ಉರಿಯುವ ಬೆಂಕಿಗೆ ತುಪ್ಪ ಸುರಿಯೋದನ್ನ ಟ್ರಂಪ್ ನೋಡಿ ಕಲಿಯಬೇಕು!
ವಾಷಿಂಗ್ಟನ್: ತಾನು ಅಧ್ಯಕ್ಷನಾಗಿದ್ದಾಗ ಅಮೆರಿಕದ ಮಾನ, ಮರ್ಯಾದಿ ಹರಾಜು ಹಾಕಿದ್ದ ಯುಎಸ್‌ಎ (USA) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump) ಈಗ ಮತ್ತೆ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಅಮೆರಿಕದ ವಿರುದ್ಧ ಹೇಳಿಕೆ ನೀಡಿ, ಚೀನಾ (China) ಪರವಾಗಿ ಮಾತನಾಡಿದ್ದ ಫ್ರಾನ್ಸ್ (France) ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ವಿರುದ್ಧ ಟ್ರಂಪ್ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕದ ನ್ಯಾಯಾಲಯದಲ್ಲಿ ಅರೆಸ್ಟ್ ಆಗಿ, ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಟ್ರಂಪ್ ಮತ್ತಷ್ಟು ಅಲರ್ಟ್ ಆಗಿದ್ದಾರೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತಯಾರಿ ಆರಂಭಿಸಿರುವ ಟ್ರಂಪ್ ಟಿವಿ ಸಂದರ್ಶನ ಹಾಗೂ ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯುಸಿ. ಹೀಗಿರುವಾಗ ಖಾಸಗಿ ಟಿವಿ ವಾಹಿನಿಗೆ ಸಂದರ್ಶನ ನೀಡುವಾಗ ಫ್ರಾನ್ಸ್ ಅಧ್ಯಕ್ಷರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಟ್ರಂಪ್. ಈ ಮೂಲಕ ಮೊದಲೇ ಹಳಸಿದ್ದ ಅಮೆರಿಕ ಮತ್ತು ಫ್ರಾನ್ಸ್ ಸಂಬಂಧಕ್ಕೆ ಇನ್ನಷ್ಟು ಹುಳಿ ಹಿಂಡಿದ್ದಾರೆ ಟ್ರಂಪ್.

'ಅವನು ನನ್ನ ಆತ್ಮೀಯ ಸ್ನೇಹಿತ'
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಕುರಿತು ಡೊನಾಲ್ಡ್ ಟ್ರಂಪ್ ಮಾತನಾಡುತ್ತಾ, ಅವನು ನನ್ನ ಆತ್ಮೀಯ ಸ್ನೇಹಿತನಾಗಿದ್ದ ಆದರೆ ಈಗ ಚೀನಾ ಜೊತೆ ಸೇರಿದ್ದಾನೆ ಎಂದಿದ್ದಾರೆ. ಇಷ್ಟಕ್ಕೇ ಟ್ರಂಪ್ ಮಾತು ಮುಗಿದಿದ್ದರೆ ಏನೂ ಆಗುತ್ತಿರಲಿಲ್ಲ, ಆದರೆ ಫ್ರಾನ್ಸ್ ಅಧ್ಯಕ್ಷರ ಬಗ್ಗೆ ಬಳಸಬಾರದ ಪದಗಳ ಬಳಕೆ ಮಾಡಿ ಮತ್ತೊಮ್ಮೆ ಅಮೆರಿಕದ ಮಾನ ಹರಾಜು ಹಾಕಿದ್ದಾರೆ ಟ್ರಂಪ್. ಒಂದು ರೀತಿಯಲ್ಲಿ ಫ್ರಾನ್ಸ್ ಅಧ್ಯಕ್ಷ ಚೀನಾಗೆ ಬಕೆಟ್ ಹಿಡಿಯುತ್ತಿದ್ದಾರೆ ಎಂದಿದ್ದಾರೆ ಟ್ರಂಪ್. ಇದಕ್ಕೂ ಮಿಗಿಲಾದ ಕೆಟ್ಟ ಪದ ಬಳಕೆ ಮಾಡಿರುವ ಆರೋಪ ಟ್ರಂಪ್ ವಿರುದ್ಧ ಕೇಳಿಬಂದಿದೆ.
ಫ್ರಾನ್ಸ್ ಅಧ್ಯಕ್ಷ ಹೇಳಿದ್ದೇನು?
ಚೀನಾಗೆ ಭೇಟಿ ನೀಡಿ ವಾಪಸ್ ಬರುವಾಗ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ವಿಶೇಷ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಮಾತನಾಡಿದ್ದ ಇಮ್ಯಾನುಯೆಲ್ ಮ್ಯಾಕ್ರಾನ್, ಯುರೋಪ್ (Europe) ರಾಷ್ಟ್ರಗಳು ಅಮೆರಿಕದ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. ಹಾಗೇ ಮತ್ತೊಂದು ಕಡೆ ತೈವಾನ್ ವಿಚಾರದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ಚೀನಾ (China) ಮತ್ತು ಯುಎಸ್ ನಡುವೆ ತಲೆಹಾಕಬಾರದು ಎಂದು ಸಲಹೆ ನೀಡಿದ್ದರು. ಇದು ಅಮೆರಿಕದ ನಿದ್ದಗೆಡಿಸಿ, ಯುರೋಪ್ ಕೂಡ ದೊಡ್ಡಣ್ಣನ ಕೈಬಿಟ್ಟು ಹೋಗುವ ಭಯ ಶುರುವಾಗಿದೆ.

