ಯುವ ಸಂಗೀತ ಪ್ರತಿಭೆ ಅಶ್ವಿನ್‌ಗೆ ಆರ್ಯಭಟ ಪ್ರಶಸ್ತಿ
ಕತಾರ್ ಕರ್ನಾಟಕ ಸಂಘದ 2014ರ ವನಿತಾ ಪ್ರತಿಭಾ ಸಮಾರೋಪ ಸಮಾರಂಭದಲ್ಲಿ ಯುವ ಸಂಗೀತ ಪ್ರತಿಭೆ ಅಶ್ವಿನ್ ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದೆ ಭಾರತಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ದೀಪಕ್ ಶೆಟ್ಟಿ ಅಧ್ಯಕ್ಷತೆಯ ಕಾರ್ಯಕಾರಿ ಸಮಿತಿಯಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿ ಹೆಚ್.ಕೆ.ಮಧು, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಸುನಿಲ್ ಕಮಲಾಕ್ಷ ಅವರು ನಟಿ ಭಾರತಿಯವರ ಮೇಲೆ ಒಂದು ಹಾಡು ಬರೆಯಲು ಪ್ರೇರೇಪಿಸಿದ್ದರು.
ಸಂಗೀತದಲ್ಲಿ ಅಪಾರ ಆಸಕ್ತಿ, ಪರಿಣತಿ ಮತ್ತು ಸಾಧನೆಯ ಕನಸುಗಳನ್ನು ಹೊತ್ತು, ಸ್ವತಃ ಕೀಬೋರ್ಡ್ ವಾದಕರಾಗಿದ್ದ ಅಶ್ವಿನ್ ಪಿ.ಕುಮಾರ್ ಉದ್ಯೋಗ ನಿಮಿತ್ತ ಸ್ವಲ್ಪ ತಿಂಗಳುಗಳ ಹಿಂದೆ ಬಂದು ಕತಾರ್‌ನಲ್ಲಿದ್ದರು. ಭಾರತಿಯವರು ನಟಿಸಿದ ಕೆಲವು ಚಿತ್ರಗಳ ಹೆಸರುಗಳನ್ನೊಳಗೊಂಡ "ತಿದ್ದಿ ತಿದ್ದಿ ತೀಡಿದ ಬ್ರಹ್ಮ ಸೃಷ್ಟಿ ಮಾಡಿದಾ ರತಿ, ಬಿಂಕ, ಬೆಡಗು, ಬಿನ್ನಾಣಗಳೇ ಮೈದಳೆದ ರೂಪವತಿ" ಎಂಬ ಪಲ್ಲವಿಯೊಂದಿಗೆ ಆರಂಭಗೊಳ್ಳುವ ಎರಡು ಚರಣಗಳ ಗೀತೆಯನ್ನು ರಚಿಸಿದ್ದರು.
ಕಳೆದ ವರ್ಷ ಸಂಘದ ರಜತೋತ್ಸವದ ಸಂದರ್ಭದಲ್ಲಿ ಅಶ್ವಿನ್ ಅವರ ಬತ್ತಳಿಕೆಯಿಂದ "ಜೈ ಜೈ ಕನ್ನಡ ಝೇಂಕಾರ, ಜೈ ಕರ್ನಾಟಕ ಹರಿಕಾರ" ವೆಂಬ ಕನ್ನಡ ಭಾಷೆ, ಸಂಸ್ಕೃತಿ, ನಾಡಿನ ಪ್ರಕೃತಿ ಸೌಂದರ್ಯ, ಇತಿಹಾಸ, ಅರಸರು, ಪ್ರೇಕ್ಷಣೀಯ ಸ್ಥಳಗಳು, ಸಹಬಾಳ್ವೆಯ ಖ್ಯಾತಿಯನ್ನು ಸಾರುವ, ಅನಿವಾಸಿ ಕನ್ನಡಿಗರಿಗಾಗಿ ಸಮರ್ಪಿಸಿರುವ ಅಪೂರ್ವವಾದ ರಜತ ಗೀತೆಯ ಸಂಗೀತ-ರಾಗ ಸಂಯೋಜನೆ ಅವರ ಕಲಾ ಕ್ಷೇತ್ರದ ಪಯಣದ ಮೈಲಿಗಲ್ಲು.

