Donald Trump: ಅಮೆರಿಕ ಜೊತೆಗೆ ವೆನಿಜುವೆಲಾ ತಿಕ್ಕಾಟ, ಟ್ರಂಪ್ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ
ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ದಕ್ಷಿಣ ಅಮೆರಿಕದ ದೇಶಗಳ ನಡುವೆ ತಿಕ್ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ನಂತರ ಇದು ಇನ್ನೂ ಹೆಚ್ಚಾಗಿದ್ದು, ವೆನಿಜುವೆಲಾ ಮೇಲೆ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಿದೆ. ಇಷ್ಟೆಲ್ಲದರ ನಡುವೆ ಕೂಡ ಅಮೆರಿಕ ಮಾತ್ರ ವೆನಿಜುವೆಲಾ ವಿಚಾರದಲ್ಲಿ ಕಿರಿಕ್ ಮಾಡುವುದು ನಿಲ್ಲಿಸಿಲ್ಲ. ಅಮೆರಿಕದ ಈ ರೀತಿಯ ವರ್ತನೆಗಳ ವಿರುದ್ಧ ಈಗ ವೆನಿಜುವೆಲಾ ಗರಂ ಆಗಿದ್ದು, ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.
ಅಮೆರಿಕದ ಮಿಲಿಟರಿ ಇತ್ತೀಚೆಗೆ ನೇರವಾಗಿ ವೆನಿಜುವೆಲಾ ಒಳಗೆ ನುಗ್ಗಿತ್ತು, ಆ ನಂತರ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿ ಅಧ್ಯಕ್ಷರನ್ನು ಪದಚ್ಯುತಗೊಳಿಸಿ ತನ್ನ ದೇಶಕ್ಕೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದೆ. ಇಷ್ಟೆಲ್ಲದರ ನಡುವೆ ವೆನಿಜುವೆಲಾ ಇದೀಗ ತನ್ನ ಸ್ನೇಹಿತ ಕ್ಯೂಬಾ ಬೆನ್ನಿಗೆ ನಿಲ್ಲಲು ಮುಂದಾಗಿದ್ದು, ಕ್ಯೂಬಾಗೆ ತೈಲ ಒದಗಿಸುವ ದೇಶಗಳ ಮೇಲೆ ಹೆಚ್ಚಿನ ಸುಂಕದ ಎಚ್ಚರಿಕೆ ನೀಡಿರುವುದಕ್ಕೆ ಅಮೆರಿಕ ವಿರುದ್ಧ ಗರಂ ಆಗಿದೆ ವೆನಿಜುವೆಲಾ. ಅದರಲ್ಲೂ ತನ್ನಲ್ಲೇ ಅಪಾರ ಪ್ರಮಾಣದ ತೈಲ ಇಟ್ಟುಕೊಂಡಿರುವ ವೆನಿಜುವೆಲಾ ತನ್ನ ಸ್ನೇಹಿತ ದೇಶಕ್ಕೆ ಸರಬರಾಜು ಮಾಡಲು ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ.

ಮಾನವೀಯ ಪರಿಣಾಮ ಪರಿಹರಿಸಲು ಒತ್ತಾಯ
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಕ್ಯೂಬಾ ಜೊತೆಗೆ ವ್ಯವಹಾರ ನಡೆಸುವ ದೇಶಗಳ ಮೇಲೆ ಹೊಸ ತೆರಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ಕ್ಯೂಬಾ ಜೊತೆಗೆ ಕಾನೂನು ಬದ್ಧ ವ್ಯಾಪಾರ ಸಂಬಂಧ ಕಾಪಾಡಿಕೊಳ್ಳಲು ಯತ್ನಿಸುವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದಾಗ ಅಮೆರಿಕದ ನಿಯಂತ್ರಣದಲ್ಲಿ ಇರುವ ವೆನಿಜುವೆಲಾದ ತೈಲದಿಂದ ಕ್ಯೂಬಾ ವಂಚಿತವಾಗಲಿದೆ. ಈ ಕಾರಣಕ್ಕೆ ವೆನಿಜುವೆಲಾ ತೀಕ್ಷ್ಣ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಕ್ರಮಗಳಿಂದ ಉಂಟಾಗುವ ಮಾನವೀಯ ಪರಿಣಾಮ ಪರಿಹರಿಸಲು ಅಂತರರಾಷ್ಟ್ರೀಯ ಸಮುದಾಯ ಮುಂದಾಗಬೇಕು ಎಂದಿದೆ.
ಚೀನಾ ಕಡೆಯಿಂದಲೂ ಭಾರಿ ವಿರೋಧ
ವೆನಿಜುವೆಲಾದ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ ಈ ಬಗ್ಗೆ ಮನವಿ ಮಾಡಿದೆ. ಕ್ಯೂಬಾ ಜನರ ಜೊತೆಗೆ ವೆನಿಜುವೆಲಾ ಒಗ್ಗಟ್ಟು ವ್ಯಕ್ತಪಡಿಸುತ್ತದೆ, ಹಾಗು ಈ ರೀತಿ ಆಕ್ರಮಣಗಳಿಂದ ಉಂಟಾಗುವ ಮಾನವೀಯ ಪರಿಣಾಮ ಪರಿಹರಿಸಲು ಅಂತರರಾಷ್ಟ್ರೀಯ ಸಮುದಾಯ ಕ್ರಮಕ್ಕೆ ಕರೆ ನೀಡಲಾಗುತ್ತಿದೆ ಎಂದು ವೆನಿಜುವೆಲಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಮೂಲಕ ಮತ್ತೆ ಹೊಸ ಸರ್ಕಾರದ ಜೊತೆಗೆ ಕೂಡ ಅಮೆರಿಕ ಕಿರಿಕ್ ಮುಂದುವರಿದಿದೆ. ಚೀನಾ ಕೂಡ ಈಗಾಗಲೇ ಅಮೆರಿಕ ನಿರ್ಧಾರದ ವಿರುದ್ಧ ಮಾತನಾಡಿದ್ದು, ಕ್ಯೂಬಾ ಜನರ ಜೀವನೋಪಾಯ & ಅಭಿವೃದ್ಧಿ ಹಕ್ಕು ಕಸಿದುಕೊಳ್ಳುವ ಅಮಾನವೀಯ ಪದ್ಧತಿ ವಿರೋಧಿಸುತ್ತೇವೆ ಎಂದಿದೆ. ಈ ಮೂಲಕ ಅಮೆರಿಕದ ಕಡೆಯಿಂದ ಕೈಗೊಂಡಿರುವ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ, ಆದರೆ ಅಮೆರಿಕ ಈ ಬಗ್ಗೆ ಕೇರ್ ಮಾಡುತ್ತಿಲ್ಲ.












Click it and Unblock the Notifications