ಇಸ್ರೇಲ್ ಪ್ರಧಾನಿ ಫ್ರಾನ್ಸ್ & ನೆದರ್ಲೆಂಡ್ಸ್‌ಗೆ ಕಾಲ್ ಮಾಡಿದ್ದೇಕೆ?
ಹಮಾಸ್ ಉಗ್ರರು & ಇಸ್ರೇಲ್ ನಡುವೆ ಯುದ್ಧ ಶುರುವಾದ ನಂತರ ಜೀವಹಾನಿ ಜೋರಾಗಿದ್ದು, ಸಾವಿರಾರು ಜನ ಬಲಿಯಾಗಿ ಲೆಕ್ಕವಿಲ್ಲದಷ್ಟು ಜನ ಆಸ್ಪತ್ರೆಗೆ ಸೇರಿದ್ದಾರೆ. ಇದೇ ಪರಿಸ್ಥಿತಿಯಲ್ಲಿ ಇಸ್ರೇಲ್ ತನ್ನ ಶತ್ರುಗಳ ಸರ್ವ ನಾಶಕ್ಕೆ ರಣಕಹಳೆ ಮೊಳಗಿಸಿದೆ. ಹೀಗಿದ್ದಾಗಲೇ ಇಸ್ರೇಲ್‌ನ ಪ್ರಧಾನಿ ನೆತನ್ಯಾಹು ಫ್ರಾನ್ಸ್ & ನೆದರ್ಲೆಂಡ್ಸ್‌ಗೆ ದಿಢೀರ್ ಕಾಲ್ ಮಾಡಿ ಮಾತನಾಡಿದ್ದಾರೆ. ಯಾಕೆ ಹೀಗಾಯ್ತು? ಹಾಗಾದ್ರೆ ಇಸ್ರೇಲ್ ತನ್ನ ಯುದ್ಧ ತಂತ್ರದಲ್ಲಿ ಬದಲಾವಣೆ ಮಾಡ್ತಾ?
ಹೌದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಫ್ರಾನ್ಸ್, ಸ್ಪೇನ್ & ನೆದರ್ಲೆಂಡ್ಸ್ ನಾಯಕರ ಜೊತೆ ಮಾತನಾಡಿದ್ದಾರೆ. ದೂರವಾಣಿ ಮಾತುಕತೆ ನಡೆಸಿದ ನೆತನ್ಯಾಹು ಅವರು, ಹಮಾಸ್ ವಿರುದ್ಧ ನಡೆಸುತ್ತಿರುವ ದಾಳಿ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇಸ್ರೆಲ್ & ಹಮಾಸ್‌ನ ಸಂಘರ್ಷದ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಹಾಗೇ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ನೆದರ್ಲೆಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಸೇರಿ ಇತರ ನಾಯಕ ಜೊತೆಗೆ ನೆತನ್ಯಾಹು ಚರ್ಚೆ ನಡೆಸಿದ್ದಾರೆ.

5,000ಕ್ಕೂ ಹೆಚ್ಚು ಜನ ಬಲಿ?
ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿಯ ಪರಿಣಾಮ, ಇಲ್ಲಿವರೆಗೆ ಒಟ್ಟು 5,000ಕ್ಕೂ ಹೆಚ್ಚು ಜನ ಗಾಜಾಪಟ್ಟಿ ಒಳಗೆ ಉಸಿರು ಚೆಲ್ಲಿದ್ದಾರೆ. ಇತ್ತ ಇಸ್ರೇಲ್ ನೆಲದಲ್ಲಿ ಕೂಡ ಭಾರಿ ಸಾವು-ನೋವು ಸಂಭವಿಸಿದೆ. ಇದೇ ಸಮಯದಲ್ಲಿ ಅಮೆರಿಕ ಕೂಡ ಇಸ್ರೇಲ್ ಪರ ನಿಂತಿದೆ. ಹೀಗೆ ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಇಸ್ರೇಲ್ ಪ್ರಧಾನಿಯ ನಡೆ ಕುತೂಹಲ ಕೆರಳಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಹಾಗೂ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ನೆದರ್ಲೆಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಜೊತೆಗೆ ಮಹತ್ವದ ಮಾತುಕತೆ ನಡೆಸಿದ್ದಾರೆ ಬೆಂಜಮಿನ್ ನೆತನ್ಯಾಹು.
ಗಾಜಾಪಟ್ಟಿ ಗಡಿಯಲ್ಲಿ ಭೂ ಸೇನೆ ಸಿದ್ಧ!
ಈ ಬಗ್ಗೆ ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್, ತನ್ನ ಶತ್ರು ಪಡೆಗೂ ಬೇರೆ ಸಂದೇಶ ಕಳುಹಿಸಿದಂತೆ ಕಾಣುತ್ತಿದೆ. ಹಾಗೇ ಹಮಾಸ್ ಪಡೆ ವಿರುದ್ಧ ಗೆದ್ದು ಬೀಗುವ ಮಾತನಾಡಿರುವ ಇಸ್ರೇಲ್ ತನ್ನ ಈ ದಾಳಿಯನ್ನ ಮತ್ತಷ್ಟು ತೀವ್ರಗೊಳಿಸುವ ಭಯ ಕೂಡ ಆವರಿಸಿದೆ. ಈಗಾಗಲೇ ಇಸ್ರೇಲ್‌ನ ಸೇನೆ ದಾಳಿಗೆ ಗಾಜಾಪಟ್ಟಿ ಪುಡಿ ಪುಡಿಯಾಗಿ ಹೋಗಿದೆ. ಮತ್ತೊಂದು ಕಡೆ ಇಸ್ರೇಲ್ ಭೂ ಸೇನೆ ಕೂಡ ಗಾಜಾಪಟ್ಟಿಯ ಗಡಿ ಭಾಗದಲ್ಲಿಯೇ ಠಿಕಾಣಿ ಹೂಡಿದೆ. ಈ ಸಮಯದಲ್ಲಿ ತನ್ನ ಮಿತ್ರ ರಾಷ್ಟ್ರಗಳ ನಾಯಕರ ಜೊತೆಗೆ ಇಸ್ರೇಲ್ ದೊಡ್ಡ ಮಟ್ಟದಲ್ಲಿ ಮಾತುಕತೆ ನಡೆಸುತ್ತಿದೆ.

ಒಟ್ನಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಕಾಳಗ ಈಗ ಕ್ಷಣಕ್ಕೊಂದು ತಿರುವನ್ನ ಪಡೆಯುತ್ತಿದೆ. ಹೀಗಾಗಿಯೇ ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧದ ಭೀತಿ ಆವರಿಸಿದ್ದು, ಮುಂದೆ ಏನಾಗುತ್ತೋ? ಅಂತಾ ಬಡ ರಾಷ್ಟ್ರಗಳು ಚಿಂತಿಸುತ್ತಿವೆ. ಹೀಗಾಗಿ ಹಮಾಸ್ ಮತ್ತೆ ಇಸ್ರೇಲ್ ಯುದ್ಧಕ್ಕೆ ಅಂತ್ಯ ಹಾಡಲು ಜಗತ್ತೇ ಕಾಯುತ್ತಿದೆ. ಇದು ಯಾವಾಗ ನಿಜವಾಗುತ್ತೆ ಅಂತಾ ಕಾದು ನೋಡಬೇಕಿದೆ.












Click it and Unblock the Notifications