ಕೆನಡಾ ಪ್ರಧಾನಿ ಆರೋಪಕ್ಕೆ ಇಂಗ್ಲೆಂಡ್ ಸಿಖ್ ಸಂಸದರು ಹೀಗಂದ್ರು!
ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿದ ಹಪ್ಪಳವಾಗಿ ಹೋಗಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಇಟ್ಟ ಬೆಂಕಿಗೆ ಎರಡೂ ದೇಶಗಳು ಶತ್ರಗಳಂತೆ ವರ್ತಿಸುತ್ತಿದ್ದು, ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ಕಡೆಯಿಂದಲೂ ಬೆಂಕಿ ಇಡುವ ಕೆಲಸ ಶುರುವಾಗಿರುವ ಆರೋಪ ಕೇಳಿಬಂದಿದೆ. ಬ್ರಿಟನ್‌ನ ಸಿಖ್ ಸಂಸದರು ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ.
ಭಾರತೀಯರು ಅದರಲ್ಲೂ ಪಂಜಾಬ್ ಮೂಲದ ಸಿಖ್ ಧರ್ಮಿಯರು ಅತಿ ಹೆಚ್ಚಾಗಿ ವಾಸ ಮಾಡುತ್ತಿರುವ ದೇಶಗಳ ಪೈಕಿ ಬ್ರಿಟನ್ ಕೂಡ ಒಂದು. ಲಕ್ಷಾಂತರ ಸಿಖ್ ಧರ್ಮಿಯರು ಆ ದೇಶದಲ್ಲಿ ವಾಸ ಇದ್ದಾರೆ. ಹೀಗಾಗಿಯೇ ಬ್ರಿಟನ್‌ನಲ್ಲಿ ಇಬ್ಬರು ಸಿಖ್ ಸಂಸದರು ಸಂಸತ್‌ಗೆ ಆಯ್ಕೆಯಾಗಿದ್ದು, ಈಗ ಕೆನಡಾ ಮತ್ತು ಭಾರತ ನಡುವೆ ನಡೆಯುತ್ತಿರುವ ತಿಕ್ಕಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಬ್ರಿಟನ್ ಮೂಲದ ಸಿಖ್ ಸಂಸದರು ಈಗಿನ ಬೆಳವಣಿಗೆ ಬಗ್ಗೆ ನೀಡಿರುವ ಹೇಳಿಕೆ ಹಲ್‌ಚಲ್ ಎಬ್ಬಿಸಿದೆ.

ಬ್ರಿಟನ್ ಸಿಖ್ ಸಮುದಾಯ ರೊಚ್ಚಿಗೆದ್ದಿದೆಯಾ?
ಅಷ್ಟಕ್ಕೂ ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಟ್ರುಡೋ ಆರೋಪಕ್ಕೆ ಬ್ರಿಟನ್ ಸಂಸದರ ಪ್ರತಿಕ್ರಿಯೆ ಗಮನ ಸೆಳೆದಿದೆ. ಈ ಘಟನೆಯ ಬಗ್ಗೆ ಬ್ರಿಟನ್ ಸಂಸತ್ ಸದಸ್ಯರಾದ ಪ್ರೀತ್ ಕೌರ್ ಗಿಲ್, ತನ್ಮನ್‌ಜೀತ್ ಸಿಂಗ್ ಧೇಸಿ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಮ್ಮ ಕ್ಷೇತ್ರದ ಮತದಾರರು ಘಟನೆಯ ಬಗ್ಗೆ ನಮ್ಮನ್ನ ಸಂಪರ್ಕಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಹತ್ತಾರು ಪ್ರಶ್ನೆಗಳನ್ನ ಕೇಳುತ್ತಿದ್ದಾರೆ ಎಂದು ಬ್ರಿಟನ್ ವಿರೋಧ ಪಕ್ಷ ಲೇಬರ್ ಪಾರ್ಟಿಯ ಸಂಸದರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ.
ಮುಕ್ತ ತನಿಖೆಗೆ ಬ್ರಿಟನ್ ಸಂಸದರ ಆಗ್ರಹ
ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್ ಎಡ್ಜ್‌ಬಾಸ್ಟನ್‌ನ ಸಂಸದೆ ಪ್ರೀತ್ ಕೌರ್ ಗಿಲ್ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರೀತ್ ಬರೆದುಕೊಂಡಂತೆ, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಕುರಿತ ಟ್ರುಡೋ ಹೇಳಿಕೆ ಆತಂಕ ಹುಟ್ಟಿಸಿದೆ. ಕೆನಡಾದ ತನಿಖೆ ಮುಕ್ತವಾಗಿ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಮಗಿರುವ ಕಳವಳವನ್ನು ನಾನು & ನನ್ನ ಸಹೋದ್ಯೋಗಿಗಳು ಸಚಿವರಿಗೆ ತಿಳಿಸಿದ್ದೇವೆ. ಇದನ್ನೇ ನಮ್ಮ ಮತದಾರರಿಗೂ ತಿಳಸಬಯಸುತ್ತೇನೆ ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಏನಾಯ್ತೋ.. ಇದೆನಾಯ್ತೋ..
ಮತ್ತೊಂದ್ಕಡೆ ಆಗ್ನೇಯ ಇಂಗ್ಲೆಂಡ್ ಕ್ಷೇತ್ರ ಸ್ಲಫ್‌ನ ಸಂಸದ, ತನ್ಮನ್‌ಜೀತ್ ಸಿಂಗ್ ಧೇಸಿ ಕೂಡ ಇದೇ ರೀತಿ ಪೋಸ್ಟ್ ಹಾಕಿದ್ದಾರೆ. ಕೆನಡಾದಿಂದ ಬರುತ್ತಿರುವ ವರದಿ ಆಘಾತ ಮೂಡಿಸಿದ್ದು, ನನ್ನ ಕ್ಷೇತ್ರವಾದ ಸ್ಲಫ್ ಮತ್ತು ಇತರ ಕಡೆಗಳಿಂದ ಕರೆ ಬಂದಿವೆ. ಎಲ್ಲರಲ್ಲಿ ಆತಂಕ, ಕೋಪ, ಭಯವಿದೆ. ಈ ಕೇಸ್ ವಿಚಾರವಾಗಿ ಮಿತ್ರರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಕೆನಡಾ ಪ್ರಧಾನಿ ಹೇಳಿದ್ದಾರೆ. ಆದ್ದರಿಂದ, ನ್ಯಾಯ ಪಡೆಯಲು ನಾವು ಬ್ರಿಟನ್ ಸರ್ಕಾರದ ಜೊತೆಗೂ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಕಿರಿಕ್ ಶುರುವಾಗಿದ್ದು ಯಾವ ಕಾರಣಕ್ಕೆ?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ದರು ಕೆಲ ದುಷ್ಕರ್ಮಿಗಳು. ಹಿಂಸಾಚಾರ ಹಾಗೂ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪವು ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದ್ರೆ ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಹೀಗಾಗಿ ಸೂಕ್ತ ಸಾಕ್ಷ್ಯ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಸಂದರ್ಭದಲ್ಲೇ ಬ್ರಿಟನ್ ಸಂಸದರು ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಒಟ್ಟಾರೆ ಭಾರತಕ್ಕೆ ದೊಡ್ಡ ಸವಾಲು ಎದುರಾಗಿದ್ದು, ಈ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕಿದೆ. ಈ ಘಟನೆಯಲ್ಲಿ ಭಾರತದ ಪಾತ್ರ ಇಲ್ಲ ಎಂಬುದನ್ನ ಸಾಬೀತು ಮಾಡಿ ಕೆನಡಾ ಮಾಡುತ್ತಿರುವ ಆರೋಪ ಸುಳ್ಳು ಎಂಬುದನ್ನ ನಿರೂಪಿಸಬೇಕಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶುರುವಾಗಿರುವ ಲಾಬಿಗೆ ತಕ್ಕ ಉತ್ತರ ನೀಡಬೇಕಿದೆ ಎಂಬ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.












Click it and Unblock the Notifications