ಇರಾನ್ ಸರ್ವಾಧಿಕಾರಿಗೆ ಗೇಟ್ ಪಾಸ್ ಕೊಡಲು ಅಮೆರಿಕದ ಸಿದ್ಧತೆ, ಟ್ರಂಪ್ ಹೇಳಿಕೆಯಿಂದ ಕೆರಳಿದ ಕುತೂಹಲ | Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಇರಾನ್ ವಿಚಾರದಲ್ಲಿ ಕೆರಳಿ ಕೆಂಡವಾಗಿ, ಖಡಕ್ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಅಮೆರಿಕ ಹೇಳಿದ ಮಾತು ಕೇಳದೆ, ಪರಮಾಣು ಅಸ್ತ್ರ ವಿಚಾರದಲ್ಲಿ ಒಪ್ಪಂದ ಮಾಡಿಕೊಳ್ಳದೆ ಸೊಕ್ಕು ತೋರಿಸುತ್ತಿದೆ ಇರಾನ್ ಎಂಬುದು ಅಮೆರಿಕ ಹಾಗೂ ಇಸ್ರೇಲ್ ಆರೋಪ. ಇದೇ ಕಾರಣಕ್ಕೆ ಇರಾನ್ ಸಮೀಪಕ್ಕೆ ದೊಡ್ಡ ದೊಡ್ಡ ಯುದ್ಧ ನೌಕೆ ಸೇರಿದಂತೆ ಯುದ್ಧ ವಿಮಾನಗಳನ್ನು ಕಳುಹಿಸಿರುವ ಅಮೆರಿಕ ಪರೋಕ್ಷವಾಗಿ ಯುದ್ಧಕ್ಕೆ ಆಹ್ವಾನ ನೀಡಿತ್ತು. ಆದರೆ ಇದೀಗ ನೇರವಾಗಿ ಇರಾನ್ ಒಳಗೆ ನುಗ್ಗಲು ಮತ್ತು ಆ ಮೂಲಕ ಸೇನಾ ಕಾರ್ಯಾಚರಣೆ ಕೈಗೊಂಡು ಇರಾನ್ ನಾಯಕತ್ವದಲ್ಲೇ ಬದಲಾವಣೆ ತರಲು ಚಿಂತನೆ ನಡೆದಂತೆ ಕಾಣುತ್ತಿದೆ.
ಡೊನಾಲ್ಡ್ ಟ್ರಂಪ್ ಅವರು ಕಳೆದ ಕೆಲವು ದಿನಗಳಿಂದ ನೀಡುತ್ತಿರುವ ಹೇಳಿಕೆ ಇರಾನ್ ದೇಶದಲ್ಲಿನ ಭವಿಷ್ಯದ ನಾಯಕತ್ವ ಬದಲಾವಣೆ ಬಗ್ಗೆ ಮುನ್ಸೂಚನೆ ನೀಡುತ್ತಿದೆ. ಇರಾನ್ ದೇಶದಲ್ಲಿ ಅಧ್ಯಕ್ಷ ಕೇವಲ ಹೆಸರಿಗೆ ಎಂಬಂತೆ ಆಡಳಿತ ನಡೆಸುತ್ತಿದ್ದರೂ, ಇರಾನ್ ಸರ್ವಾಧಿಕಾರಿ ಖಮೇನಿ ಆಡಿಸಿದಂತೆ ಇರಾನ್ ಆಡಬೇಕಿದೆ ಎಂಬ ಆರೋಪ ಇದೆ. ಮತ್ತೊಂದು ಕಡೆ ಇರಾನ್ ದೇಶಕ್ಕೆ ಈ ಪರಿಸ್ಥಿತಿ ಬರಲು ಇದೇ ಇರಾನ್ ಸರ್ವಾಧಿಕಾರಿ ಖಮೇನಿ ಕಾರಣ ಎಂಬ ಆರೋಪವನ್ನು ಕೂಡ ಮಾಡಲಾಗುತ್ತಿದೆ. ಇರಾನ್ ಕೆಲವು ದಿನಗಳ ಹಿಂದೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಾಗೂ ಹಿಂಸಾಚಾರ ಎದುರಿಸಿತ್ತು. ಆಗಲೂ ಇರಾನ್ ಸರ್ವಾಧಿಕಾರಿ ಖಮೇನಿ ವಿರುದ್ಧ ಅಲ್ಲಿನ ಜನರು ಆಕ್ರೋಶ ಹೊರ ಹಾಕಿದ್ದರು. ಹೀಗಿದ್ದಾಗ ದಿಢೀರ್ ಇರಾನ್ ನಾಯಕತ್ವ ಬದಲಾವಣೆಗೆ ಅಮೆರಿಕ ಪ್ಲಾನ್ ಮಾಡಿದೆಯಾ? ಎಂಬ ಪ್ರಶ್ನೆ ಮೂಡಿದೆ.

