India VS Canada: ತಪ್ಪು ಮಾಡಿ ತೇಪೆ ಹಾಕಲು ಬಂದ್ರಾ ಕೆನಡಾ ಪ್ರಧಾನಿ?
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನಿನ್ನೆ ಭಾರತದ ವಿರುದ್ಧ ಮಾತನಾಡಿ ಕಿಚ್ಚು ಹೊತ್ತಿಸಿ ಸುಮ್ಮನಾಗಿದ್ದರು. ಆದರೆ ಭಾರತ ಈ ವಿಚಾರವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು ಕೆನಡಾಗೆ ಸರಿಯಾಗಿ ಉತ್ತರ ನೀಡಲು ಮುಂದಾಗಿದೆ. ಪರಿಸ್ಥಿತಿ ಉಲ್ಟಾ ಆಗುತ್ತಿದ್ದಂತೆ ಈಗ ಕೆನಡಾ ಪ್ರಧಾನಿ ಕೂಡ ಉಲ್ಟಾ ಹೊಡೆದಂತೆ ಕಾಣುತ್ತಿದೆ. ಯಾಕೆ ಅಂದ್ರಾ? ಸಂಪೂರ್ಣ ಮಾಹಿತಿ ಹಾಗೂ ಕೆನಡಾ ಪ್ರಧಾನಿಯ ಹೇಳಿಕೆ ಇಲ್ಲಿದೆ ಮುಂದೆ ಓದಿ.
ಕೆನಡಾ ಮತ್ತು ಭಾರತದ ನಡುವೆ ಹಲವು ದಶಕಗಳ ಸಂಬಂಧ ಇದೆ. ಅಮೆರಿಕದ ಪಕ್ಕದ ದೇಶವಾದ ಕೆನಡಾದಲ್ಲಿ ಕೋಟ್ಯಂತರ ಭಾರತೀಯರು ವಾಸವಿದ್ದಾರೆ. ಕೆನಡಾದ ವಲಸಿಗರ ಪರವಾದ ನಿಯಮಗಳು ಭಾರತೀಯರಿಗೆ ಸಾಕಷ್ಟು ಸಹಾಯಕವಾಗಿವೆ. ಹೀಗೆ ಕೆನಡಾ ಜತೆ ಭಾರತದ ಸಂಬಂಧ ಸುಂದರವಾಗಿ ಇರುವಾಗಲೇ ಖಲಿಸ್ತಾನಿಗಳ ಕಿರಿಕ್ ಬತ್ತಿ ಇಟ್ಟಿದೆ. ಈ ಸಂದರ್ಭದಲ್ಲೇ ಕೆನಡಾ ಪ್ರಧಾನಿ ಕೂಡ ಹಿಂದೆ ಮುಂದೆ ಯೋಚಿಸದೆ ಮಾತನಾಡಿ ಭಾರತ ಮತ್ತು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೆನಡಾ ಪ್ರಧಾನಿ ಉಲ್ಟಾ ಹೊಡೆದರಾ?
ಭಾರತದ ವಿರುದ್ಧ ಕೆನಡಾ ಪ್ರಧಾನಿ ಟ್ರುಡೋ ನೀಡಿದ ಹೇಳಿಕೆ ಗಂಭೀರ ಸ್ವರೂಪ ಪಡೆದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೌದು, ಭಾರತದ ಏಜೆಂಟ್‌ಗಳ ವಿರುದ್ಧ ಕೊಲೆ ಆರೋಪ ಮಾಡಿದ್ದ ಬಗ್ಗೆ ಇದೀಗ ಸ್ಪಷ್ಟನೆ ನೀಡಿರುವ ಕೆನಡಾ ಪಿಎಂ ಟ್ರುಡೋ. ನಾನು ಭಾರತ ಮತ್ತು ಕೆನಡಾ ಮಧ್ಯೆ ಪ್ರಚೋದನೆ ಮೂಡಿಸಲು ಇಂಥ ಹೇಳಿಕೆ ನೀಡಿಲ್ಲ. ಆದರೆ ನಮಗೆ ಉತ್ತರ ಬೇಕು ಎಂಬ ಕಾರಣಕ್ಕೆ ಹೀಗೆ ಹೇಳಿದ್ದೆ. ಭಾರತ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿ ಎಂದಿದ್ದಾರೆ ಟ್ರುಡೋ. ಈ ಮೂಲಕ ಭಾರತದ ಸಿಟ್ಟು ಕಡಿಮೆ ಮಾಡುವ ಯತ್ನ ಮಾಡಿದ್ದಾರೆ ಕೆನಡಾ ಪ್ರಧಾನಿ ಎಂಬ ಮಾತು ಹರಿದಾಡುತ್ತಿದೆ.
