ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಗೆ ಹೆದರಿತಾ ಬಲಿಷ್ಠ ಬ್ರಿಟನ್ ಸೇನೆ? ಬೀಜಿಂಗ್ ಆವಾಜ್ ಹೆಂಗಿತ್ತು?

|
Google Oneindia Kannada News

ಚೀನಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ತಿಕ್ಕಾಟ ನಿಲ್ಲುತ್ತಿಲ್ಲ. ದಿನೇ ದಿನೆ ಈ ದ್ವೇಷ ಹೆಚ್ಚಾಗುತ್ತಲೇ ಸಾಗಿದೆ. ಈಗ ಆ ದ್ವೇಷದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ನಡೆದಿದೆ. ಇತ್ತೀಚಿಗೆ ದಕ್ಷಿಣ ಚೀನಾ ಸಮುದ್ರ ಪ್ರವೇಶಕ್ಕೆ ಅಮೆರಿಕ ಹಾಗೂ ಬ್ರಿಟನ್ ಭಾರಿ ಒತ್ತಡ ಹಾಕುತ್ತಿವೆ. ಆದರೆ ಇದರ ವಿರುದ್ಧ ಚೀನಾ ರೊಚ್ಚಿಗೆದ್ದು ಪದೇ ಪದೆ ವಾರ್ನಿಂಗ್ ಕೊಡುತ್ತಿದೆ. ಈ ಎಚ್ಚರಿಕೆಗೆ ಬಗ್ಗದ ಅಮೆರಿಕ ಮತ್ತು ಬ್ರಿಟನ್ ತಮ್ಮ ಹಠ ಸಾಧನೆಗೆ ಮುಂದಾಗಿವೆ.

ಇದೇ ರೀತಿ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಯುದ್ಧನೌಕೆ 'ಕ್ವೀನ್ ಎಲಿಜಬೆತ್' ಸಂಚಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಬ್ರಿಟನ್‌ಗೆ ಬೀಜಿಂಗ್ ಬಿಸಿ ಮುಟ್ಟಿಸಿತ್ತು. ಕೆಲದಿನಗಳ ಹಿಂದಷ್ಟೇ ವಿವಾದಿತ ದ್ವೀಪಗಳ ಬಳಿ ತೆರಳಲು ಬ್ರಿಟನ್‌ ಪ್ಲ್ಯಾನ್ ಮಾಡಿತ್ತು. ದಕ್ಷಿಣ ಚೀನಾ ಸಮುದ್ರದಲ್ಲೇ ಇರುವ ಈ ದ್ವೀಪಗಳು ವಿವಾದದ ಕೇಂದ್ರಬಿಂದು.

ಹೀಗಾಗಿಯೇ ಸುದ್ದಿ ತಿಳಿಯುತ್ತಿದ್ದಂತೆ ಬೀಜಿಂಗ್, ಬ್ರಿಟನ್‌ಗೆ ಖಡಕ್ ಎಚ್ಚರಿಕೆ ರವಾನಿಸಿತ್ತು. ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಬಹಿರಂಗ ಹೇಳಿಕೆ ನೀಡಿರುವ ಬ್ರಿಟನ್ ನಮಗೆ ಚೀನಾ ಸೇನೆ ಜೊತೆ ಸಂಘರ್ಷ ನಡೆಸಲು ಇಷ್ಟವಿಲ್ಲ ಎಂದಿದೆ. ದಕ್ಷಿಣ ಚೀನಾ ಸಮುದ್ರದಿಂದ ಜಾಗ ಖಾಲಿ ಮಾಡಲು ಬ್ರಿಟನ್ ಮುಂದಾಗಿದೆ.

ನಿರಂತರ ಸಂಘರ್ಷ ಏಕೆ..?

ನಿರಂತರ ಸಂಘರ್ಷ ಏಕೆ..?

ಅಷ್ಟಕ್ಕೂ 2018 ಮತ್ತು 2019ರಲ್ಲಿ ಇಂತಹದ್ದೇ ವಿವಾದ ಭುಗಿಲೆದ್ದು, ಚೀನಾ-ಬ್ರಿಟನ್ ನಡುವಿನ ವ್ಯಾಪಾರಕ್ಕೆ ಕುತ್ತು ಎದುರಾಗಿತ್ತು. ಇದೀಗ ಸಿಂಗಾಪುರ್-ಫಿಲಿಪೈನ್ಸ್ ನಡುವೆ ನೇರ, ಹತ್ತಿರದ ಜಲಮಾರ್ಗ ನಿರ್ಮಿಸುವ ನೆಪದಲ್ಲಿ ಬ್ರಿಟನ್ ನೌಕೆ ದಕ್ಷಿಣ ಚೀನಾ ಸಮುದ್ರಕ್ಕೆ ಬಂದಿತ್ತು. ಆದರೆ ವಿಚಾರ ತಿಳಿಯುತ್ತಿದ್ದಂತೆ ಕೆಂಡವಾಗಿದ್ದ ಚೀನಾ ನೇರ ಎಚ್ಚರಿಕೆ ನೀಡಿ, ಮೊದಲು ಇಲ್ಲಿಂದ ಹೊರಡಿ ಎಂದು ಆಜ್ಞೆ ಮಾಡಿತ್ತು. ಮೊದಲಿಗೆ ಚೀನಾದ ಈ ಎಚ್ಚರಿಕೆಗೆ ಕೇರ್ ಮಾಡದ ಬ್ರಿಟನ್ ಈಗ ಮನಸ್ಸು ಬದಲಿಸಿದಂತೆ ಕಾಣುತ್ತಿದೆ. ಹೀಗಾಗಿಯೇ ನಮಗೆ ಚೀನಾ ಸೇನೆ ಜೊತೆ ಸಂಘರ್ಷ ಬೇಡ ಎಂಬ ಸಂದೇಶ ನೀಡಿದೆ ಬ್ರಿಟನ್.

