'ಲ್ಯಾಂಬ್ಡಾ' ಡೆಲ್ಟಾ ರೂಪಾಂತರಿಗಿಂತಲೂ ಹೆಚ್ಚು ಅಪಾಯಕಾರಿ
ನವದೆಹಲಿ, ಜುಲೈ 07: ಭಾರತದಲ್ಲಿ ಲ್ಯಾಂಬ್ಡಾ ಕೊರೊನಾ ತಳಿಯು ಡೆಲ್ಟಾ ರೂಪಾಂತರಿಗಿಂತಲೂ ಹೆಚ್ಚು ಅಪಾಯಕಾರಿ ಎಂದು ಅಧ್ಯಯನ ಹೇಳಿದೆ.
ದೇಶದಲ್ಲಿ ಕೊರೊನಾ ಪ್ರಕರಣ ಸಂಪೂರ್ಣವಾಗಿ ಹಿಡಿತಕ್ಕೆ ಬಂದಿಲ್ಲ, ಒಂದು ದಿನ ಕಡಿಮೆ ಒಂದು ದಿನ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ, ಮಂಗಳವಾರ ಹಾಗೂ ಬುಧವಾರದ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ 10 ಸಾವಿರ ಪ್ರಕರಣ ಇಂದು ಹೆಚ್ಚಿದೆ.
ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದು, ವ್ಯಾಪಾರ, ವಹಿವಾಟು, ಜನ ಸಂಚಾರ ಮತ್ತೆ ಆರಂಭವಾಗುತ್ತಿದೆ.
ದೇಶದಲ್ಲಿ ಲ್ಯಾಂಬ್ಡಾ ತಳಿಯ ಪ್ರಕರಣಗಳು ಹೆಚ್ಚುತ್ತಿದ್ದು, ಮೂರನೇ ಅಲೆಗೆ ಇದು ಕಾರಣವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಬೇರೆ ರೂಪಾಂತರಿಗಳು ಬಲಿಷ್ಠಗೊಳ್ಳಲಿವೆ
ಡೆಲ್ಟಾ ತಳಿಯ ಹೊರತಾಗಿ ಇನ್ನಷ್ಟು ರೂಪಾಂತರಿ ತಳಿಗಳು ಬಲಾಢ್ಯಗೊಳ್ಳಲಿವೆ ಎಂಬ ಎಚ್ಚರಿಕೆ ಈ ಹಿಂದೆಯೇ ಹೊರಬಿದ್ದಿತ್ತು. ಇದೀಗ ಆ ವಿಚಾರಕ್ಕೆ ಪುಷ್ಠಿ ನೀಡುವಂತಹ ಅಪಾಯಕಾರಿ ಬೆಳವಣಿಗೆ ಕಾಣಿಸಿಕೊಳ್ಳಲಾರಂಭಿಸಿದ್ದು ಡೆಲ್ಟಾ ತಳಿಗಿಂತಲೂ ಶಕ್ತಿಶಾಲಿ ಹಾಗೂ ಅಪಾಯಕಾರಿಯಾದ ಲ್ಯಾಂಬ್ಡಾ ತಳಿ ಜಗತ್ತಿನ ಸುಮಾರು 30 ದೇಶಗಳಲ್ಲಿ ಪತ್ತೆಯಾಗಿದೆ.

