Get Updates
Get notified of breaking news, exclusive insights, and must-see stories!

ಹಸೀನಾ ನಂತರದ ಬಾಂಗ್ಲಾದೇಶ: ಭಾರತ - ಬಾಂಗ್ಲಾದೇಶ ಸಂಬಂಧದ ಹೊಸ ಯುಗ?

ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧ ಒಂದು ವಿಶಿಷ್ಟ ಸಂಬಂಧವಾಗಿದ್ದು, ಇದು ದೀರ್ಘ ಸ್ನೇಹ ಮತ್ತು ಆಗಿಂದಾಗ್ಗೆ ತಲೆದೋರುವ ಭಿನ್ನಾಭಿಪ್ರಾಯಗಳ ಮಿಶ್ರಣವಾಗಿದೆ. ಉಭಯ ದೇಶಗಳ ಬಾಂಧವ್ಯ ಐತಿಹಾಸಿಕವಾಗಿದ್ದರೂ, ಎರಡರ ನಡುವೆ ಹಲವಾರು ಸವಾಲುಗಳು ತಲೆದೋರಿ, ಸಂಬಂಧ ಆತ್ಮೀಯವೂ, ಸಂಕೀರ್ಣವೂ ಆಗಿದೆ.

ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧದಲ್ಲಿ ಸಹಕಾರ ಮತ್ತು ಉದ್ವಿಗ್ನತೆಗಳು ಸಮತೋಲನದಲ್ಲಿದ್ದವು. ಆದರೆ, ಆಗಸ್ಟ್ 5, 2024ರಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪದಚ್ಯುತರಾದ ಬಳಿಕ, ಈ ಸಂಬಂಧ ಹೆಚ್ಚು ಹೆಚ್ಚು ಉದ್ವಿಗ್ನಗೊಂಡಿತು.

Bangladesh after Sheikh Hasina A new era in India-Bangladesh relations

ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದ ಬಳಿಕ, ಪ್ರೊಫೆಸರ್ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡಿತು. ಈ ಬೆಳವಣಿಗೆ, ಭಾರತ ಮತ್ತು ಬಾಂಗ್ಲಾದೇಶದ ಆವಾಮಿ ಲೀಗ್ ಪಕ್ಷದ ನಡುವಿದ್ದ ಆತ್ಮೀಯ ಸಂಬಂಧವನ್ನು ಹಾಳುಗೆಡವಿ, ದ್ವಿಪಕ್ಷೀಯ ಸಂಬಂಧದ ಭವಿಷ್ಯದ ಕುರಿತು ಪ್ರಶ್ನೆಗಳನ್ನು ಮೂಡಿಸಿತು.

ಇತ್ತೀಚೆಗೆ, ಬಾಂಗ್ಲಾದೇಶದ ಇಸ್ಕಾನ್ ಸಂತರಾದ ಚಿನ್ಮಯ್ ರಾಯ್ ಅವರ ಬಂಧನ ಈಗಾಗಲೇ ಉದ್ವಿಗ್ನವಾಗಿದ್ದ ಸಂಬಂಧವನ್ನು ಇನ್ನಷ್ಟು ಹದಗೆಡಿಸಿತು.

Bangladesh after Sheikh Hasina A new era in India-Bangladesh relations

ಸರ್ಕಾರ ವಿರೋಧಿ ಕ್ರಮಗಳ ಆರೋಪ ಮತ್ತು ರಾಜತಾಂತ್ರಿಕ ಕಟ್ಟಡಗಳ ಮೇಲಿನ ದಾಳಿಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸಿ, ಇವೆರಡು ದೇಶಗಳ ಸಂಬಂಧ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ತೋರಿಸಿದೆ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಮತ್ತು ಆ ನಂತರ ಸ್ವತಂತ್ರ ಬಾಂಗ್ಲಾದೇಶವನ್ನು ರೂಪಿಸುವಲ್ಲಿ ಆವಾಮಿ ಲೀಗ್ ವಹಿಸಿದ್ದ ಪಾತ್ರದ ಕಾರಣದಿಂದಾಗಿ, ಭಾರತ ಆ ಪಕ್ಷದೊಡನೆ ಉತ್ತಮ ಬಾಂಧವ್ಯ ಹೊಂದಿತ್ತು.

