New Zealand Earthquake: ನ್ಯೂಜಿಲೆಂಡ್‌ನಲ್ಲಿ ಭಾರೀ ಭೂಕಂಪ; ಅಪಾಯಕಾರಿ ಸುನಾಮಿ ಎಚ್ಚರಿಕೆ
ಇತ್ತೀಚಿನ ದಿನಗಳಲ್ಲಿ ಭೂಕಂಪದ ಕಂಪನಗಳು ನಿರಂತರವಾಗಿ ಅನುಭವವಾಗುತ್ತಿದ್ದು, ನ್ಯೂಜಿಲೆಂಡ್ ನ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ.
ನ್ಯೂಜಿಲೆಂಡ್, ಮಾರ್ಚ್16: ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭೂಕಂಪದ ಕಂಪನಗಳು ನಿರಂತರವಾಗಿ ಅನುಭವವಾಗುತ್ತಿದ್ದು, ಗುರುವಾರ ಬೆಳಗ್ಗೆ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ.
ನ್ಯೂಜಿಲೆಂಡ್ ನ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಗುರುವಾರ 22.1 ಕಿಲೋಮೀಟರ್ ಆಳದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ ಜಿ ಎಸ್ ) ಮಾಹಿತಿ ನೀಡಿದೆ.

ಅಮೆರಿಕದ ಜಿಯೋಲಾಜಿಕಲ್ ಸರ್ವೇಯು ಇದು ಪ್ರಭಲ ಭೂಕಂಪನ ಎಂದು ಹೇಳಿದ್ದು, ಸಮುದ್ರದಲ್ಲಿ ಭೂಕಂಪನ ಸಂಭವಿಸಿರುವುದರಿಂದ ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆ ಕೂಡ ನ್ಯೂಜಿಲೆಂಡ್‌ಗೆ ಸುನಾಮಿ ಅಪ್ಪಳಿಸಬಹುದು ಎಂದು ಎಚ್ಚರಿಕೆಯನ್ನು ನೀಡಿದೆ. ಆದರೆ, ಇದುವರೆಗೂ ಯಾವುದೇ ರೀತಿಯ ಹಾನಿ, ಸಾವು-ನೋವುಗಳಿಗೆ ಸಂಬಂಧಿಸಿದಂತೆ ವರದಿಯಾಗಿಲ್ಲ.
ಸುನಾಮಿ ಅಲೆಗಳು ಭೂಕಂಪನ ಕೇಂದ್ರದಿಂದ 300 ಕಿಮೀ ವ್ಯಾಪ್ತಿಯ ಕರಾವಳಿ ಪ್ರದೇಶಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಮೆರಿಕದ ಸುನಾಮಿ ಎಚ್ಚರಿಕೆ ವ್ಯವಸ್ಥೆ ಎಚ್ಚರಿಕೆ ನೀಡಿದೆ. ಇದರಿಂದ ನ್ಯೂಜೆಲೆಂಡ್, ಆಸ್ಟ್ರೇಲಿಯಾ ಹಾಗೂ ಫಿಲಿಫೈನ್ಸ್‌ಗಳಲ್ಲಿ ಸುನಾಮಿ ಆತಂಕ ಮನೆ ಮಾಡಿತ್ತು. ಅಮೆರಿಕದ ಏಜೆನ್ಸಿ ಪ್ರಕಾರ 0.3 ಮೀಟರ್‌ನಿಂದ 1 ಮೀಟರ್ ಎತ್ತರದ ಸುನಾಮಿ ಅಲೆಗಳು ಕೆರ್ಮಾಡಿಕ್ ದ್ವೀಪದ ಕೆಲವು ಕರಾವಳಿಗೆ ಅಪ್ಪಳಿಸಲಿದೆ ಎಂದಿತ್ತು.
