Bangladesh Protest: ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿ ವಿರೋಧಿಸಿ ಪ್ರತಿಭಟನೆ: 105 ಸಾವು - ಕರ್ಫ್ಯೂ ಜಾರಿ!
ಢಾಕಾ ಜುಲೈ 20: ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿ ವಿರೋಧಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು ಪ್ರಧಾನಿ ಶೇಖ್ ಹಸೀನಾ ಸರ್ಕಾರ ಶುಕ್ರವಾರ ಕರ್ಫ್ಯೂ ಘೋಷಿಸಿದೆ. ಶಾಂತಿ ಕಾಪಾಡಲು ಎಲ್ಲೆಡೆ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ.
1971 ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸಂಬಂಧಿಕರಿಗೆ ಸಾರ್ವಜನಿಕ ವಲಯದ ಉದ್ಯೋಗಗಳನ್ನು ಮೀಸಲಿಡುವ ವ್ಯವಸ್ಥೆಯ ವಿರುದ್ಧ ಢಾಕಾ ಮತ್ತು ಇತರ ನಗರಗಳಲ್ಲಿನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಲವಾರು ದಿನಗಳಿಂದ ರ್ಯಾಲಿಗಳನ್ನು ನಡೆಸುತ್ತಿದ್ದಾರೆ.

ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಗುರುವಾರ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ರಾಜಧಾನಿ ಢಾಕಾ ಮತ್ತು ಇತರೆಡೆಗಳಲ್ಲಿ ಹಿಂಸಾಚಾರ ಭುಗಿಲೆದ್ದ ಸುಮಾರು 35 ಜನರು ಸಾವನ್ನಪ್ಪಿದರು. 2,500 ಕ್ಕೂ ಹೆಚ್ಚು ಜನರು ಗಾಯಗೊಂಡರು. ಆದರೀಗ ಸಾವಿನ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.
ಬಾಂಗ್ಲಾ ಹಿಂಸಾಚಾರದ ಬಗ್ಗೆ ಭಾರತ ಹೇಳಿದ್ದೇನು?
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಆ ದೇಶದ ಆಂತರಿಕ ವಿಷಯ ಎಂದು ಭಾರತ ಶುಕ್ರವಾರ ಹೇಳಿದೆ. 8,000 ವಿದ್ಯಾರ್ಥಿಗಳು ಸೇರಿದಂತೆ ಸುಮಾರು 15,000 ಭಾರತೀಯರು ಪ್ರಸ್ತುತ ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

