ಭಾರತದ ಜೊತೆ ಮಾತುಕತೆ; ಪಾಕ್ ಸೇನಾ ಮುಖ್ಯಸ್ಥರ ಅಚ್ಚರಿ ಹೇಳಿಕೆ
ಇಸ್ಲಾಮಾಬಾದ್, ಏಪ್ರಿಲ್ 03; ಪಾಕಿಸ್ತಾನ ರಾಜಕೀಯದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಇದರ ನಡುವೆಯೇ ಭಾರತದ ಜೊತೆಗಿನ ವಿವಾದಗಳ ಕುರಿತು ಪಾಕಿಸ್ತಾನ ಗಮನಹರಿಸಿದೆ.
ಇಸ್ಲಾಮಾಬಾದ್ ಭದ್ರತಾ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಈ ಕುರಿತು ಮಾತನಾಡಿದ್ದಾರೆ.
"ಕಾಶ್ಮೀರ ಸಮಸ್ಯೆ ಸೇರಿದಂತೆ ಭಾರತದೊಂದಿಗಿನ ಎಲ್ಲಾ ವಿವಾದಗಳನ್ನು ದ್ವಿಪಕ್ಷೀಯ ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಬಗೆಹರಿಸಿಕೊಳ್ಳಲು ಪಾಕಿಸ್ತಾನ ಬಯಸಿದೆ" ಎಂದು ಖಮರ್ ಜಾವೇದ್ ಬಾಜ್ವಾ ಎಂದು ಹೇಳಿದ್ದಾರೆ.

"ಅಮೆರಿಕ ಜೊತೆಗಿನ ಉತ್ತಮ ಬಾಂಧವ್ಯದ ಸುಧೀರ್ಘ ಇತಿಹಾಸವನ್ನು ಮುಂದುವರೆಸುವ ಮತ್ತು ಚೀನಾದ ಜೊತೆ ನಿಕಟ ಸಂಬಂಧ ಹೊಂದಲು ಪಾಕಿಸ್ತಾನ ಬಯಸಿದೆ" ಎಂದು ಖಮರ್ ಜಾವೇದ್ ಬಾಜ್ವಾ ಭದ್ರತಾ ಸಂವಾದದಲ್ಲಿ ಸ್ಪಷ್ಟಪಡಿಸಿದರು.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿದೆ. ಇದರ ಮತದಾನ ಇಂದು ನಡೆಯಲಿದೆ. ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್ ಖಾನ್ ಸೋಲುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಖಮರ್ ಜಾವೇದ್ ಬಾಜ್ವಾ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಒಂದು ವೇಳೆ ಅವಿಶ್ವಾಸ ನಿರ್ಣಯದಲ್ಲಿ ಸೋಲು ಕಂಡರೆ ಇಮ್ರಾನ್ ಖಾನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಆಗ ದೇಶದಲ್ಲಿ ಮತ್ತೆ ಸೇನಾ ಆಡಳಿತ ಜಾರಿಗೆ ಬರಲಿದೆ. ಪಾಕ್ ಸೇನಾ ಮುಖ್ಯಸ್ಥರ ಮಾತು ಮುಂದಿನ ದಿನಗಳ ವಿದೇಶಾಂಗ ನೀತಿಯ ಭಾಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತ ಮಾತ್ರವಲ್ಲ ಅಮೆರಿಕ ಜೊತೆಗಿನ ಬಾಂಧವ್ಯವನ್ನು ಮುಂದುವರೆಸುವ ಸುಳಿವನ್ನು ಜಾವೇದ್ ಬಾಜ್ವಾ ನೀಡಿದ್ದಾರೆ. ಆದರೆ ತಾವು ರಷ್ಯಾಕ್ಕೆ ಭೇಟಿ ನೀಡಿದ ಬಳಿಕ ಅಮೆರಿಕ ಸೂಚನೆಯಂತೆ ನಮ್ಮ ಸರ್ಕಾರ ಪದಚ್ಯುತಿಗೆ ಪ್ರಯತ್ನ ನಡೆದಿದೆ ಎಂಬ ಇಮ್ರಾನ್ ಖಾನ್ ಹೇಳಿಕೆಗೆ ಬಾಜ್ವಾ ನೀಡಿದ ಹೇಳಿಕೆ ವಿರುದ್ಧವಾಗಿದೆ.
"ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ಹೊರತಾಗಿಯೂ ಭಾರತ-ಚೀನಾ ಗಡಿ ವಿವಾದವನ್ನು ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಿದೆ. ಉಭಯ ದೇಶಗಳ ರಾಜಕೀಯ ನಾಯಕರು ಭಾವನಾತ್ಮಕ ವಿಚಾರ ಬಿಟ್ಟು, ಶಾಂತಿ ಮತ್ತು ಸಮೃದ್ಧತೆಗೆ ಆದ್ಯತೆ ನೀಡುವ ಅಗತ್ಯವಿದೆ" ಎಂದು ಸೇನಾ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.
"ಗಲ್ಫ್ ರಾಷ್ಟ್ರಗಳಲ್ಲಿ ಪ್ರಪಂಚದ ಮೂರನೇ ಒಂದು ಭಾಗದಷ್ಟು ಜನರು ತಮ್ಮ ಸಂಘರ್ಷವನ್ನು ಬಗೆಹರಿಸಿಕೊಳ್ಳಲು ಯುದ್ಧದ ಮೊರೆ ಹೋಗಿದ್ದಾರೆ. ನಾವು ನಮ್ಮ ಪ್ರದೇಶವನ್ನು ಬೆಂಕಿಯ ಜ್ವಾಲೆಯಿಂದ ದೂರವಿಡುವುದು ಮುಖ್ಯವಾಗಿದೆ" ಎಂದು ಹೇಳಿದ್ದಾರೆ.
"ಕಾಶ್ಮೀರ ವಿವಾದ ಸೇರಿದಂತೆ ಭಾರತದ ಜೊತೆ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆಗೆ ನಾವು ಸಿದ್ಧರಿದ್ದೇವೆ. ರಾಜತಾಂತ್ರಿಕ ಮಾತುಕತೆಯನ್ನು ಪಾಕಿಸ್ತಾನವು ಬಯಸಿದರೆ ಭಾರತವು ಕೂಡ ಇದಕ್ಕೆ ಒಪ್ಪಿದರೆ ಮುಂದುವರೆಯಲು ತಾವು ಸಿದ್ಧ" ಎಂದು ಖಮರ್ ಜಾವೇದ್ ಬಾಜ್ವಾ ತಿಳಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಭದ್ರತಾ ಸಂವಾದವನ್ನು ಉದ್ಘಾಟನೆ ಮಾಡಿದ್ದರು ಶನಿವಾರ ಖಮರ್ ಜಾವೇದ್ ಬಾಜ್ವಾ ಸಂವಾದ ಉದ್ದೇಶಿಸಿ ಮಾತನಾಡಿದರು.












Click it and Unblock the Notifications