ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸಭೆ ಆರಂಭ
ಬೀಜಿಂಗ್, ನವೆಂಬರ್ 08: ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸಭೆ ಸೋಮವಾರದಿಂದ ಆರಂಭಗೊಂಡಿದೆ.
ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ತನ್ನ ಪ್ರಮುಖ ಸಮಾವೇಶವನ್ನು ಆರಂಭಿಸಿದ್ದು, ಇದು ಪ್ರಮುಖ ನಾಯಕತ್ವ ಬದಲಾವಣೆಗಳಿಗೆ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವಧಿ 2022ಕ್ಕೆ ಅವರ ಅವಧಿ ಮುಗಿಯಲಿದೆ.
ಆದರೆ ಅವರಿಗಾಗಲೇ 3ನೇ ಅವಧಿಗೆ ಮುಂದುವರೆಯಲು ಒಪ್ಪಿಗೆ ಪಡೆದುಕೊಂಡಾಗಿದೆ. ಆದರೂ ಎಲ್ಲ ಪ್ರಮುಖರು ಸಭೆಯಲ್ಲಿ ಅನಿರೀಕ್ಷಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ.
19 ನೇ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಕೇಂದ್ರ ಸಮಿತಿಯು ತನ್ನ ಆರನೇ ಪೂರ್ಣ ಅಧಿವೇಶನವನ್ನು ಬೀಜಿಂಗ್‌ನಲ್ಲಿ ನವೆಂಬರ್ 8 ರಿಂದ 11 ರವರೆಗೆ ನಡೆಸಲಿದೆ.
ಈ ಸಮಯದಲ್ಲಿ ಪಕ್ಷದ 100 ವರ್ಷಗಳ ಪ್ರಯತ್ನಗಳ ಪ್ರಮುಖ ಸಾಧನೆಗಳು ಮತ್ತು ಐತಿಹಾಸಿಕ ಅನುಭವದ ಕುರಿತು ಒಂದು ಪ್ರಮುಖ ನಿರ್ಣಯವನ್ನು ಪರಿಶೀಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕ್ಸಿ ಅಧ್ಯಕ್ಷತೆಯಲ್ಲಿ ಸಿಪಿಸಿ ಸೆಂಟ್ರಲ್ ಕಮಿಟಿ ಪೊಲಿಟಿಕಲ್ ಬ್ಯೂರೋ ಸಭೆಯಲ್ಲಿ ಇದನ್ನು ತೀರ್ಮಾನಿಸಲು ನಿರ್ಧರಿಸಲಾಗಿದೆ. ಮುಂದಿನ ವರ್ಷದ ನಾಯಕತ್ವ ಬದಲಾವಣೆಗೆ ಮುಂಚಿತವಾಗಿ ಇದು ಅತಿದೊಡ್ಡ ಪಕ್ಷದ ಸಭೆಯಾಗಿರುವುದರಿಂದ ಆರನೇ ಪೂರ್ಣ ಅಧಿವೇಶನವನ್ನು ಮಹತ್ವದ್ದೆಂದೇ ಪರಿಗಣಿಸಲಾಗಿದೆ.
ರಾಜಕೀಯವಾಗಿ, ಪಕ್ಷದ ಸ್ಥಾಪಕ ಮಾವೋ ಝೆಡಾಂಗ್ ನಂತರ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿರುವ ಕ್ಸಿ, ಇದು ಪ್ರಮುಖ ಸಭೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಅವರು ಅಭೂತಪೂರ್ವ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಇದಕ್ಕಾಗಿ ಅವರು ತಮಗೆ ಅಡ್ಡ ಬರುವ ಎಲ್ಲರನ್ನು ಸಂಹಾರ ಮಾಡುತ್ತಿದ್ದಾರೆ ಎಂಬ ವರದಿಯೂ ಇದೆ.
