ಬಕೆಟ್ ಹಿಡಿದವರಿಗೆ ಕಾಲ ಎನ್ನುವುದನ್ನು ಸಾಬೀತು ಮಾಡಿದ ಡೊನಾಲ್ಡ್ ಟ್ರಂಪ್: ಎಲಾನ್ ಮಸ್ಕ್‌ಗೆ ಗೇಟ್‌ಪಾಸ್!
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಟ್ಟುಗಳು ಒಂದೆರಡಲ್ಲ. ಅಧಿಕಾರಕ್ಕೆ ಬಂದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿಕೊಂಡಿರುವುದೆಲ್ಲವೂ ಎಡವಟ್ಟುಗಳೇ. ವಿಶ್ವದ ವಿವಿಧ ದೇಶಗಳಿಗೆ ವಿಪರೀತ ತೆರಿಗೆ ವಿಧಿಸುವುದು - ಅನ್ಯ ದೇಶಗಳ ನಡುವೆ ಯುದ್ಧದ ವಿಚಾರದಲ್ಲಿ ಮೂಗು ತೂರಿಸುವ ಕೆಲಸವನ್ನು ಟ್ರಂಪ್ ಮಾಡುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಳ್ಳುತ್ತಿರುವ ಒಂದೊಂದು ನಿರ್ಧಾರವೂ ಅಮೆರಿಕಗೆ ತಿರುಗುಬಾಣವಾಗುತ್ತಿದೆ. ಅಲ್ಲದೇ ಅಮೆರಿಕವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ಆದರೆ, ಡೊನಾಲ್ಡ್ ಟ್ರಂಪ್ ಅವರು ಭಟ್ಟಂಗಿತನ ಹಾಗೂ ಬಕೆಟ್ ಹಿಡಿಯುವವರಿಗೇ ಮಣೆ ಹಾಕುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿರ್ದಶನ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹಾಗೂ ಡೊನಾಲ್ಡ್ ಟ್ರಂಪ್ ಅವರ ನಡುವಿನ ಸಂಘರ್ಷ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುವುದಕ್ಕೆ ಮುಖ್ಯ ಕಾರಣಗಳಲ್ಲಿ ಎಲಾನ್ ಮಸ್ಕ್ ಅವರು ಸಹ ಪ್ರಮುಖ ಕಾರಣಕರ್ತರು. ಭಾರೀ ಅನುದಾನ ಹಾಗೂ ಪ್ರಚಾರವನ್ನು ಮಸ್ಕ್ ಮಾಡಿದ್ದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ - ಎಲಾನ್ ಮಸ್ಕ್ ಮಾಡಿರುವ ಎಲ್ಲಾ ಸಹಾಯ ಹಾಗೂ ನೆರವುಗಳನ್ನು ಮರೆತಂತಿದೆ. ಅಲ್ಲದೆ ಮಸ್ಕ್ ವಿರುದ್ಧವೇ ಕತ್ತಿ ಮಸೆಯುತ್ತಿದ್ದು. ಟೆಸ್ಲಾಗೆ ಮಸಾಲೆ ರುಬ್ಬುವುದಕ್ಕೆ ಶುರುಮಾಡಿದ್ದಾರೆ. ಮಸ್ಕ್ ಅವರನ್ನು ಅಮೆರಿಕದಿಂದ ಗಡೀಪಾರು ಮಾಡುವ ಚಿಂತನೆಯ ಬಗ್ಗೆಯೂ ಡೊನಾಲ್ಡ್ ಟ್ರಂಪ್ ಅವರು ಮಾತನಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಅವರ ನಡುವೆ ಗಾಢವಾದ ಸ್ನೇಹವಿತ್ತು. ಆದರೆ, ಆ ಸ್ನೇಹ ಈಗ ದ್ವೇಷವಾಗಿ ಬದಲಾಗಿದೆ. ಇಷ್ಟಕ್ಕೂ ಇಬ್ಬರ ನಡುವೆ ಗುದ್ದಾಟಕ್ಕೆ ಕಾರಣವೇನು ಹಾಗೂ ಏನಿದು One Big Beautiful Bill ಅಂತ ನೋಡುತ್ತಾ ಹೋದರೆ. ಅಲ್ಲಿ ಟ್ರಂಪ್ ಅವರು ಬಕೆಟ್ ಹಿಡಿಯುವವರಿಗೇ ಮಣೆ ಹಾಕುತ್ತಿರುವುದು ಸಾಬೀತಾಗುತ್ತದೆ.