ಕಾಲ ಕ್ರಮೇಣ, ಆವಾಮಿ ಲೀಗ್ ಜೊತೆಗಿನ ಭಾರತದ ಆತ್ಮೀಯ ಸಂಬಂಧ ಭಾರತಕ್ಕೆ ತನ್ನ ಕಾರ್ಯತಂತ್ರದ ಹಿತಾಸಕ್ತಿಗಳನ್ನು ರಕ್ಷಿಸಲು ನೆರವಾದರೂ, ಬಾಂಗ್ಲಾದೇಶದ ರಾಜಕೀಯ ಪಕ್ಷಗಳು ಮತ್ತು ಜನರಿಂದ ಭಾರತವನ್ನು ದೂರಗೊಳಿಸಿತು. ಶೇಖ್ ಹಸೀನಾ ಅವರ ಸುದೀರ್ಘ ಅಧಿಕಾರದ ಪರಿಣಾಮವಾಗಿ, ಬಾಂಗ್ಲಾದೇಶದ ಮೇಲೆ ಭಾರತದ ಪ್ರಭಾವ ಹೆಚ್ಚಿತಾದರೂ, ಭಾರತ ಕೇವಲ ಒಂದು ರಾಜಕೀಯ ಪಕ್ಷವನ್ನು ಮಾತ್ರ ಬೆಂಬಲಿಸುತ್ತದೆ ಎಂಬ ಭಾವನೆ ಬಾಂಗ್ಲಾದೇಶದಲ್ಲಿ ಮೂಡಿತು.

ಒಂದು ವೇಳೆ ಶೇಖ್ ಹಸೀನಾ ಅವರು ಅಧಿಕಾರದಿಂದ ಕೆಳಗಿಳಿದರೆ, ಭಾರತಕ್ಕೆ ಒಂದು ನಂಬಿಕಾರ್ಹ ಮಿತ್ರ ರಾಷ್ಟ್ರವನ್ನು ಕಳೆದುಕೊಳ್ಳುವ, ಹೊಸ ಸರ್ಕಾರದೊಡನೆ ಆರಂಭದಿಂದ ಸಂಬಂಧ ಸ್ಥಾಪಿಸುವ ಸವಾಲು ಎದುರಾಗುವ ಸಾಧ್ಯತೆಗಳು ಹಿಂದಿನಿಂದಲೂ ಇತ್ತು. ಆದರೆ, ಹಸೀನಾ ಬಳಿಕದ ಸರ್ಕಾರ ಭಾರತದ ಪ್ರಭಾವದ ಹೊರತಾಗಿ ಸ್ವತಂತ್ರವಾಗಿರುವ ಸಾಧ್ಯತೆಗಳ ಕುರಿತೂ ಆತಂಕಗಳಿದ್ದವು.

ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಗಳು ಹೆಚ್ಚುತ್ತಿರುವುದರ ಪರಿಣಾಮವಾಗಿ, ಉದ್ವಿಗ್ನತೆಗಳು ತೀವ್ರಗೊಳ್ಳುತ್ತಿವೆ. ಉಭಯ ದೇಶಗಳ ನಡುವೆ ಪರಿಹಾರ ಕಾಣದ ಸಮಸ್ಯೆಗಳು ಹಾಗೇ ಮುಂದುವರಿದಿರುವುದು ಮತ್ತು ಭಾರತ ಬಾಂಗ್ಲಾದೇಶದ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಭಾವನೆಗಳಿರುವುದು ಇದಕ್ಕೆ ಕಾರಣವಾಗಿತ್ತು.