ಖಮೇನಿ ಹೊರಗೆ ಹಾಕಲು ಅಮೆರಿಕ ಪ್ಲಾನ್?
ಇರಾನ್ ಒಂದೇ ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಪಾಲಿಗೆ ವಿಲನ್ ಆಗಿದ್ದು, ಇನ್ನುಳಿದ ದೇಶಗಳು ಅಮೆರಿಕ ಮತ್ತು ಇಸ್ರೇಲ್ ಮಾತು ಕೇಳುತ್ತವೆ. ಅದರಲ್ಲೂ ಇರಾನ್ ಸರ್ವಾಧಿಕಾರಿ ಖಮೇನಿ ಇರುವ ತನಕ ಕೂಡ ಅಮೆರಿಕ ಮತ್ತು ಇಸ್ರೇಲ್‌ಗೆ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ತಲೆನೋವು, ಎಂಬುದು ಈಗಾಗಲೇ ಅರ್ಥವಾಗಿದೆ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ಇರಾನ್ ನಾಯಕತ್ವಕ್ಕೆ ಕೈಹಾಕಬೇಕು ಎಂಬ ಚಿಂತನೆ ನಡೆದಿದ್ದು, ಅದನ್ನ ಇದೀಗ ಅಮೆರಿಕ ಕಾರ್ಯರೂಪಕ್ಕೆ ತರಲು ಹೊರಟಿದೆ ಎಂಬ ಸುದ್ದಿ ಹಬ್ಬಿದೆ. ಈ ಸುದ್ದಿ ಇದೀಗ ಮಧ್ಯಪ್ರಾಚ್ಯ ಭಾಗದಲ್ಲಿ ಸಂಚಲನ ಸೃಷ್ಟಿಸುವ ಜೊತೆ ಇನ್ನೊಂದು ಯುದ್ಧ ಭೀತಿಗೆ ಬಲ ತುಂಬಿದೆ.
ಪರಮಾಣು ಅಸ್ತ್ರ ಬಳಸುವ ಆತಂಕ
ಇರಾನ್ ಪರಮಾಣು ಕಾರ್ಯಕ್ರಮ ಶುರು ಮಾಡಿ ಹಲವು ವರ್ಷಗಳೇ ಕಳೆದು ಉರುಳಿದ್ದು, ಹೀಗಿದ್ದರೂ ಈವರೆಗೆ ಪರಮಾಣು ಬಾಂಬ್ ಸಿದ್ಧಪಡಿಸಿದ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ರಷ್ಯಾ & ಚೀನಾ ನಾಯಕರು ಮೊದಲಿನಿಂದ ಕೂಡ ಇರಾನ್ ಪರಮಾಣು ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅದರಲ್ಲೂ ರಷ್ಯಾ ಅಧ್ಯಕ್ಷ ಪುಟಿನ್ ನೇರವಾಗಿ ಇರಾನ್ ಸರ್ವಾಧಿಕಾರಿ ಖಮೇನಿ ಜೊತೆ ಸಭೆಗಳನ್ನ ಕೂಡ ನಡೆಸಿದ್ದಾರೆ ಎಂಬುದು ಇಲ್ಲಿ ಗಮನ ಸೆಳೆಯುವ ವಿಚಾರ.
ಹೀಗೆ ರಷ್ಯಾ ಮೂಲದ ಹಲವು ಪರಮಾಣು ವಿಜ್ಞಾನಿಗಳು ಈಗಲೂ ಇರಾನ್ ಪರಮಾಣು ಕಾರ್ಯಕ್ರಮ ಯಶಸ್ಸಿಗೆ ದುಡಿಯುತ್ತಿದ್ದಾರೆ. ಇದರ ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ಇರಾನ್ & ರಷ್ಯಾ ದೊಡ್ಡ ಪಾಲುದಾರ ದೇಶಗಳು. ಇದನ್ನೆಲ್ಲಾ ನೋಡುತ್ತಿದ್ದರೆ ಭವಿಷ್ಯದಲ್ಲಿ ಪರಮಾಣು ಅಸ್ತ್ರ ಬಳಕೆ ಆತಂಕ ಆವರಿಸಿದೆ. ಈ ಕಾರಣಕ್ಕೆ ನೇರ ನಾಯಕತ್ವ ಬದಲಾವಣೆಯ ಕಡೆಗೆ ದೊಡ್ಡಣ್ಣ ಚಿಂತನೆ ನಡೆಸಿದಂತೆ ಕಾಣುತ್ತಿದ್ದು, ಇರಾನ್ ಸುತ್ತಮುತ್ತಲ ದೇಶಗಳಲ್ಲೂ ಆತಂಕ ಕಾಡುತ್ತಿದೆ.












Click it and Unblock the Notifications