Canada: ಕೆನಡಾದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಪತನ- 18 ಜನರಿಗೆ ಗಾಯ
ಲ್ಯಾಂಡಿಂಗ್ ಸಮಯದಲ್ಲಿ ಡೆಲ್ಟಾ ಏರ್ಲೈನ್ಸ್ ವಿಮಾನ ಅಪಘಾತಕ್ಕೀಡಾದ ಘಟನೆ ಕೆನಡಾ ಟೊರೊಂಟೊದಲ್ಲಿರುವ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ಅಮೆರಿಕದ ಮಿನ್ನಿಯಾಪೋಲಿಸ್‌ನಿಂದ ಟೊರೊಂಟೊಗೆ ಆಗಮಿಸುವ ವೇಳೆ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ 76 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಸೇರಿದಂತೆ 80 ಜನರಿದ್ದರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ 18 ಜನರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಫ್ಲಾಪ್ ಆಕ್ಯೂವೇಟರ್ ವೈಫಲ್ಯ (FAF)ದಿಂದಾಗಿ ವಿಮಾನದ ರೆಕ್ಕೆಗಳ ಮೇಲಿನ ಫ್ಲಾಪ್‌ಗಳು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಇದರಿಂದಾಗಿ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಇದ್ದಕ್ಕಿದ್ದಂತೆ ಉರುಳಿದೆ. ಅಲ್ಲದೆ ಈ ಸಮಯದಲ್ಲಿ ಟೊರೊಂಟೊದಲ್ಲಿ ತೀವ್ರ ಹಿಮಬಿರುಗಾಳಿ ಇತ್ತು. ಗಾಳಿಯ ವೇಗ ಗಂಟೆಗೆ 65 ಕಿ.ಮೀ ಬೀಸುತ್ತಿತ್ತು. ಇದು ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಇದಕ್ಕೆ ನಿಖರ ಕಾರಣ ಇನ್ನೂ ಕೂಡ ಬಹಿರಂಗವಾಗಿಲ್ಲ.

ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿ (TSB) ಮತ್ತು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಅಪಘಾತದ ತನಿಖೆ ನಡೆಸುತ್ತಿವೆ. ಅಪಘಾತದ ನಂತರ ರಕ್ಷಣಾ ತಂಡ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಅಗ್ನಿಶಾಮಕ ದಳ ವಿಮಾನದಲ್ಲಿನ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ವಿಮಾನ ತಲೆಕೆಳಗಾಗಿ ಬಿದ್ದಿದ್ದರಿಂದ ಅನೇಕರಿಗೆ ಗಾಯಗಳಾಗಿವೆ.
ಈ ಅಪಘಾತದಿಂದಾಗಿ ಟೊರೊಂಟೊ ವಿಮಾನ ನಿಲ್ದಾಣದಲ್ಲಿ 200 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಕೆಲವು ಗಂಟೆಗಳ ನಂತರ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ.
ಕಳೆದ 2 ವಾರಗಳಲ್ಲಿ ಪ್ರಮುಖ ವಿಮಾನ ಅಪಘಾತಗಳು
ಫೆಬ್ರವರಿ 1: ಅಮೆರಿಕದ ಫಿಲಡೆಲ್ಫಿಯಾದಲ್ಲಿ ವಿಮಾನ ಅಪಘಾತಕ್ಕೀಡಾಗಿ 6 ಜನರು ಸಾವನ್ನಪ್ಪಿದರು. ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ 30 ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ಸಣ್ಣ ವೈದ್ಯಕೀಯ ವಿಮಾನ ಇದು.

ಜನವರಿ 29: ಅಮೆರಿಕದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ನಡುವೆ ಡಿಕ್ಕಿಯಾಗಿ 67 ಜನರು ಸಾವನ್ನಪ್ಪಿದರು. ವಾಷಿಂಗ್ಟನ್ ಡಿಸಿ ಬಳಿಯ ಪೊಟೊಮ್ಯಾಕ್ ನದಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಅಮೆರಿಕನ್ ಏರ್ಲೈನ್ಸ್ ವಿಮಾನ ಮತ್ತು ಸೇನಾ ಹೆಲಿಕಾಪ್ಟರ್ ಡಿಕ್ಕಿ ಹೊಡೆದಿವೆ.












Click it and Unblock the Notifications