India vs Canada: ಭಾರತದಿಂದ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡ ಕೆನಡಾ- ಮುಂದುವರಿದ ಸಂಘರ್ಷ
ಒಟ್ಟಾವ್, ಅಕ್ಟೋಬರ್ 20: ಸಿಖ್ ಪ್ರತ್ಯೇಕತಾವಾದಿ ಉಗ್ರನ ಹತ್ಯೆಯ ವಿವಾದದ ನಂತರ ಭಾರತ ಹಾಗೂ ಕೆನಡಾದ ನಡುವೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿದೆ. ಕೆನಡಾ ದೇಶವು ಭಾರತದಿಂದ 41 ರಾಜತಾಂತ್ರಿಕರನ್ನು ವಾಪಾಸ್ ಎಂದು ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಗುರುವಾರ ಹೇಳಿದ್ದಾರೆ.
ಜೂನ್‌ನಲ್ಲಿ ಸಿಖ್ ದೇವಾಲಯದ ಹೊರಗೆ ಹರ್ದೀಪ್ ಸಿಂಗ್ ನಿಜ್ಜರ್ ಎಂಬ ಪ್ರತ್ಯೇಕವಾದಿಯ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಈ ಹತ್ಯೆಯ ಹಿಂದೆ ಭಾರತದ ಏಜೆನ್ಸಿಗಳ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದರು. ಆ ನಂತರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆನಡಾ ವಿರುದ್ಧ ಸಂಘರ್ಷ ಸಾರಿದೆ.

ಭಾರತದಲ್ಲಿನ ರಾಜತಾಂತ್ರಿಕರನ್ನು ಕೆನಡಾಗೆ ವಾಪಸ್ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಏಕಪಕ್ಷೀಯವಾಗಿ ರಾಜತಾಂತ್ರಿಕ ಅಧಿಕಾರಿಗಳ ಸ್ಥಾನಮಾನವನ್ನು ರದ್ದುಗೊಳಿಸುವುದಾಗಿ ಭಾರತ ಹೇಳಿತ್ತು.
ಇದನ್ನು ಉಲ್ಲೇಖಿಸಿರುವ ಜೋಲಿ, 'ರಾಜತಾಂತ್ರಿಕರು ಶುಕ್ರವಾರದೊಳಗೆ ಭಾರತ ಬಿಟ್ಟು ತೊಲಗದಿದಲ್ಲಿ ಏಕಪಕ್ಷೀಯವಾಗಿ ಅವರ ಅಧಿಕೃತ ಸ್ಥಾನಮಾನವನ್ನು ರದ್ದುಗೊಳಿಸುವುದಾಗಿ ಭಾರತ ಬೆದರಿಕೆ ಹಾಕಿದೆ' ಎಂದು ಹೇಳಿದ್ದಾರೆ.
ಈ ಕ್ರಮವು ಅಸಮಂಜಸವಾಗಿದೆ. ರಾಜತಾಂತ್ರಿಕ ಸಂಬಂಧಗಳ ಕುರಿತಾತ ವಿಯೆನ್ನಾ ಒಪ್ಪಂದವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಅವರು ತಿಳಿಸಿದ್ದಾರೆ.
'ನಮ್ಮ ರಾಜತಾಂತ್ರಿಕರ ಸುರಕ್ಷತೆ ನಮಗೆ ಮುಖ್ಯ. ಭಾರತದ ಕ್ರಮಗಳ ಪರಿಣಾಮಗಳನ್ನು ಗಮನಿಸಿದರೆ ಅವರು ಅಲ್ಲಿ ಸುರಿಕ್ಷಿತವಾಗಿಲ್ಲ. ನಮ್ಮ ರಾಜತಾಂತ್ರಿಕರು ಭಾರತದಿಂದ ಸುರಕ್ಷಿತವಾಗಿ ನಿರ್ಗಮಿಸಲು ನಾವು ಅನುಕೂಲ ಮಾಡಿದ್ದೇವೆ' ಎಂದು ಜೋಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಭಯೋತ್ಪಾದಕ ಎಂದು ಹೆಸರಿಸಲಾದ ಕೆನಡಾದ ಪ್ರಜೆ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಟ್ರುಡೊ ಹೇಳಿದ್ದರು.
ಟ್ರುಡೊ ಹೇಳಿಕೆಯು ಅಸಂಬದ್ಧವಾಗಿದೆ ಹಾಗೂ ಪೂರ್ವಾಗ್ರಹದಿಂದ ಕೂಡಿದೆ ಎಂದು ಭಾರತ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು.
ಸುಮಾರು 20 ಲಕ್ಷ ಭಾರತೀಯರು ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಇದು ಕೆನಡಾದ ಒಟ್ಟಾರೆ ಜನಸಂಖ್ಯೆಯ ಸುಮಾರು 5 ಪ್ರತಿ ಶತದಷ್ಟು ಆಗಿದೆ. ಭಾರತದಿಂದ ಸುಮಾರು ಶೇ 40 ರಷ್ಟು ಜನರು ಅಧ್ಯಯನದ ಸಲುವಾಗಿ ಕೆನಡಾಗೆ ತೆರಳುತ್ತಾರೆ.
ಗ್ರಾಹಕರು, ಕುಟುಂಬಗಳು, ಶಿಕ್ಷಣ ಸಂಸ್ಥೆಗಳು, ಸಮುದಾಯಗಳು, ಒಟ್ಟಾರೆಯಾಗಿ ಕೆನಡಾದ ವ್ಯವಹಾರಗಳಿಗೆ ಭಾರತದ ಈ ನಡೆಯು ಆತಂಕಗಳನ್ನು ಹುಟ್ಟು ಹಾಕಿದೆ ಎಂದು ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.












Click it and Unblock the Notifications