"ನಿಮಗೆ ತಿಳಿದಿರುವಂತೆ, ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ನಾವು ಇದನ್ನು ಆ ದೇಶದ ಆಂತರಿಕ ವಿಷಯವೆಂದು ಪರಿಗಣಿಸುತ್ತೇವೆ" ಎಂದು ಜೈಸ್ವಾಲ್ ಹೇಳಿದರು. "ಭಾರತೀಯ ಪ್ರಜೆಗಳು ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುವ ನಮ್ಮ ವಿದ್ಯಾರ್ಥಿಗಳಿಗೆ ಅವರ ಸುರಕ್ಷತೆ ಮತ್ತು ಅಗತ್ಯವಿದ್ದರೆ ಸಹಾಯಕ್ಕಾಗಿ ನಾವು ಸಲಹೆಯನ್ನು ನೀಡಿದ್ದೇವೆ. ನಮ್ಮನ್ನು ಸಂಪರ್ಕಿಸಲು ಸಹಾಯವಾಣಿ ಸಂಖ್ಯೆಗಳು 24 ಗಂಟೆಗಳ ಕಾಲ ಸಕ್ರಿಯವಾಗಿವೆ" ಎಂದು ವಕ್ತಾರರು ತಿಳಿಸಿದ್ದಾರೆ. ಅಲ್ಲದೆ 300 ಜನರನ್ನು ಸುರಕ್ಷಿತವಾಗಿ ತವರಿಗೆ ವಾಪಸ್ ಕರೆತರಲಾಗಿದೆ.
ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಗುಂಡು
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ಶುಕ್ರವಾರ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು ಮತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.
ರಾಜಧಾನಿ ಢಾಕಾ ಮತ್ತು ಇತರ ಕೆಲವು ಸ್ಥಳಗಳಲ್ಲಿ ಪ್ರತಿಭಟನೆಯು ಕೆಲವು ವಾರಗಳ ಹಿಂದೆ ಪ್ರಾರಂಭವಾಯಿತು. ಆದರೆ ಸೋಮವಾರದಿಂದ ವೇಗವನ್ನು ಪಡೆದುಕೊಂಡಿದೆ. ಈ ಪ್ರತಿಭಟನೆಗಳು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರಿಗೆ ದೊಡ್ಡ ಸವಾಲಾಗಿದೆ.
ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದರು. ಪ್ರಮುಖ ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು. ಆದರೀಗ ಈ ಘಟನೆ ನಿಭಾಯಿಸುವುದು ಶೇಖ್ ಹಸೀನಾ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಬಾಂಗ್ಲಾದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಬಂದ್
ಈ ಪ್ರತಿಭಟನೆಯ ತೀವ್ರತೆ ಬಾಂಗ್ಲಾದೇಶದ ಆಡಳಿತ ಮತ್ತು ಆರ್ಥಿಕತೆಯ ಬಿರುಕು ಹಾಗೂ ಉದ್ಯೋಗಗಳ ಕೊರತೆಯನ್ನು ಎದುರಿಸುತ್ತಿರುವ ಯುವ ಪದವೀಧರರ ಹತಾಶೆಯನ್ನು ಬಹಿರಂಗಪಡಿಸಿದೆ. ಪ್ರತಿಭಟನೆ ತೀವ್ರಗೊಂಡಿದ್ದರಿಂದ ಕ್ಯಾಂಪಸ್‌ಗಳನ್ನು ಮುಚ್ಚಲು ಮತ್ತು ಪ್ರತಿಭಟನೆಗಳನ್ನು ತಡೆಯಲು ಸರ್ಕಾರವು ರಾಜಧಾನಿಯಾದ್ಯಂತ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಿದೆ.
ಬುಧವಾರ ದೇಶದ ಅತಿದೊಡ್ಡ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಸ್ಟೆಲ್‌ಗಳನ್ನು ಮುಚ್ಚಲಾಗಿದೆ. ಶುಕ್ರವಾರ ಢಾಕಾ ಪೊಲೀಸರು ರಾಜಧಾನಿಯಲ್ಲಿ ಎಲ್ಲಾ ಕೂಟಗಳು ಮತ್ತು ಪ್ರದರ್ಶನಗಳನ್ನು ನಿಷೇಧಿಸಿದ್ದಾರೆ.
ಇಂಟರ್ನೆಟ್ ಸೇವೆ ನಿಷೇಧ
ಗುರುವಾರ ರಾತ್ರಿ ರಾಜಧಾನಿ ಢಾಕಾದಲ್ಲಿ ಇಂಟರ್ನೆಟ್ ಸೇವೆಗಳು ಮತ್ತು ಮೊಬೈಲ್ ಡೇಟಾ ಸೇವೆ ನಿಷೇಧಿಸಲಾಗಿದೆ. ಫೇಸ್‌ಬುಕ್ ಮತ್ತು ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮಗಳು ಸಹ ಕಾರ್ಯನಿರ್ವಹಿಸುತ್ತಿಲ್ಲ. ಶುಕ್ರವಾರದಂದು ಇಂಟರ್ನೆಟ್ ಸ್ಥಗಿತದಿಂದ ವಿಶ್ವದಾದ್ಯಂತ ವಿಮಾನಗಳು, ಬ್ಯಾಂಕ್‌ಗಳು, ಮಾಧ್ಯಮಗಳು ಮತ್ತು ಕಂಪನಿಗಳ ಕಾರ್ಯಗಳಿಗೆ ಅಡ್ಡಿಯಾಗಿದೆ.












Click it and Unblock the Notifications