150 ಮಂದಿ ತಾಲಿಬಾನ್ ಸೆರೆ: ಅಧಿಕ ಭಾರತೀಯರು ಇರುವ ಸಾಧ್ಯತೆ
ನವದೆಹಲಿ, ಆಗಸ್ಟ್ 21: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಸುಮಾರು 150 ಮಂದಿಯನ್ನು ತಾಲಿಬಾನ್ ಸೆರೆ ಹಿಡಿದಿದೆ. ಈ ಪೈಕಿ ಹೆಚ್ಚಿನ ಜನರು ಭಾರತೀಯರು ಆಗಿರುವ ಸಾಧ್ಯತೆ ಇದೆ ಎಂದು ಸರ್ಕಾರ ಉನ್ನತ ಮೂಲಗಳಿಂದ ತಿಳಿದು ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಹಾಗೆಯೇ ಈ ಜನರು ಸದ್ಯಕ್ಕೆ ಯಾವುದೇ ಅಪಾಯದಲ್ಲಿ ಇಲ್ಲ ಎಂದು ಕೂಡಾ ಮೂಲಗಳು ತಿಳಿಸಿದೆ.
ಪೊಲೀಸ್ ಠಾಣೆಯ ಬಳಿ ಈ ಜನರನ್ನು ಪ್ರಶ್ನಿಸಲಾಗಿದೆ. ಈ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆದುಕೊಂಡು ಬರುವ ಎಲ್ಲಾ ಚರ್ಚೆಗಳು ನಡೆಯುತ್ತಿದೆ ಎಂದು ಹೇಳಲಾಗಿದೆ. ಇದಕ್ಕೂ ಮುನ್ನ ಕಾಬೂಲ್‌ನ ಮಾಧ್ಯಮವೊಂದು ತಾಲಿಬಾನಿಗರು ಸುಮಾರು 150 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಭಾರತೀಯರು ಇದ್ದಾರೆ ಎಂದು ವರದಿ ಮಾಡಿದೆ. ಆದರೆ ತಾಲಿಬಾನ್ ಮಾತ್ರ ಈ ಆರೋಪವನ್ನು ನಿರಾಕರಿಸಿದೆ. ಕಾಬೂಲ್ ಮೂಲದ ವರದಿಗಾರ ಷರಿಫ್ ಹಸನ್ ಟ್ವೀಟ್ ಪ್ರಕಾರ, ತಾಲಿಬಾನ್ ಈ ಆರೋಪ ನಿರಾಕರಿಸಿದೆ.
ಈ ನಡುವೆ ಕಾಬೂಲ್‌ನಿಂದ 85 ಭಾರತೀಯರನ್ನು ಐಎಎಫ್ ವಿಮಾನ ಹೊತ್ತು ಹೊರಟಿದೆ. ಇದಕ್ಕೂ ಮುನ್ನ ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ವಶಕ್ಕೆ ಪಡೆದ ಹಿನ್ನೆಲೆ ಪರಿಸ್ಥಿತಿಯನ್ನು ಅವಲೋಕಿಸಿ, ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರಿ ಮತ್ತು 120 ಸಿಬ್ಬಂದಿಯನ್ನು ಕಾಬೂಲ್‌ನಿಂದ ಮಂಗಳವಾರ ಭಾರತಕ್ಕೆ ವಾಪಸ್ ಕರೆತರಲಾಗಿದೆ.

ಇದಕ್ಕೂ ಮುನ್ನ ಭಾರತೀಯ ವಾಯುಪಡೆಯ ಸಿ -17 ಹೆವಿ-ಲಿಫ್ಟ್ ವಿಮಾನವು ಎರಡನೇ ತಂಡದ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಪತ್ರಕರ್ತರನ್ನು ಕಾಬೂಲ್ ನಿಂದ ಹೊತ್ತುಕೊಂಡು ಗುಜರಾತ್ ನ ಜಾಮ್ ನಗರಕ್ಕೆ ಬಂದಿಳಿದಿತ್ತು. ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ 120 ಇತರ ರಾಜತಾಂತ್ರಿಕರು ಮತ್ತು ಅಧಿಕಾರಿಗಳೊಂದಿಗೆ ವಿಮಾನದಲ್ಲಿದ್ದರು. ಇದಕ್ಕೂ ಮುನ್ನ ಭಾರತೀಯ ವಾಯುಪಡೆಯ (ಐಎಎಫ್) ಸಿ -17 ಹೆವಿ-ಲಿಫ್ಟ್ ಸಾರಿಗೆ ವಿಮಾನವು ಸೋಮವಾರ ಅಫ್ಘಾನಿಸ್ತಾನದಿಂದ ಕೆಲವು ಸಿಬ್ಬಂದಿಯನ್ನು ಮರಳಿ ಕರೆತಂದಿತ್ತು.
