ಈ ದೀಪಾವಳಿಯ ಮೊದಲ ಪಟಾಕಿ ಸಿಡಿಯುವುದು ನಯಾಗರ ಜಲಪಾತದಲ್ಲಿ!
Recommended Video

ಒಟ್ಟಾವ (ಕೆನಡಾ), ಅಕ್ಟೋಬರ್ 6: ಜಗತ್ತಿನ ಮನಮೋಹಕ ಜಲಪಾತಗಳಲ್ಲಿ ಒಂದಾದ ನಯಾಗರ ಯಾರನ್ನು ಸೆಳೆದಿಲ್ಲ? ಕೆನಡಾ ಮತ್ತು ಅಮೆರಿಕ ಎರಡರ ನಡುವೆ ಇರುವ ಈ ಆಕರ್ಷಣೀಯ ಜಲಧಾರೆಗೆ ಮನಸೋಲದವರಿಲ್ಲ. ಅಷ್ಟು ದೂರ ಪ್ರಯಾಣಿಸಲು ಸಾಧ್ಯವಾಗದವರು ಫೋಟೊಗಳಲ್ಲಿಯೇ ಮನತಣಿಸಿಕೊಂಡಿದ್ದಾರೆ. ಅಂತಹ ಸುಂದರ ಕಲಾಕೃತಿಯಂತಹ ಜಲಪಾತ ಮತ್ತಷ್ಟು ರಂಗುಪಡೆದುಕೊಳ್ಳಲಿದೆ.
ಭಾರತೀಯರ ಬೆಳಕಿನ ಹಬ್ಬವಾದ ದೀಪಾವಳಿಯ ಪ್ರಯುಕ್ತ ನಯಾಗರ ಬಣ್ಣದ ಚಿತ್ತಾರದಲ್ಲಿ ಮೀಯಲಿದೆ. ಇದೇ ಮೊದಲ ಬಾರಿಗೆ ದೀಪಾವಳಿಯ ಬೆಳಕಿನ ಹಬ್ಬಕ್ಕೆ ನಯಾಗರ ಸಾಕ್ಷಿಯಾಗಲಿದೆ.
ನಯಾಗರ ಪಾರ್ಕ್ಸ್ ಕಮಿಷನ್‌ನ ಸಹಕಾರದೊಂದಿಗೆ ಇಂಡೋ-ಕೆನಡಿಯನ್ ಕಲಾ ಸಮಿತಿ (ಐಸಿಎಸಿ) ಎಂಬ ಲಾಭರಹಿತ ಸಂಸ್ಥೆ ಜಾಗತಿಕ ಪ್ರವಾಸಿ ತಾಣವಾದ ನಯಾಗರದಲ್ಲಿ ದೀಪಾವಳಿ ಆಚರಿಸಲಿದೆ. ಅಂದು ನಯಾಗಾರದಲ್ಲಿ ದೀಪಾವಳಿಯ ಬೆಳಕು, ಪಟಾಕಿ ಉತ್ಸವಗಳು ನಡೆಯಲಿವೆ.

ಕೆನಡಾದಲ್ಲಿ ದೀಪಾವಳಿ ಆಚರಿಸಲು ಪ್ರಮುಖ ತಾಣವನ್ನು ಬಯಸಿದ್ದೆವು. ಈ ಕನಸನ್ನು ನನಸು ಮಾಡಲು ಹಲವು ವರ್ಷಗಳಿಂದ ಸ್ಥಳೀಯ ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದದ್ದಾಗಿ ಐಸಿಎಸಿಯ ಸಂಸ್ಥಾಪಕ ನಿರ್ದೇಶಕ ಅಜಯ್ ಮೋದಿ ತಿಳಿಸಿದ್ದಾರೆ.
ಭಾರತದಲ್ಲಿ ದೀಪಾವಳಿ ನವೆಂಬರ್ 7ರಂದು ಇದ್ದರೂ, ಕೆನಡಾದಲ್ಲಿ ಅಕ್ಟೋಬರ್ 14ರಂದೇ ಆಚರಿಸಲಾಗುತ್ತಿದೆ. ನವೆಂಬರ್ ತಿಂಗಳಿನಲ್ಲಿ ಹೊರಾಂಗಣ ಕಾರ್ಯಕ್ರಮಕ್ಕೆ ಪೂರಕವಾದ ವಾತಾವರಣ ಇರುವುದಿಲ್ಲ. ವಿಪರೀತ ಚಳಿ ಇರುವುದರಿಂದ ಕಾರ್ಯಕ್ರಮ ಆಯೋಜನೆ ಕಷ್ಟವಾಗುತ್ತದೆ ಎಂದು ದೀಪಾವಳಿ ಆಚರಣೆಯನ್ನು ಬೇಗನೆ ಮಾಡುತ್ತಿರುವುದಕ್ಕೆ ಅವರು ಕಾರಣ ನೀಡಿದ್ದಾರೆ.
Water fall at Niagara, Canada 🇨🇦 pic.twitter.com/4g5WjZdgrP
— 🇨🇦 S_Raindy 🇨🇦 (@Sothearaindy) 1 October 2018
ನಯಾಗರದಲ್ಲಿ ಅ.14ರಂದು ಆಚರಿಸುತ್ತಿದ್ದರೆ, ಮಿಸ್ಸಿಸ್ಸೌಗಾದಲ್ಲಿ ಅ.12 ಮತ್ತು 13ರಂದು ದೀಪಾವಳಿ ರಾಜ್‌ಮತಾಜ್ ಕಾರ್ಯಕ್ರಮ ನಡೆಯಲಿದೆ. ಐದು ವರ್ಷದ ಹಿಂದೆ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಸುಮಾರು 50 ಸಾವಿರ ಮಂದಿ ಇದರಲ್ಲಿ ಭಾಗವಹಿಸಿದ್ದಾರೆ.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ದಿನದಂದು ನಯಾಗರ ಜಲಪಾತದಲ್ಲಿ ತ್ರಿವರ್ಣ ಧ್ವಜದ ಬೆಳಕಿನ ಚಿತ್ತಾರ ಮೂಡಿಸುವಲ್ಲಿಯೂ ಅಜಯ್ ಮೋದಿ ಶ್ರಮಿಸಿದ್ದರು.












Click it and Unblock the Notifications