ಅಮೆರಿಕ ನೌಕೆ ಎಸ್ಕೇಪ್!

ಅಮೆರಿಕ ನೌಕೆ ಎಸ್ಕೇಪ್!

ಕೆಲ ತಿಂಗಳ ಹಿಂದಷ್ಟೇ ಅಮೆರಿಕದ ಯುದ್ಧ ನೌಕೆಗೂ ಇದೇ ರೀತಿ ಮನೆ ದಾರಿ ತೋರಿಸಿತ್ತು ಚೀನಾ. ಈಗಲೂ ಬ್ರಿಟನ್ ಯುದ್ಧ ನೌಕೆ ಓಡಿಸುವಲ್ಲಿ ಯಶಸ್ವಿಯಾಗಿದೆ. ಚೀನಾ ಜೊತೆಗೆ ಸಂಘರ್ಷ ನಡೆಸಲು ಪಾಶ್ಚಿಮಾತ್ಯರಿಗೆ ಬಿಲ್‌ಕುಲ್ ಇಷ್ಟವಿಲ್ಲ. ಏಕೆಂದರೆ ಚೀನಾ ಸೇನೆ ಜಗತ್ತಲ್ಲೇ ಅತ್ಯಂತ ಬಲಶಾಲಿ ಎಂಬುದನ್ನ ಸಾಬೀತುಪಡಿಸಿದೆ. ಮತ್ತೊಂದ್ಕಡೆ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಬ್ರಿಟನ್ ಮತ್ತು ಅಮೆರಿಕ ಈಗ ಯುದ್ಧದ ಮೂಡ್‌ನಲ್ಲಿ ಇಲ್ಲ. ಚೀನಾ ಕೆಣಕಿದರೆ ಏನಾಗುತ್ತೆ ಎಂಬುದು ಇಬ್ಬರಿಗೂ ಚೆನ್ನಾಗಿ ಗೊತ್ತು. ಈ ಕಾರಣಕ್ಕೆ ಯುದ್ಧದ ಮಾತು ಬಿಟ್ಟು ಸ್ನೇಹದ ಹಾದಿ ಹಿಡಿಯುತ್ತಿವೆ ಈ ಎರಡೂ ಶ್ರೀಮಂತ ರಾಷ್ಟ್ರಗಳು.

ಜಗತ್ತಿನಲ್ಲೇ ಅತಿಹೆಚ್ಚು ನೌಕೆಗಳು

ಜಗತ್ತಿನಲ್ಲೇ ಅತಿಹೆಚ್ಚು ನೌಕೆಗಳು

ಚೀನಾ ಸರ್ಕಾರ ನೌಕಾ ಬಲ ಹೆಚ್ಚಿಸಲು ಮತ್ತಷ್ಟು ಆದ್ಯತೆ ನೀಡುತ್ತಿದ್ದು, ಮುಂದಿನ 4 ವರ್ಷಗಳ ಅವಧಿಯಲ್ಲಿ ಈಗಿರುವ 360 ಯುದ್ಧ ನೌಕೆಗಳನ್ನು 400ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದು ತನ್ನ ಜಲ ಗಡಿಯಲ್ಲಿನ ಭದ್ರತೆ ಹಾಗೂ ಶತ್ರು ಪಡೆಗಳಿಗೆ ದೊಡ್ಡ ಸಂದೇಶವಾಗಲಿದೆ ಎಂಬುದು ಚೀನಾ ಲೆಕ್ಕಾಚಾರ. ಈಗಾಗಲೇ ಭೂ ಸೇನೆ ಹಾಗೂ ವಾಯು ಸೇನೆಗಳಲ್ಲೂ ಬಲ ಪ್ರದರ್ಶನ ಮಾಡಿರುವ ಚೀನಿ ಸೇನೆ, ಸಮದ್ರದ ಮೇಲೂ ಹಿಡಿತ ಸಾಧಿಸುವ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಪ್ರತಿಪಾದಿಸುವ ಹಕ್ಕು ಸ್ವಾಮ್ಯ ಇದರಿಂದ ಮತ್ತಷ್ಟು ಗಟ್ಟಿಯಾಗಲಿದೆ.

