ರಷ್ಯಾ-ಉಕ್ರೇನ್ ಯುದ್ಧ ಅಂತ್ಯಕ್ಕೆ ಝೆಲೆನ್ಸ್ಕಿ ಕಂಡುಕೊಂಡ ಏಕೈಕ ಮಾರ್ಗ ಯಾವುದು?
ಕೀವ್, ಮಾರ್ಚ್ 3: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ಅಂತ್ಯಗೊಳಿಸುವುದಕ್ಕೆ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೇರ ಮಾತುಕತೆ ನಡೆಸುವುದೇ ಏಕೈಕ ಮಾರ್ಗ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಗುರುವಾರ ಮಾತನಾಡಿರುವ ಅವರು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ನೇರ ಮಾತುಕತೆ ಮೂಲಕವೇ ಯುದ್ಧವನ್ನು ಕೊನೆಗಾಣಿಸಲು ಸಾಧ್ಯ ಎಂದಿದ್ದಾರೆ. ಉಕ್ರೇನ್‌ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಹೆಚ್ಚಿದ ಮಿಲಿಟರಿ ಸಹಾಯವನ್ನು ಬಯಸುತ್ತಿರುವಾಗಲೇ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಎಂಟನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಒಂದು ವೇಳೆ ಉಕ್ರೇನ್ ಪತನವಾದರೆ, ಬಾಲ್ಟಿಕ್ ರಾಜ್ಯಗಳು ಮುಂದಿನದಾಗಬಹುದು ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎಚ್ಚರಿಸಿದ್ದಾರೆ.

ರಷ್ಯಾ-ಉಕ್ರೇನ್ 2ನೇ ಸುತ್ತಿನ ಸಂಧಾನ ಸಭೆ:
ರಷ್ಯಾ ಮತ್ತು ಉಕ್ರೇನ್ ನಡುವಿನ ಎರಡನೇ ಸುತ್ತಿನ ಮಾತುಕತೆಯು ಬೆಲಾರಸ್-ಪೋಲೆಂಡ್ ಗಡಿಯಲ್ಲಿರುವ ಸ್ಥಳದಲ್ಲಿ ಗುರುವಾರ ಪ್ರಾರಂಭವಾಗಿದೆ. ಉಕ್ರೇನ್ ಮಾನವೀಯ ಕಾರಿಡಾರ್ ಅನ್ನು ತೆರೆಯಲು ಪ್ರಯತ್ನಿಸುವ ನಿರೀಕ್ಷೆಯಿದೆ. ಕೀವ್‌ನಲ್ಲಿನ ನಾಯಕರು ಸಂಧಾನ ಮಾತುಕತೆಯಲ್ಲಿ ವಿಳಂಬ ಧೋರಣೆಯನ್ನು ಪ್ರದರ್ಶಿಸಿದರೆ, ರಷ್ಯಾ ತನ್ನ ಬೇಡಿಕೆಗಳ ಪಟ್ಟಿಯಲ್ಲಿ ಮತ್ತಷ್ಟು ವಿಷಯಗಳನ್ನು ಸೇರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ರಷ್ಯಾ ಶೆಲ್ ದಾಳಿಗೆ 22 ಮಂದಿ ಸಾವು:
ಗುರುವಾರ ಉತ್ತರ ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದಾರೆ ಎಂದು ಚೆರ್ನಿಹಿವ್ ಗವರ್ನರ್ ಹೇಳಿದ್ದಾರೆ. ಚೆರ್ನಿಹಿವ್‌ನಲ್ಲಿರುವ ಉಕ್ರೇನಿಯನ್ ಅಧಿಕಾರಿಗಳು ಸ್ಥಳೀಯರಿಗೆ ಸುರಕ್ಷಿತೆಯನ್ನು ವ್ಯವಸ್ಥೆ ಮಾಡಲು ಹೆಣಗಾಡುತ್ತಿದ್ದಾರೆ ಎಂದು ಗವರ್ನರ್ ತಿಳಿಸಿದ್ದಾರೆ.












Click it and Unblock the Notifications