
Breaking: ಧಾರ್ಮಿಕ ಶಾಲೆ ಮೇಲೆ ತಾಲಿಬಾನ್ ಬಾಂಬ್ ದಾಳಿ; 10 ಮಂದಿ ಸಾವು
ಕಾಬೂಲ್, ನವೆಂಬರ್ 30: ಅಫ್ಘಾನಿಸ್ತಾನದಲ್ಲಿ ಉಗ್ರರ ಕ್ರೌರ್ಯ ಮುಂದುವರಿದಿದೆ. ಧಾರ್ಮಿಕ ಶಾಲೆಯ ಮೇಲೆ ನಡೆಸಿದ ಬಾಂಬ್ ದಾಳಿಯು ಮುಗ್ಧ ಮಕ್ಕಳ ಪ್ರಾಣವನ್ನೇ ಬಲಿ ತೆಗೆದುಕೊಂಡಿರುವ ಘಟನೆ ಬುಧವಾರ ವರದಿಯಾಗಿದೆ.
ನವೆಂಬರ್ 30ರಂದು ಉತ್ತರ ಅಫ್ಘಾನಿಸ್ತಾನದ ಧಾರ್ಮಿಕ ಶಾಲೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಈ ಬಾಂಬ್ ದಾಳಿಯಲ್ಲಿ ಕನಿಷ್ಠ 10 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಕಿಸ್ತಾನ ಉಗ್ರರ ದಾಳಿ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಮೇಲೆ ಗುಂಡು ಹಾರಿಸಿ ಹತ್ಯೆ
ಉತ್ತರ ಸಮಂಗನ್ ಪ್ರಾಂತ್ಯದ ರಾಜಧಾನಿ ಅಯ್ಬಕ್‌ನಲ್ಲಿ ನಡೆದ ಸ್ಫೋಟದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ. ಇನ್ನು ಈ ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆಗಳು ಹೊತ್ತುಕೊಂಡಿಲ್ಲ ಎಂದು ತಿಳಿದು ಬಂದಿದೆ.
ಅಕ್ಟೋಬರ್ ತಿಂಗಳಿನಲ್ಲಿ ಆತ್ಮಾಹುತಿ ಬಾಂಬ್ ದಾಳಿ:
ಕಳೆದ ವಾರ ಅಫ್ಘಾನಿಸ್ತಾನ ರಾಜಧಾನಿಯ ಶೈಕ್ಷಣಿಕ ಕೇಂದ್ರದಲ್ಲಿ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿತ್ತು. "53 ಮಂದಿ ಮೃತರಲ್ಲಿ ಕನಿಷ್ಠ 46 ಹುಡುಗಿಯರು ಮತ್ತು ಮಹಿಳೆಯರಿದ್ದಾರೆ," ಎಂದು ಅಫ್ಘಾನಿಸ್ತಾನದ ವಿಶ್ವಸಂಸ್ಥೆಯ ಮಿಷನ್ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಕಾಬೂಲ್ ನಗರದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಇನ್ನೂ 110 ಜನರು ಗಾಯಗೊಂಡಿದ್ದಾರೆ. ಶುಕ್ರವಾರ ಕಾಬೂಲ್‌ನ ಪಕ್ಕದಲ್ಲಿರುವ ಸ್ಟಡಿ ಹಾಲ್‌ನಲ್ಲಿ ಆತ್ಮಾಹುತಿ ಬಾಂಬರ್ ಒಬ್ಬರು ಮಹಿಳೆಯ ಪಕ್ಕದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಘಟನೆ ನಡೆಯಿತು. ಈ ವೇಳೆ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪರೀಕ್ಷೆಗಾಗಿ ನೂರಾರು ವಿದ್ಯಾರ್ಥಿಗಳು ಕುಳಿತಿದ್ದರು.