ಡೆಲ್ಟಾಗಿಂತಲೂ ಹೆಚ್ಚು ಸೋಂಕು ಹರಡಬಹದು
ತಜ್ಞರು ಇದೀಗ ಲ್ಯಾಂಬ್ಡಾ ತಳಿಯ ಬಗ್ಗೆ ಹೆಚ್ಚು ಚಿಂತಿತರಾಗಿದ್ದು, ಇದು ಡೆಲ್ಟಾ ಮಾದರಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಸೋಂಕು ಹರಡಬಹುದು. ಅದರಲ್ಲಿ ಪ್ರತಿಕಾಯಗಳನ್ನು ತಟಸ್ಥಗೊಳಿಸುವ ಶಕ್ತಿಯೂ ಇದ್ದು, ಬೇರೆ ಮಾದರಿಗಳಿಗಿಂತ ವೇಗವಾಗಿ ಹರಡುವುದರಿಂದ ಅಪಾಯದ ಸಾಧ್ಯತೆಗಳು ಹೆಚ್ಚಿವೆ ಎಂದು ಎಚ್ಚರಿಸಿದ್ದಾರೆ.
ಇನ್ನೂ ಕೆಲ ತಜ್ಞರು ಮಾತ್ರ ಲ್ಯಾಂಬ್ಡಾ ತಳಿ ವೇಗವಾಗಿ ಹರಡುತ್ತದೆ ಎನ್ನುವುದಕ್ಕೆ ಯಾವುದೇ ಅಧಿಕೃತ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಇದೀಗ ಯುರೋಪ್ ಭಾಗದ ದೇಶಗಳು ಡೆಲ್ಟಾ ತಳಿಯ ವಿರುದ್ಧ ಹೋರಾಡುತ್ತಿರುವ ಸಮಯದಲ್ಲೇ ಲ್ಯಾಂಬ್ಡಾ ಕೂಡಾ ಪತ್ತೆಯಾಗಿರುವುದು ಪರಿಸ್ಥಿತಿ ಹದಗೆಡುವುದಕ್ಕೆ ಕಾರಣವಾಗುತ್ತಿದೆ.
ಲ್ಯಾಂಬ್ಡಾ ಸೋಂಕಿನ ಮೂಲ ಪೆರು ದೇಶ
ಬ್ರಿಟನ್ ದೇಶದ ಆರೋಗ್ಯ ಸಚಿವಾಲಯ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಲ್ಯಾಂಬ್ಡಾ ತಳಿಯ ಮೂಲ ಪೆರು ದೇಶ ಎಂದು ಹೇಳಿದೆ, ಪೆರು ಜಗತ್ತಿನಲ್ಲೇ ಅತಿ ಹೆಚ್ಚು ಮರಣ ಪ್ರಮಾಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ತಿಳಿಸಿದೆ. ಅಲ್ಲದೇ ಸೋಮವಾರಕ್ಕೂ ಮೊದಲು ಬ್ರಿಟನ್ನಲ್ಲಿ ಒಟ್ಟು 5 ಲ್ಯಾಂಬ್ಡಾ ಪ್ರಕರಣಗಳು ಪತ್ತೆಯಾಗಿರುವುದು ಕೂಡಾ ಅದೇ ಸಂದರ್ಭದಲ್ಲಿ ವರದಿಯಾಗಿದೆ.

ಪೆರುವಿನಲ್ಲಿ ಲ್ಯಾಂಬ್ಡಾ ಪ್ರಕರಣಗಳು ಹೆಚ್ಚು
ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ ಪೆರು ದೇಶದಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಶೇ.82ರಷ್ಟು ಮಾದರಿಗಳು ಲ್ಯಾಂಬ್ಡಾ ತಳಿಯಿಂದ ಹರಡಿದ್ದಾಗಿವೆ ಎಂದು ಪ್ಯಾನ್ ಅಮೇರಿಕನ್ ಹೆಲ್ತ್ ಆರ್ಗನೈಸೇಶನ್ ಮಾಹಿತಿಯನ್ನು ಉಲ್ಲೇಖಿಸಿ ಯುರೋ ನ್ಯೂಸ್ ವರದಿ ಮಾಡಿದೆ. ಹಾಗೆಯೇ, ಈ ಬಗ್ಗೆ ಮಾಹಿತಿ ನೀಡಿರುವ ಬ್ರಿಟನ್ ದೇಶದ ಆರೋಗ್ಯ ಸಚಿವಾಲಯವು ಕಳೆದ 4 ವಾರಗಳ ಅವಧಿಯಲ್ಲಿ ಲ್ಯಾಂಬ್ಡಾ ತಳಿ 30ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ಇದು ಡೆಲ್ಟಾ ಮಾದರಿಗಿಂತಲೂ ಬಲು ಹೆಚ್ಚು ಅಪಾಯಕಾರಿ ಎನ್ನುವುದನ್ನು ಒತ್ತಿ ಹೇಳಿದೆ.












Click it and Unblock the Notifications