Sudan War: ಯಶಸ್ವಿಯಾಗಿ 6 ತಿಂಗಳು ಪೂರೈಸಿದ ಸುಡಾನ್ ಆಂತರಿಕ ಯುದ್ಧ!
ನರಳುತ್ತಿದ್ದ ಸುಡಾನ್ ಜನರಿಗೆ ಆಂತರಿಕ ಕಿತ್ತಾಟ ದೊಡ್ಡ ಆಘಾತ ನೀಡಿದ್ದು, ನೋಡ ನೋಡುತ್ತಲೇ ಸಾವಿರಾರು ಜನ ಜೀವ ಕಳೆದುಕೊಂಡಿದ್ದಾರೆ. ಹಾಗಾದರೆ ಸುಡಾನ್ ಸಂಘರ್ಷಕ್ಕೆ ಬಲಿಯಾಗಿದ್ದು ಎಷ್ಟು ಜನ?
ಸುಡಾನ್‌ಗೆ ಈ ಹೆಸರು ಇಡುವ ಬದಲು ಸಂಘರ್ಷದ ನೆಲ ಅಂತಾ ಕೆರೆಯಬೇಕು. ಯಾಕೆ ಅಂದ್ರೆ ಈ ದೇಶದಲ್ಲಿ ನಡೆದ ಹಿಂಸಾಚಾರವು ಒಂದೆರಡು ಬಾರಿ ಅಲ್ಲ. 1956ರಲ್ಲಿ ಬ್ರಿಟನ್ ಆಡಳಿತದಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಸೇರಿದಂತೆ 2021ರಲ್ಲಿ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲ ಆಳಿದ್ದ. ಇದೀಗ ಏಪ್ರಿಲ್ 15 ರಿಂದ ಸುಡಾನ್ ಸೇನೆ & ಅರೆಸೇನಾ ಪಡೆ ಮಧ್ಯೆ ಹೊತ್ತಿರುವ ಬೆಂಕಿ ಇನ್ನೂ ತಣ್ಣಗಾಗಿಲ್ಲ.

9,000 ಜನ ಬಲಿ, 10 ಲಕ್ಷ ಜನ ಬೀದಿಪಾಲು
ಹೌದು ಇದೇ ವರ್ಷದ ಏಪ್ರಿಲ್ 15 ರಿಂದ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ನಡುವೆಯೇ ಬೆಂಕಿ ಹೊತ್ತಿಕೊಂಡಿತ್ತು. ಇದರ ಪರಿಣಾಮ ಕಳೆದ 6 ತಿಂಗಳಲ್ಲಿ 9,000 ಜನ ಬಲಿಯಾಗಿ ಸುಮಾರು 10 ಲಕ್ಷ ಜನ ಬೀದಿಪಾಲಾಗಿ ನರಳುತ್ತಿದ್ದಾರೆ. ಇದೀಗ ಸಾವಿನ ಸಂಖ್ಯೆಯ ಬಗ್ಗೆ ವಿಶ್ವಸಂಸ್ಥೆ ಮಾನವೀಯ ವಿಭಾಗ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ಸಾಮಾನ್ಯರು ಹಿಂಸೆಯ ಬೆಂಕಿಗೆ ಬೆಂದು ಹೋಗುತ್ತಿರುವ ಬಗ್ಗೆ ಎಚ್ಚರಿಕೆಯನ್ನೂ ರವಾನಿಸಿದೆ. ಅತ್ಯಾಚಾರ ಹಾಗೂ ದೈಹಿಕ ಹಿಂಸಾಚಾರ ರೀತಿ ಘಟನೆಗಳು ಮುಂದುವರಿದಿವೆ ಎಂದು ವಿಶ್ವಸಂಸ್ಥೆ ಮಾನವೀಯ ವಿಭಾಗದ ಜನರಲ್ ಆಗಿರುವ ಮಾರ್ಟಿನ್ ಗ್ರಿಫಿತ್ಸ್ ಅವರು ಬೇಸರ ಹೊರಹಾಕಿದ್ದಾರೆ.
