ಗಾಜಾ ಪಟ್ಟಿಯಲ್ಲಿ ಮುಂದುವರಿದ ಇಸ್ರೇಲ್ ದಾಳಿ, 81 ಜನ ಸಾವು ಆರೋಪ
ಗಾಜಾ ಪಟ್ಟಿಯಲ್ಲಿ ಹಿಂಸಾಚಾರಕ್ಕೆ ಬ್ರೇಕ್ ಬೀಳುತ್ತಿಲ್ಲ, ನೋಡ ನೋಡುತ್ತಲೇ ಇಡೀ ಗಾಜಾ ಪಟ್ಟಿ ಈಗ ಪೀಸ್ ಪೀಸ್ ಆಗಿ ಹೋಗಿದೆ. ಯಾವುದೇ ಸಮಯದಲ್ಲಿ ಸಂಪೂರ್ಣ ಗಾಜಾ ಪಟ್ಟಿ ಬೇರೆ ದೇಶದ ಹಿಡಿತಕ್ಕೆ ಸಿಲುಕಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಒಂದು ಕಡೆ ಇಸ್ರೇಲ್ ಸೇನೆ ಗಾಜಾ ಪಟ್ಟಿಯ ಮೇಲೆ ಭೀಕರವಾಗಿ ನಡೆಸುತ್ತಿರುವ ದಾಳಿಗೆ ಅಮೆರಿಕ ಕೂಡ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಇಂತಹ ಪರಿಸ್ಥಿತಿ ಇರುವಾಗ ದಿಢೀರ್ ಗಾಜಾ ರಕ್ತದಲ್ಲಿ ಮುಳುಗಿ ಹೋಗಿದೆ.
ಹಮಾಸ್ ವಿರುದ್ಧ ಯುದ್ಧ ಸಾರಿದ್ದ ಇಸ್ರೇಲ್ ಸೇನೆ ಈಗಾಗಲೇ ಹಮಾಸ್‌ನ ದೊಡ್ಡ ದೊಡ್ಡ ನಾಯಕರನ್ನ ಹೊಡೆದು ಹಾಕಿದೆ. ಅಲ್ಲದೆ ಈಗಾಗಲೇ ಸಂಪೂರ್ಣವಾಗಿ ಗಾಜಾ ಪಟ್ಟಿಯನ್ನು ಇಸ್ರೇಲ್ ಸುತ್ತುವರಿದಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ? ಅನ್ನೋ ವಾತಾವರಣ ಇದೆ. ಇಷ್ಟೆಲ್ಲದರ ನಡುವೆ ಮತ್ತೊಂದು ಭೀಕರ ದಾಳಿ ನಡೆಸಿರುವ ಇಸ್ರೇಲ್ ದಿಢೀರ್ ಗಾಜಾ ಪಟ್ಟಿಯಲ್ಲಿ 81 ಜನರ ಸಾವಿಗೆ ಕಾರಣವಾಗಿದೆ ಎಂಬ ಭಾರಿ ಗಂಭೀರ ಆರೋಪ ಮಾಡಲಾಗಿದೆ. ನೋಡ ನೋಡುತ್ತಲೇ ಗಾಜಾ ಪಟ್ಟಿ ಛಿದ್ರ ಛಿದ್ರವಾಗಿ ಹೋಗುತ್ತಿದೆ.

ನೆಮ್ಮದಿ ಇಲ್ಲದ ಗಾಜಾ ಪಟ್ಟಿ
ಗಾಜಾ & ಇಸ್ರೇಲ್, ಯೆಮನ್ & ಇಸ್ರೇಲ್, ಲೆಬನಾನ್ & ಇಸ್ರೇಲ್, ಸಿರಿಯಾ & ಇಸ್ರೇಲ್ ಯುದ್ಧದ ನಡುವೆ ಇರಾನ್ ಜೊತೆಗೂ ಘೋರ ಯುದ್ಧವನ್ನು ಶುರು ಮಾಡಿತ್ತು ಇಸ್ರೇಲ್ ಮಿಲಿಟರಿ. ಮಧ್ಯಪ್ರಾಚ್ಯದಲ್ಲಿ ಭಾರಿ ದೊಡ್ಡ ಯುದ್ಧ ಶುರುವಾಗಿ, ಪರಮಾಣು ಸಾಮರ್ಥ್ಯ ಇರುವ ಇರಾನ್ ವಿರುದ್ಧ ಕೂಡ ದಾಳಿ ಮಾಡೋಕೆ ಮುಂದಾಗಿತ್ತು ಇಸ್ರೇಲ್. ಆದರೆ ಕೊನೆಗೆ ಅಮೆರಿಕದ ಮಧ್ಯಸ್ಥಿಕೆ ಹಿನ್ನೆಲೆ ಇರಾನ್ ವಿರುದ್ಧದ ಯುದ್ಧವನ್ನ ನಿಲ್ಲಿಸಿತ್ತು ಇಸ್ರೇಲ್. ಇಷ್ಟಾದರೂ ಗಾಜಾ ಪಟ್ಟಿಯಲ್ಲಿ ಮಾತ್ರ ವಾರ್ ತೀವ್ರವಾಗಿದೆ.
400 ಜನರಿಗೆ ಗಂಭೀರ ಗಾಯ?
ಇಸ್ರೇಲ್ ಸೇನೆಯಿಂದ ದಿಢೀರ್ ನಡೆದ ದಾಳಿಯಲ್ಲಿ ಗಾಜಾದ 81 ಪ್ರಜೆಗಳು ಮೃತಪಟ್ಟಿದ್ದು, 400 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆರೋಗ್ಯ ಸಚಿವಾಲಯ ಆರೋಪ ಮಾಡಿದೆ. ಹೀಗೆ ಇಸ್ರೇಲ್ ಸೇನೆಯಿಂದ ಮತ್ತಷ್ಟು ಗಂಭೀರ ದಾಳಿ ನಡೆಯುತ್ತಿದ್ದು, ಗಾಜಾ ನಗರದ ಕ್ರೀಡಾಂಗಣದ ಬಳಿ ನಡೆದ ದಾಳಿಯಲ್ಲಿ ಮಕ್ಕಳು ಸೇರಿ ಕನಿಷ್ಠ 11 ಜನ ಸಾವನ್ನಪ್ಪಿದ್ದಾರೆ ಅಂತಾ ಕೂಡ ಆರೋಪವನ್ನ ಮಾಡಲಾಗಿದೆ. ಒಟ್ನಲ್ಲಿ ಗಾಜಾ ಪಟ್ಟಿಯಲ್ಲಿ ಈಗಲೂ ಹಿಂಸಾಚಾರ ಮಂದುವರಿದಿದ್ದು, ಇದಕ್ಕೆ ಯಾವಾಗ ಬ್ರೇಕ್ ಬೀಳುತ್ತೆ? ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications