Myanmar Earthquake: ಭೂಕಂಪನ ಪರಿಣಾಮ ಪತ್ತೆಯಾಯ್ತು ರಾಜಮನೆತನದ ಪರಂಪರೆ!
ಭೂಕಂಪನ ಸಂಭವಿಸಿದರೆ ಎಲ್ಲವೂ ಸರ್ವನಾಶವಾಗಿ ಹೋಗುತ್ತದೆ, ಜನರು ಜೀವ ಉಳಿಸಿ ಎಂದು ಬೇಡುವ ಪರಿಸ್ಥಿತಿ ಬರುತ್ತದೆ. ಇನ್ನು ಕಟ್ಟಡಗಳ ಕಥೆ ಸರ್ವನಾಶ ಆಗೋದು ಪಕ್ಕಾ. ಅದೇ ರೀತಿ ಮ್ಯಾನ್ಮಾರ್ ದೇಶದಲ್ಲೂ ಭೀಕರ ಭೂಕಂಪನ 3,600ಕ್ಕೂ ಹೆಚ್ಚು ಜನರ ಜೀವ ಬಲಿ ಪಡೆದಿದೆ. ಆದರೆ ಇದರ ಜೊತೆಯಲ್ಲೆ ಮತ್ತೊಂದು ಪವಾಡ ಕೂಡ ಮ್ಯಾನ್ಮಾರ್ ದೇಶದಲ್ಲಿ ಇದೀಗ ನಡೆದು ಹೋಗಿದೆ. ಹಾಗಾದರೆ ಭೂಕಂಪನದ ನಡುವೆ ಏನದು ಪವಾಡ? ಮುಂದೆ ಓದಿ.
ಇದೇ ಮಾರ್ಚ್ 28ರ ಶುಕ್ರವಾರ ಭೀಕರ ಭೂಕಂಪನ ಸಂಭವಿಸಿ, ಈಗಾಗಲೇ 3,600ಕ್ಕೂ ಹೆಚ್ಚು ಜನರು ಮ್ಯಾನ್ಮಾರ್ ದೇಶದಲ್ಲಿ ಬಲಿಯಾಗಿದ್ದಾರೆ. ಹೀಗಾಗಿ ಮ್ಯಾನ್ಮಾರ್ ದೇಶದಲ್ಲಿ ಈವರೆಗೂ ಭಾರತದ ಕಡೆಯಿಂದ ಸಾಕಷ್ಟು ಸಹಾಯ ಮಾಡಲಾಗಿದೆ. ಅಕ್ಕಿ, ಅಡುಗೆ ಎಣ್ಣೆ, ನೂಡಲ್ಸ್ ಸೇರಿದಂತೆ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡಲಾಗಿದೆ. ಭೂಕಂಪನದಿಂದ ನರಳಿರುವ ಜನ ಈಗಿನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲೇ ಪವಾಡ ಒಂದು ಮ್ಯಾನ್ಮಾರ್ ದೇಶದಲ್ಲಿ ನಡೆದು ಹೋಗಿದೆ. ಜನರು ಅದನ್ನ ಕಂಡು ಆಶ್ಚರ್ಯ ಪಡುವಂತೆ ಆಗಿದೆ.

ಕೊನ್ಬಾಂಗ್ ರಾಜವಂಶದ ವಾಸ್ತುಶಿಲ್ಪ ಪತ್ತೆ
ಮ್ಯಾನ್ಮಾರ್ ದೇಶ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯ ಭೂಕಂಪನ ಮಾರ್ಚ್ 28ರ ಶುಕ್ರವಾರ ಅಪ್ಪಳಿಸಿತ್ತು. ಮ್ಯಾನ್ಮಾರ್ ಮಧ್ಯ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆ ಭೂಕಂಪನ ಸಂಭವಿಸಿ ಘೋರ ದುರಂತ ನಡೆದು ಹೋಗಿತ್ತು. ಹೀಗೆ ಸಂಭವಿಸಿದ್ದ ಭೂಕಂಪನ ಇದೀಗ ಮ್ಯಾನ್ಮಾರ್‌ನ ರಾಜವಂಶಕ್ಕೆ ಸೇರಿದ ಪ್ರಾಚೀನ ಶಿಲ್ಪಕಲೆಯನ್ನು ಜಗತ್ತಿನ ಎದುರಲ್ಲಿ ತೆರೆದಿಟ್ಟಿದೆ. ಕೊನ್ಬಾಂಗ್ ರಾಜವಂಶಕ್ಕೆ ಸೇರಿದ ಪ್ರಾಚೀನ ಶಿಲ್ಪಕಲೆ ಅವಶೇಷ ಇದೀಗ ಟಾಡಾ-ಯು ಟೌನ್‌ಶಿಪ್‌ನಲ್ಲಿ ಪತ್ತೆಯಾಗಿದೆ.
2009ರಲ್ಲೇ ಮೊದಲ ಬಾರಿಗೆ ಪತ್ತೆ!
ಹೀಗೆ ಕೊನ್ಬಾಂಗ್ ರಾಜವಂಶಕ್ಕೆ ಸೇರಿದ ಪ್ರಾಚೀನ ಶಿಲ್ಪಕಲೆಯ ಅವಶೇಷ ಪತ್ತೆಯಾದ ಸುದ್ದಿ ತಿಳಿದ ನಂತರ, ಪುರಾತತ್ವ ಇಲಾಖೆ ಮತ್ತು ರಾಷ್ಟ್ರೀಯ ವಸ್ತುಸಂಗ್ರಹಾಲಯ ಅಧಿಕಾರಿಗಳು ತಕ್ಷಣ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊನ್ಬಾಂಗ್ ಯುಗದಲ್ಲಿ ರಾಜಮನೆತನದ ನೀರು ಸಂಗ್ರಹ ತಾಣ ಎನ್ನಲಾಗಿದೆ. ತಕ್ಷಣವೇ ಈ ಪ್ರದೇಶವನ್ನು ರಕ್ಷಣೆ ಮಾಡಿದ್ದಾರೆ ಪುರಾತತ್ವ ಇಲಾಖೆ ಮತ್ತು ರಾಷ್ಟ್ರೀಯ ವಸ್ತುಸಂಗ್ರಹಾಲಯದ ಅಧಿಕಾರಿಗಳು.
ತುಂಬಾ ವಿಶಿಷ್ಟವಾದ ಈ ರಚನೆ ಗಮನ ಸೆಳೆದಿದ್ದು, ಹೀಗಾಗಿ ಹೆಚ್ಚಿನ ಅಧ್ಯಯನಕ್ಕೆ ಆದೇಶ ನೀಡಲಾಗಿದೆ. 2009ರ ಆರಂಭದಲ್ಲಿಯೇ ಸ್ಥಳೀಯರು ಇಟ್ಟಿಗೆ ತಯಾರಿಕೆ ಮಾಡುವಾಗ ಕೆಲವು ವಿಶಿಷ್ಟವಾದ ವಸ್ತುಗಳ ಗುರುತನ್ನು ಪತ್ತೆ ಹಚ್ಚಿದ್ದರಂತೆ. ಆ ಸಮಯದಲ್ಲಿ ಹೆಚ್ಚಿನ ಆದ್ಯತೆ ಸಿಗದ ಹಿನ್ನೆಲೆ ಮಾಹಿತಿ ತಣ್ಣಗಾಗಿತ್ತು. ಆದರೆ ಇದೀಗ ದಿಢೀರ್ ಸಂಭವಿಸಿದ ಭೀಕರ ಭೂಕಂಪನ ಎಲ್ಲವನ್ನೂ ಹೊರಗೆ ಹಾಕಿದೆ.












Click it and Unblock the Notifications