ಎಲಾನ್ ಮಸ್ಕ್ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ಯುಎಸ್ ಪ್ರಮುಖ ತೆರಿಗೆ ಮಸೂದೆ One Big Beautiful Bill ವಿಚಾರವಾಗಿ ವಾಕ್ಸಮರ ಮುಂದುವರಿದಿದೆ. ಇದರ ನಡುವೆ ಇದೇ ತರ ಮಾಡ್ತಿದ್ದರೆ ಟ್ರಂಪ್ ವಿರುದ್ಧವಾಗಿ ಹೊಸ ಪಕ್ಷ ಕಟ್ಟುವುದಾಗಿ ಎಲಾನ್ ಮಸ್ಕ್ ವಾರ್ನಿಂಗ್ ಸಹ ಮಾಡಿದ್ದಾರೆ. ಟ್ರಂಪ್ ಅವರು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆಯೇ ಮೂರು ವಿಚಾರಗಳ ಬಗ್ಗೆ ಮಾತನಾಡಿದ್ದರು. ಅದರಲ್ಲಿ ತೆರಿಗೆ ನೀತಿ ಹಾಗೂ ವಲಸೆ ನೀತಿ ವಿಚಾರಗಳು ಪ್ರಮುಖವಾಗಿವೆ. ಮತ್ತೊಂದು ಮೇಕ್ ಅಮೆರಿಕ ಗ್ರೇಟ್ ಎಗೇನ್ ಒಂದು. ವಲಸೆ ನೀತಿಯಲ್ಲಿ ಈಗಾಗಲೇ ಟ್ರಂಪ್ ಕೈಸುಟ್ಟುಕೊಂಡು ಆಗಿದೆ. ವಲಸೆ ನೀತಿಯ ಜಾರಿ ಹಾಗೂ ವಲಸೆ ವಿರೋಧಿಸಿ ಜನ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಕಾರುಗಳಿಗೆ ಬೆಂಕಿ ಹಚ್ಚಿದ್ದರು. ತೆರಿಗೆ ನೀತಿಯಲ್ಲೂ ವಿವಿಧ ದೇಶಗಳಿಂದ ಟ್ರಂಪ್ ಛೀಮಾರಿ ಹಾಕಿಸಿಕೊಂಡು ಆಗಿದೆ.
ಇಷ್ಟಾದರೂ ತೆರಿಗೆ ನೀತಿಯಲ್ಲಿ ಟ್ರಂಪ್ ಹಿಂದೆ ಸರಿದಿಲ್ಲ. ಬಿಗ್ ಬ್ಯೂಟಿಫುಲ್ ಬಿಲ್, ಸಮಗ್ರ ಖರ್ಚು ಮತ್ತು ತೆರಿಗೆ ಸುಧಾರಣಾ ಮಸೂದೆಗೆ ಮಸ್ಕ್ ಅವರು ಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿರೋಧದಿಂದ ಡೊನಾಲ್ಡ್ ಟ್ರಂಪ್ ಮತ್ತು ಎಲೋನ್ ಮಸ್ಕ್ ನಡುವೆ ಜಿದ್ದಾಜಿದ್ದಿ ಮೂಡಿದೆ. ಮಸ್ಕ್ ಅವರು, ಈ ಮಸೂದೆಯನ್ನು "ಹುಚ್ಚುತನ ಮತ್ತು ವಿನಾಶಕಾರಿ" ಎಂದು ಸಾರ್ವಜನಿಕವಾಗಿ ಖಂಡಿಸಿದ್ದಾರೆ. ಇದು ರಾಷ್ಟ್ರೀಯ ಸಾಲವನ್ನು ಹೆಚ್ಚಿಸುತ್ತದೆ ಮತ್ತು ಭವಿಷ್ಯದ ಕೈಗಾರಿಕೆಗಳಿಗೆ ಹಾನಿ ಮಾಡುತ್ತದೆ ಎಂದು ಹೇಳಿದ್ದಾರೆ.
ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನಂತಹ ತಮ್ಮ ಕಂಪನಿಗಳಿಗೆ ಸರ್ಕಾರಿ ಸಬ್ಸಿಡಿಗಳ ಮೇಲೆ ಮಸ್ಕ್ ಅವರ ಅವಲಂಬನೆಯನ್ನು ಟೀಕಿಸುವ ಮೂಲಕ ಟ್ರಂಪ್ ಸೇಡು ತೀರಿಸಿಕೊಂಡಿದ್ದಾರೆ. ಅಮೆರಿಕದ ಆರ್ಥಿಕ ಬೆಂಬಲವಿಲ್ಲದೆ ಮಸ್ಕ್ "ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಬೇಕಾಗಬಹುದು" ಎಂದು ಹೇಳಿದ್ದಾರೆ. ವೈಯಕ್ತಿಕ ವಾಕ್ಸಮರವು ದ್ವೇಷರೂಪಕ್ಕೆ ತಿರುಗಿದೆ. ಮಸ್ಕ್ ಅವರು ಮಾದಕವಸ್ತು ಬಳಕೆ ಮಾಡುತ್ತಿದ್ದರು ಎನ್ನುವ ಬಗ್ಗೆ (ಆರೋಪ ಮಾತ್ರ) ಮಾಹಿತಿಯನ್ನು ಪತ್ರಿಕೆಗಳಿಗೆ ಸೋರಿಕೆ ಮಾಡಿದ್ದಾಗಿ ಟ್ರಂಪ್ ಒಪ್ಪಿಕೊಂಡಿದ್ದಾರೆ. ಈ ನಡುವೆ ಈ ಮಸೂದೆ ಅಂಗೀಕಾರವಾದರೆ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಮಸ್ಕ್ ಬೆದರಿಕೆ ಹಾಕಿದ್ದಾರೆ. ಒಟ್ಟಾರೆ ಎಲಾನ್ ಮಸ್ಕ್ ಹಾಗೂ ಟ್ರಂಪ್ ನಡುವಿನ ಗುದ್ದಾಟವನ್ನು ಆಡಳಿತ ವರ್ಗ ಯಾವಾಗಲೂ ತಮ್ಮ ಮಾತು ಒಪ್ಪುವವರನ್ನು ಪಕ್ಕದಲ್ಲಿ ಇರಿಸಿಕೊಳ್ಳುತ್ತದೆ ಎನ್ನುವುದಕ್ಕೆ ಹೋಲಿಕೆ ಮಾಡಲಾಗಿದೆ.












Click it and Unblock the Notifications