ಚಿನ್ಮಯ್ ರಾಯ್ ಬಂಧನ ಮತ್ತು ಅಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆಯ ಕುರಿತು ಭಾರತ ಹೊಂದಿದ್ದ ಆತಂಕಗಳು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾದವು.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಈ ಸಮಸ್ಯೆಗಳನ್ನು ನಿವಾರಿಸಲು ಬಾಂಗ್ಲಾದೇಶದ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಲು ಢಾಕಾಗೆ ಭೇಟಿ ನೀಡಿದ್ದರು. ಈ ಮಾತುಕತೆಯ ಸಂದರ್ಭದಲ್ಲಿ, ಬಾಂಗ್ಲಾದೇಶಿ ಅಧಿಕಾರಿಗಳು ಉಭಯ ಬದಿಗಳಲ್ಲಿ ಹೊಗೆಯಾಡುತ್ತಿರುವ ಆಕ್ರೋಶಗಳನ್ನು ಒಪ್ಪಿಕೊಂಡರು.

ಬಾಂಗ್ಲಾದೇಶದ ಅಲ್ಪಸಂಖ್ಯಾತರ ಸುರಕ್ಷತೆಯ ಕುರಿತು ಭಾರತ ಹೊಂದಿರುವ ಕಳವಳಗಳನ್ನು ಬಾಂಗ್ಲಾದೇಶ ಒಪ್ಪಿಕೊಂಡಿತು. ಆದರೆ, ತನ್ನ ಆಂತರಿಕ ವಿಚಾರಗಳ ಕುರಿತು ಇತರ ದೇಶಗಳು ಹಸ್ತಕ್ಷೇಪ ನಡೆಸಬಾರದು ಎಂದೂ ಅಭಿಪ್ರಾಯ ಪಟ್ಟಿತು.

ಬಾಂಗ್ಲಾದೇಶದ ಈಗಿನ ಮಧ್ಯಂತರ ಸರ್ಕಾರ ಉಭಯ ದೇಶಗಳ ಸಂಬಂಧ ಪರಸ್ಪರ ಸಾರ್ವಭೌಮತೆಯ ಕುರಿತ ಗೌರವದ ಆಧಾರದಲ್ಲಿರಬೇಕೇ ಹೊರತು, ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸುವಂತೆ ಇರಬಾರದು ಎಂದಿದೆ.

ಇಂತಹ ಕಟ್ಟುನಿಟ್ಟಿನ ಅಭಿಪ್ರಾಯ ಬಾಂಗ್ಲಾದೇಶದ ವಿದೇಶಾಂಗ ನೀತಿಯಲ್ಲಿರುವ ಬದಲಾವಣೆಯನ್ನು ಪ್ರದರ್ಶಿಸಿದ್ದು, ಅದು ಭಾರತದೊಡನೆ ತನ್ನ ಸಂಬಂಧವನ್ನು ಮರು ರೂಪಿಸುವ ಗುರಿಯನ್ನು ಹೊಂದಿದೆ. ಬಾಂಗ್ಲಾದೇಶ ಹಸೀನಾ ಅವಧಿಯಲ್ಲಿದ್ದ ವ್ಯವಸ್ಥೆಯಿಂದ ದೂರ ಸರಿಯುವ ಉದ್ದೇಶವನ್ನು ತೋರಿಸಿದೆ.

ಈಗ ತಲೆದೋರಿರುವ ರಾಜತಾಂತ್ರಿಕ ಬಿಕ್ಕಟ್ಟುಗಳಿಗೆ ಹಿಂದೆ ಪರಿಹಾರ ಕಂಡಿರದ ಸಮಸ್ಯೆಗಳೇ ಮೂಲವಾಗಿದ್ದು, ಅವುಗಳು ಎರಡೂ ದೇಶಗಳ ನಡುವಿನ ಸಂಬಂಧದ ಮೇಲೆ ಒತ್ತಡ ಹೇರುತ್ತಿವೆ.

i) ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಹತ್ಯೆಗಳು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಬಾಂಗ್ಲಾದೇಶ - ಭಾರತದ ಗಡಿಯಲ್ಲಿ ಹತ್ಯೆಗಳು ಹೆಚ್ಚಾಗುತ್ತಿರುವುದರಿಂದ, ಬಾಂಗ್ಲಾದೇಶದ ಜನರಲ್ಲಿ ಭಾರತದ ವಿರುದ್ಧ ಆಕ್ರೋಶ ಹೆಚ್ಚಾಗಿದೆ.

ii) ತೀಸ್ತಾ ನದಿ ನೀರು ಹಂಚಿಕೆಯ ಕುರಿತಂತೆ ಹಲವಾರು ಬಾರಿ ಭರವಸೆಗಳನ್ನು ನೀಡಲಾಗಿದ್ದರೂ, ಇದರಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಸಾಧಿತವಾಗಿಲ್ಲ. ಇದು ಬಾಂಗ್ಲಾದೇಶದ ಆಕ್ರೋಶ ಹೆಚ್ಚಾಗಲು ಕಾರಣವಾಯಿತು.

iii) ಈ ಸಮಸ್ಯೆಗಳ ಜೊತೆಗೆ, ವ್ಯಾಪಾರ ಅಸಮತೋಲನ ಮತ್ತು ಆಮದಿನ ಮೇಲಿನ ನಿರ್ಬಂಧಗಳು ಭಾರತ ತಮ್ಮ ಕಳವಳಗಳಿಗೆ ಬೆಲೆ ನೀಡುತ್ತಿಲ್ಲ ಎಂಬ ಭಾವನೆ ಮೂಡಿಸಿತು.

ಇವೆಲ್ಲ ಬೆಳವಣಿಗೆಗಳು ಬಾಂಗ್ಲಾದೇಶದಲ್ಲಿ, ಅದರಲ್ಲೂ ವಿರೋಧ ಪಕ್ಷಗಳು ಮತ್ತು ಸ್ಥಳೀಯ ಗುಂಪುಗಳಲ್ಲಿ ಭಾರತ ವಿರೋಧಿ ಭಾವನೆಗಳು ಹೆಚ್ಚಾಗಲು ಕಾರಣವಾಯಿತು. 2021ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಢಾಕಾ ಭೇಟಿಯ ವೇಳೆ ಈ ಭಾವನೆಗಳು ಸ್ಪಷ್ಟವಾಗಿ ಹೊರಹೊಮ್ಮಿದ್ದು, ಹಿಂಸಾತ್ಮಕ ಪ್ರತಿಭಟನೆಗಳು ನಡೆದು, ಉಭಯ ದೇಶಗಳ ಸಂಬಂಧ ಹಾಳಾಗತೊಡಗಿತು.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಧೋರಣೆಯೂ ಬಾಂಗ್ಲಾದೇಶದ ಆಂತರಿಕ ರಾಜಕೀಯದಲ್ಲಿನ ಬದಲಾವಣೆಗಳನ್ನು ಪ್ರದರ್ಶಿಸಿದೆ. ಭಾರತದ ಸಂಪೂರ್ಣ ಗಮನ ಆವಾಮಿ ಲೀಗ್ ಜೊತೆಗೆ ಕಾರ್ಯಾಚರಿಸುವತ್ತಲೇ ಇದ್ದು, ಇತರ ರಾಜಕೀಯ ಪಕ್ಷಗಳಿಗೆ ಭಾರತ ನಮ್ಮನ್ನು ಕಡೆಗಣಿಸುತ್ತಿದೆ ಎಂಬ ಭಾವನೆ ಮೂಡಿಸಿದೆ.

ವಿರೋಧ ಪಕ್ಷಗಳು 'ಇಂಡಿಯಾ ಔಟ್' ರೀತಿಯ ಭಾರತ ವಿರೋಧಿ ಸಂದೇಶಗಳನ್ನು ನೀಡುತ್ತಿದ್ದು, ಇದು ಜನರ ಭಾವನೆ ಮತ್ತು ಬಾಂಗ್ಲಾದೇಶದಲ್ಲಿ ನಿರ್ದಿಷ್ಟ ಪಕ್ಷಗಳನ್ನು ಭಾರತ ದೀರ್ಘಕಾಲದಿಂದ ಬೆಂಬಲಿಸುತ್ತಿರುವುದರ ಪರಿಣಾಮವೇ ಆಗಿದೆ. ಭಾರತ ಸಾಂಪ್ರದಾಯಿಕವಾಗಿ ಕೆಲವು ನಾಯಕರು ಅಥವಾ ಗುಂಪುಗಳೊಡನೆ ಕಾರ್ಯಾಚರಿಸಿದ್ದರೂ, ಸಾಮಾನ್ಯ ಜನರು ಭಾರತದ ಕುರಿತು ಆಕ್ರೋಶ ಮತ್ತು ಅಸಮಾಧಾನ ಹೊಂದಿದ್ದಾರೆ.

