ಶ್ರೀಲಂಕಾದಲ್ಲಿ ಪೆಟ್ರೋಲ್ ಖರೀದಿಗೆ ಸಾಲುಗಟ್ಟಿ ನಿಂತ ಸಾವಿರಾರು ಮಂದಿ!
ಕೊಲಂಬೋ, ಮೇ 29: ದ್ವೀಪ ರಾಷ್ಟ್ರದಲ್ಲಿನ ವಿನಾಶಕಾರಿ ಆರ್ಥಿಕ ಬಿಕ್ಕಟ್ಟಿನ ನಡುವೆ ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಆಹಾರದ ಕೊರತೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ಖರೀದಿಗಾಗಿ ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದಾರೆ.
ಕೊಲಂಬೊದ ಅನೇಕ ಭಾಗಗಳಲ್ಲಿ ಸುಮಾರು 9,00,000 ಜನರು ಸಾಲುಗಟ್ಟಿ ನಿಂತಿದ್ದಾರೆ. ವಿದೇಶಿ ವಿನಿಮಯ ಕಡಿಮೆಯಾಗಿದ್ದು, ಕಡಿಮೆ ಪೂರೈಕೆ ಆಗುತ್ತಿರುವ ಇಂಧನವನ್ನು ಸಂಗ್ರಹಿಸಿಟ್ಟುಕೊಳ್ಳಲು ಜನರು ಪ್ರಯತ್ನಿಸುತ್ತಿದ್ದಾರೆ.
"ಸುಮಾರು 500 ಜನರಿದ್ದರೂ ಸುಮಾರು 200 ಸಿಲಿಂಡರ್‌ಗಳನ್ನು ಮಾತ್ರ ವಿತರಿಸಲಾಯಿತು" ಎಂದು ತನ್ನ ಐದು ಜನರ ಕುಟುಂಬಕ್ಕೆ ಅಡುಗೆ ಅನಿಲವನ್ನು ಖರೀದಿಸುವ ಭರವಸೆಯಲ್ಲಿ ಮೂರನೇ ದಿನವೂ ಸರದಿಯಲ್ಲಿ ನಿಂತಿದ್ದ ಅರೆಕಾಲಿಕ ಚಾಲಕ ಮೊಹಮ್ಮದ್ ಶಾಜ್ಲಿ ಹೇಳಿದರು. ನೂರಾರು ಮಂದಿ ಸರದಿಯಲ್ಲಿದ್ದು, ಅವರ ಪಕ್ಕದಲ್ಲಿ ಖಾಲಿ ಸಿಲಿಂಡರ್‌ಗಳಿದ್ದವು. "ಗ್ಯಾಸ್ ಇಲ್ಲದೆ, ಸೀಮೆ ಎಣ್ಣೆ ಇಲ್ಲದೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಕೊನೆಯ ಆಯ್ಕೆ ಏನು? ಆಹಾರವಿಲ್ಲದೆ ನಾವು ಸಾಯುತ್ತೇವೆ, ಅದು ನೂರಕ್ಕೆ ನೂರು ನಿಶ್ಚಿತ," ಎಂದು ಶಾಜ್ಲಿ ಹೇಳಿದರು.

ಪ್ರವಾಸೋದ್ಯಮ ಅವಲಂಬಿಕ ರಾಷ್ಟ್ರಗಳಲ್ಲಿ ಸಾರಿಗೆಗೆ ಹೊಡೆತ
ಭಾರತ ಮತ್ತು ಚೀನಾದ ಪ್ರಭಾವದ ನಡುವೆ ಶ್ರೀಲಂಕಾ ಕೇವಲ ಪ್ರವಾಸೋದ್ಯಮವನ್ನು ಅವಲಂಬಿಸಿರುವ ರಾಷ್ಟ್ರವಾಗಿದೆ. ಇಂಥ ರಾಷ್ಟ್ರದಲ್ಲಿ ವಿದೇಶಿ ವಿನಿಮಯ, ಇಂಧನ ಮತ್ತು ಔಷಧಿಗಳ ತೀವ್ರ ಕೊರತೆ ಎದುರಿಸಲಾಗುತ್ತಿದೆ. ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿವೆ. ಪೆಟ್ರೋಲ್-ಡೀಸೆಲ್ ಕೊರತೆಯು ಹೆಚ್ಚಿನ ಜನರು ಮನೆಯಲ್ಲಿಯೇ ಇರುವಂತೆ ಮಾಡಿದೆ. ಸಾರ್ವಜನಿಕ ಸಾರಿಗೆ ಖಾಲಿ ಖಾಲಿಯಾಗಿದ್ದು, ಸಂಚಾರಿಗಳ ಸಂಖ್ಯೆ ಇಳಿಮುಖಗೊಂಡಿದೆ.

ಆಹಾರ ಉತ್ಪಾದನೆ ಹೆಚ್ಚಿಸುವುದಕ್ಕಾಗಿ ವಿಕ್ರಮ ಸಿಂಘೆ ಕರೆ
ಶ್ರೀಲಂಕಾದಲ್ಲಿ ಆಹಾರ ಬಿಕ್ಕಟ್ಟಿನ ಬಗ್ಗೆ ಎಚ್ಚರಿಕೆ ನೀಡಿರುವ ವಿಕ್ರಮ ಸಿಂಘೆ, ಉತ್ಪಾದನೆಯನ್ನು ಹೆಚ್ಚಿಸುವಂತೆ ಕರೆ ನೀಡಿದ್ದಾರೆ. ಆ ಮೂಲದ ದೇಶದ 22 ದಶಲಕ್ಷ ಜನರಿಗೆ ಆಹಾರವನ್ನು ಪೂರೈಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮುಂದಿನ ಬಿತ್ತನೆ ವೇಳೆಗೆ ಹೆಚ್ಚಿನ ಗೊಬ್ಬರವನ್ನು ಖರೀದಿಸುವಂತೆ ಪ್ರತಿಜ್ಞೆ ಮಾಡಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಅಧ್ಯಕ್ಷ ಗೊಟಾಬಯ ರಾಜಪಕ್ಸೆ, ಎಲ್ಲಾ ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸುವ ನಿರ್ಧಾರವು ಬೆಳೆ ಇಳುವರಿಯನ್ನು ತೀವ್ರವಾಗಿ ಕಡಿತಗೊಳಿಸಿತು. ಸರ್ಕಾರವು ನಿಷೇಧವನ್ನು ರದ್ದುಗೊಳಿಸಿದ್ದರೂ, ಯಾವುದೇ ಗಣನೀಯ ಆಮದುಗಳನ್ನೂ ಪಡೆದುಕೊಂಡಿರಲಿಲ್ಲ.
"ಈ ಯಲಾ (ಮೇ-ಆಗಸ್ಟ್) ಋತುವಿನಲ್ಲಿ ರಸಗೊಬ್ಬರವನ್ನು ಪಡೆಯಲು ಸಮಯವಿಲ್ಲದಿದ್ದರೂ, ಮಹಾ (ಸೆಪ್ಟೆಂಬರ್-ಮಾರ್ಚ್) ಹಂಗಾಮಿನ ವೇಳೆಗೆ ಸಾಕಷ್ಟು ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ," ಎಂದು ಪ್ರಧಾನಿ ವಿಕ್ರಮ ಸಿಂಘೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಜಪಾನ್ ರಾಷ್ಟ್ರದಿಂದ ಶ್ರೀಲಂಕಾಗೆ ಅನುದಾನ
ದ್ವೀಪ ರಾಷ್ಟ್ರ ಶ್ರೀಲಂಕಾದೊಂದಿಗೆ ದೀರ್ಘಕಾಲಿಕ ಆರ್ಥಿಕ ಸಂಬಂಧವನ್ನು ಹೊಂದಿರುವ ಜಪಾನ್ ಆರ್ಥಿಕ ನೆರವು ಘೋಷಿಸಿದೆ. ಔಷಧಿ ಮತ್ತು ಆಹಾರಕ್ಕಾಗಿ 3 ಮಿಲಿಯನ್ ಡಾಲರ್ ತುರ್ತು ಅನುದಾನ ನೀಡುವುದಾಗಿ ಹೇಳಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಟ್ರಕ್ ಮೂಲಕ ಸರಬರಾಜು ಆಗಿರುವ ಅಡುಗೆ ಅನಿಲವು ವಿತರಣಾ ಕೇಂದ್ರಕ್ಕೆ ಬಂದಾಗ ಸರದಿಯಲ್ಲಿದ್ದ ಜನರು ಚಪ್ಪಾಳೆ ತಟ್ಟಿದರು. ಸ್ವಯಂಚಾಲಿತ ರೈಫಲ್‌ಗಳನ್ನು ಹೊಂದಿರುವ ಸೈನಿಕರು ವಾಹನವನ್ನು ಕಾವಲು ಕಾಯುತ್ತಿದ್ದರು. ಸರ್ಕಾರಿ ಸ್ವಾಮ್ಯದ ಲಿಟ್ರೊ ಗ್ಯಾಸ್ ಶನಿವಾರದ ವೇಳೆಗೆ ದಿನಕ್ಕೆ 80,000 ಸಿಲಿಂಡರ್‌ಗಳನ್ನು ವಿತರಿಸಲು ಪ್ರಾರಂಭಿಸಲು ಆಶಿಸುತ್ತಿದೆ, ಆದರೆ ಮಾರುಕಟ್ಟೆಯಲ್ಲಿ ಅಂದಾಜು 3.5 ಮಿಲಿಯನ್ ಸಿಲಿಂಡರ್ ಕೊರತೆ ನೀಗಿಸಲು ಹರಸಾಹಸ ಪಡಬೇಕಾಗಿದೆ ಎಂದು ಅಧ್ಯಕ್ಷ ವಿಜಿತಾ ಹೆರಾತ್ ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಅಡುಗೆ ಅನಿಲ ಮತ್ತು ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿವೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ 12.5 ಕೆಜಿ ಅಡುಗೆ ಅನಿಲದ ಬೆಲೆಯು 2675 ರೂಪಾಯಿಯಿದ್ದು, ಈಗ ಬರೋಬ್ಬರಿ 5000 ಗಡಿಗೆ ತಲುಪಿದೆ.

ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅಜ್ಜಿ ಆಡಿದ ಮಾತು
'ಬದುಕು ಎಷ್ಟು ಕಷ್ಟ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಎರಡು ತಿಂಗಳಲ್ಲಿ ವಿಷಯಗಳು ಹೇಗೆ ಇರುತ್ತವೆ ಎಂದು ನಾನು ಊಹಿಸಲು ಸಾಧ್ಯವಿಲ್ಲ, ಈ ದರದಲ್ಲಿ ನಾವು ಇಲ್ಲಿ ಇಲ್ಲದಿರಬಹುದು,"ಎಂದು ಎ.ಪಿ.ಡಿ. ಕೊಲಂಬೊದ ಪೆಟ್ಟಾ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮಾರುತ್ತಿರುವ 60 ವರ್ಷದ ವೃದ್ಧೆ ಸುಮನಾವತಿ ವಿವರಿಸಿದ್ದಾರೆ. ಮುಂದಿನ ಎರಡು ತಿಂಗಳುಗಳಲ್ಲಿ ಹಣದುಬ್ಬರವು ದಿಗ್ಭ್ರಮೆಗೊಳಿಸುವಂತೆ ಶೇ. 40ಕ್ಕೆ ಏರಿಕೆ ಆಗಬಹುದು. ಏಪ್ರಿಲ್‌ನಲ್ಲಿ ಹಣದುಬ್ಬರವು ಶೇ.29.8ಕ್ಕೆ ತಲುಪಿದ್ದು, ಆಹಾರದ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇ.46.6ರಷ್ಟು ಹೆಚ್ಚಾಗಿದೆ.












Click it and Unblock the Notifications