ಇಂದು ಮುಂಜಾನೆಯಷ್ಟೇ ಸರ್ಕಾರದ ಮೂಲಗಳು ಭಾರತೀಯರು ಭಾರತಕ್ಕೆ ಅಫ್ಘಾನಿಸ್ತಾನದಿಂದ ಕರೆತರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿತ್ತು. ಹಾಗೆಯೇ ಭಾರತೀಯರ ಸುರಕ್ಷತೆಯ ಬಗ್ಗೆಯೂ ಅಧಿಕ ಕಾಳಜಿ ವಹಿಸಲಾಗುವುದು ಎಂದು ಹೇಳಿದೆ. ಭಾರತವು ಹಲವಾರು ಜನರನ್ನು ಅಫ್ಘಾನಿಸ್ತಾನದಿಂದ ವಾಪಾಸ್ ಕರೆ ತಂದಿದೆ. ಆದರೆ ಇನ್ನೂ ಸುಮಾರು ಒಂದು ಸಾವಿರ ಜನರು ಅಫ್ಘಾನಿಸ್ತಾನದಲ್ಲೇ ಬಾಕಿಯಾಗಿರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿದೆ. ಇನ್ನು ಹಿಂದೂಗಳು ಹಾಗೂ ಸಿಖ್ಖರು ಗುರುದ್ವಾರದಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಇದ್ದಾರೆ.
ಈ ನಡುವೆ ತಾಲಿಬಾನಿಗರು ಭಾರತದ ರಾಯಭಾರಿ ಸಿಬ್ಬಂದಿಗಳು ಅಫ್ಘಾನಿಸ್ತಾನವನ್ನು ತೊರೆಯುವುದನ್ನು ಇಚ್ಚಿಸಿರಲಿಲ್ಲ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ತಾಲಿಬಾನ್‌ನ ಕತಾರ್ ಕಚೇರಿಯಿಂದ ಭಾರತೀಯ ರಾಯಭಾರಿ ಸಿಬ್ಬಂದಿಗಳ ಸುರಕ್ಷತೆಯನ್ನು ಖಾತರಿ ಪಡಿಸಿ ಸಂದೇಶವೊಂದು ಬಂದಿತ್ತು ಎಂದು ಎನ್‌ಡಿಟಿವಿಗೆ ಮೂಲಗಳು ತಿಳಿಸಿದೆ ಎಂದು ವರದಿಯಾಗಿದೆ. ಈ ಸಂದೇಶವನ್ನು ತಾಲಿಬಾನ್ ರಾಜಕೀಯ ವಿಭಾಗದ ಮುಕ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕಜೈ ಈ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಂದೇಶವು ಅಫ್ಘಾನಿಸ್ತಾನದಿಂದ ಭಾರತೀಯ ರಾಯಭಾರಿ ಸಿಬ್ಬಂದಿಗಳನ್ನು ವಾಪಾಸ್ ಕರೆಸಿಕೊಳ್ಳುವ ಮೊದಲೇ ಬಂದಿತ್ತು ಎನ್ನಲಾಗಿದೆ.
ತಾಲಿಬಾನ್ ಮುಖ್ಯಸ್ಥರು, "ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿಗಳು ಹಾಗೂ ರಾಯಭಾರಿಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಹಾಗೆಯೇ ಲಷ್ಕರ್ ಹಾಗೂ ಜೈಶ್ ನಂತಹ ಸಂಘಟನೆಗಳಿಂದಲೂ ಯಾವುದೇ ಹಾನಿ ಭಾರತೀಯ ಸಿಬ್ಬಂದಿಗಳ ಮೇಲೆ ಆಗುವುದಿಲ್ಲ" ಎಂದು ಹೇಳಿದ್ದರು ಎಂದು ಮಾಹಿತಿ ದೊರಕಿದೆ.
(ಒನ್ ಇಂಡಿಯಾ)












Click it and Unblock the Notifications