ಸುಡಾನ್ ಹಿಂಸಾಚಾರ ನಿಲ್ಲಿಸಲು ವಿಶ್ವಸಂಸ್ಥೆ ಸಾಕಷ್ಟು ಪ್ರಯತ್ನ ಮಾಡಿದೆ. ಅದರಲ್ಲೂ, ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಮುಖ್ಯಸ್ಥರನ್ನ ಕೂರಿಸಿ ಮಾತುಕತೆ ಕೂಡ ನಡೆಸಿದೆ. ಆದರೂ ಮೊದಲಿಗೆ ಮಾತುಕತೆಗೆ ಓಕೆ ಎಂದಿದ್ದ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ಮುಖ್ಯಸ್ಥರು, ಮಾತುಕತೆ ನಡೆದ ನಂತರ ಸಂಧಾನಕ್ಕೆ ಕೈಜೋಡಿಸಲೇ ಇಲ್ಲ. ಈ ಹಿನ್ನೆಲೆ ಮತ್ತೆ ಸುಡಾನ್ ನೆಲದಲ್ಲಿ ರಕ್ತಪಾತ ಮುಂದುವರಿದಿದೆ. ಈವರೆಗೂ ಸುಮಾರು 9,000ಕ್ಕೂ ಹೆಚ್ಚು ಜನ ಬಲಿಯಾಗಿದ್ದರೂ, ಅಮಾಯಕ ಜನರಿಗೆ ಈ ಕಿರಾತಕರ ಕಾಟ ತಪ್ಪುತ್ತಿಲ್ಲ.
ಅಕ್ಕಪಕ್ಕದ ದೇಶಗಳಿಗೆ ಓಡಿ ಹೋದ ಜನ
ಮೊದಲೇ ಹೇಳಿದಂತೆ ಸುಡಾನ್ ಭಾರಿ ಬಡತನ ಎದುರಿಸುತ್ತಿರುವ ದೇಶ. ಇಲ್ಲಿನ ಜನರಿಗೆ, ತುತ್ತು ಅನ್ನ ಸಿಕ್ಕರೆ ಅದೇ ಸೌಭಾಗ್ಯ. ಆದರೆ ಇಂತಹ ದೇಶದಲ್ಲಿ ರಾಜಕಾರಣಿಗಳಿಗೆ ತಮ್ಮ ದೇಶ ಉದ್ಧಾರ ಆಗೋದು ಬೇಡ. ಅದ್ರಲ್ಲೂ ಸೇನಾಧಿಕಾರಿಗಳು ಹಿಂಸೆಯನ್ನೇ ಮುಂದಿಟ್ಟು ಜನರ ಜೀವ ತೆಗೆಯುತ್ತಿದ್ದಾರೆ. ಹೀಗಾಗಿ ಸುಡಾನ್ ಹಿಂಸಾಚಾರ ಭುಗಿಲೆದ್ದ ಬಳಿಕ, ಅಲ್ಲಿನ ಜನರು ಅಕ್ಕಪಕ್ಕದ ದೇಶಗಳಿಗೆ ಓಡಿ ಹೋಗಿದ್ದಾರೆ. ಒಂದು ಅಂದಾಜಿನ ಪ್ರಕಾರ 30 ಲಕ್ಷ ಜನರು ಸುಡಾನ್ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಹೀಗೆ ಸುಡಾನ್ ನೆಲ ಸುಡುಗಾಡಾಗಿ ಹೋಗಿದೆ. ಎಲ್ಲಿ ನೋಡಿದ್ರೂ ರಕ್ತ, ಎಲ್ಲೆಲ್ಲೂ ಜೀವ ಕಳೆದುಕೊಂಡ ದೇಹಗಳು. ಇಷ್ಟೆಲ್ಲಾ ಪರಿಸ್ಥಿತಿ ನಡುವೆ ಹೊಟ್ಟೆಗೆ ತುತ್ತು ಅನ್ನವೂ ಸಿಗದೆ, ಹನಿ ನೀರಿಗೆ ಪರದಾಡುತ್ತಿರುವ ಜನ. ಎಲ್ಲಾ ಗೊಂದಲದ ನಡುವೆ, ಈ ಯುದ್ಧಕ್ಕೆ ಇದೀಗ 6 ತಿಂಗಳು ತುಂಬಿದೆ. ಆದರೂ ಸುಡಾನ್ ಸೇನೆ ಹಾಗೂ ಅರೆಸೇನಾ ಪಡೆಗಳ ಮುಖ್ಯಸ್ಥರ ರಕ್ತದಾಹ ಕಡಿಮೆ ಆಗಿಲ್ಲ. ಹೀಗಾಗಿ ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.












Click it and Unblock the Notifications