ಅದಲ್ಲದೇ, 0.3 ಮೀಟರ್‌ಗಿಂತಲೂ ಕಡಿಮೆ ಎತ್ತರದ ಸುನಾಮಿ ಅಲೆಗಳು ಫಿಜಿ, ನ್ಯೂಜಿಲೆಂಡ್ ಹಾಗೂ ಟೊಂಗಾದ ಕೆಲವು ಕರಾವಳಿ ಪ್ರದೇಗಳಿಗೆ ಅಪ್ಪಳಿಸಲಿದೆ ಎಂದು ಅಮೆರಿಕದ ಸುನಾಮಿ ಎಚ್ಚರಿಕೆ ಸಂಸ್ಥೆ ಹೇಳಿತ್ತು. ಆದರೆ, ನ್ಯೂಜಿಲೆಂಡ್‌ನ ರಾಷ್ಟ್ರೀಯ ತುರ್ತು ನಿರ್ವಹಣೆ ಸಂಸ್ಥೆ ನ್ಯೂಜಿಲೆಂಡ್‌ಗೆ ಯಾವುದೇ ರೀತಿಯ ಸುನಾಮಿ ಆತಂಕ ಇಲ್ಲ. ದೇಶದ ಕರಾವಳಿಗೆ ಸುನಾಮಿ ಅಲೆಗಳು ಅಪ್ಪಳಿಸಲ್ಲ ಎಂದು ಹೇಳಿದೆ. ಅದಲ್ಲದೇ ಭೂಕಂಪನ ಪ್ರಬಲ ಹಾಗೂ ದೀರ್ಘವಾಗಿದ್ದರೆ, ಸುನಾಮಿ ಅಲೆಗಳು ದೇಶಕ್ಕೆ ಅಪ್ಪಳಿಸಬಹುದು. ನೆನಪಲ್ಲಿರಲಿ, ಅಪ್‌ಡೇಟ್‌ಗಳನ್ನು ನೀಡುತ್ತೇವೆ ಎಂದು ನ್ಯೂಜಿಲೆಂಡ್‌ನ ಸಂಸ್ಥೆ ಹೇಳಿದೆ.
ನ್ಯೂಜಿಲೆಂಡ್ ಪೆಸಿಫಿಕ್ ಪ್ಲೇಟ್ ಮತ್ತು ಆಸ್ಟ್ರೇಲಿಯನ್ ಪ್ಲೇಟ್‌ನ ಸಂಧಿಸುವ ಸ್ಥಳದಲ್ಲಿ ಬರುವುದರಿಂದ ಇಲ್ಲಿ ಭೂಕಂಪಗಳು ಹೆಚ್ಚು. ಪೆಸಿಫಿಕ್ ಪ್ಲೇಟ್ ಮತ್ತು ಆಸ್ಟ್ರೇಲಿಯನ್ ಪ್ಲೇಟ್‌ಗಳು ವಿಶ್ವದ ಎರಡು ದೊಡ್ಡ ಟೆಕ್ಟೋನಿಕ್ ಪ್ಲೇಟ್‌ಗಳಾಗಿದ್ದು, ಇವೆರಡು ಸಂಧಿಸುವ ಪ್ರದೇಶದಲ್ಲಿ ಭೂಕಂಪನಗಳು ಸಾಮಾನ್ಯವಾಗಿದೆ. ಅದಲ್ಲದೇ ಈ ಪ್ರದೇಶ ರಿಂಗ್ ಆಫ್ ಫೈರ್‌ಗೆ ಸಮೀಪದಲ್ಲಿರುವುದರಿಂದ ಅತ್ಯಂತ ಸಕ್ರಿಯವಾದ ಭೂಕಂಪಗಳ ಪ್ರದೇಶವಾಗಿದೆ. ವಾರ್ಷಿಕವಾಗಿ ನ್ಯೂಜಿಲೆಂಡ್ ಸಾವಿರಾರು ಭೂಕಂಪಗಳನ್ನು ಎದುರಿಸಸುತ್ತದೆ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ ಅಥವಾ ಫಿಲಿಪೈನ್ಸ್‌ನ ಉಳಿದ ಭಾಗಗಳಿಗೆ ಸುನಾಮಿ ಸಂಬಂವಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications