ಜಪಾನ್‌ನ ಮುಂದಿನ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಆಯ್ಕೆ
ಟೋಕಿಯೋ, ಸೆಪ್ಟೆಂಬರ್ 29: ಜಪಾನ್‌ನ ಮುಂದಿನ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅವರನ್ನು ಆಯ್ಕೆ ಮಾಡಲಾಗಿದೆ. ಆಡಳಿತ ನಾಯಕತ್ವದ ಚುನಾವಣೆಯಲ್ಲಿ ಬಂದ ಫಲಿತಾಂಶದ ಪ್ರಕಾರ ಫುಮಿಯೋ ಕಿಶಿಡಾ ಅವರು ಜಪಾನಿನ ಮುಂದಿನ ಪ್ರಧಾನಿಯಾಗಲಿದ್ದಾರೆ.
ಕಿಶಿಡಾ ಈ ಹಿಂದೆ ಎಲ್‌ಡಿಪಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು ಮತ್ತು 2012-17ರ ನಡುವೆ ವಿದೇಶಾಂಗ ಸಚಿವರಾಗಿದ್ದರು. ಈ ಸಮಯದಲ್ಲಿ ಅವರು ದಕ್ಷಿಣ ಕೊರಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅವರು 2016ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಹಿರೋಶಿಮಾಗೆ ಕರೆತರಲು ಸಹಾಯ ಮಾಡಿದ್ದರು.
ಅವರ ಅಧಿಕಾರಾವದಿಯಲ್ಲಿ ಸಲಿಂಗ ವಿವಾಹವನ್ನು ಬೆಂಬಲಿಸಿದರು ಹಾಗೂ ಸಂಸತ್ತಿನಲ್ಲಿ ಚರ್ಚಿಸಿದರು. ಅವರು ತನ್ನ ಅಜ್ಜ ಹಾಗೂ ತಂದೆಯ ದಾರಿಯನ್ನೇ ಅನುಸರಿಸಿ 1993ರಲ್ಲಿ ರಾಜಕೀಯ ಪ್ರವೇಶಿಸಿದರು. ಬ್ಯಾಂಕ್‌ನಲ್ಲಿ ಕೂಡ ಕರ್ತವ್ಯ ನಿರ್ವಹಿಸಿದ್ದರು.

ಹಲವು ವರ್ಷಗಳ ಕಾಲ ಅವರ ಕುಟುಂಬವು ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿತ್ತು, ಶಾಲೆಯಲ್ಲಿ ವರ್ಣಬೇಧ ನೀತಿಯನ್ನು ಅನುಭವಿಸಿದರು. ಅವರು ಶಾಲೆಯಲ್ಲಿ ಬೇಸ್‌ಬಾಲ್ ಆಟಗಾರರಾಗಿದ್ದರು, ಕಿಶಿಡಾ ಅವರು ಟೋಕಿಯೋ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರವೇಶ ಪಡೆಯಲು ಮೂರು ಬಾರಿ ವಿಫಲರಾದರು, ಇದು ಅವರ ಪೋಷಕರಿಗೆ ನಿರಾಸೆ ಉಂಟು ಮಾಡಿತ್ತು.ಅವರು ಕೊನೆಗೆ ಪ್ರಯತ್ನವನ್ನೇ ಬಿಟ್ಟು ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯ ವಸೇಡಾದಲ್ಲಿ ಅಧ್ಯಯನ ಮಾಡಿದರು.
2020ರಲ್ಲಿ ಯೋಶಿಹಿಡೆ ಸುಗಾ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಒಂದೇ ವರ್ಷದ ಅವಧಿಯಲ್ಲಿ ಮತ್ತೊಬ್ಬ ಪ್ರಧಾನಿಯನ್ನು ಆಯ್ಕೆ ಮಾಡಲಾಗಿದೆ.
ಅನಾರೋಗ್ಯದ ಕಾರಣ ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆ ನೀಡಿದ್ದ ಕಾರಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಯೋಶಿಹಿದೆ ಸುಗಾ ಅವರನ್ನು ನೂತನ ಪ್ರಧಾನಿಯಾಗಿ ಆಯ್ಕೆಮಾಡಲಾಗಿತ್ತು.
ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ 2020ರಲ್ಲಿ ಜಪಾನ್ ನಾಯಕತ್ವ ಬದಲಾವಣೆ ಆಗಿತ್ತು, ಇದೀಗ ಒಂದೇ ವರ್ಷದಲ್ಲಿ ಮತ್ತೆ ಪ್ರಧಾನಿ ಬದಲಾವಣೆಯಾಗುತ್ತಿದೆ.












Click it and Unblock the Notifications