ಕಿರಿಕ್ ಶುರುವಾಗಿದ್ದು ಯಾವ ಕಾರಣಕ್ಕೆ?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್‌ನಲ್ಲಿ ಅಂದರೆ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪವೂ ನಿಜ್ಜರ್ ವಿರುದ್ಧ ಇತ್ತು. ಆದರೆ ಈ ಕೊಲೆಯನ್ನ ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದೆ ಕೆನಡಾ. ಹೀಗಾಗಿ ಸೂಕ್ತ ಸಾಕ್ಷ್ಯ ಇಲ್ಲದೆ ಇಂತಹ ಆರೋಪಗಳು ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶವನ್ನೇ ರವಾನಿಸಿದೆ.

ಮತ್ತಷ್ಟು ದೊಡ್ಡದಾಗುತ್ತಾ ಕಿರಿಕ್?
ಭಾರತ ಮತ್ತು ಕೆನಡಾ ನಡುವಿನ ತಿಕ್ಕಾಟ ಎಷ್ಟು ಜೋರಾಗಿದೆ ಎಂದರೆ, ಎರಡೂ ದೇಶದ ರಾಜತಾಂತ್ರಿಕರನ್ನ ಹೊರಗೆ ಕಳಿಸುವಷ್ಟು ಇಬ್ಬರೂ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಟ್ರುಡೋ ಅವರ ಹೇಳಿಕೆಯು ಮಹತ್ವ ಪಡೆದಿದೆ. ಮತ್ತೊಂದ್ಕಡೆ ಅಮೆರಿಕ ಕೂಡ ಈ ವಿಚಾರವಾಗಿ ಮಧ್ಯಪ್ರವೇಶ ಮಾಡಿದ್ದು, ಕೆನಡಾ ಮತ್ತು ಭಾರತದ ನಡುವಿನ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇದೇ ವಿಚಾರವು ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡದಾಗಿ ಬೆಳೆಯುವ ಅಪಾಯ ಕೂಡ ಆವರಿಸಿದೆ.
ಒಟ್ಟಾರೆ ಹೇಳುವುದಾದರೆ ಈ ವಿಚಾರವನ್ನು ಭಾರತ ಕೂಡ ಗಂಭೀರವಾಗಿ ಪರಿಗಣಿಸಿದ್ದು, ಕೆನಡಾ ಪ್ರಧಾನಿ ಸೂಕ್ತ ಸಾಕ್ಷ್ಯ ಇಲ್ಲದೆ ಇಂಥ ಹೇಳಿಕೆ ನೀಡಿರುವುದು ಖಂಡನೀಯ ಎಂಬ ಆಕ್ರೋಶ ಮೊಳಗಿದೆ. ಇದೇ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಟ್ರುಡೋ ವಿವರಣೆ ನೀಡಿ, ಪರಿಸ್ಥಿತಿ ತಿಳಿಯಾಗಿಸಲು ಯತ್ನಿಸಿದ್ದಾರೆ. ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡವಾಗಿದೆ ಎಂಬುದು ಈ ಮೂಲಕ ಸ್ಪಷ್ಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಕುರಿತು ಪೂರ್ಣ ಚಿತ್ರಣ ತಿಳಿಯಲಿದೆ. ಆದರೆ ಪದೇ ಪದೆ ಭಾರತಕ್ಕೆ ತಲೆನೋವಾಗಿ ಕಾಡುತ್ತಿರುವ ಖಲಿಸ್ತಾನಿಗಳು, ಈಗ ಭಾರತ ಮತ್ತು ಕೆನಡಾ ಸಂಬಂಧವನ್ನೂ ಹಾಳು ಮಾಡುತ್ತಿದ್ದಾರೆ ಎಂಬುದೇ ವಿಪರ್ಯಾಸದ ಸಂಗತಿ.












Click it and Unblock the Notifications