ಸಂಘದ ಕಾರ್ಯಕ್ರಮಗಳಿಗಾಗಿ ರಚಿಸಿದ ಹಾಡುಗಳನ್ನು ನಾಡಿನ ಹೆಸರಾಂತ ಗಾಯಕ-ಗಾಯಕಿಯರಾದ ಉಸ್ತಾದ್ ಫಯಾಜ್ ಖಾನ್, ರಾಜೇಶ್ ಕೃಷ್ಣನ್, ಸಂಗೀತಾ ಕಟ್ಟಿ, ನಾಗಚಂದ್ರಿಕಾ ಭಟ್, ಅಜಯ್ ವಾರಿಯರ್, ಪಂಚಮ್ ಹಳಿಬಂಡಿ, ಸುಪ್ರಿಯಾ ರಘುನಂದನ್, ಮಾನಸ ಹೊಳ್ಳ, ಸಿಂಚನ್ ದೀಕ್ಷಿತ್ ಮುಂತಾದವರ ಕಂಠಸಿರಿಯಲ್ಲಿ ಮೂಡಿಬಂದಿರುವುದು ಮತ್ತೊಂದು ಹೆಗ್ಗಳಿಕೆ.
ಸಂಗೀತ ಮತ್ತು ಸಂಸ್ಕೃತಿ ವಿಭಾಗದಲ್ಲಿ ಬೆಂಗಳೂರಿನಲ್ಲಿ ಪ್ರದಾನ ಮಾಡುವ ಈ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ ರಾಗ ಸಂಯೋಜಕ ಹಾಗೂ ಸಂಗೀತ ನಿರ್ದೇಶಕ ಅಶ್ವಿನ್ ಪಿ.ಕುಮಾರ್ ಅಪಾರ ಪ್ರತಿಭಾವಂತರು. ವೃತ್ತಿಯಲ್ಲಿ ಇಂಜಿನಿಯರ್ ಆಗಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿರುವ ಅಶ್ವಿನ್, ಸಂಗೀತ ಕ್ಷೇತ್ರದ ಸಾಧನೆಯಲ್ಲಿ ದಾಪುಗಾಲು ಇಡುತ್ತಿದ್ದಾರೆ.
ಚೌಕಾಬಾರ ಹಾಗೂ ಮೇಡ್ ಇನ್ ಬೆಂಗಳೂರು ಕನ್ನಡ ಚಲನಚಿತ್ರಗಳ ಸಂಗೀತ ನಿರ್ದೇಶಕರಾಗಿ ಯಶಸ್ಸನ್ನು ಕಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ವಿವಿಧ ವಿಭಾಗಳಲ್ಲಿ ಪ್ರಶಸ್ತಿಗಳನ್ನು ಬಾಚಿದ ಕಪ್ಪೆರಾಗ ಕಿರುಚಿತ್ರಕ್ಕೂ ಕೂಡ ಇವರ ಸಂಗೀತ ಸಾರಥ್ಯವಿದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಿ.ಅಶ್ವಥ್, ವೀಣಾವಾರುಣಿಯವರ ಸಂಗೀತ ಕಾರ್ಯಕ್ರಮಗಳನ್ನು ಒಳಗೊಂಡಂತೆ ನಾಡಿನ ಅನೇಕ ದಿಗ್ಗಜರ ಸಂಗೀತ ಸಮಾರಂಭಗಳಲ್ಲಿ ಅಶ್ವಿನ್ ಕೀ ಬೋರ್ಡ್ ವಾದನ ನುಡಿಸಿದ್ದಾರೆ. ದೂರದರ್ಶನದ ಅನೇಕ ಕಾರ್ಯಕ್ರಮಗಳಲ್ಲಿ ಕೀಬೋರ್ಡ್ ನುಡಿಸಿದ ಅನುಭವಿದೆ. ಕಳೆದ ವರ್ಷ ಅಮೆರಿಕದಲ್ಲಿ ಜರುಗಿದ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಇತ್ತೀಚಿನ ವರ್ಷಗಳಲ್ಲಿ ಅಶ್ವಿನ್ ಅನೇಕ ಆಲ್ಬಂ, ಕಿರುಚಿತ್ರ, ಚಲನಚಿತ್ರ, ಸಿಂಗಲ್ಸ್ ಮತ್ತು ಜಿಂಗಲ್ಸ್‌ಗಳಿಗೆ ಸಂಗೀತ, ರಾಗ ಸಂಯೋಜನೆಯ ಜೊತೆಗೆ ಸಕ್ರಿಯ ಸಹಕಾರ ನೀಡುತ್ತಿದ್ದಾರೆ. ಅನೇಕ ಸನ್ಮಾನ ಹಾಗೂ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಅಶ್ವಿನ್ ಅವರಿಗೆ ರಾಗ ರತ್ನಾಕರ ಎಂಬ ಹೆಮ್ಮೆಯ ಬಿರುದು ಲಭಿಸಿದೆ. ವೃತ್ತಿ-ಪ್ರವೃತ್ತಿಗಳೆರಡಲ್ಲೂ ಶ್ರದ್ಧೆಯಿಂದ ಕಾಯಕ ಮಾಡುತ್ತಿರುವ ಅಶ್ವಿನ್ ಕನ್ನಡ ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಯ ಹಾದಿಯಲ್ಲಿ ಸಾಗಲಿ.












Click it and Unblock the Notifications