1 ಲಕ್ಷ ಡಾಲರ್ ಸಮೀಪಕ್ಕೆ ಬಿಟ್‌ಕಾಯಿನ್, ಹೂಡಿಕೆದಾರರ ದಿಲ್ ಖುಷ್!
'ಬಿಟ್‌ಕಾಯಿನ್' ಅನ್ನೋ ಮಾಯಾಜಾಲ ಈಗ ಎಲ್ಲಾ ಕಡೆಗೂ ಹಬ್ಬುತ್ತಿದ್ದು, ಹೂಡಿಕೆಯನ್ನ ಮಾಡಿದವರಿಗೆ ಭರ್ಜರಿ ಲಾಭ ಸಿಗುತ್ತಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಪಟ್ಟ ಪಡೆದ ನಂತರ, ಪರಿಸ್ಥಿತಿ ಮತ್ತಷ್ಟು ಬದಲಾಗಿ ಹೋಗಿದ್ದು ಕ್ರಿಪ್ಟೋ ಕರೆನ್ಸಿ ಆಕಾಶಕ್ಕೆ ಜಿಗಿದಿವೆ. ಹಾಗಿದ್ರೆ 'ಬಿಟ್‌ಕಾಯಿನ್' ಮೌಲ್ಯ ಇವತ್ತು ಎಷ್ಟಾಗಿದೆ? ಎಷ್ಟಕ್ಕೆ ಏರಿಕೆ ಕಂಡಿದೆ ಒಂದು 'ಬಿಟ್‌ಕಾಯಿನ್'? ಬನ್ನಿ ತಿಳಿಯೋಣ.
ಇದು ಡಿಜಿಟಲ್ ಜಮಾನ, ಹೀಗಾಗಿ ಇಲ್ಲಿ ಎಲ್ಲವೂ ಬದಲಾವಣೆ ಕಡೆಗೆ ಹೆಜ್ಜೆ ಹಾಕುತ್ತಿದೆ. ಅದ್ರಲ್ಲೂ ಹಣವನ್ನ ಪೇಪರ್ ಅಥವಾ ವಸ್ತುವಿನ ರೂಪದಲ್ಲಿ ಚಲಾವಣೆ ಮಾಡುವ ಕಾಲ ಕೂಡ ನಿಧಾನವಾಗಿ ಮರೆಯಾಗುತ್ತಿದ್ದು, ಈಗ ಏನಿದ್ದರೂ ಡಿಜಿಟಲ್ ಮನಿಗೆ ಮೊದಲ ಸ್ಥಾನ ಎನ್ನಬಹುದು. ಯಾಕಂದ್ರೆ ಡಿಜಿಟಲ್ ಕರೆನ್ಸಿ ಈಗ ಜಗತ್ತನ್ನು ಆಳಲು ಸಜ್ಜಾಗಿದ್ದು, ಹೀಗೆ ಇಡೀ ಜಗತ್ತಿನಾದ್ಯಂತ ಡಿಜಿಟಲ್ ಕರೆನ್ಸಿ ಹವಾ ಜೋರಾಗಿದೆ. ಡೊನಾಲ್ಡ್ ಟ್ರಂಪ್ ಕ್ರಿಪ್ಟೋ ಕರೆನ್ಸಿ ಬೆಂಬಲಿಸುವ ಭರವಸೆ ನೀಡಿದ ನಂತರ ದೊಡ್ಡ ಸಂಚಲನ ಸೃಷ್ಟಿಯಾಗಿದೆ.

'ಬಿಟ್‌ಕಾಯಿನ್' ಬೆಲೆ 98 ಸಾವಿರ ಡಾಲರ್!
ಹೌದು, ಈಗ 'ಬಿಟ್‌ಕಾಯಿನ್' ಬೆಲೆ ಬರೋಬ್ಬರಿ 98 ಸಾವಿರ ಡಾಲರ್ ಅಂದ್ರೆ ಸುಮಾರು 82 ಲಕ್ಷ 69 ಸಾವಿರ ರೂಪಾಯಿಗೆ ತಲುಪಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿರುವ 'ಬಿಟ್‌ಕಾಯಿನ್' ಎಂಬ ಕ್ರಿಪ್ಟೋ ಕರೆನ್ಸಿ ಮೌಲ್ಯ ಮತ್ತಷ್ಟು ಮೇಲಕ್ಕೆ ಹೋಗುತ್ತಿದೆ. ಇದು ಅಮೆರಿಕ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಹೊಸ ತಲ್ಲಣ ಸೃಷ್ಟಿ ಮಾಡಿದ್ದು, ಡಿಜಿಟಲ್ ಲೋಕ ಮತ್ತೊಮ್ಮೆ ಇತ್ತ ತಿರುಗಿ ನೋಡುವಂತೆ ಮಾಡಿದೆ.
ಅಮೆರಿಕದಲ್ಲಿ ಮಾತ್ರ 'ಬಿಟ್‌ಕಾಯಿನ್' ಮೈನಿಂಗ್?
ಡೊನಾಲ್ಡ್ ಟ್ರಂಪ್ ಇಟ್ಟಿರುವ ಪ್ರಸ್ತಾಪದ ಪ್ರಕಾರ 'ಬಿಟ್‌ಕಾಯಿನ್' ಮೈನಿಂಗ್ ಮಾಡೋಕೆ ಇನ್ನು ಮುಂದೆ ಅಮೆರಿಕದಲ್ಲಿ ಮಾತ್ರ ಅವಕಾಶ ಸಿಗಲಿದೆ. 'ಬಿಟ್‌ಕಾಯಿನ್' ಮೈನಿಂಗ್ ಅಂದ್ರೆ ಕಂಪ್ಯೂಟರ್ ಮೂಲಕ ಹೊಸ ಕಾಯಿನ್ ರಚನೆ ಮಾಡುವುದು. ಇದು ತುಂಬಾ ಕಷ್ಟಕರವಾದ ಕೆಲಸವಾಗಿದ್ದು, ಸಾಕಷ್ಟು ಶ್ರಮ ಅಗತ್ಯ.
ಹಾಗೇ ದಿನದ 24 ಗಂಟೆ ಕಾಲ ಕೂಡ ಹೀಗೆ 'ಬಿಟ್‌ಕಾಯಿನ್' ಮೈನಿಂಗ್ ಮಾಡಲು ಕರೆಂಟ್ ಬೇಕೆ ಬೇಕು. ಹೀಗಾಗಿ ಜಗತ್ತಿನ ಯಾವುದೇ ದೇಶದಲ್ಲಿ ಕೂತು 'ಬಿಟ್‌ಕಾಯಿನ್' ಮೈನಿಂಗ್ ಮಾಡುವ ಅವಕಾಶವನ್ನು ಕಿತ್ತುಕೊಳ್ಳೋಕೆ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಹೀಗಿದ್ದಾಗಲೂ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಕ್ರಿಪ್ಟೋ ಕರೆನ್ಸಿಯ ತಾತ 'ಬಿಟ್‌ಕಾಯಿನ್' ರೇಟ್!












Click it and Unblock the Notifications