ಗಾಜಾ ಮಕ್ಕಳಿಗೆ ಶಾಲೆಗಳು ಮತ್ತೆ ಆರಂಭ, ಅಗತ್ಯ ಪರಿಕರ ಪೂರೈಕೆಗೆ ಒತ್ತಾಯ
ಗಾಜಾ ಪಟ್ಟಿಯಲ್ಲಿ ಈಗ ನೂರಾರು ಸವಾಲು ಎದುರಾಗಿರುವ ಸಮಯದಲ್ಲೇ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಯುದ್ಧ ಶುರುವಾಗಿ ಸುಮಾರು 2 ವರ್ಷಗಳೇ ಉರುಳಿದ್ದು, ಜೀವ ಉಳಿಸಿಕೊಂಡು ಜೀವನ ನಡೆಸಲು ಸಾಮಾನ್ಯರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೂಡ ಕೈತಪ್ಪಿ ಹೋಗಿತ್ತು. ಆದರೆ ಇದೀಗ ಶಾಲೆಗಳನ್ನ ರೀ ಓಪನ್ ಮಾಡುವ ಬಗ್ಗೆ ಭಾರಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಮಧ್ಯಪ್ರಾಚ್ಯದ ಗಾಜಾ ಪಟ್ಟಿಯಲ್ಲಿ ಇದೀಗ ಶಾಲೆಗಳನ್ನು ಮತ್ತೆ ತೆರದು ಪಾಠ ಮಾಡಲಾಗುತ್ತಿದೆ. ಈ ಮೂಲಕ ಗಾಜಾ ಪಟ್ಟಿಯಲ್ಲಿನ ಶಾಲೆಗಳು ರೀ ಓಪನ್ ಆಗಿದ್ದು, ಅಲ್ಲಿನ ಲಕ್ಷಾಂತರ ಮಕ್ಕಳ ಕಲಿಕೆಗೆ ಒತ್ತು ನೀಡಲಾಗಿದೆ. ಆದರೆ ಶಾಲೆಗೆ ಮರಳಿದ ಮಕ್ಕಳಿಗೆ ಪಾಠ ಕೇಳಲು ಹಾಗೂ ವಿದ್ಯಾಭ್ಯಾಸ ಮುಂದುವರಿಸಲು ಸೂಕ್ತ ಪರಿಕರ ಇಲ್ಲದೆ ಪರದಾಡುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಮೂಲಕ ಹೊಸ ದಿಕ್ಕಿನ ಕಡೆಗೆ ಗಾಜಾ ಪಟ್ಟಿ ಹೆಜ್ಜೆ ಹಾಕುತ್ತಿದ್ದರೂ ನೂರಾರು ಸವಾಲು ಇದೀಗ ಎದುರಾಗುತ್ತಿವೆ.

ಪುಸ್ತಕ, ಬ್ಯಾಗ್ & ಸಮವಸ್ತ್ರ ಇಲ್ಲ!
2023 ಅಕ್ಟೋಬರ್ ತಿಂಗಳಲ್ಲಿ ಗಾಜಾ ಪಟ್ಟಿಯಲ್ಲಿ ಯುದ್ಧ ಶುರುವಾದ ನಂತರ ವಿದ್ಯಾಭ್ಯಾಸವು ಕೂಡ ನಿಂತು ಹೋಗಿತ್ತು. ಆದರೆ ಇದೀಗ ಮತ್ತೆ ಶಾಲೆಗಳು ಪುನರ್ ಆರಂಭವಾಗಿದ್ದು, ಈ ಕುರಿತು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 11 ವರ್ಷದ ಬಾಲಕನೊಬ್ಬ ಈ ಹಿಂದಿನ ಹಾಗೂ ಪ್ರಸಕ್ತ ಶಾಲೆಯ ವಾತಾವರಣದ ಬಗ್ಗೆ ಮಾತನಾಡಿದ್ದು, ಬ್ಯಾಗ್ ಸೇರಿದಂತೆ ಪುಸ್ತಕ ಮತ್ತು ಸಮವಸ್ತ್ರ ಇಲ್ಲದೆ ಶಾಲೆಗೆ ಹೋಗುತ್ತಿರುವ ಅನುಭವ ತಿಳಿಸಿದ್ದಾನೆ. ಹೀಗೆ ಅಲ್ಲಿನ ವಿದ್ಯಾರ್ಥಿಗಳು ನೀಡಿರುವ ಹೇಳಿಕೆಗಳು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ. ಮತ್ತೊಂದು ಕಡೆ ಸೂಕ್ತ ಪರಿಕರ ಒದಗಿಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಒತ್ತಾಯ ಕೂಡ ಕೇಳಿ ಬಂದಿದೆ.
ತಾತ್ಕಾಲಿಕ ತರಗತಿಗಳು ಶುರು...
ಕುಸಿದು ಬಿದ್ದ ಕಟ್ಟಡಗಳು ಹಾಗೂ ನಾಪತ್ತೆಯಾದ ಶಾಲೆಗಳ ನಡುವೆ ಇದೀಗ ತಾತ್ಕಾಲಿಕವಾಗಿ ಶಾಲೆ ತೆರೆಯಲಾಗಿದೆ. ಜಾಗತಿಕ ಮಟ್ಟದಲ್ಲಿ ಕೂಡ ಶಾಲಾ & ಕಾಲೇಜುಗಳು ಮತ್ತೆ ತೆರೆಯಬೇಕು ಎಂಬ ಬೇಡಿಕೆ ಹೆಚ್ಚಾಗಿದ್ದ ಕಾರಣಕ್ಕೆ ಈಗ ಗಾಜಾ ಪಟ್ಟಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದರೆ ಕಳೆದ ಎರಡು ವರ್ಷಗಳಿಂದ ಭೀಕರ ಯುದ್ಧದ ಸುಳಿಯಲ್ಲಿ ಸಿಲುಕಿದ್ದ ಗಾಜಾ ಪಟ್ಟಿಯಲ್ಲಿ ನೋವುಗಳನ್ನು ಮರೆತು ಮತ್ತೆ ಶಾಲೆಗಳ ಬಾಗಿಲು ತೆರೆಯಲು ಸಾಧ್ಯವಾಗದೇ ಇರುವ ಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ಅನಾಥ ಮಕ್ಕಳು ಕೂಡ ಶಾಲೆಗೆ ಒದ್ದಾಡುತ್ತಾ ಬರುವಂತೆ ಆಗಿದೆ.












Click it and Unblock the Notifications