ಅವರನ್ನು 2016 ರಲ್ಲಿ ಪಕ್ಷದ ಪ್ರಮುಖ ನಾಯಕನನ್ನಾಗಿ ಮಾಡಲಾಗಿದೆ. ಇದು ಮಾವೋ ಮಾತ್ರ ಅನುಭವಿಸಿದ ಸ್ಥಾನಮಾನ. ನವೆಂಬರ್ 8-11ರ ಪೂರ್ಣ ಅಧಿವೇಶನಕ್ಕಾಗಿ ಆಗಸ್ಟ್‌ನಲ್ಲಿ ಅನಾವರಣಗೊಳಿಸಿದ ಕಾರ್ಯಸೂಚಿಯ ಪ್ರಕಾರ, ರಾಜಕೀಯ ಬ್ಯೂರೋ ತನ್ನ ಕಾರ್ಯ ವರದಿಯನ್ನು ಪೂರ್ಣ ಅಧಿವೇಶನಕ್ಕೆ ಪ್ರಸ್ತುತಪಡಿಸುತ್ತದೆ.
ಕೇಂದ್ರ ಸಮಿತಿಯ 370 ಕ್ಕಿಂತ ಹೆಚ್ಚು ಪೂರ್ಣ ಮತ್ತು ಪರ್ಯಾಯ ಸದಸ್ಯರು ಪ್ಲೀನಂನಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಎಲ್ಲವೂ ತೀರ್ಮಾನವಾಗಲಿದೆ.
ಜಾಕಿಚಾನ್ ಕಮ್ಯುನಿಸ್ಟ್ ಪಕ್ಷ ಸೇರ್ಪಡೆ ಸಾಧ್ಯತೆ: ಸಮರ ಕಲೆಗಳ ಪ್ರತಿಭೆ ಮತ್ತು ವಿಶ್ವವೇ ಗುರುತಿಸಿದ, ಪ್ರಭಾವಶಾಲಿ ಚಲನಚಿತ್ರ ನಟರಲ್ಲಿ ಒಬ್ಬರಾದ ಜಾಕಿ ಚಾನ್ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಗೆ ಸೇರಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಹಿಂದಿನ ಬ್ರಿಟಿಷ್ ವಸಾಹತು ಪ್ರದೇಶದಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳ ಮೇಲೆ ಬೀಜಿಂಗ್ ನಡೆಸಿದ ದಬ್ಬಾಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ 67ರ ಜಾಕಿ ಚಾನ್ ಈ ಹಿಂದೆ ತೀವ್ರ ಟೀಕೆಗೆ ಗುರಿಯಾಗಿದ್ದರು.
ಕಳೆದ ಗುರುವಾರ ಬೀಜಿಂಗ್‌ನಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಸಿಪಿಸಿಗೆ ಸೇರ್ಪಡೆಗೊಳ್ಳುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ವಿಚಾರ ಸಂಕಿರಣದಲ್ಲಿ, ಚೀನಾ ಫಿಲ್ಮ್ ಅಸೋಸಿಯೇಷನ್‌ನ ಉಪಾಧ್ಯಕ್ಷರೂ ಆಗಿರುವ ಚಾನ್ ಅವರು ಸಿಪಿಸಿಗೆ ಸೇರ್ಪಡೆಗೊಳ್ಳುವ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ.
ನಾನು ಸಿಪಿಸಿ ಸದಸ್ಯನಾಗಲು ಬಯಸುತ್ತೇನೆ ಎಂದಿರುವ ಅವರು ಹಲವಾರು ವರ್ಷಗಳಿಂದ ಸಿಪಿಸಿಯ ಬೆಂಬಲಿಗರಾಗಿದ್ದಾರೆ ಮತ್ತು ಚೀನಾದ ಜನರ ರಾಜಕೀಯ ಸಮಾಲೋಚನಾ ಸಮ್ಮೇಳನದ (ಸಿಪಿಪಿಸಿಸಿ) ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನಾನು ಈವರೆಗೆ ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ನಾನು ಹೋದಲ್ಲೆಲ್ಲಾ ಚೈನೀಸ್ ಆಗಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ. ಐದು-ನಕ್ಷತ್ರಗಳ ಕೆಂಪು ಧ್ವಜವನ್ನು ಜಗತ್ತಿನ ಎಲ್ಲೆಡೆ ಗೌರವಿಸಲಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.