ಪರೋಕ್ಷ ಎಚ್ಚರಿಕೆ ನೀಡಿದ ಅಮೆರಿಕ?
ಫ್ರಾನ್ಸ್ ಅಧ್ಯಕ್ಷ ಅಮೆರಿಕದ ವಿರುದ್ಧ ಹೇಳಿಕೆ ನೀಡಿರುವುದು ವಾಷಿಂಗ್ಟನ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕಾರಣಕ್ಕೆ ನಮ್ಮ ಮತ್ತು ಫ್ರಾನ್ಸ್ ಸಂಬಂಧ ಗಟ್ಟಿಯಾಗಿದೆ ಎಂದಿದೆ ಅಮೆರಿಕ. ಆದರೆ ಈಗಿನ ಬೆಳವಣಿಗೆ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಮತ್ತು ಎರಡೂ ದೇಶಗಳ ಸ್ನೇಹದಲ್ಲಿ ಬಿರುಕು ಮೂಡುವ ನಿರೀಕ್ಷೆ ಇಲ್ಲ ಎಂದಿದ್ದಾನೆ ದೊಡ್ಡಣ್ಣ. ಈ ಮೂಲಕ ಫ್ರಾನ್ಸ್ ಅಧ್ಯಕ್ಷರ ಹೇಳಿಕೆ ವಿಶ್ವದ ದೊಡ್ಡಣ್ಣನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂಬುದು ಪಕ್ಕಾ ಆಗಿದ್ದು, ಟ್ರಂಪ್ ಈ ಜ್ವಾಲೆಗೆ ಪೆಟ್ರೋಲ್ ಸುರಿದಿದ್ದಾರೆ.
ಈವರೆಗೂ ಫ್ರಾನ್ಸ್ ತಮ್ಮ ದೇಶದ ಅಧ್ಯಕ್ಷನ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿಲ್ಲ. ಆದರೆ ಮುಂದೆ ಇದೇ ವಿಚಾರ ದೊಡ್ಡದಾಗಿ ಅಮೆರಿಕ ಮತ್ತು ಫ್ರಾನ್ಸ್ ಸಂಬಂಧ ಮುರಿದರೂ ಅಚ್ಚರಿ ಪಡಬೇಕಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾ-ಚೀನಾ ಅತ್ಯಾಪ್ತ ರಾಷ್ಟ್ರಗಳಾಗಿ ಗುರುತಿಸಿಕೊಳ್ಳುತ್ತಿವೆ. ಉಕ್ರೇನ್ ಯುದ್ಧದ ನಂತರ ನ್ಯಾಟೋ ಸದಸ್ಯ ರಾಷ್ಟ್ರಗಳು ರಷ್ಯಾ-ಚೀನಾದಿಂದ ದೂರ ಓಡುತ್ತಿವೆ. ಆದರೆ ಇದೇ ಹೊತ್ತಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ವಿಶೇಷ ನಿರ್ಧಾರ ಕೈಗೊಂಡು ಚೀನಾಗೆ ಭೇಟಿ ನೀಡಿದ್ದರು. ಇದೇ ನಿರ್ಧಾರ ಅಮೆರಿಕವನ್ನ ಈಗ ಕೆರಳಿಸಿಬಿಟ್ಟಿದೆ.
ಮತ್ತೊಮ್ಮೆ ಟ್ರಂಪ್ ಇರಲಾರದೆ ಅಮೆರಿಕದ ಸ್ವಾಭಿಮಾನಕ್ಕೆ ಇರುವೆ ಬಿಟ್ಟಿದ್ದಾರೆ. ಈಗಾಗಲೇ ಹಲವು ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಕ, ಯುರೋಪ್‌ನ ಶಕ್ತಿಶಾಲಿ ರಾಷ್ಟ್ರದ ಪ್ರಥಮ ಪ್ರಜೆಯನ್ನೇ ಎದುರು ಹಾಕಿಕೊಳ್ಳುವ ಸಾಹಸ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಅದರಲ್ಲೂ ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು ಇಂತಹ ಹೇಳಿಕೆ ನೀಡಿರುವ ಭಾರಿ ಸಂಚಲನ ಸೃಷ್ಟಿಸಿದೆ.












Click it and Unblock the Notifications