ಟ್ರಿಲಿಯನ್ ಡಾಲರ್ ಜಾಗಕ್ಕೆ ವಾರ್?

ಟ್ರಿಲಿಯನ್ ಡಾಲರ್ ಜಾಗಕ್ಕೆ ವಾರ್?

ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಸಾಧಿಸುವ ಚೀನಾ ಪ್ರಯತ್ನ ಇಂದು, ನಿನ್ನೆಯದಲ್ಲ. ಸುಮಾರು 3-4 ದಶಕಗಳಿಂದಲೂ ಈ ಜಾಗಕ್ಕಾಗಿ ರಕ್ತ ರಹಿತ ಬಡಿದಾಟ ನಡೆಯುತ್ತಲೇ ಇದೆ. ಅಮೆರಿಕ ಚೀನಾ ವಿರುದ್ಧ ಈ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಕತ್ತಿ ಮಸೆಯುತ್ತಲೇ ಇದೆ. ಇಷ್ಟಕ್ಕೆಲ್ಲಾ ಕಾರಣವಾಗಿರುವುದು ದಕ್ಷಿಣ ಚೀನಾ ಸಮುದ್ರದಲ್ಲಿ ಅವಿತಿರುವ ಸಂಪತ್ತು. ಸುಮಾರು 3.5 ಮಿಲಿಯನ್ ಸ್ಕ್ವೇರ್ ಕಿಲೋ ಮೀಟರ್ ಅಂದರೆ ಭಾರತ ಹೊಂದಿರುವ ಭೂಭಾಗಕ್ಕಿಂತಲೂ ದೊಡ್ಡದಾದ ಪ್ರದೇಶ ದಕ್ಷಿಣ ಚೀನಾ ಜಲಗಡಿಗೆ ಇದೆ. ಭಾರಿ ಪ್ರಮಾಣದ ನೈಸರ್ಗಿತ ಸಂಪನ್ಮೂಲ ಹಾಗೂ ವ್ಯವಹಾರ ನಡೆಸುವ ಜಾಗ ಇದಾಗಿದೆ.

ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ?

ಎಷ್ಟಿದೆ ಗೊತ್ತಾ ಸಂಪತ್ತಿನ ಪ್ರಮಾಣ?

ಅಮೆರಿಕದ ಸರ್ಕಾರಿ ಸಂಸ್ಥೆ ನೀಡಿರುವ ಮಾಹಿತಿಯಂತೆ ದಕ್ಷಿಣ ಚೀನಾ ಸಮುದ್ರದಲ್ಲಿ 190 ಟ್ರಿಲಿಯನ್ ಕ್ಯೂಬಿಕ್ ಅಡಿ ನೈಸರ್ಗಿಕ ಅನಿಲ ಅಡಗಿದೆ. ಇಷ್ಟು ಗ್ಯಾಸ್ ಸಿಕ್ಕರೆ ಹತ್ತಾರು ವರ್ಷ ಚೀನಾ ಯಾರ ಬಳಿಯೂ ನ್ಯಾಚ್ಯುರಲ್ ಗ್ಯಾಸ್‌ಗೆ ಕೈಚಾಚುವ ಅವಶ್ಯಕತೆ ಇರೋದಿಲ್ಲ. ಹಾಗೇ 11 ಬಿಲಿಯನ್ ಬ್ಯಾರೆಲ್‌ ಪೆಟ್ರೋಲ್, ಡೀಸೆಲ್ ಸಂಯುಕ್ತ ಇಲ್ಲಿ ಅಡಗಿದೆ. ಇಷ್ಟೇ ಆಗಿದ್ದರೆ ಚೀನಾ ಅಷ್ಟೊಂದು ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತಿತ್ತೇನೋ. ಆದರೆ ಇದೆಲ್ಲವನ್ನೂ ಮೀರಿಸುವ ಖಜಾನೆ ದಕ್ಷಿಣ ಚೀನಾ ಸಮುದ್ರದಲ್ಲಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೂಲ್ಯ ಅದಿರುಗಳಿವೆ. ಚಿನ್ನ ಸೇರಿದಂತೆ ಟಿನ್, ಕ್ರೋಮೈಟ್, ಮ್ಯಾಗ್ನಟೈಟ್, ಜಿರ್ಕಾನ್ ಮತ್ತಿತರ ಅದಿರುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಇಷ್ಟು ಪ್ರಮಾಣದ ಸಂಪತ್ತನ್ನು ಬಿಟ್ಟುಕೊಡಲು ಚೀನಾ ಬಿಲ್‌ಕುಲ್ ಸಿದ್ಧವಿಲ್ಲ.

English summary
Britain says it has no plans for South China Sea confrontation after Beijing warning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X