ಜುಲೈ ತಿಂಗಳಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ, 'ಡೆಲ್ಲಿ ಅಥವಾ ಢಾಕಾ: ಢಾಕಾ, ಢಾಕಾ' ಎಂಬಂತಹ ಘೋಷಣೆಗಳು ಮೊಳಗಿದ್ದು, ಬಾಹ್ಯ ಪ್ರಭಾವಕ್ಕೆ ಒಳಗಾಗದೆ ಬಾಂಗ್ಲಾದೇಶ ಮುಂದುವರಿಯಬೇಕು ಎಂಬ ಭಾವನೆಗೆ ಇಂಬು ನೀಡಿವೆ.

ಈ ಘೋಷಣೆಗಳನ್ನು ಸಣ್ಣಪುಟ್ಟ ಗುಂಪುಗಳು ಮಾತ್ರವೇ ಮೊಳಗಿಸಿದ್ದರೂ, ಅವುಗಳು ಜನರೊಂದಿಗೆ ಸಂಪರ್ಕ ಹೊಂದಿರುವುದರಿಂದ ಬಾಂಗ್ಲಾದೇಶದ ಜೊತೆಗಿನ ಸಂಬಂಧದಲ್ಲಿ ಭಾರತ ಪ್ರಭಾವ ಬೀರುವುದರ ಕುರಿತ ಆಕ್ರೋಶವನ್ನು ಹೊರಹಾಕಿದೆ.

ಭಾರತದ ಆಂತರಿಕ ನೀತಿಗಳು ಉಭಯ ದೇಶಗಳ ಸಂಬಂಧವನ್ನು ಸಂಕೀರ್ಣಗೊಳಿಸುವಂತಹ ಗ್ರಹಿಕೆಗಳಿಗೆ ಕಾರಣವಾಗಿದೆ. ಬಹಳಷ್ಟು ಬಾಂಗ್ಲಾದೇಶಿಗಳು ಭಾರತದ ರಾಜಕೀಯದಲ್ಲಿ ಒಂದೇ ಧರ್ಮದ ಪ್ರಭಾವ ಹೆಚ್ಚಾಗಿ, ಮುಸ್ಲಿಮರನ್ನು ಗೌರವಯುತವಾಗಿ ನೋಡಲಾಗುತ್ತಿಲ್ಲ ಎಂಬ ಭಾವನೆ ಹೊಂದಿದ್ದಾರೆ. ಈ ಕಳವಳಗಳು ವಾಸ್ತವವನ್ನು ತೋರಿಸದಿದ್ದರೂ, ಬಾಂಗ್ಲಾದೇಶ ಒಂದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿದ್ದು, ಅಲ್ಲಿನ ಜನರು ತಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಗುರುತಿಗೆ ಹೆಚ್ಚಿನ ಬೆಲೆ ಕೊಡುತ್ತಿದ್ದಾರೆ.

ಇದೇ ರೀತಿ, ಕೋಮು ಗಲಭೆಗಳ ವರದಿಗಳು ಮತ್ತು ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಸುರಕ್ಷತೆ ಇಲ್ಲವೆಂಬಂತ ಭಾವನೆಗಳು ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಗಳನ್ನು ಮೂಡಿಸಿವೆ. ಈ ಭಾವನೆಗಳು ಸಂಪೂರ್ಣ ಚಿತ್ರಣವನ್ನು ನೀಡದಿದ್ದರೂ, ಅವುಗಳು ಭಾರತ ಬಾಂಗ್ಲಾದೇಶಗಳ ಸುದೀರ್ಘ ಸಂಬಂಧದಲ್ಲಿನ ಸೌಹಾರ್ದತೆಗೆ ಧಕ್ಕೆ ಉಂಟುಮಾಡಿ, ಬಾಂಗ್ಲಾದೇಶದ ಜನರು ಅಸಮಧಾನ ಮತ್ತು ನಿರಾಶೆ ಹೊಂದುವಂತೆ ಮಾಡಿವೆ.

ಬಹಳಷ್ಟು ಬಾಂಗ್ಲಾದೇಶೀಯರು ಭಾರತದ ರಾಜಕಾರಣದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಹೊಂದಿದ್ದಾರೆ. ಈ ಭಾವನೆಗಳು ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಕ್ಕೆ ಧಕ್ಕೆ ಉಂಟುಮಾಡಿವೆ.

ರಾಜತಾಂತ್ರಿಕ ಸಂಬಂಧ ಈಗ ಒಂದು ಹಂತಕ್ಕೆ ನಿಲುಗಡೆಗೆ ಬಂದಿದ್ದು, ಭಾರತ - ಬಾಂಗ್ಲಾದೇಶದ ಸಂಬಂಧದಲ್ಲಿ ಹೊಂದಾಣಿಕೆ ತರುವ ಅಗತ್ಯವಿದೆ. ಕೇವಲ ಆವಾಮಿ ಲೀಗ್ ಜೊತೆಗೆ ಗರಿಷ್ಠ ಸಂಬಂಧ ಹೊಂದುವುದರಿಂದ, ಬಾಂಗ್ಲಾದೇಶದ ಇತರ ಪಕ್ಷಗಳು ಅಸಮಾಧಾನ ಹೊಂದುತ್ತವೆ ಎನ್ನುವುದನ್ನು ಭಾರತ ಅರ್ಥ ಮಾಡಿಕೊಳ್ಳಬೇಕಿದೆ. ಉತ್ತಮ ಸಂಬಂಧ ಸ್ಥಾಪಿಸಲು ಈ ಅಸಮಾನತೆಗಳನ್ನು ಮೊದಲು ಪರಿಹರಿಸಬೇಕಿದೆ.

ನಂಬಿಕೆಗಳನ್ನು ಮರು ನಿರ್ಮಿಸಲು ಮತ್ತು ಉತ್ತಮ ಬಾಂಧವ್ಯ ಹೊಂದಲು ಭಾರತ ಕೇವಲ ಆಡಳಿತ ಪಕ್ಷ ಮಾತ್ರವಲ್ಲದೆ, ವಿರೋಧ ಪಕ್ಷಗಳು, ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಜೊತೆಗೂ ಸಂಬಂಧ ಹೊಂದಬೇಕು. ಇಂತಹ ಕ್ರಮಗಳು ಭಾರತಕ್ಕೆ ಬಾಂಗ್ಲಾದೇಶದೊಡನೆ ಸಮತೋಲಿತ ಸಂಬಂಧ ಹೊಂದಲು ನೆರವಾಗುತ್ತದೆ.

ಗಡಿ ಹಿಂಸಾಚಾರ ಮತ್ತು ನೀರಿನ ಹಂಚಿಕೆಯ ವಿವಾದದಂತಹ ಸಮಸ್ಯೆಗಳಿಗೆ ಪರಿಹಾರ ನೀಡುವುದರಿಂದ, ಭಾರತ ಬಾಂಗ್ಲಾದೇಶವನ್ನು ನ್ಯಾಯಯುತವಾಗಿ ನೋಡಿಕೊಳ್ಳುವ ಭಾವನೆ ಮೂಡಲು ಸಾಧ್ಯವಾಗುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವುದರಿಂದ, ಭಾರತ ತಾನು ನೆರೆ ರಾಷ್ಟ್ರದೊಡನೆ ಉತ್ತಮ ಸಂಬಂಧ ಮತ್ತು ಸಹಕಾರ ಹೊಂದಲು ಬದ್ಧವಾಗಿದೆ ಎಂದು ತೋರಿಸಬಹುದು.

ಇಂತಹ ಕ್ರಮಗಳು ಕೇವಲ ಪ್ರಸ್ತುತ ಸಮಸ್ಯೆಗೆ ಪರಿಹಾರ ನೀಡುವುದು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಬಾಂಗ್ಲಾದೇಶದೊಡನೆ ಸುಭದ್ರ ಮತ್ತು ಸುದೀರ್ಘ ಸಂಬಂಧ ಹೊಂದಲು ಕಾರಣವಾಗಬಹುದು.

ಭಾರತದ ಆಂತರಿಕ ನೀತಿಗಳು ಅತ್ಯಂತ ಮುಖ್ಯವಾಗಿವೆ. ಭಾರತ ತನ್ನ ಮುಸ್ಲಿಂ ಜನಸಂಖ್ಯೆಯನ್ನು ಒಳಗೊಳ್ಳುವ ಕ್ರಮಗಳನ್ನು ಕೈಗೊಂಡರೆ, ಅದರಿಂದ ಬಾಂಗ್ಲಾದೇಶದಲ್ಲಿನ ಋಣಾತ್ಮಕ ಭಾವನೆಗಳನ್ನು ಕಡಿಮೆಗೊಳಿಸಿ, ಭಾರತ ಶಾಂತಿ ಮತ್ತು ವೈವಿಧ್ಯತೆಗೆ ಬೆಲೆ ನೀಡುವ ಒಂದು ಪ್ರಾದೇಶಿಕ ನಾಯಕ ಎಂಬ ಭಾವನೆ ಮೂಡಿಸಲು ಸಾಧ್ಯ.

ಇಂತಹ ಬದಲಾವಣೆಗಳನ್ನು ತರಲು ಕೇವಲ ಹೊಸ ನೀತಿಗಳಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕಾಗಿ ಭಾರತದ ಒಟ್ಟಾರೆ ರಾಜಕೀಯ ಧೋರಣೆಯಲ್ಲಿ ಬದಲಾವಣೆ ತರಬೇಕಾಗುತ್ತದೆ. ಭಾರತದ ರಾಜಕಾರಣದ ಗಮನ ಸಾಮಾನ್ಯವಾಗಿ ತನ್ನ ಬಹುಸಂಖ್ಯಾತ ಸಮುದಾಯದ ಮೇಲಿದ್ದು, ಇತರ ಸಮುದಾಯಗಳ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಲಿದೆ. ಇಂತಹ ಬದಲಾವಣೆಗಳನ್ನು ಭಾರತ ತಂದರೆ, ಬಾಂಗ್ಲಾದೇಶಕ್ಕೆ ಭಾರತ ನೈಜ ಸಾಮರಸ್ಯದ ಸಾಧನೆಗೆ ಪ್ರಯತ್ನ ನಡೆಸುತ್ತಿದೆ ಎಂಬ ನಂಬಿಕೆ ಮೂಡಿಸಬಹುದು.

ಬಾಂಗ್ಲಾದೇಶಕ್ಕೆ ಅದರ ತಾತ್ಕಾಲಿಕ ಸರ್ಕಾರ ತನ್ನ ಸ್ವಾತಂತ್ರ್ಯ ಕಾಪಾಡಿಕೊಳ್ಳುವ ಮತ್ತು ಭಾರತದೊಡನೆ ಧನಾತ್ಮಕ ಸಂಬಂಧ ಹೊಂದುವುದರ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ.

ಅದರೊಡನೆ, ಬಾಂಗ್ಲಾದೇಶದ ಅಲ್ಪಸಂಖ್ಯಾತರ ಕುರಿತು ಭಾರತ ಹೊಂದಿರುವ ಕಳವಳಗಳನ್ನು ಸರಿಪಡಿಸುವತ್ತ ಮತ್ತು ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಮೇಲೆ ದಾಳಿ ನಡೆಸುವುದನ್ನು ತಡೆಯುವತ್ತ ಬಾಂಗ್ಲಾದೇಶ ಗಮನ ಹರಿಸಿದರೆ, ಅದು ಪರಸ್ಪರ ಗೌರವದ ಸಂಬಂಧಕ್ಕೆ ಬಾಂಗ್ಲಾದೇಶವೂ ಬೆಲೆ ನೀಡಿದಂತಾಗುತ್ತದೆ.

ಬಾಂಗ್ಲಾದೇಶದ ತಾತ್ಕಾಲಿಕ ಸರ್ಕಾರ ಈಗಾಗಲೇ ಇರುವ ಉದ್ವಿಗ್ನತೆಗಳನ್ನು ಹೆಚ್ಚಿಸುವಂತಹ ಕೆಲಸಗಳನ್ನು ನಡೆಸುವುದರಿಂದ ದೂರವಿರಬೇಕು. ಅದರ ಬದಲು, ಬಾಂಗ್ಲಾದೇಶ ಭಾರತದ ಜೊತೆಗಿನ ಸಮಸ್ಯೆಗಳಿಗೆ ಮುಕ್ತ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಬೇಕು.

ಇನ್ನು ಮುಂದಿರುವ ಅತ್ಯುತ್ತಮ ಮಾರ್ಗವೆಂದರೆ, ಭಾರತ ಮತ್ತು ಬಾಂಗ್ಲಾದೇಶಗಳ ಸಂಬಂಧದಲ್ಲಿರುವ ಸಮಾನ ಹಿತಾಸಕ್ತಿಗಳು ಮತ್ತು ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಂಡು ಮುಂದುವರಿಯುವುದು. ಎರಡು ದೇಶಗಳ ನಡುವೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭೌಗೋಳಿಕ ಸಂಬಂಧ ಇರುವುದರಿಂದ, ಅವೆರಡೂ ಜೊತೆಯಾಗಿ ಕಾರ್ಯಾಚರಿಸುವುದು ಅನಿವಾರ್ಯವಾಗಿದೆ.

ಭಾರತ ಮತ್ತು ಬಾಂಗ್ಲಾದೇಶಗಳು ಈಗ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ, ನಂಬಿಕೆ ವೃದ್ಧಿಸುವ ಕುರಿತು ಗಮನ ಹರಿಸಬೇಕು. ಅವುಗಳು ಈಗ ಪರಸ್ಪರರಿಗೆ ಪ್ರಯೋಜನವಾಗುವ ಕ್ಷೇತ್ರಗಳಾದ ವ್ಯಾಪಾರ, ಇಂಧನ ಸಹಕಾರ, ಮತ್ತು ಹವಾಮಾನ ಬದಲಾವಣೆಯ ನಿಯಂತ್ರಣಗಳಂತಹ ಕ್ಷೇತ್ರಗಳತ್ತ ಗಮನ ಹರಿಸಬೇಕು.

ಶೇಖ್ ಹಸೀನಾ ಸರ್ಕಾರದ ಪತನ ಬಾಂಗ್ಲಾದೇಶ ಮತ್ತು ಭಾರತ ವ್ಯವಹರಿಸುವ ವಿಧಾನವನ್ನೇ ಬದಲಾಯಿಸಿದೆ. ಬಾಂಗ್ಲಾದೇಶದಲ್ಲಿನ ಬದಲಾವಣೆಗಳು ಇಷ್ಟು ಸಮಯ ಬಚ್ಚಿಟ್ಟುಕೊಂಡಿದ್ದ ಉದ್ವಿಗ್ನತೆಗಳನ್ನು ಹೊರತಂದರೂ, ಉಭಯ ದೇಶಗಳಿಗೆ ತಮ್ಮ ಸಂಬಂಧವನ್ನು ಹೆಚ್ಚು ಸಹಕಾರ, ಗೌರವಯುತ ಸಂಬಂಧವನ್ನು ಮರು ರೂಪಿಸುವ ಅವಕಾಶವನ್ನೂ ಕಲ್ಪಿಸಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಭಾರತ - ಬಾಂಗ್ಲಾದೇಶಗಳ ಸಂಬಂಧದಲ್ಲಿ ಸಾಕಷ್ಟು ಅಪಾಯಗಳಿದ್ದರೂ, ಉಭಯ ದೇಶಗಳು ಏನಾದರೂ ಸ್ಥಿರವಾದ, ಧನಾತ್ಮಕ ಸಂಬಂಧ ಹೊಂದಿದರೆ ಅದರಿಂದ ಬಹಳಷ್ಟು ಪ್ರಯೋಜನಗಳಾಗಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+