗಳ ಸಾವಿನ ಬಳಿಕ ತಾನು ಕೂಡ ಚಿತೆಗೆ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ ತಂದೆಯ ಪರಿಸ್ಥಿತಿ ಸ್ಥಿರವಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಮಹಾತ್ಮ ಗಾಂಧಿ ಸರ್ಕಾರಿ ಆಸ್ಪತ್ರೆ ನಿರ್ದೇಶಕ ಡಾ. ಅರುಣ್ ಗೌರ್ ಮಾಹಿತಿ ನೀಡಿದ್ದಾರೆ. ಒಟ್ನಲ್ಲಿ ಅದೇನೆ ಇರಲಿ, ಇಡೀ ಮನುಷ್ಯ ಕುಲವೇ ತಲೆತಗ್ಗಿಸುವಂತೆ ಮಾಡಿರುವ ಇಂತಹ ಘಟನೆಯನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಮೂಲಕ ತಪ್ಪು ಮಾಡಿದ ರಾಕ್ಷಸರಿಗೆ ಕಠಿಣ ಶಿಕ್ಷೆ ನೀಡಬೇಕಿದೆ ಎಂದು ಜನ ಒತ್ತಾಯಿಸಿದ್ದಾರೆ.
ಹಾಗೇ ಸಾಮೂಹಿಕ ಅತ್ಯಾಚಾರ ಕೇಸ್ ಸಂಬಂಧ ಈವರೆಗೆ ಐವರನ್ನ ಬಂಧಿಸಲಾಗಿದೆ. ಹಾಗೇ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಅಡಿ ಕೋಟ್ರಾ ಪೊಲೀಸ್ ಠಾಣೆ ಎಎಸ್‌ಐ ಸಸ್ಪೆಂಡ್ ಆಗಿದ್ದಾರೆ. ಈಗ ಅಲ್ಲಿನ ರಾಜ್ಯ ಸರ್ಕಾರ ಕೂಡ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಲು ಆದೇಶಿಸಿದೆ. ಆದರೆ ತನಿಖೆ ನಂತರ ಯಾರೆಲ್ಲಾ ಕಂಬಿ ಎಣಿಸುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications