ಆಸ್ಟ್ರಿಯಾ ಸರ್ಕಾರದ ಪತನಕ್ಕೆ ಕಾರಣವಾದ ಇಸ್ರೇಲ್ ಗುಪ್ತಚರ ಸಂಸ್ಥೆ
ವಿಯೆನ್ನಾ, ಮೇ 28: ಆಸ್ಟ್ರಿಯಾದ ಕನ್ಸರ್ವೇಟಿವ್ ಚಾನ್ಸೆಲರ್ ಸೆಬಾಸ್ಟಿಯನ್ ಕುರ್ಜ್ ವಿಶ್ವಾಸಮತ ಕಳೆದುಕೊಂಡಿದ್ದಾರೆ.
ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾದ ವಿಡಿಯೋ ಅವರ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸ್ಸಾದ್ ಈ ವಿಡಿಯೋ ಸೋರಿಕೆ ಹಿಂದೆ ಇದೆ ಎಂದು ಜರ್ಮನಿಯ ಗುಪ್ತಚರ ಸಂಸ್ಥೆಗಳ ಮಾಹಿತಿ ತಿಳಿಸಿದೆ.
ಕುರ್ಜ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಹಗರಣದ ಆರೋಪ ಬಂದ ಹಿನ್ನೆಲೆಯಲ್ಲಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲಾಗಿದ್ದು, ಸಂಪುಟ ವಜಾಗೊಂಡಿದೆ.

ವಿರೋಧಪಕ್ಷ ಸೋಷಿಯಲ್ ಡೆಮಾಕ್ರಾಟ್ಸ್ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಲಾಗಿದೆ. ಹೀಗಾಗಿ ಅವರು ವಿಶ್ವಾಸಮತ ಕಳೆದುಕೊಂಡಿದ್ದಾರೆ ಎಂದು ಸಂಸತ್‌ನ ಡೆಪ್ಯುಟಿ ಸ್ಪೀಕರ್ ಡೋರಿಸ್ ಬ್ಯುರೆಸ್ ತಿಳಿಸಿದ್ದಾರೆ.
ಭಾನುವಾರ ನಡೆದ ಯುರೋಪಿಯನ್ ಚುನಾವಣೆಗಳಲ್ಲಿ ಕುರ್ಜ್ ಅವರ ಕನ್ಸರ್ವೇಟಿವ್ ಪೀಪಲ್ಸ್ ಪಾರ್ಟಿ ಭರ್ಜರಿ ಜಯಗಳಿಸಿದ ಬಳಿಕ ಸಂಭ್ರಮಾಚರಣೆಯಲ್ಲಿ ಮುಳುಗಿತ್ತು. ಶೇ 34.9ರಷ್ಟು ಮತಗಳನ್ನು ಪಡೆಯುವುದರ ಜತೆಗೆ ಯುರೋಪಿಯನ್ ಸಂಸತ್ ಕ್ಷೇತ್ರಗಳಲ್ಲಿ ಎರಡು ಹೆಚ್ಚುವರಿ ಸೀಟುಗಳನ್ನು ಪಡೆದುಕೊಂಡಿತ್ತು.
ಆದರೆ, 'ಇಬಿಜಾ-ಗೇಟ್' ಹಗರಣ ಅವರ ಸರ್ಕಾರಕ್ಕೆ ಆಘಾತ ನೀಡಿದೆ. ಎಫ್‌ಪಿಒ ನಾಯಕ ಮತ್ತು ವೈಸ್ ಚಾನ್ಸಲರ್ ಹೀಂಜ್-ಕ್ರಿಶ್ಚಿಯನ್ ಸ್ಟ್ರಾಚ್ ಅವರು ಎರಡೂ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಅವರು ರಷ್ಯಾದ ನಕಲಿ ಬೆಂಬಲಿಗನೊಬ್ಬನ ಮೂಲಕ ಪ್ರಚಾರಕ್ಕೆ ನೆರವು ಪಡೆದಿದ್ದಕ್ಕಾಗಿ ಗುತ್ತಿಗೆಗಳನ್ನು ನೀಡುವ ಹಗರಣದಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದಿದ್ದರು. ಈ ಹಗರಣಕ್ಕೆ ಹೊಣೆ ಹೊತ್ತು ಕುರ್ಜ್ ಅವರು ಅಧಿಕಾರದಿಂದ ಕೆಳಕ್ಕಿಳಿಯಬೇಕಾಗಿದೆ.
ಕೇವಲ 32 ವರ್ಷದವರಾದ ಕುರ್ಜ್ ಅವರ ಸರ್ಕಾರ 2017ರ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬಂದಿತ್ತು. ಬಲಪಂಥೀಯ ಎಫ್‌ಪಿಒ ಜತೆಗೂಡಿ ಅವರು ಸರ್ಕಾರ ರಚಿಸಿದ್ದರು.












Click it and Unblock the Notifications